ಸಾರಾಂಶ
ಹೊಸದುರ್ಗ ತಾಲೂಕಿನ ಕಸಬಾ ಹೋಬಳಿ ನೀರಗುಂದ ಗ್ರಾಮದ ದಲಿತ ಸಮುದಾಯದವರು ಗ್ರಾಮದ ರಿ.ಸ.ನಂ.96ರಲ್ಲಿ ನಮಗೂ ಭೂಮಿ ಕೊಡಿ ಎಂದು ಒತ್ತಾಯಿಸಿ ಪ್ರತಿಭಟನೆ ನಡೆಸಿದರು.
ಸಾಗುವಳಿ ಭೂಮಿ ನೀಡುವಂತೆ ದಲಿತ ಸಮುದಾಯದವರಿಂದ ಒತ್ತಾಯ
ಕನ್ನಡಪ್ರಭ ವಾರ್ತೆ ಹೊಸದುರ್ಗ:ತಾಲೂಕಿನ ಕಸಬಾ ಹೋಬಳಿ ನೀರಗುಂದ ಗ್ರಾಮದ ದಲಿತ ಸಮುದಾಯದವರು ಗ್ರಾಮದ ರಿ.ಸ.ನಂ.96ರಲ್ಲಿ ಭೂಮಿ ಕೊಡುವಂತೆ ಒತ್ತಾಯಿಸಿ ಪ್ರಾಣ ಬಿಟ್ಟೇವು, ಜಮೀನು ಬಿಡೇವು ಎಂಬ ಹೋರಾಟ ಮಂಗಳವಾರದಿಂದ ಆರಂಭಿಸಿದ್ದಾರೆ.
ನಮಗೆ ಜಮೀನು ಇಲ್ಲ. ಜೀವನ ನಿರ್ವಹಣೆಗಾಗಿ ಸುಮಾರು ವರ್ಷಗಳ ಹಿಂದಿನಿಂದಲೂ ರಿ.ಸ.ನಂ.96ರಲ್ಲಿ ಒಂದಿಷ್ಟು ಜಮೀನು ಸಾಗುವಳಿ ಮಾಡಿಕೊಂಡು ಜೀವನ ನಿರ್ವಹಣೆ ಮಾಡಿಕೊಂಡು ಬರುತ್ತಿದ್ದೆವೆ. ಸಾಗುವಳಿ ಪತ್ರಕ್ಕಾಗಿ ಬಗರ್ ಹುಕುಂ ಯೋಜನೆಯಡಿ ಅರ್ಜಿ ಸಲ್ಲಿಸಿದ್ದೆವು. ಆದರೆ ಮೂರ್ನಾಲ್ಕು ವರ್ಷದ ಹಿಂದೆ ಗ್ರಾಮದ ಮುಖಂಡರು ಗ್ರಾಮದ ರಿ.ಸ.ನಂ.96 ರಲ್ಲಿ ಇರುವ ಒಟ್ಟು 119 ಎಕರೆ ಜಮೀನನ್ನು ಗ್ರಾಮದಲ್ಲಿರುವ ಎಲ್ಲಾ ವರ್ಗದ ಬಡಜನರಿಗೆ ಹಂಚಿಕೆ ಮಾಡಲಾಗುತ್ತದೆ ಎಂದು ಹೇಳಿ ಜಮೀನು ಸಾಗುವಳಿಯನ್ನು ನಿಲ್ಲಿಸಿದ್ದರು. ಪರಿಣಾಮವಾಗಿ ಜೀವನ ನಿರ್ವಹಣೆಗೆ ತೊಂದರೆ ಉಂಟಾಯಿತು. ಆದರೆ ಈ ನಡುವೆ ಹೆಚ್ಚಿನ ಆಸ್ತಿವಂತರು ತಮಗೆ ಇಷ್ಟಬಂದಂತೆ ಜಮೀನು ಸಾಗುವಳಿ ಮಾಡಿಕೊಂಡಿದ್ದಾರೆ. ಆಸ್ತಿ ಇರುವವರೇ ಈ ರೀತಿ ಮಾಡಿದಾಗ, ಆಸ್ತಿ ಇಲ್ಲದ ನಾವು ಸುಮ್ಮನೆ ಇರುವುದು ನ್ಯಾಯವಲ್ಲ. ಆದ್ದರಿಂದ ನಮಗೆ ಸಾಗುವಳಿ ಪತ್ರ ಕೊಡುವವರೆಗೂ ಜಮೀನು ಸಾಗುವಳಿ ಮಾಡುವುದು ಬಿಡುವುದಿಲ್ಲ ಎಂದು ಹೋರಾಟಗಾರರು ತಿಳಿಸಿದರು.ವಿಷಯ ತಿಳಿದ ತಹಸೀಲ್ದಾರ್ ತಿರುಪತಿ ಪಾಟೀಲ್, ಕಂದಾಯ ಅಧಿಕಾರಿ, ಗ್ರಾಮ ಆಡಳಿತ ಅಧಿಕಾರಿ ಸ್ಥಳಕ್ಕೆ ಭೇಟಿ ನೀಡಿ, ಸರಕಾರಿ ಗೋಮಾಳವನ್ನು ಸಾಗುವಳಿ ಮಾಡಬೇಡಿ ಎಂದು ಹೋರಾಟಗಾರರ ಮನವೊಲಿಸಲು ಪ್ರಯತ್ನಿಸಿದರು. ಆದರೆ, ಹೋರಾಟಗಾರರು ನಮ್ಮ ಗ್ರಾಮದಲ್ಲಿ ರಿ.ಸ.ನಂ.96, 139, 93, 56ರಲ್ಲಿ ಅಕ್ರಮವಾಗಿ ಸಾಗುವಳಿ ಮಾಡಿಕೊಂಡಿರುವವರನ್ನು ಮೊದಲು ಬಿಡಿಸಿ, ನಂತರ ನಾವು ಸಾಗುವಳಿ ಮಾಡುವುದನ್ನು ಬಿಡುತ್ತೇವೆ ಎಂದು ಪಟ್ಟು ಹಿಡಿದರು. ಇದರಿಂದ ಅಧಿಕಾರಿಗಳು ಅಲ್ಲಿಂದ ಹಿಂತಿರುಗಿದರು.