ಭರವಸೆ ನೀಡಿದಂತೆ ನಡೆದುಕೊಳ್ಳದಿದ್ದರೆ ಹೋರಾಟ

| Published : Feb 08 2025, 12:31 AM IST

ಸಾರಾಂಶ

ಶಿವಮೊಗ್ಗ: ರೈತರ ತೋಟಗಳ ಮೇಲೆ ಅವೈಜ್ಞಾನಿಕ ಹೈಟೆನ್ಷನ್ ವಿದ್ಯುತ್ ಮಾರ್ಗ ಹಾದು ಹೋಗುವುದನ್ನು ವಿರೋಧಿಸಿ ಪ್ರತಿಭಟನೆ ವೇಳೆ ಜಿಲ್ಲಾ ಉಸ್ತುವಾರಿ ಸಚಿವರು, ಶಾಸಕ ಬಿ.ವೈ.ವಿಜಯೇಂದ್ರ ಅವರು ನೀಡಿದ ಭರವಸೆ ನೀಡಿದಂತೆ ನಡೆದುಕೊಳ್ಳಬೇಕು. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಅನಿವಾರ್ಯ ಎಂದು ಮಲೆನಾಡು ರೈತ ಹೋರಾಟ ಸಮಿತಿ ಸಂಚಾಲಕ ತೀ.ನಾ. ಶ್ರೀನಿವಾಸ್ ಎಚ್ಚರಿಕೆ ನೀಡಿದರು.

ಶಿವಮೊಗ್ಗ: ರೈತರ ತೋಟಗಳ ಮೇಲೆ ಅವೈಜ್ಞಾನಿಕ ಹೈಟೆನ್ಷನ್ ವಿದ್ಯುತ್ ಮಾರ್ಗ ಹಾದು ಹೋಗುವುದನ್ನು ವಿರೋಧಿಸಿ ಪ್ರತಿಭಟನೆ ವೇಳೆ ಜಿಲ್ಲಾ ಉಸ್ತುವಾರಿ ಸಚಿವರು, ಶಾಸಕ ಬಿ.ವೈ.ವಿಜಯೇಂದ್ರ ಅವರು ನೀಡಿದ ಭರವಸೆ ನೀಡಿದಂತೆ ನಡೆದುಕೊಳ್ಳಬೇಕು. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಅನಿವಾರ್ಯ ಎಂದು ಮಲೆನಾಡು ರೈತ ಹೋರಾಟ ಸಮಿತಿ ಸಂಚಾಲಕ ತೀ.ನಾ. ಶ್ರೀನಿವಾಸ್ ಎಚ್ಚರಿಕೆ ನೀಡಿದರು.

ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಶಿಕಾರಿಪುರ ತಾಲೂಕಿನ ಈಸೂರು, ಚಿಕ್ಕಜೋಗಿಹಳ್ಳಿ, ಚುರ್ಚಿಗುಂಡಿ ಗ್ರಾಮದಿಂದ ಅಂಜನಾಪುರ ಮತ್ತು ಕೊರಲಹಳ್ಳಿ ಗ್ರಾಮದ ಗ್ರಿಡ್‌ಗೆ ರೈತರ ಜಮೀನು, ತೋಟಗಳ ಮೇಲೆ ಕೆಪಿಟಿಸಿಎಲ್ ಅವೈಜ್ಞಾನಿಕ ಗೋಪುರ ವಿದ್ಯುತ್ ಮಾರ್ಗ ನಿರ್ಮಿಸುತ್ತಿದೆ. ಈ ವಿಷಯಕ್ಕೆ ಸಂಬಂಧಿಸಿದಂತೆ 110/111 ಕೆ.ವಿ.ಎಸ್.ಸಿ. ಲೈನ್ ಡಿ.ಸಿ. ಗೋಪುರದಿಂದ ಹಾದು ಹೋಗುವ ಉಪ ಕೇಂದ್ರಗಳಿಗೆ ಈಸೂರು, ಚಿಕ್ಕಜೋಗಿಹಳ್ಳಿ, ಚುರ್ಚಿಗುಂಡಿ ಗ್ರಾಮದ ಸ.ನಂ. 5ರ ಫಲವತ್ತಾದ ಮತ್ತು ನೀರಾವರಿ ಅಡಿಕೆ ತೋಟಗಳ ಮೇಲೆ ಅವೈಜ್ಞಾನಿಕ ವಿದ್ಯುತ್ ನೀಲ ನಕ್ಷೆ ತಯಾರು ಮಾಡಿದ್ದು, ಈ ಮಾರ್ಗವು ಯಾವುದೇ ರೈತರಿಗೆ ಸೂಕ್ತವಾಗಿಲ್ಲ. ಅವೈಜ್ಞಾನಿಕವಾಗಿದೆ ಎಂದರು.

ಈ ಗ್ರಾಮಗಳಲ್ಲಿ ಸಣ್ಣ ಹಿಡುವಳಿ ರೈತರಿದ್ದು, ಈಗಾಗಲೇ ಈ ಜಮೀನುಗಳಲ್ಲಿ ದೀರ್ಘಾವಧಿ ಬೆಳೆಗಳಾದ ಅಡಿಕೆ, ತೆಂಗು ಇತ್ಯಾದಿ ಬೆಳೆಯಲಾಗುತ್ತಿದೆ. ಈ ಬೆಳೆ ಜಮೀನುಗಳನ್ನು ನಂಬಿ ಕುಟುಂಬದ ನಿರ್ವಹಣೆ ಮಾಡುತ್ತಿದ್ದು, ಕೆಪಿಟಿಸಿಎಲ್ ಯೋಜನೆಯಿಂದ ಅತಂತ್ರರಾಗಿದ್ದೇವೆ ಎಂದರು.ಹಿಂದೆ ಜಿಲ್ಲಾಧಿಕಾರಿಗಳು ಮತ್ತು ಉಪ ವಿಭಾಗಾಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿ ಈ ಮಾರ್ಗವು 23 ಕಿಮೀ ಆಗುತ್ತದೆ. ಅದಕ್ಕೆ ಪರ್ಯಾಯವಾಗಿ 4.5 ಕಿಮೀ ಅಂತರದಲ್ಲಿ ಕೊರಲಹಳ್ಳಿ ಗ್ರಿಡ್ ತಲುಪುವ ಇನ್ನೊಂದು ಯೋಜನೆ ಸೂಚಿಸಿದ್ದರು. ಈಗಾಗಲೇ ಈ ಬಗ್ಗೆ ಶಾಸಕರಾದ ವಿಜಯೇಂದ್ರ, ಸಂಸದ ರಾಘವೇಂದ್ರ, ಜಿಲ್ಲಾ ಉಸ್ತುವಾರಿ ಸಚಿವರು ಮತ್ತು ಅಧಿಕಾರಿಗಳ ಗಮನಕ್ಕೆ ಅನೇಕ ಬಾರಿ ತರಲಾಗಿದೆ. ಚುನಾವಣೆ ಸಂದರ್ಭದಲ್ಲಿ ಸಂಸದರು ಮತ್ತು ಶಾಸಕರು ವೀರಭದ್ರೇಶ್ವರ ದೇವಸ್ಥಾನದಲ್ಲಿ ಆಣೆ ಪ್ರಮಾಣ ಮಾಡಿ ರೈತರ ಹಿತ ಕಾಪಾಡುವ ಭರವಸೆ ನೀಡಿದ್ದರು. ನಂತರ ಅದನ್ನು ಮರೆತಿದ್ದಾರೆ ಎಂದು ದೂರಿದರು.ಕೂಡಲೇ ರೈತರ ಸಂಕಷ್ಟ ಅರಿತು ಈ ಅವೈಜ್ಞಾನಿಕ ಯೋಜನೆ ಕೈಬಿಡದಿದ್ದಲ್ಲಿ ಈಸೂರು ದಂಗೆಯ ಎರಡನೇ ಹೋರಾಟವನ್ನು ಸರ್ಕಾರ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.ಪರಿಸರವಾದಿಗಳ ತೀವ್ರ ವಿರೋಧದ ನಡುವೆಯೂ ರಾಜ್ಯ ಸರ್ಕಾರ ದಟ್ಟ ಅರಣ್ಯದಲ್ಲಿರುವ 8 ಸಾವಿರ ಮರಗಳನ್ನು ಶರಾವತಿ ಪಂಪ್ ಸ್ಟೋರೇಜ್ ಯೋಜನೆಗೆ ಒಪ್ಪಿಗೆ ನೀಡಿದೆ. ಆದರೆ, ಕೇಂದ್ರ ಸರ್ಕಾರದ ಪರಿವೇಶ್ 2.0 ಪೋರ್ಟಲ್ ನಲ್ಲಿ ಅರಣ್ಯ ಹಕ್ಕು ಯೋಜನೆಯಡಿ ರೈತರಿಗೆ ಮೂಲಭೂತ ಸೌಕರ್ಯಗಳಾದ ವಿದ್ಯುತ್, ನೀರು, ಶಾಲೆ ಮತ್ತಿತರ ಅಗತ್ಯ ಸೌಕರ್ಯಗಳಿಗೆ ಈ ಕಾಯ್ದೆಯಡಿ ವಿನಾಯಿತಿ ನೀಡಲಾಗಿದೆ. ಹೀಗಿರುವಾಗ ಸರ್ಕಾರ ನಿರ್ಲಕ್ಷ್ಯ ಮಾಡದೇ ಕೂಡಲೇ ಈ ಯೊಜನೆ ಕೈಬಿಟ್ಟು ಅರಣ್ಯ ಮಾರ್ಗದ ಮೂಲಕ ವಿದ್ಯುತ್ ಗ್ರಿಡ್ ಗೆ ಸಂಪರ್ಕ ಕಲ್ಪಿಸಬೇಕು ಎಂದು ಆಗ್ರಹಿಸಿದರು.ಪತ್ರಿಕಾಗೋಷ್ಠಿಯಲ್ಲಿ ವಿ.ಆರ್.ರಾಜೇಶ್ , ಪ್ರೇಮಾನಂದ್, ಸಂತೋಷ್ ಈಸೂರು, ಗಿರೀಶ್, ಕಾರ್ತಿಕ್ ಈಸೂರು ಮತ್ತಿತರರು ಇದ್ದರು.