ಸಾರಾಂಶ
ಕನ್ನಡಪ್ರಭ ವಾರ್ತೆ ತಿಪಟೂರು
ಚಿಕ್ಕನಾಯಕನಹಳ್ಳಿ ಮತ್ತು ಗುಬ್ಬಿ ಗಣಿಬಾಧಿತ ತಾಲೂಕುಗಳಿಗೆ ಗಣಿಗಾರಿಕೆ ಅನಾಹುತದಿಂದಾಗಿರುವ ದುಷ್ಪರಿಣಾಮ ಪರಿಹಾರಾರ್ಥವಾಗಿ ಸಂಗ್ರಹವಾಗಿರುವ ಹಣವನ್ನು ಸದ್ವಿನಿಯೋಗಪಡಿಸಬೇಕು ಇಲ್ಲವಾದಲ್ಲಿ ತುಮಕೂರು ಜಿಲ್ಲಾ ಗಣಿಬಾಧಿತ ಪ್ರದೇಶದ ಪುನಶ್ಚೇತನ ಸಮಿತಿ ಹೋರಾಟ ನಡೆಸುತ್ತದೆ ಎಂದು ಹೋರಾಟ ಸಮಿತಿ ಜಿಲ್ಲಾ ಸಂಚಾಲಕ ಯತಿರಾಜು ತಿಳಿಸಿದರು.ತಾಲೂಕಿನ ಕಿಬ್ಬನಹಳ್ಳಿ ಹೋಬಳಿಯ ರಜತಾದ್ರಿಪುರದಲ್ಲಿ ಗಣಿ ಬಾಧಿತ ಪ್ರದೇಶಗಳ ಪುನಶ್ಚೇತನ ಕಾರ್ಯಕ್ರಮದ ಕ್ರಿಯಾ ಯೋಜನೆ ಸಿದ್ಧಪಡಿಸುವ ಉದ್ದೇಶದಿಂದ ಆಯೋಜಿಸಿದ್ದ ತಾಲೂಕು ಸಮಾವೇಶದಲ್ಲಿ ಮಾತನಾಡಿದ ಅವರು, ಸಾಮಾಜಿಕ ಕಾರ್ಯಕರ್ತರ ಒತ್ತಾಯದಿಂದ ಹಾಗೂ ಹೋರಾಟದಿಂದ ಸರ್ಕಾರವು ಗಣಿಗಾರಿಕೆ ಕಂಪನಿಗಳಿಂದ ಗಣಿಬಾಧಿತ ಪ್ರದೇಶಗಳ ಪುನಶ್ಚೇತನಕ್ಕಾಗಿ ಪರಿಹಾರ ಹಣವನ್ನು ಸಂಗ್ರಹಿಸಿದೆ. ಈ ಪರಿಹಾರದ ಮೊತ್ತವು ಗಣಿಬಾಧಿತ ಪ್ರದೇಶಗಳಲ್ಲಿ ಅಲ್ಲಿಯ ಜನರ ಆರೋಗ್ಯ, ಶಿಕ್ಷಣ, ಸಾಮಾಜಿಕ ಅಭಿವೃದ್ಧಿಗಳಿಗೆ ಪೂರಕವಾಗಿ ಮತ್ತು ಗಣಿಗಾರಿಕೆಯಿಂದ ಪರಿಸರ, ಕಾಡು, ಜಮೀನುಗಳಿಗೆ ಆದ ನಷ್ಟವನ್ನು ಸರಿಪಡಿಸಲು ವಿನಿಯೋಗಿಸಬೇಕು. ಆದರೆ ದುರಂತವೆಂದರೆ ಆ ದಿಕ್ಕಿನಲ್ಲಿ ಸರ್ಕಾರಗಳು ಯೋಜನೆಗಳನ್ನು ರೂಪಿಸುತ್ತಿಲ್ಲ. ನಿಜವಾದ ಅಭಿವೃದ್ಧಿಗಾಗಿ ನಾವು ಹಕ್ಕುಗಳನ್ನು ಮುಂದಿಟ್ಟುಕೊಂಡು ಹೋರಾಟ ಮಾಡಬೇಕು ಎಂದರು. ಜಿಲ್ಲಾ ಸಮಿತಿಯ ಸದಸ್ಯ ಎಸ್.ಎನ್. ಸ್ವಾಮಿ ಮಾತನಾಡಿ, ಗಣಿ ಬಾಧಿತ ಜನರ ಮತ್ತು ಪ್ರದೇಶದ ಅಭಿವೃದ್ಧಿಗೆ ಉಪಯೋಗಿಸಬೇಕಾಗಿದ್ದ ಹಣವು ಸರ್ಕಾರಿ ಯೋಜನೆಗಳಿಗೆ ಹರಿದು ಹೋಗುತ್ತಿರುವುದು ದುರಂತ. ಗಣಿಗಾರಿಕೆಯಿಂದ ಆರೋಗ್ಯ, ಆಸ್ತಿ, ಬದುಕುಗಳನ್ನು ಕಳೆದುಕೊಂಡ ಜನರು ಪರಿಹಾರ ಸಿಗದೆ ಕಂಗಾಲಾಗಿದ್ದು ಉಚಿತ ಆರೋಗ್ಯ, ಇನ್ನಿತರ ಮೂಲಭೂತ ಸೌಕರ್ಯ ಕಲ್ಪಿಸಿಕೊಡಬೇಕೆಂದು ಒತ್ತಾಯಿಸಿದರು. ಜಿಲ್ಲಾ ಸಮಿತಿಯ ಸದಸ್ಯ ಆರ್.ಕೆ.ರಾಮಕೃಷ್ಣಪ್ಪ ಮಾತನಾಡಿ, ಗಣಿಬಾಧಿತ ಜನರು ತಮ್ಮ ಅಭಿವೃದ್ಧಿಗೆ ಬೇಕಾದ ಹಕ್ಕೊತ್ತಾಯಗಳನ್ನು ಗ್ರಾಮ ಸಭೆಗಳಲ್ಲಿ ಚರ್ಚಿಸಿ ನಿರ್ಣಯ ಮಾಡಬೇಕು. ಅದರಲ್ಲಿ ಜನ, ಜಾನುವಾರುಗಳ ಆರೋಗ್ಯಕ್ಕಾಗಿ ಆಸ್ಪತ್ರೆಗಳು, ಶಾಲಾ ಸರ್ಕಾರಿ ಶಾಲೆಗಳ ಅಭಿವೃದ್ಧಿ, ಶುದ್ಧ ಕುಡಿಯುವ ನೀರು, ನೀರಾವರಿ ವ್ಯವಸ್ಥೆಗಳಿರಬೇಕು. ಇದಕ್ಕಾಗಿ ಎಲ್ಲರೂ ಸಂಘಟಿತರಾಗಿ ಕೆಲಸ ಮಾಡಬೇಕೆಂದರು. ಸಭೆಯಲ್ಲಿ ಹಿಂಡಿಸ್ಕೆರೆ ಗ್ರಾ ಪಂ ಉಪಾಧ್ಯಕ್ಷ ನರಸಿಂಹಮೂರ್ತಿ, ಸದಸ್ಯರಾದ ರಾಘವೇಂದ್ರ, ತಿಮ್ಮರಾಯಪ್ಪ, ಉಗ್ರ ನರಸಿಂಹಯ್ಯ, ಗ್ರಾಮಸ್ಥರಾದ ಮಹಾಲಿಂಗಯ್ಯ, ಶ್ರೀನಿವಾಸಯ್ಯ, ರವಿ, ಉದಯ್, ಕುಣಿಯಾರ್ ಮಂಜು ಸೇರಿದಂತೆ ತಾಲೂಕಿನ ಗಣಿ ಬಾಧಿತ ಹಳ್ಳಿಗಳ ಪ್ರತಿನಿಧಿಗಳು ಭಾಗವಹಿಸಿದ್ಧರು.