ಕನಕಪುರ: ಕುಡಿಯುವ ನೀರಿನ ಸಮಸ್ಯೆ ತಲೆದೋರಿ ನೀರಿಗಾಗಿ ಪರದಾಡುತ್ತಿದ್ದರೂ ನಗರಸಭೆ ಅಧಿಕಾರಿಗಳು ನಮ್ಮ ಸಮಸ್ಯೆಗೆ ಕ್ಯಾರೆ ಎನ್ನದೇ ಬೇಜವಾಬ್ದಾರಿಯಿಂದ ವರ್ತಿಸುತ್ತಿರುವುದರಿಂದ ನಗರದ ಹೌಸಿಂಗ್ ಬೋರ್ಡ್ ಬಡಾವಣೆಯ ನಿವಾಸಿಗಳು ಪ್ರತಿನಿತ್ಯ ನೀರಿಗಾಗಿ ಪರದಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ
ಕನಕಪುರ: ಕುಡಿಯುವ ನೀರಿನ ಸಮಸ್ಯೆ ತಲೆದೋರಿ ನೀರಿಗಾಗಿ ಪರದಾಡುತ್ತಿದ್ದರೂ ನಗರಸಭೆ ಅಧಿಕಾರಿಗಳು ನಮ್ಮ ಸಮಸ್ಯೆಗೆ ಕ್ಯಾರೆ ಎನ್ನದೇ ಬೇಜವಾಬ್ದಾರಿಯಿಂದ ವರ್ತಿಸುತ್ತಿರುವುದರಿಂದ ನಗರದ ಹೌಸಿಂಗ್ ಬೋರ್ಡ್ ಬಡಾವಣೆಯ ನಿವಾಸಿಗಳು ಪ್ರತಿನಿತ್ಯ ನೀರಿಗಾಗಿ ಪರದಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.ನಗರದ ಹೌಸಿಂಗ್ ಬೋರ್ಡ್ ಬಡಾವಣೆಯಲ್ಲಿ ಕೆಲವು ದಿನಗಳಿಂದ ಕುಡಿಯುವ ನೀರಿನ ಸಮಸ್ಯೆ ತಲೆದೋರಿದ್ದು ಇರುವ ಐದು ಕೊಳವೆ ಬಾವಿಗಳಲ್ಲಿ ಒಂದರಲ್ಲಿ ಅಂತರ್ಜಲ ಬತ್ತಿದೆ. ಒಂದರ ಮೋಟರ್ ಸುಟ್ಟುಹೋಗಿದೆ. ಮತ್ತೊಂದರಲ್ಲಿ ಕೇಸಿಂಗ್ ತೂತಾಗಿ ಅದರೊಳಗೆ ಯುಜಿಡಿ ನೀರು ಸೇರಿ ಕಲುಷಿತವಾಗಿದೆ. ಉಳಿದ ಎರಡು ಕೊಳವೆ ಬಾವಿಗಳಲ್ಲಿ ಮೂರು ದಿನಗಳ ಹಿಂದೆ ಒಂದರ ಕೇಬಲ್ ಸುಟ್ಟುಹೋಗಿದೆ. ಸದ್ಯಕ್ಕೆ ಒಂದು ಕೊಳವೆ ಬಾವಿಯಲ್ಲಿ ಬರುವಂತಹ ನೀರನ್ನು ಇಡೀ ಬಡಾವಣೆಯ 400 ಮನೆಗಳಿಗೆ ಪೂರೈಕೆ ಮಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.
ಐದು ಕೊಳವೆ ಬಾವಿಗಳಿಂದ ಪೂರೈಕೆ ಮಾಡುತ್ತಿದ್ದ ನೀರು ಒಂದು ಕೊಳವೆ ಬಾವಿಯಿಂದ ಪೂರೈಕೆ ಮಾಡಲು ಸಾಧ್ಯವಾಗದೆ ಇಡೀ ಬಡಾವಣೆ ನೀರಿನ ಸಮಸ್ಯೆಗೆ ಸಿಲುಕಿದೆ. ಕೊನೆ ಪಕ್ಷ ಟ್ಯಾಂಕರ್ ಮೂಲಕವಾದರೂ ಪ್ರತಿದಿನ ನೀರು ಪೂರೈಕೆ ಮಾಡಿದರೆ ಸ್ವಲ್ಪಮಟ್ಟಿಗೆ ನೀರಿನ ಸಮಸ್ಯೆಯನ್ನು ನಿವಾರಣೆ ಮಾಡಬಹುದಾಗಿದೆ. ಆದರೆ ಇದರ ಬಗ್ಗೆ ಗಮನ ಹರಿಸಬೇಕಾದ ನಗರಸಭೆ, ಕೆಟ್ಟಿರುವ ಮೋಟರನ್ನು ರಿಪೇರಿಯನ್ನೂ ಮಾಡಿಸುತ್ತಿಲ್ಲ. ಸುಟ್ಟಿರುವ ಕೇಬಲ್ ಬದಲಾಯಿಸುತ್ತಿಲ್ಲ, ಯುಜಿಡಿ ನೀರು ಸೇರಿ ಬರುತ್ತಿರುವ ಕೊಳವೆಬಾವಿಯನ್ನು ಇಲ್ಲಿಯವರೆಗೂ ಸರಿಪಡಿಸದಿರುವುದು ನೀರಿನ ಸಮಸ್ಯೆಗೆ ಕಾರಣವಾಗಿದೆ ಎಂದು ಬಡಾವಣೆ ನಿವಾಸಿಗಳು ಅಳಲು ತೋಡಿಕೊಂಡಿದ್ದಾರೆ.ನೀರಿಗಾಗಿ ಪರದಾಡುವ ಸ್ಥಿತಿ ನಿರ್ಮಾಣವಾಗಿದ್ದರೂ ಸಂಬಂಧಪಟ್ಟ ಅಧಿಕಾರಿಗಳು ಕ್ಯಾರೆ ಎನ್ನುತ್ತಿಲ್ಲ, ನಾವು ನಗರಸಭೆ ವ್ಯಾಪ್ತಿಯಲ್ಲಿ ಇದ್ದೆವೊ ಇಲ್ಲವೋ ಎನ್ನುವಂತಾಗಿದೆ. ಕನಿಷ್ಠ ಪಕ್ಷ ಕುಡಿಯುವ ನೀರನ್ನಾದರೂ ಪೂರೈಕೆ ಮಾಡದಿದ್ದರೆ ಮತ್ತೇನು ಮಾಡಲು ಇವರಿಂದ ಸಾಧ್ಯ, ಕೆಟ್ಟಿರುವ ಕೊಳವೆ ಬಾವಿಗಳನ್ನು ಸರಿಪಡಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಮನವಿ ಮಾಡಿದರೆ ಅವರು ನಮ್ಮ ಮಾತನ್ನು ಕೇಳಿಸಿಕೊಳ್ಳುತ್ತಿಲ್ಲ. ಅವರ ಮೇಲಿನ ಅಧಿಕಾರಿಗಳಿಗೆ ತಿಳಿಸೋಣವೆಂದರೆ ನಗರಸಭೆಗೆ ಮುಖ್ಯ ಅಧಿಕಾರಿಯೆ ಇಲ್ಲವಾಗಿದ್ದಾರೆ. ನಮ್ಮ ಸಮಸ್ಯೆಯನ್ನು ಸರಿಪಡಿಸದಿದ್ದರೆ ಮುಂದೆ ನಗರಸಭೆಗೆ ಮುತ್ತಿಗೆ ಹಾಕಬೇಕಾಗುತ್ತದೆ ಎಂದೂ ಬಡಾವಣೆಯ ನಾಗರಿಕರೂ ಎಚ್ಚರಿದರೂ ಯಾವುದೇ ಪ್ರಯೋಜನವಾಗಿಲ್ಲ.
ಕೋಟ್..............ಬಡಾವಣೆಯಲ್ಲಿ ಸುಮಾರು 400 ಕುಟುಂಬಗಳಿದ್ದು ಐದು ಕೊಳವೆ ಬಾವಿಗಳಿವೆ. ಅದರಲ್ಲಿ 4 ಕೊಳವೆ ಬಾವಿಗಳು ಕೆಟ್ಟಿದ್ದು, ಇನ್ನೂ ರಿಪೇರಿ ಆಗಿಲ್ಲ. ಒಂದರಲ್ಲಿ ಎಲ್ಲರಿಗೂ ನೀರು ಪೂರೈಸುವುದು ಅಸಾಧ್ಯ. ರಿಪೇರಿ ಮಾಡಿಸುವಂತೆ ನಗರಸಭೆಯ ಶ್ರೀದೇವಿ ಅವರಿಗೆ ಹೇಳಿದ್ದೇವೆ. ಇಲ್ಲಿಯವರೆಗೂ ರಿಪೇರಿ ಮಾಡಿಸಿಲ್ಲ, ಟ್ಯಾಂಕರ್‌ನಲ್ಲಿ ನೀರು ಪೂರೈಕೆ ಮಾಡುವುದಾಗಿ ಹೇಳುತ್ತಾರಷ್ಟೇ. ಆದರೆ, ಟ್ಯಾಂಕರ್ ಡ್ರೈವರ್‌ಗೆ ಫೋನ್ ಮಾಡಿದರೆ ಅವನು ಫೋನ್ ತೆಗೆಯುವುದಿಲ್ಲ. ನಮ್ಮನ್ನು ಜನರು ಬಂದು ಕೇಳುತ್ತಾರೆ ನಮ್ಮಿಂದ ಉತ್ತರಿಸಲು ಆಗುತ್ತಿಲ್ಲ.
-ಮಹಾಲಕ್ಷ್ಮಿ, ನಗರಸಭೆ ಮಾಜಿ ಸದಸ್ಯರು, ಹೌಸಿಂಗ್ ಬೋರ್ಡ್ ಬಡಾವಣೆಕೋಟ್........
ಬಡಾವಣೆಯಲ್ಲಿ ಮೋಟಾರ್‌ಗಳು ಕೆಟ್ಟು ಕೆಲವು ದಿನಗಳಿಂದ ನೀರಿನ ಸಮಸ್ಯೆ ತಲೆದೋರಿದೆ. ಸುಟ್ಟಿರುವ ಮೋಟರನ್ನು ರಿಪೇರಿ ಮಾಡಲು ಕೊಟ್ಟಿದ್ದೇವೆ. ನೀರು ಬತ್ತಿರುವ ಕೊಳವೆಬಾವಿಯಿಂದ ಮೋಟಾರ್ ತೆಗೆದು ನೀರು ಇರುವ ಕೊಳವೆಬಾವಿಗೆ ಬಿಡಲಾಗುವುದು. ಗುರುವಾರ ಹೊಸ ಕೇಬಲ್ ಹಾಕಿ ನೀರಿನ ಸಮಸ್ಯೆ ಬಗೆಹರಿಸಲಾಗುವುದು. ತಾತ್ಕಾಲಿಕವಾಗಿ ದಿನಕ್ಕೆ 4 ರಿಂದ 5 ಟ್ಯಾಂಕರ್ ನೀರು ಕಳಿಸುತ್ತಿದ್ದೇವೆ.-ನಂದೀಶ್, ಜೂನಿಯರ್ ಇಂಜಿನಿಯರ್, ನಗರಸಭೆ
ಕೋಟ್...............ಬಡಾವಣೆಯಲ್ಲಿ ನೀರಿನ ಸಮಸ್ಯೆ ಏತಕ್ಕಾಗಿ ಆಗಿದೆ ಎಂದು ನನ್ನ ಗಮನಕ್ಕೆ ಬಂದಿಲ್ಲ. ಟ್ಯಾಂಕರ್ ಮೂಲಕ ನೀರು ಪೂರೈಕೆ ಮಾಡುತ್ತಿರುವುದಾಗಿ ಮಾಹಿತಿ ಇದೆ. ಆದರೂ ಬಡಾವಣೆಗೆ ಟ್ಯಾಂಕರ್‌ನಲ್ಲಿ ನೀರು ಏಕೆ ಪೂರೈಕೆ ಆಗುತ್ತಿಲ್ಲ ಎಂದು ನೌಕರರನ್ನು ವಿಚಾರಿಸಿ ನೀರಿನ ಸಮಸ್ಯೆಯನ್ನು ಶೀಘ್ರವೇ ಬಗೆಹರಿಸಲಾಗುವುದು.
-ಸಂಜಯ್, ಪ್ರಭಾರ ಪೌರಾಯುಕ್ತರು, ನಗರಸಭೆ, ಕನಕಪುರಕೆ ಕೆ ಪಿ ಸುದ್ದಿ 01:
ಕನಕಪುರ ನಗರದ ಹೌಸಿಂಗ್ ಬೋರ್ಡ್ ಕಾಲೋನಿಯಲ್ಲಿ ನೀರಿಗಾಗಿ ಪರದಾಟ.