ಚುನಾವಣೆ ಸತ್ಯ, ಅನ್ಯಾಯದ ನಡುವಿನ ಹೋರಾಟ: ಮೂರ್ತಿ

| Published : Apr 11 2024, 12:48 AM IST

ಸಾರಾಂಶ

ಈ ಬಾರಿಯ ಚುನಾವಣೆ ಸತ್ಯದ ಪರ ಹೋರಾಡುತ್ತಿರುವ ರಾಹುಲ್ ಗಾಂಧಿ ಹಾಗೂ ದೇಶಕ್ಕೆ ಅನ್ಯಾಯ ಮಾಡುತ್ತಿರುವ ಮೋದಿಯ ನಡುವಿನ ಹೋರಾಟವಾಗಿದೆ ಎಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಂ.ಎಲ್.ಮೂರ್ತಿ ಅವರು ಹೇಳಿದರು.

ಚಿಕ್ಕಮಗಳೂರು: ಈ ಬಾರಿಯ ಚುನಾವಣೆ ಸತ್ಯದ ಪರ ಹೋರಾಡುತ್ತಿರುವ ರಾಹುಲ್ ಗಾಂಧಿ ಹಾಗೂ ದೇಶಕ್ಕೆ ಅನ್ಯಾಯ ಮಾಡುತ್ತಿರುವ ಮೋದಿಯ ನಡುವಿನ ಹೋರಾಟವಾಗಿದೆ ಎಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಂ.ಎಲ್.ಮೂರ್ತಿ ಅವರು ಹೇಳಿದರು.

ತಾಲೂಕಿನ ಶಿರವಾಸೆಯಲ್ಲಿ ಬುಧವಾರ ನಡೆದ ಉಡುಪಿ-ಚಿಕ್ಕಮಗಳೂರು ಕ್ಷೇತ್ರದ ಅಭ್ಯರ್ಥಿ ಜಯಪ್ರಕಾಶ್ ಹೆಗ್ಡೆ ಪರವಾಗಿ ಸಾರ್ವಜನಿಕರ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ಅಭಿವೃದ್ಧಿ ಮಾಡದ ಬಿಜೆಪಿ ಅವರು ಧರ್ಮದ ಹೆಸರಿನಲ್ಲಿ ರಾಜಕೀಯ ಮಾಡುವಂತದ್ದು, ನಾಚಿಕೆಗೇಡಿತನವಾಗಿದೆ ಎಂದರು.

22 ಕಂಪನಿಗಳಿಗೆ ನೋಟಿಸ್ ನೀಡಿರುವ ಬಿಜೆಪಿ ಆ ಕಂಪನಿ ಗಳಿಂದ ಕೋಟಿಗಟ್ಟಲೆ ಹಣವನ್ನು ಸಂಗ್ರಹಿಸಿದ್ದು, ಹಣದ ಲೆಕ್ಕ ಕೇಳಿದರೆ ಅದರ ಲೆಕ್ಕವನ್ನು ನೀಡುತ್ತಿಲ್ಲ ಇದರಿಂದ ಇವರ ಯೋಗ್ಯತೆ ಏನೆಂಬುದಾಗಿ ದೇಶಕ್ಕೆ ಗೊತ್ತಾಗಿದೆ ಎಂದು ಹೇಳಿದರು.

ರಾಮಮಂದಿರ ಕಾಮಗಾರಿ ಮುಗಿಯಲು ಇನ್ನೂ ಮೂರು ವರ್ಷಗಳ ಅವಧಿ ಇದೆ. ಚುನಾವಣೆ ಬಂದಿದೆ ಎಂಬ ಕಾರಣಕ್ಕೆ ಕಾಮಗಾರಿ ಮುಕ್ತಾಯ ಆಗುವ ಮುನ್ನವೇ ಇವರೇ ಹೋಗಿ ಉದ್ಘಾಟಿಸಿರುವಂತದ್ದು ಇವರ ಮನಸ್ಥಿತಿ ಏನೆಂಬುದು ತಿಳಿಯುತ್ತದೆ ಎಂದರು.

ನಮ್ಮ ಅಭ್ಯರ್ಥಿ ಜಯಪ್ರಕಾಶ್ ಹೆಗಡೆಯವರು ಸರಳ ಸಜ್ಜನಿಕೆಯ ವ್ಯಕ್ತಿ, ಯಾವ ಆರೋಪಗಳು ಇಲ್ಲದೆ ಸಾಮಾನ್ಯ ಜನರೊಂದಿಗೆ ಬೆರೆಯುವಂತ ವ್ಯಕ್ತಿ, ಸಾಮಾನ್ಯ ವ್ಯಕ್ತಿ ಕರೆ ಮಾಡಿದರೂ ಸ್ವೀಕರಿಸಿ ಮಾತನಾಡುವಂತಹ ವ್ಯಕ್ತಿಯಾಗಿದ್ದಾರೆ. ಅಂತವರ ಕೈ ಬಲಪಡಿಸಿದರೆ ಕೇಂದ್ರದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರಲು ಸಾಧ್ಯವಾಗುತ್ತದೆ ಎಂದರು.

ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಕೆ.ಜಯಪ್ರಕಾಶ್ ಹೆಗಡೆಯವರು ಮಾತನಾಡಿ, ನನ್ನ 20 ತಿಂಗಳ ಅಧಿಕಾರದ ಅವಧಿಯಲ್ಲಿ ಈ ಗ್ರಾಮಕ್ಕೆ ಬಿಸಿಯೂಟದ ಸಭಾಂಗಣ, ಮಲ್ಲಂದೂರು ರಸ್ತೆ, ಸಮುದಾಯ ಭವನ ,ಇನ್ನು ಕೆಲವು ಕಾಮಗಾರಿಗಳನ್ನು ಮಾಡಿಸಿರುವುದನ್ನು ನೆನಪಿಸಿದರು. ಆದರೆ, ಶೋಭಾ ಕರಂದ್ಲಾಜೆಯವರ 10 ವರ್ಷ ಅಧಿಕಾರಾವಧಿಯಲ್ಲಿ ಯಾವ ಕಾಮಗಾರಿಯಾಗಿದೆ ಬಿಜೆಪಿಯವರೇ ತಿಳಿಸಲಿ ಎಂದು ಹೇಳಿದರು.

ಬಿಜೆಪಿಯವರು ಅಭ್ಯರ್ಥಿ ಮುಖ ನೋಡಬೇಡಿ ಮೋದಿ ಮುಖ ನೋಡಿ ಮತ ನೀಡಿ ಅನ್ನುತ್ತಾರೆ ಆದ ಕಾರಣ ಶೋಭಾ ಅವರು ಅಭಿವೃದ್ಧಿ ಬಗ್ಗೆ ಚಿಂತಿಸದೆ ಇಲ್ಲಿ ಯಾವುದೇ ಅಭಿವೃದ್ಧಿ ಕಾರ್ಯಗಳನ್ನು ಮಾಡಿಲ್ಲ ಆದ್ದರಿಂದ ಅವರು ಕ್ಷೇತ್ರವನ್ನು ಬಿಟ್ಟು ಪಲಾಯನ ಮಾಡಿದ್ದಾರೆ ಎಂದರು.

ಸರ್ಕಾರ ಅಧಿಕಾರಕ್ಕೆ ಬರುವ ಮುನ್ನ ಕಾಂಗ್ರೆಸ್ ಪಕ್ಷ ನೀಡಿದಂತಹ ಐದು ಗ್ಯಾರಂಟಿಗಳು ಅಧಿಕಾರ ಬಂದ ತಕ್ಷಣ ಜಾರಿಗೆ ತಂದಿದೆ.

ಆದರೆ, ಬಿಜೆಪಿ ಚುನಾವಣೆಯ ಮುನ್ನ ನೀಡಿದ ಆಶ್ವಾಸನೆ ಒಂದೂ ಕೂಡ ಈಡೇರಿಸಿಲ್ಲ. ಬಿಜೆಪಿಯವರು 11 ಲಕ್ಷ ಕೋಟಿ ರು. ಶ್ರೀಮಂತರ ಸಾಲಮನ್ನಾ ಮಾಡಿದರೆ ದೇಶ ದಿವಾಳಿಯಾಗುವುದಿಲ್ಲ. ಆದರೆ ಕಾಂಗ್ರೆಸ್ ಸರ್ಕಾರ ಬಡ ಜನರಿಗೆ ಗ್ಯಾರಂಟಿ ಕೊಟ್ಟರೆ ಸರ್ಕಾರ, ರಾಜ್ಯ ದಿವಾಳಿಯಾಗುತ್ತದೆ ಎನ್ನುತ್ತಾರೆ. ಯಾವುದು ನ್ಯಾಯ ಎಂಬುದಾಗಿ ಈ ಚುನಾವಣೆಯಲ್ಲಿ ಮತದಾರರೇ ತೀರ್ಮಾನಿಸಿ ತಮ್ಮ ಅಮೂಲ್ಯವಾದ ಮತವನ್ನು ನನ್ನ ಹಸ್ತದ ಗುರುತಿಗೆ ನೀಡಬೇಕಾಗಿ ಮನವಿ ಮಾಡಿದರು.

ಈ ಸಂದರ್ಭದಲ್ಲಿ ಶಾಸಕ ಎಚ್.ಡಿ.ತಮ್ಮಯ್ಯ, ವಿಧಾನಪರಿಷತ್‌ ಮಾಜಿ ಸದಸ್ಯೆ ಎ.ವಿ.ಗಾಯಿತ್ರಿ ಶಾಂತೇಗೌಡ, ಕಾಂಗ್ರೆಸ್ ಮುಖಂಡರುಗಳಾದ ಕೆ.ಮಹಮ್ಮದ್, ವೆಂಕಟೇಶ್ ನಾಯ್ಡು, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಚ್.ಪಿ.ಮಂಜೇಗೌಡ, ಜಿಲ್ಲಾ ವಕ್ತಾರ ರೂಬೆನ್ ಮೊಸಸ್, ಬಿ.ಎಂ.ಸಂದೇಶ್, ನಗರಸಭೆ ಸದಸ್ಯ ಲಕ್ಷ್ಮಣ್, ಪ್ರವೀಣ್, ಪ್ರೇಮಾಕ್ಷಿ ಅಮೀನ್, ವೆಂಕಟೇಶ್, ಮನ್ಸೂರ್, ಪ್ರಸನ್ನ, ರಾಧಾ, ರವಿ, ಕೆ.ಭರತ್, ಮಂಜು ಉಪಸ್ಥಿತರಿದ್ದರು.