ಸಾರಾಂಶ
ಕನ್ನಡಪ್ರಭ ವಾರ್ತೆ ವಿಜಯಪುರ
ಲಿಂಗಾಯತ ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿ ಕೊಡುವಲ್ಲಿ ಸರ್ಕಾರದ ನಿರ್ಲಕ್ಷ್ಯ ಖಂಡಿಸಿ ಹಾಗೂ ಕಾನೂನಾತ್ಮಕವಾಗಿ ಹೋರಾಡಲು ಸಮಾಜ ಮುಂದಾಗಿದೆ. ಈ ಹಿನ್ನೆಲೆ ಸೆ. 22ರ ಬೆಳಗ್ಗೆ 10ಗಂಟೆಗೆ ಬೆಳಗಾವಿಯ ಗಾಂಧಿ ಭವನದಲ್ಲಿ ಲಿಂಗಾಯತ ಪಂಚಮಸಾಲಿ ವಕೀಲರ ಪ್ರಥಮ ಮಹಾಪರಿಷತ್ ಸಭೆ ನಡೆಸಲಾಗುತ್ತಿದೆ ಎಂದು ಕೂಡಲಸಂಗಮ ಲಿಂಗಾಯತ ಪಂಚಮಸಾಲಿ ಪೀಠದ ಬಸವಜಯ ಮೃತ್ಯುಂಜಯ ಸ್ವಾಮೀಜಿ ಹೇಳಿದರು.ನಗರದ ಕಿತ್ತೂರು ರಾಣಿ ಚೆನ್ನಮ್ಮ ಸಮುದಾಯ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿಗಾಗಿ ಮೂರೂವರೆ ವರ್ಷಗಳಿಂದ ಹೋರಾಟ ನಡೆಯುತ್ತಿದ್ದು, ಇದೀಗ ಮತ್ತೊಂದು ಆಯಾಮ ಪಡೆದಿದೆ. ಸಮಾಜದ ಎಲ್ಲ ವಕೀಲರನ್ನು ಸೇರಿಸಿ ಹೋರಾಟ ಮಾಡಲಾಗುತ್ತಿದೆ. ಎಲ್ಲಾ ವಕೀಲರು ನಮ್ಮ ಹಕ್ಕು ಕೇಳುವುದರಲ್ಲಿ ತಪ್ಪೇನಿದೆ ಎಂದು 22ರಂದು ಸಭೆ ಸೇರಲಿದ್ದಾರೆ. ಸಭೆಯಲ್ಲಿ ಮುಂದೆ ಏನು ಮಾಡಬೇಕು ಎಂಬುದು ಚರ್ಚಿಸಲಾಗುವುದು ಎಂದು ತಿಳಿಸಿದರು.ಪ್ರಾದೇಶಿಕ ಸಮಾನತೆ ಸಿಗಬೇಕು
ಈ ಭಾಗ ಅಭಿವೃದ್ಧಿ ಆಗಬಾರದು, ಲಿಂಗಾಯತ ಸಮಾಜ ಮುಂದೆ ಬರಬಾರದು ಎಂದು ಕಾಣದ ಶಕ್ತಿಯೊಂದು ಕೆಲಸ ಮಾಡುತ್ತಿದೆ. ದಕ್ಷಿಣ ಕರ್ನಾಟಕ- ಉತ್ತರ ಕರ್ನಾಟಕ ಎಂದು ಎರಡು ಭಾಗ ಮಾಡಿ ಪ್ರಾದೇಶಿಕ ಅಸಮತೋಲನ ಮಾಡಿದ ಹಾಗೆ ನಮ್ಮ ಹೋರಾಟಕ್ಕೂ ಭೇದಭಾವ ಮಾಡಲಾಗುತ್ತಿದೆ. ಹೀಗಾಗಿಯೇ ಪ್ರತ್ಯೇಕ ರಾಜ್ಯ ಬೇಕು ಎಂದು ಕೂಗು ಕೇಳಿಬರುತ್ತಿದೆ. ಎಲ್ಲಾ ಪ್ರದೇಶಕ್ಕೂ ಸಮಾನತೆ ಸಿಗುವಂತೆ, ಸಮಾನ ಅಭಿವೃದ್ಧಿ ಆಗುವಂತೆ ಆಡಳಿತ ಮಾಡಬೇಕು. ಅದಕ್ಕಾಗಿ ಆಡಳಿತ ವಿಕೇಂದ್ರಿಕರಣ ಆಗಬೇಕು, ಆಡಳಿತಾತ್ಮಕವಾಗಿ ಅಭಿವೃದ್ಧಿ ಆಗುವಂತೆ ಮಾಡಬೇಕು. ಈ ಭಾಗದ ಜಿಲ್ಲೆಗಳಿಗೆ ಪ್ರಾಧಾನ್ಯತೆ ಸಿಗಬೇಕು ಎಂದರು.ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಹಾಗೂ ಪಂಚಮಸಾಲಿ ಮುಖಂಡ ಈರಣ್ಣ ಚಾಗಶೆಟ್ಟಿ ಮಾತನಾಡಿ, ಸೆ.22ರಂದು ಬೆಳಗಾವಿಯಲ್ಲಿ ನಡೆಸುವ ಲಿಂಗಾಯತ ಪಂಚಮಸಾಲಿ ವಕೀಲರ ಪ್ರಥಮ ಪರಿಷತ್‌ಗೆ ಜಿಲ್ಲೆಯ ಎಲ್ಲ ವಕೀಲರು ಭಾಗವಹಿಸಬೇಕು. ರಾಜ್ಯದ ಮೂಲೆ ಮೂಲೆಗಳಿಂದ ಪ್ರತಿ ಜಿಲ್ಲೆಯಿಂದಲೂ 200ಕ್ಕೂ ಅಧಿಕ ವಕೀಲರು ಪಾಲ್ಗೊಳ್ಳಬೇಕು. ಈ ಮೂಲಕ ಸಮಾಜಕ್ಕೆ 2ಎ ಮೀಸಲಾತಿ ಸಿಗುವಂತೆ ಶ್ರಮ ವಹಿಸಬೇಕು ಎಂದರು.ಪಂಚಮಸಾಲಿ ಸಮಾಜದ ಜಿಲ್ಲಾಧ್ಯಕ್ಷ ಬಿ.ಎಂ.ಪಾಟೀಲ್ (ದೇವರಹಿಪ್ಪರಗಿ) ಮಾತನಾಡಿ, 2ಎ ಮೀಸಲಾತಿಗಾಗಿ ಕಳೆದ ಮೂರೂವರೆ ವರ್ಷಗಳಲ್ಲಿ 6 ವಿವಿಧ ಬಗೆಯಲ್ಲಿ ಹೋರಾಟಗಳನ್ನು ನಡೆಸಲಾಗಿದೆ. ಇದೀಗ ಸಮಾಜದ ವಕೀಲರ ಮೂಲಕ 7ನೇ ವಿಧದ ಹೋರಾಟಕ್ಕೆ ಸಜ್ಜಾಗಿದ್ದೇವೆ. ಈ ಹಿನ್ನೆಲೆಯಲ್ಲಿ ಎಲ್ಲ ತಾಲೂಕುಗಳಲ್ಲಿ ಸಭೆ ನಡೆಸಲಾಗಿದೆ. ಸಮಾಜದ ಎಲ್ಲ ವಕೀಲರು ಬೃಹತ್ ಹೋರಾಟದಲ್ಲಿ ಭಾಗಿಯಾಗಲಿದ್ದಾರೆ. ಇದು ಕೊನೆಯ ಹೋರಾಟವಾಗಿದ್ದು, ಕಾನೂನು ರೀತಿಯಲ್ಲೇ ನ್ಯಾಯ ಪಡೆದುಕೊಳ್ಳಲಾಗುವುದು ಎಂದು ಹೇಳಿದರು.ಎಲ್ಲಾ ಪಕ್ಷದ ಸಿಎಂಗಳಿಂದ ಮೋಸ
ಕಳೆದ ಮೂರೂವರೆ ವರ್ಷಗಳಲ್ಲಿ ಬಂದ ಸಿಎಂಗಳೆಲ್ಲರೂ ನಮ್ಮ ಸಮಾಜಕ್ಕೆ ನ್ಯಾಯ ಕೊಡಿಸುವ ಭರವಸೆಗಳನ್ನು ನೀಡಿ ನಮಗೆ ಮೋಸ ಮಾಡಿದ್ದಾರೆ. ಈಗಿನ ಸಿಎಂ ಸಿದ್ಧರಾಮಯ್ಯನವರೂ ಅದೇ ಹಾದಿಯಲ್ಲೇ ಹೊರಟಿದ್ದಾರೆ. ಬಂಡಲ್ ಸಿಎಂ ಎಂದರೆ ಸಿದ್ಧರಾಮಯ್ಯವವರು ಎಂಬಂತಾಗಿದೆ. ನಾವು ನಮ್ಮ ಸಮಾಜದ ಬಡ ಮಕ್ಕಳಿಗೆ ಶಿಕ್ಷಣ ಹಾಗೂ ಉದ್ಯೋಗಕ್ಕಾಗಿ ನಾವೂ ಹೋರಾಟ ಮಾಡುತ್ತಿದ್ದೇವೆ ಎಂದರು.ನ್ಯಾಯವಾದಿ ಶ್ರೀಶೈಲ ಮುಳಜಿ ಮಾತನಾಡಿ, ಸೆ.22ರಂದು ವಕೀಲರ ಪರಿಷತ್ ಸಮಾವೇಶ ನಡೆಸಲಾಗುತ್ತಿದೆ. ನ್ಯಾಯಕ್ಕಾಗಿ ಈಗಾಗಲೇ ಪಾದಯಾತ್ರೆ, ಲಿಂಗಪೂಜೆ, ರಾಷ್ಟ್ರೀಯ ಹೆದ್ದಾರಿ ತಡೆ ಸೇರಿದಂತೆ 6 ಹೋರಾಟಗಳು ಮುಗಿದಿವೆ. ಇದೀಗ ನಿವೃತ್ತ ನ್ಯಾಯಾಧೀಶರ ಸಲಹೆ ಪಡೆದು ಕಾನೂನು ಹೋರಾಟ ಶುರು ಮಾಡಲಾಗಿದೆ. ಸಿಎಂ ಸಿದ್ಧರಾಮಯ್ಯ ಅವರು ತಕ್ಷಣ ಶ್ರೀಗಳ ಹಾಗೂ ವಕೀಲರ ಸಭೆ ಕರೆದು ಮಾತನಾಡಬೇಕು ಎಂದು ಒತ್ತಾಯಿಸಿದರು.ಸುದ್ದಿಗೋಷ್ಠಿಯಲ್ಲಿ ಸಮಾಜದ ಮುಖಂಡರಾದ ಬಿ.ಎಂ.ಪೊಲೀಸಪಾಟೀಲ್, ನಿಂಗನಗೌಡ ಸೊಲಾಪುರ, ಶ್ರೀಶೈಲ ಬುಕ್ಕಣ್ಣಿ, ದಾನೇಶ ಅವಟಿ ಸೇರಿದಂತೆ ಇತರರು ಉಪಸ್ಥಿತರಿದ್ದರು.ಕೋಟ್ಈ ಬಾರಿ ಅಖಿಲ ಭಾರತ ಲಿಂಗಾಯತ ಪಂಚಮಸಾಲಿ ಅಡ್ವೊಕೇಟ್ ಪರಿಷತ್ ಮೂಲಕ ಕಾನೂನು ಹೋರಾಟ ನಡೆಸಲಾಗುವುದು. ಸರ್ಕಾರದಿಂದ ಇದಕ್ಕೂ ಸ್ಪಂದನೆ ಸಿಗದಿದ್ದರೆ ಡಿಸೆಂಬರ್ ಅಧಿವೇಶನದಲ್ಲಿ ಉಗ್ರ ಹೋರಾಟ ಕೈಗೆತ್ತಿಕೊಳ್ಳಲಾಗುವುದು. ಸೆ.22ರಂದು ಬೆಳಗಾವಿಯ ರಾಣಿ ಚೆನ್ನಮ್ಮನ ವೃತ್ತದಲ್ಲಿ ಧರಣಿ ನಡೆಸಲಾಗುವುದು. ಇದರಲ್ಲಿ ಸಮಾಜದ ಎಲ್ಲ ವಕೀಲರು ಭಾಗವಹಿಸಬೇಕು.ಜಯಮೃತ್ಯುಂಜಯ ಶ್ರೀ, ಕೂಡಲಸಂಗಮ ಪಂಚಮಸಾಲಿ ಪೀಠ