ಗ್ರಾಮ ಪಂಚಾಯಿತಿ ಪಿಡಿಒ ವಿರುದ್ಧ ಕ್ರಮ ಇಲ್ಲದಿದ್ದರೆ ಹೋರಾಟ: ಬಿಜೆಪಿಯ ಬೀರನಹಳ್ಳಿಯ ಮಂಜು ಎಚ್ಚರಿಕೆ

| Published : Mar 30 2024, 12:54 AM IST

ಗ್ರಾಮ ಪಂಚಾಯಿತಿ ಪಿಡಿಒ ವಿರುದ್ಧ ಕ್ರಮ ಇಲ್ಲದಿದ್ದರೆ ಹೋರಾಟ: ಬಿಜೆಪಿಯ ಬೀರನಹಳ್ಳಿಯ ಮಂಜು ಎಚ್ಚರಿಕೆ
Share this Article
  • FB
  • TW
  • Linkdin
  • Email

ಸಾರಾಂಶ

ಹಾಸನ ತಾಲೂಕಿನ ಸಾಲಗಾಮೆ ಗ್ರಾಮ ಪಂಚಾಯಿತಿ ಆಸ್ತಿ ಮಾರಾಟ ಮಾಡುವ ಪ್ರಕ್ರಿಯೆಯಲ್ಲಿ ಪೂರ್ವ ಅನುಮತಿ ಪಡೆಯದೇ ಕರ್ತವ್ಯಲೋಪ ಎಸಗಿರುವ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಜರುಗಿಸಬೇಕು ಎಂದು ಬಿಜೆಪಿ ಹಾಸನ ನಗರ ಅಧ್ಯಕ್ಷ ಬೀರನಹಳ್ಳಿಯ ಮಂಜು ಎಚ್ಚರಿಸಿದ್ದಾರೆ.

ಆಸ್ತಿ ಮಾರಾಟ ಪ್ರಕ್ರಿಯೆಯಲ್ಲಿ ಕರ್ತವ್ಯಲೋಪ ಆರೋಪ

ಕನ್ನಡಪ್ರಭ ವಾರ್ತೆ ಹಾಸನ

ತಾಲೂಕಿನ ಸಾಲಗಾಮೆ ಗ್ರಾಮ ಪಂಚಾಯಿತಿ ಆಸ್ತಿ ಮಾರಾಟ ಮಾಡುವ ಪ್ರಕ್ರಿಯೆಯಲ್ಲಿ ಪೂರ್ವ ಅನುಮತಿ ಪಡೆಯದೇ ಕರ್ತವ್ಯಲೋಪ ಎಸಗಿರುವ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಜರುಗಿಸಬೇಕು. ಇನ್ನು ಏಳು ದಿನಗಳ ಒಳಗೆ ಕ್ರಮ ಕೈಗೊಳ್ಳದಿದ್ದರೆ ಹೋರಾಟ ಮಾಡಲಾಗುವುದು ಎಂದು ಬಿಜೆಪಿ ಹಾಸನ ನಗರ ಅಧ್ಯಕ್ಷ ಬೀರನಹಳ್ಳಿಯ ಮಂಜು ಎಚ್ಚರಿಸಿದ್ದಾರೆ.

ಮಾಧ್ಯಮಗೋಷ್ಠಿಯಲ್ಲಿ ಶುಕ್ರವಾರ ಮಾತನಾಡಿ, ತಾಲೂಕಿನ ಸಾಲಗಾಮೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪಂಚಾಯಿತಿ ಹಳೆ ಕಟ್ಟಡವು ಶಿಥಿಲಗೊಂಡಿದ್ದು, ಈ ಕಟ್ಟಡವನ್ನು ಗ್ರಾಪಂ ಅಭಿವೃದ್ಧಿ ಅಧಿಕಾರಿಯು ಎಚ್‌ಡಿಸಿಸಿ. ಬ್ಯಾಂಕಿಗೆ ಪರಭಾರೆ ಮಾಡಿದ್ದು, ಗ್ರಾಮ ಪಂಚಾಯಿತಿಯಿಂದಲೇ ಮಳಿಗೆ ಮತ್ತು ಕಟ್ಟಡಗಳನ್ನು ನಿರ್ಮಿಸಿ ಬಾಡಿಗೆಗೆ ನೀಡುವಂತೆ ಹಲವು ಸಾಮಾನ್ಯ ಸಭೆಗಳಲ್ಲಿ ತಿಳಿಸಲಾಗಿತ್ತು. ಅನುಮೋದನೆ ಪಡೆಯದೇ ನಿಯಮ ಉಲ್ಲಂಘಿಸಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಮಾರಾಟ ಮಾಡಿ ಕರ್ತವ್ಯಲೋಪ ಎಸಗಿದ್ದಾರೆ ಎಂದು ದೂರಿದರು.

ದೂರುದಾರರ ಲಿಖಿತ ಹೇಳಿಕೆಯಲ್ಲಿ ಆ ಜಾಗವನ್ನು ೪ ಲಕ್ಷ ರು.ಗೆ ಬೆಲೆ ನಿಗದಿ ಮಾಡಿರುವುದು ಸಮಂಜಸವಲ್ಲ ಹಾಗೂ ಪ್ರಾಧಿಕಾರದ ಅನುಮೋದನೆ ಪಡೆದಿರುವುದಿಲ್ಲ. ಈಗಾಗಲೇ ಜಿಲ್ಲಾ ಪಂಚಾಯಿತಿಯಿಂದ ಪೂರ್ವ ಅನುಮೋದನೆ ನೀಡುವ ಬಗ್ಗೆ ಸರ್ಕಾರದ ಹಂತದಲ್ಲಿ ಕ್ರಮವಹಿಸಬೇಕು. ಈ ಸ್ವತ್ತನ್ನು ೨೦೧೯ ಜೂನ್ ೭ ರಂದು ಉಪನೋಂದಣಾಧಿಕಾರಿ ಹಾಸನ ಕಚೇರಿಯಲ್ಲಿ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ಉನ್ನತಿ ಕಟ್ಟಡ ಇದರ ಪರವಾಗಿ ಮುಖ್ಯ ಕಾರ‍್ಯನಿರ್ವಾಹಕ ಅಧಿಕಾರಿಗಳಿಗೆ ಮಾರಾಟ ಮಾಡಿರುವುದು ಕಂಡು ಬಂದಿದೆ ಎಂದರು.

ಈ ಆಸ್ತಿ ಮಾರಾಟ ಮಾಡುವ ಪ್ರಕ್ರಿಯೆಯಲ್ಲಿ ಸರ್ಕಾರದ ಪೂರ್ವ ಅನುಮತಿ ಪಡೆಯದೇ ಅಂದಿನ ಸಾಲಗಾಮೆ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಕರ್ತವ್ಯಲೋಪ ಎಸಗಿರುವುದರಿಂದ ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮದಂತೆ ಯಾವ ಸೂಕ್ತ ಕಾರಣವಿಲ್ಲದೇ ಕರ್ತವ್ಯಗಳನ್ನು ಕಡೆಗಣಿಸಲಾಗಿದೆ ಎಂದು ಆರೋಪಿಸಿದರು.

ಗ್ರಾಮ ಪಂಚಾಯಿತಿ ಅಬಿವೃದ್ಧಿ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಜರುಗಿಸಲು ಮುಖ್ಯ ಕಾರ‍್ಯನಿರ್ವಾಹಕ ಅಧಿಕಾರಿ ಜಿಲ್ಲಾ ಪಂಚಾಯತ್ ಇವರಿಗೆ ಮೈಸೂರು ಜಿಲ್ಲಾ ಪಂಚಾಯತ್ ಕುಂದು ಕೊರತೆ ನಿವಾರಣಾ ಪ್ರಾಧಿಕಾರವು ಶಿಫಾರಸು ಮಾಡಿದೆ. ಕೂಡಲೇ ಜಿಪಂ ಅಧಿಕಾರಿಗಳು ಅಭಿವೃದ್ಧಿ ಅಧಿಕಾರಿಗಳನ್ನು ಕೆಲಸದಿಂದ ವಜಾ ಮಾಡಬೇಕು. ಇಲ್ಲವಾದರೇ ಮುಂದಿನ ದಿನಗಳಲ್ಲಿ ಎಲ್ಲಾ ಗ್ರಾಮಸ್ಥರು ಹಾಗೂ ಸದಸ್ಯರು ಸೇರಿ ಹೋರಾಟ ಮಾಡಲಾಗುವುದು ಎಂದು ಎಚ್ಚರಿಸಿದರು.

ಬಿಜೆಪಿ ಪಕ್ಷದ ಮುಖಂಡರಾದ ಯಶವಂತ್, ಯೋಗೇಶ್, ಮೂರ್ತಿ, ಕೃಷ್ಣೇಗೌಡ, ತಾಂಡವೇಶ್ ಇದ್ದರು.

ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಬಿಜೆಪಿ ಹಾಸನ ನಗರ ಅಧ್ಯಕ್ಷ ಬೀರನಹಳ್ಳಿಯ ಮಂಜು.