ಸಾರಾಂಶ
ಕನ್ನಡಪ್ರಭ ವಾರ್ತೆ ಮಂಡ್ಯಜಿಲ್ಲೆಯಲ್ಲಿ ಒಣಗುತ್ತಿರುವ ಬೆಳೆ ರಕ್ಷಣೆ ಮತ್ತು ಜನ-ಜಾನುವಾರುಗಳಿಗೆ ಕುಡಿಯುವ ನೀರಿಗಾಗಿ ಕೆಆರ್‌ಎಸ್ ಅಚ್ಚುಕಟ್ಟು ಪ್ರದೇಶದ ನಾಲೆಗಳಿಗೆ ನೀರು ಹರಿಸಬೇಕು ಎಂದು ರೈತ ಸಂಘ (ಮೂಲ ಸಂಘಟನೆ)ದ ಜಿಲ್ಲಾಧ್ಯಕ್ಷ ಇಂಡುವಾಳು ಚಂದ್ರಶೇಖರ್ ಒತ್ತಾಯಿಸಿದರು.
ನಗರದ ಬೆಂಗಳೂರು- ಮೈಸೂರು ಹೆದ್ದಾರಿಯ ಸರ್ ಎಂ.ವಿಶ್ವೇಶ್ವರಯ್ಯ ಪ್ರತಿಮೆ ಎದುರು ಜಿಲ್ಲಾ ರೈತ ಹಿತರಕ್ಷಣಾ ಸಮಿತಿಯ 5ನೇ ಸೋಮವಾರದ ಹೋರಾಟದಲ್ಲಿ ಮಾತನಾಡಿ, ತಮಿಳುನಾಡಿಗೆ ನೀರು ಹರಿಸಬೇಡಿ. ಇಲ್ಲಿನ ರೈತರಿಗೆ ಸಂಕಷ್ಟ ಎದುರಾಗಲಿದೆ ಎಂದು ಎಚ್ಚರಿಕೆ ನೀಡಿದ್ದರೂ ರೈತರ ಹೋರಾಟ ಕಡೆಗಣಿಸಿ ನೆರೆ ರಾಜ್ಯಕ್ಕೆ ನೀರು ಬಿಟ್ಟು ಈಗ ಕೆಆರ್‌ಎಸ್‌ನಲ್ಲಿ ನೀರು ಇಲ್ಲದೆ ಸಂಕಷ್ಟ ಪಡುವಂತಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.ಜಮೀನಿನಲ್ಲಿರುವ ಬೆಳೆಗಳು ಒಣಗುತ್ತಿವೆ. ಕೆರೆ ಕಟ್ಟೆಗಳು ನೀರಿಲ್ಲದೆ ಸೊರಗಿವೆ. ಜನ ಜಾನುವಾರುಗಳಿಗೆ ಕುಡಿಯಲು ನೀರಿಲ್ಲದಂತಾಗಿದೆ. ಮುಖ್ಯಮಂತ್ರಿ ಮಾತು ಕೊಟ್ಟಂತೆ ನಾಲೆಗಳಿಗೆ ನೀರುಹರಿಸಬೇಕು ಎಂದು ಆಗ್ರಹಿಸಿದರು.
ಬೊಗಳೆ ಬಿಡುತ್ತಿರುವ ಶಾಸಕರು:ಮೈಷುಗರ್ ಹೊಸ ಕಾರ್ಖಾನೆ ನಿರ್ಮಾಣ ವಿಚಾರದಲ್ಲಿ ಶಾಸಕ ಪಿ.ರವಿಕುಮಾರ್ ಬೊಗಳೆ ಬಿಡುತ್ತಿದ್ದಾರೆ. ಬಜೆಟ್‌ನಲ್ಲಿ ಹೊಸ ಕಾರ್ಖಾನೆ ಘೋಷಣೆ ಮಾಡಲಾಗಿದೆ. ಆದರೆ, ಶಾಸಕರು 500 ಕೋಟಿ ರು. ವೆಚ್ಚದಲ್ಲಿ ನಿರ್ಮಾಣ ಮಾಡುತ್ತಿದ್ದೇವೆ. ಅನುದಾನ ನೀಡಲಾಗಿದೆ ಎಂದು ಹೇಳುತ್ತಿದ್ದಾರೆ ಎಂದು ಟೀಕಿಸಿದರು.
ಹೊಸ ಕಾರ್ಖಾನೆ ಯಾವ ಸ್ಥಳದಲ್ಲಿ ನಿರ್ಮಾಣ ಆಗಬೇಕು ಎಂಬುದರ ಬಗ್ಗೆ ಗೊಂದಲ ಇದೆ. ಕಾರ್ಖಾನೆಯಲ್ಲಿ 14 ಸಾವಿರ ರೈತರು ಷೇರು ಹೊಂದಿದ್ದಾರೆ. ಕಬ್ಬು ಬೆಳೆಗಾರರು ಮತ್ತು ರೈತರೊಂದಿಗೆ ಚರ್ಚೆ ಮಾಡಿಲ್ಲ. ಏಕಾಏಕಿ ತಮಗಿಷ್ಟ ಬಂದಂತೆ ಜನರನ್ನು ದಿಕ್ಕು ತಪ್ಪಿಸುತ್ತಿದ್ದಾರೆ ಎಂದು ಆರೋಪಿಸಿದರು.ಮೈಷುಗರ್ ಕಾರ್ಖಾನೆ ಮಿಲ್ ಪ್ರತಿನಿತ್ಯ 5ಸಾವಿರ ಟನ್ ಕಬ್ಬು ಅರೆಯುವ ಸಾಮರ್ಥ್ಯ ಹೊಂದಿದೆ. ಕಾರ್ಖಾನೆ ನಡೆಯುವಾಗ ಸರಿಯಾಗಿ ಕಬ್ಬು ಸರಬರಾಜು ಮಾಡಲು ಶಾಸಕರು ಕಾಳಜಿ ತೋರಲಿಲ್ಲ. ಕಾರ್ಖಾನೆ ನಿಂತು ಮೂರು ತಿಂಗಳಾಗಿದೆ. ಜೂನ್ ವೇಳೆಗೆ ಕಾರ್ಖಾನೆಯಲ್ಲಿ ಕಬ್ಬು ಅರೆಯುವ ಬಗ್ಗೆ ಚಿಂತಿಸದೆ ಹೊಸ ಕಾರ್ಖಾನೆ ವಿಚಾರವಾಗಿ ಜನರ ದಿಕ್ಕು ತಪ್ಪಿಸುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿಭಟನೆಯಲ್ಲಿ ಸಮಿತಿ ಪ್ರಧಾನ ಕಾರ್ಯದರ್ಶಿ ಕೆ.ಬೋರಯ್ಯ, ಸಂಘಟನಾ ಕಾರ್ಯದರ್ಶಿ ಸುನಂದ ಜಯರಾಮ, ಮುದ್ದೇಗೌಡ, ಕನ್ನಡ ಸೇನೆ ಮಂಜುನಾಥ್, ದಸಂಸ ಎಂ.ವಿ.ಕೃಷ್ಣ, ಕೆಂಪೇಗೌಡ, ನಾರಾಯಣಸ್ವಾಮಿ ಶಿವಲಿಂಗಯ್ಯ, ಎಂ.ಎಲ್.ತುಳಸಿಧರ್, ಇಂಡುವಾಳು ಬಸವರಾಜ್ ಭಾಗವಹಿಸಿದ್ದರು.