ಅಂಗನವಾಡಿ ಸಂಘಟನೆಗಳಿಂದ ಸೆ.19 ರಂದು ಹೋರಾಟ: ಬಿ.ಅಮ್ಜದ್

| Published : Aug 31 2024, 01:37 AM IST

ಸಾರಾಂಶ

ತರೀಕೆರೆ, ಬೆಂಗಳೂರು, ಕರ್ನಾಟಕ ರಾಜ್ಯ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ಸಂಘಟನೆಗಳ ಸಂಯುಕ್ತ ಸಂಘರ್ಷ ಸಮಿತಿಯಿಂದ ಬೇಡಿಕೆಗಳನ್ನು ಈಡೇರಿಸಲು ಒತ್ತಾಯಿಸಿ ಸೆ.19 ರಂದು ಹೋರಾಟಕ್ಕೆ ಅಂಗನವಾಡಿ ಸಂಘಟನೆ ಗಳು ನಿರ್ಧರಿಸಿದೆ ಎಂದು ಕರ್ನಾಟಕ ರಾಜ್ಯ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ಸಂಘಟನೆಗಳ ಸಂಯುಕ್ತ ಸಂಘರ್ಷ ಸಮಿತಿ ರಾಜ್ಯಾಧ್ಯಕ್ಷ ಬಿ.ಅಮ್ಜದ್ ತಿಳಿಸಿದ್ದಾರೆ.

ಪಟ್ಟಣದ ಡಾ.ಬಿ. ಆರ್.ಅಂಬೇಡ್ಕರ್ ಭವನದಲ್ಲಿ ಮಾಹಿತಿ

ಕನ್ನಡಪ್ರಭ ವಾರ್ತೆ, ತರೀಕೆರೆ

ಬೆಂಗಳೂರು, ಕರ್ನಾಟಕ ರಾಜ್ಯ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ಸಂಘಟನೆಗಳ ಸಂಯುಕ್ತ ಸಂಘರ್ಷ ಸಮಿತಿಯಿಂದ ಬೇಡಿಕೆಗಳನ್ನು ಈಡೇರಿಸಲು ಒತ್ತಾಯಿಸಿ ಸೆ.19 ರಂದು ಹೋರಾಟಕ್ಕೆ ಅಂಗನವಾಡಿ ಸಂಘಟನೆ ಗಳು ನಿರ್ಧರಿಸಿದೆ ಎಂದು ಕರ್ನಾಟಕ ರಾಜ್ಯ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ಸಂಘಟನೆಗಳ ಸಂಯುಕ್ತ ಸಂಘರ್ಷ ಸಮಿತಿ ರಾಜ್ಯಾಧ್ಯಕ್ಷ ಬಿ.ಅಮ್ಜದ್ ತಿಳಿಸಿದ್ದಾರೆ.

ಶುಕ್ರವಾರ ಪಟ್ಟಣದ ಡಾ.ಬಿ. ಆರ್.ಅಂಬೇಡ್ಕರ್ ಭವನದಲ್ಲಿ ಏರ್ಪಡಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಕರ್ನಾಟಕ ರಾಜ್ಯ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ಸಂಘಟನೆಗಳ ಸಂಯುಕ್ತ ಸಂಘರ್ಷ ಸಮಿತಿಯ ನೇತೃತ್ವದಲ್ಲಿ ಅಂಗನವಾಡಿಗಳನ್ನು ಉಳಿಸಿ ಅಂಗನವಾಡಿಗಳನ್ನು ಬಲಪಡಿಸಿ ಎಂಬ ಘೋಷಣೆಯಡಿ ಅಂಗನವಾಡಿಗಳಲ್ಲೇ ಎಲ್.ಕೆ.ಜಿ, ಯು.ಕೆ.ಜಿ.ಗಳನ್ನು ಪ್ರಾರಂಭಿಸಲು ಸರ್ಕಾರ ಅಧಿಕೃತ ತೀರ್ಮಾನ ಕೈಗೊಂಡು ಅದಕ್ಕೆ ಬೇಕಾದ ಅನುದಾನ ಬಿಡುಗಡೆ ಮಾಡುವುದು ಹಾಗೂ ನಿವೃತ್ತರಾದ ಎಲ್ಲ ಅಂಗನವಾಡಿ ನೌಕರರಿಗೆ ಗ್ರಾಚ್ಯುಟಿ , ಅಂಗನವಾಡಿ ಕಾರ್ಯಕರ್ತೆಯರು ಸಹಾಯಕಿಯರ ಗೌರವ ಧನ ಹೆಚ್ಚಳ ಮತ್ತು ಅಂಗನವಾಡಿ ಕೇಂದ್ರಗಳಿಗೆ ಗುಣಮಟ್ಟದ ಪೌಷ್ಠಿಕ ಆಹಾರ ಸರಬರಾಜು ಮಾಡಬೇಕೆಂದು ಆಗ್ರಹಿಸಿ 2024 ಸೆ.19 ರಿಂದ ಬೆಂಗಳೂರಿನಲ್ಲಿ ಬೃಹತ್ ಪ್ರತಿಭಟನೆ ನೆಡೆಸಲು ನಿರ್ಧರಿಸಲಾಗಿದೆ ಎಂದು ವಿವರಿಸಿದರು.

ದೇಶದ ಬಡ ಮಹಿಳೆಯರು, ಮಕ್ಕಳು, ಗರ್ಭಿಣಿಯರು, ಬಾಣಂತಿಯರು ಕಿಶೋರಿಯರು ಎದುರಿಸುತ್ತಿರುವ ಅಪೌಷ್ಠಿತೆ-ರಕ್ತ ಹೀನತೆ-ಆರೋಗ್ಯ ಸಮಸ್ಯೆ ತೊಡೆದು ಹಾಕುವ ಹಿನ್ನಲೆಯಲ್ಲಿ ಕಳೆದ 50 ವರ್ಷಗಳ ಹಿಂದೆ ಆರಂಭಿಸಲಾದ ಸಮಗ್ರ ಶಿಶು ಅಭಿವೃದ್ಧಿ ಯೋಜನೆ (ಐಸಿಡಿಎಸ್) ಪರಿಣಾಮಕಾರಿಯಾಗಿದೆ ಎಂದು ತಿಳಿಸಿದರು.

ಈ ಯೋಜನೆಯಡಿ ಭಾರತದಾದ್ಯಂತ ಸುಮಾರು 14 ಲಕ್ಷ ಹಾಗೂ ಕರ್ನಾಟಕ ರಾಜ್ಯದಲ್ಲಿ ಸುಮಾರು 70 ಸಾವಿರದಷ್ಟು ಅಂಗನವಾಡಿ ಕೇಂದ್ರಗಳು ಕಾರ್ಯೋನ್ಮುಖವಾಗಿದ್ದು ರಾಜ್ಯದಲ್ಲಿ ತಲಾ 70 ಸಾವಿರ ಕಾರ್ಯಕರ್ತೆಯರು ಮತ್ತು ಸಹಾಯಕಿಯರು ಸೇರಿದಂತೆ ದೇಶದಲ್ಲಿ 28 ಲಕ್ಷದಷ್ಟು ಮಹಿಳೆಯರು ಸಮಗ್ರ ಶಿಶು ಅಭಿವೃದ್ಧಿ ಯೋಜನೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಸದರಿ ಅಂಗನವಾಡಿಗಳ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ಪರಿಶ್ರಮದಿಂದ ಆರು ವರ್ಷ ವಯೋಮಾನದವರೆಗಿನ ಮಕ್ಕಳು, ಬಾಣಂತಿಯರು ಗರ್ಭಿಣಿಯರಲ್ಲಿ ಅಪೌಷ್ಠಿಕತೆ, ರಕ್ತ ಹೀನತೆ ನಿವಾರಣೆ ಸಾಧ್ಯವಾಗಿದೆ ಮತ್ತು ಮಕ್ಕಳ ದೈಹಿಕ ಹಾಗೂ ಮಾನಸಿಕ ವಿಕಸನಕ್ಕೆ ಪೂರಕವಾಗಿ ಅಂಗನವಾಡಿ ಕೇಂದ್ರಗಳು ಕಾರ್ಯನಿರ್ವಹಿಸುತ್ತಿವೆ. ಇಂತಹ ಮಹತ್ತರ ಯೋಜನೆಯನ್ನು ಮತ್ತಷ್ಟು ಬಲಗೊಳಿಸಿ ಅಂಗನವಾಡಿ ವ್ಯವಸ್ಥೆ ಉಳಿಸಿ ಬೆಳೆಸಬೇಕಾದ ಅನಿವಾರ್ಯತೆ ಇದೆ ಎಂದು ತಿಳಿಸಿದ್ದಾರೆ.

ಈ ಹಿನ್ನಲೆಯಲ್ಲಿ ರಾಜ್ಯದ ಎಲ್ಲ ಪ್ರಮುಖ ಅಂಗನವಾಡಿ ಸಂಘಟನೆಗಳು ಸರ್ಕಾರದ ಗಮನ ಸೆಳೆಯಲು ಹೋರಾಟ ಹಮ್ಮಿಕೊಂಡಿದ್ದು ತಮ್ಮ ಬೇಡಿಕೆಗಳನ್ನು ಈಡೇರಿಸಬೇಕೆಂದು ಸರ್ಕಾರವನ್ನು ಆಗ್ರಹಪಡಿಸುತ್ತೇವೆ ಎಂದು ತಿಳಿಸಿದ್ದಾರೆ.

ಬೇಡಿಕೆಗಳುಃ ಗ್ರಾಚ್ಯುಟಿ ಸೌಲಭ್ಯ ನೀಡಿ, ಗೌರವಧನ ಹೆಚ್ಚಿಸಿ( ಕನಿಷ್ಠ ವೇತನ) ಇಡುಗಂಟು ನೀಡುವ ಯೋಜನೆ ಜಾರಿಗೆ ಆಗ್ರಹ, ಅಂಗನವಾಡಿ ಕೇಂದ್ರಗಳಲ್ಲಿಯೇ ಎಲ್ ಕೆಜಿ, ಯುಕೆಜಿ ಪ್ರಾರಂಬಿಸಬೇಕು. ಮತ್ತಿತರ ಬೇಡಿಕೆಗಳನ್ನು ಈಡೇರಿಸಬೇಕು

ಸಿ.ಪಿ.ಐ ಮುಖಂಡರಾದ ಸಿ.ಆರ್. ಬಸವರಾಜ್, ತಾಲೂಕು ಅಧ್ಯಕ್ಷೆ ಕೆ.ಎಸ್.ಸವಿತಾ, ರಾಜ್ಯ ಸಂಘಟನಾ ಕಾರ್ಯದರ್ಶಿ ಕೆ.ಸಿ. ವಿಜಯಕುಮಾರಿ, ತಾ.ಪ್ರಧಾನ ಕಾರ್ಯದರ್ಶಿ ಬಿ.ಪಿ.ಕಲಾ, ಖಚಾಂಚಿ ಎಚ್.ಸರಸ್ವತಿ, ತಾ.ಗೌರವಾಧ್ಯಕ್ಷೆ ಯಶೋದಮ್ಮ, ಪ್ರಧಾನ ಕಾರ್ಯದರ್ಶಿ ಎಚ್.ಡಿ.ಮಾಲತಿ ಮತ್ತಿತರರು ಉಪಸ್ಥಿತರಿದ್ದರು.

30ಕೆಟಿಆರ್.ಕೆ10ಃ

ತರೀಕೆರೆಯಲ್ಲಿ ಏರ್ಪಡಿಸಿದ್ದ ಸುದ್ದಿಗೋಷ್ಠಿಯಲ್ಲಿ ಬೆಂಗಳೂರು ಕರ್ನಾಟಕ ರಾಜ್ಯ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ಸಂಘಟನೆಗಳ ಸಂಯುಕ್ತ ಸಂಘರ್ಷ ಸಮಿತಿ ರಾಜ್ಯಾಧ್ಯಕ್ಷ ಬಿ.ಅಮ್ಜದ್ ಮಾತನಾಡಿದರು.ರಾಜ್ಯ ಸಂಘಟನಾ ಕಾರ್ಯದರ್ಶಿ ಕೆ.ಸಿ.ವಿಜಯಕುಮಾರಿ ಮತ್ತಿತರರು ಇದ್ದರು.

-------------------