ಸಾರಾಂಶ
ಕನ್ನಡಪ್ರಭ ವಾರ್ತೆ ಮೈಸೂರು
ಸಮಾಜವಾದಿಗಳು ಇಂದಿನ ರಾಜಕಾರಣವನ್ನು ಪರ್ಯಾಯ ರೀತಿಯಲ್ಲಿ ನೋಡಿ, ಕೇಂದ್ರದಲ್ಲಿ ಮತ್ತೊಮ್ಮೆ ಬದಲಾವಣೆ ತರುವವರೆಗೆ ಹೋರಾಟ ನಡೆಸುವ ಅಗತ್ಯ ಇದೆ ಎಂದು ಚಿಂತಕ ಪ್ರೊ. ಮುಜಾಫರ್ ಅಸಾದಿ ತಿಳಿಸಿದರು.ನಗರದ ರಂಗಾಯಣದ ಶ್ರೀರಂಗ ವೇದಿಕೆಯಲ್ಲಿ ದೇಸಿರಂಗ ಸಾಂಸ್ಕೃತಿಕ ಟ್ರಸ್ಟ್ ಆಯೋಜಿಸಿದ್ದ ವಿಚಾರವಾದಿ, ಪ್ರಗತಿಪರ ಚಿಂತಕ ಪ್ರೊ.ಕೆ. ರಾಮದಾಸ್ ನೆನಪಿನಲಿ ಸಂವಾದ, ಪುಸ್ತಕ ಬಿಡುಗಡೆ, ಲೇಖನ ಪ್ರಶಸ್ತಿ ಪ್ರದಾನ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಸಮಾಜವಾದಿಗಳ ಗುರಿ ಮೊದಲು ಕಾಂಗ್ರೆಸ್ ವಿರೋಧಿ ಚಳವಳಿ ಆಗಿತ್ತು. ಈಗ ಬಿಜೆಪಿ ವಿರೋಧಿ ಆಗಿ ಬದಲಾಗಿದೆ. ಸಮಾಜವಾದಿಗಳ ಮೇಲೆ ಇನ್ನೂ ಗುರುತರ ಜಬಾವ್ದಾರಿ ಇದೆ. ಕೇಂದ್ರದಲ್ಲಿ ಬದಲಾವಣೆ ತರುವವರೆಗೆ ಅದು ಮುಂದುವರೆಯಬೇಕು. ಇತ್ತೀಚೆಗೆ ಗಮನಿಸಿದರೆ ಸಮಾಜವಾದಿ ಚಳವಳಿಗಳು ಸತ್ತು ಹೋಗಿದೆಯಾ? ಅಥವಾ ಹೊಸ ರೂಪಾಂತರ ಪಡೆದಿವೆಯಾ? ಜಾತಿ ಐಡೆಂಟಿಟಿ ಮುಗಿದ ಅಧ್ಯಾಯವೇ? ಹಾಗಿದ್ದರೆ ಜಾತಿ ಗಣತಿ ನಡೆದಿರುವುದು ಏಕೆ ಎಂಬ ಪ್ರಶ್ನೆ ಕಾಡುತ್ತದೆ ಎಂದರು.ಸಮಾಜವಾದಿ ಎನ್ನುವುದು ಕೇವಲ ಕಳೆದು ಹೋದ ತತ್ವವಾಗಿ ಉಳಿದು ಹೋಗಿರುವ ಸಾಧ್ಯತೆ ಇದೆ. ಸತ್ಯೋತ್ತರ ಕಾಲಾವಧಿಯಲ್ಲಿ ಸತ್ಯಗಳು ಸುಳ್ಳಾಗಿವೆ. ಸಮಾಜವಾದಿಗಳು ಸುಳ್ಳು ಹೇಳುವುದಿಲ್ಲ. ಅಂಕಿ ಅಂಶಗಳನ್ನು ಮುಂದೆ ಇಡುತ್ತಿದ್ದರು. ಅವರ ಎದುರಿನಲ್ಲಿ ವಾಸ್ತವತೆ ಇತ್ತು. ಆದರೆ, ಇಂದಿನ ಸತ್ಯೋತ್ತರ ಕಾಲದಲ್ಲಿ ಸಮಾಜವಾದಿಗಳ ನಿರ್ಮಾಣ ಕಷ್ಟ. ಕರ್ನಾಟಕದ ವಿಚಾರದಲ್ಲಿ ಗೋಪಾಲಗೌಡರು, ರಾಮದಾಸರು ಇಲ್ಲವೇ ಸಿದ್ದರಾಮಯ್ಯ ಕೊನೆಯ ಕೊಂಡಿಯಾ? ಎಂಬ ಪ್ರಶ್ನೆ ಕಾಡುತ್ತದೆ ಎಂದರು.
ಸಮಾಜವಾದದಲ್ಲಿ ವಿಜೃಂಭಿಸಿದವರ ಸಂಖ್ಯೆ ಕಡಿಮೆ. ಸಮಾಜವಾದ ಇಂದು ಬಡಕಲಾಗಿದ್ದು, ಅದರ ಪರಿಕಲ್ಪನೆ ಬದಲಾಗಿದೆ. ಸರ್ಕಾರದ ನೀತಿ, ನಿರೂಪಣೆ ಕಾರ್ಪೋರೇಟ್ ಪರವಾಗಿವೆ. ಸಮಾಜ ದ್ವಂದ್ವದಲ್ಲಿ ಇದೆ. ಬಂಡವಾಳವಾದ ನಮ್ಮನ್ನು ನಿಯಂತ್ರಿಸತೊಡಗಿದೆ. ನಾವೊಂದು ಸಾಂಸ್ಕೃತಿಕ, ಕೈಗಾರಿಕೆಗಳ ಬಲೆಯಲ್ಲಿ ಬಿದ್ದಿದ್ದೇವೆ. ಆ ಬಲೆಯೇ ನಮ್ಮನ್ನು ನಿಯಂತ್ರಿಸುತ್ತಿದೆ. ಇದರ ನಡುವೆ ಇರಬೇಕು ಎಂದು ಅವರು ಹೇಳಿದರು.ದೇಶದಲ್ಲಿ ಸಮಾಜವಾದ ಸದ್ಯ ಕಣ್ಮರೆ ಆಗಿದೆ. ಕರ್ನಾಟಕದಲ್ಲಿದ್ದ ಪ್ರಗತಿ ರಂಗ ಕೆಲಸಕ್ಕೆ ಬರುತ್ತಿಲ್ಲ. ಸಮಾಜವಾದಿಗಳ ಬಗ್ಗೆ ನಮ್ಮಲ್ಲಿ ಆಳವಾದ ಅಪನಂಬಿಕೆ ಮೂಡಿದೆ. ಬಿಹಾರದ ನಿತೀಶ್ ಕುಮಾರ್ ಅದಕ್ಕೆ ಉದಾಹರಣೆ ಎಂದು ಅವರು ವ್ಯಂಗ್ಯವಾಡಿದರು.
ಹಿಂದುಳಿದವರಿಗೆ ಅವಕಾಶ ಸಿಗಬೇಕು ಎಂಬುದು ಸಮಾಜವಾದಿಗಳ ಉದ್ದೇಶವಾಗಿತ್ತು. ಸಮಾಜವಾದಿಗಳು ಜಾತಿ ಗುರುತಿಸುವಿಕೆಗೆ ಮಹತ್ವ ಕೊಟ್ಟಿದ್ದರು. ಹಿಂದುಳಿದವರಿಗೆ ಅವಕಾಶ ಸಿಗಬೇಕು ಎಂಬುದು ಅವರ ನಿಲುವಾಗಿತ್ತು.ಸಮಾಜವಾದಿಗಳು ಕೆಳಸ್ತರದಿಂದ ದೇಶ ಕಟ್ಟಿದ್ದರೂ ಜಾತಿ ಇಲ್ಲದೇ ಭಾರತ ಪರಿಕಲ್ಪನೆ ಸಾಧ್ಯವಿಲ್ಲ ಎಂದೂ ವಾದಿಸಿದ್ದರು.ಜಾತಿ ಜನಗಣತಿಯ ಬಗ್ಗೆ ಕೇವಲ ಕರ್ನಾಟಕ, ಬಿಹಾರ ಮಾತ್ರ ಮಾತನಾಡುತ್ತಿದೆ. 1935ರ ಬಳಿಕ ಬಂದ ನಂತರದ ಎಲ್ಲ ಗಣತಿಗಳೂ ಅದನ್ನೇ ಉಲ್ಲೇಖಿಸಿ ಮಾತನಾಡಿವೆ. ಜಾತಿ ಗಣತಿ ನಡೆದರೆ ಹಿಂದುಳಿದ ವರ್ಗಗಳ ಜಾತಿ ಬಗ್ಗೆ ನಿಖರ ಮಾಹಿತಿ ಸಿಗುತ್ತದೆ. ಇದು ರಾಜಕಾರಣ ಬದಲಾವಣೆಗೂ ಕಾರಣ ಆಗಬಹುದು. ಪರ್ಯಾಯ ರಾಜಕಾರಣದಲ್ಲಿ ನಾವು ಸೋತಿದ್ದೇವೆ. ಆದರೂ ವಿಜಯೋತ್ಸವ ಆಚರಿಸಿದ್ದೇವೆ. ನಮ್ಮ ಧ್ವನಿಗಳನ್ನು ಹತ್ತಿಕ್ಕುವಿಕೆ ಮಾಡಿದ್ದ ವ್ಯಕ್ತಿ ಗಳ ವಿರುದ್ಧ ಎದ್ದು ನಿಂತಿದ್ದೇವೆ. ಹೊಸ ಸ್ವಾತಂತ್ರ್ಯ ಪರಿಕಲ್ಪನೆಗಳು ಬರುತ್ತಿವೆ ಎಂದರು.
ಕಾರ್ಯಕ್ರಮದಲ್ಲಿ ಅಂತರ್ಜಾತಿ ವಿವಾಹ ಮತ್ತು ಸಾಮಾಜಿಕ ಸಮಾನತೆ ಕೃತಿ ಬಿಡುಗಡೆಗೊಳಿಸಲಾಯಿತು. ಪ್ರಸ್ತುತ ರಾಜಕಾರಣ ಕುರಿತ ಲೇಖನ ವಿಜೇತರಾದ ಬೆಳಗಾವಿಯ ಗಂಗಾದೇವಿ ಚಕ್ರಸಾಲಿಗೆ 3 ಸಾವಿರ ನಗದು, ಸಿ. ದೀಪು ಪ್ರಸಾದ್ ಗೆ ದ್ವಿತೀಯ ಜೆಎಸ್ಎಸ್ ಕಾಲೇಜಿನ ಆರ್. ಕುಸುಮಾಬಾಯಿಗೆ ತೃತೀಯ ಬಹುಮಾನ ನೀಡಲಾಯಿತು. ವಿಶೇಷ ಲೇಖನ ಪ್ರಶಸ್ತಿಯನ್ನು ಚಿಂತಕ ನಾ. ದಿವಾಕರ ಪಡೆದುಕೊಂಡರು.ಇದೇ ವೇಳೆ ಜಾನಪದ ವಿದ್ವಾಂಸೆ ಡಾ. ಜಯಲಕ್ಷ್ಮೀ ಸೀತಾಪುರ ಅವರ ನಿಧನಕ್ಕೆ ಶ್ರದ್ಧಾಂಜಲಿ ಸಲ್ಲಿಸಲಾಯಿತು.ಚಿಂತಕಿ ಸವಿತಾ ನಾಗಭೂಷಣ ಮತ್ತು ಪ್ರಜಾವಾಣಿ ಕಾರ್ಯನಿರ್ವಾಹಕ ಸಂಪಾದಕ ರವೀಂದ್ರ ಭಟ್, ದೇಸಿರಂಗ ಸಾಂಸ್ಕೃತಿಕ ಟ್ರಸ್ಟ್ ನ ಕೃಷ್ಣ ಜನಮನ, ದಿನಮಣಿ ಇದ್ದರು.ಮೋದಿಯನ್ನು ಬೋಗಸ್ ಆಗಿ ಬಿಂಬಿಸಲಾಗುತ್ತಿದೆ:
ಹಿರಿಯ ಪತ್ರಕರ್ತ ಕೃಷ್ಣ ಪ್ರಸಾದ್ ಮಾತನಾಡಿ, ಕೇಂದ್ರ ಸರ್ಕಾರವು ಹತ್ತು ವರ್ಷಗಳಲ್ಲಿ ನಾಲ್ಕು ಸಾವಿರ ಕಿ.ಮೀ. ನೆಲವನ್ನು ಚೀನಾಕ್ಕೆ ಒಪ್ಪಿಸಿದೆ. ರಫೆಲ್ , ಅದಾನಿ- ಅಂಬಾನಿ ಪ್ರಗತಿ, ಆತ್ಮನಿರ್ಭರ ಭಾರತ ಎನ್ನುವ ಭಾರತದ ಚೀನಾ ಆಮದು ಹೆಚ್ಚಾಗಿದೆ. ಜಾಗತಿಕವಾಗಿ 13 ದೊಡ್ಡ ಮಲಿನ ನಗರಗಳು ಭಾರತದಲ್ಲಿ ಇವೆ. ಮೋದಿ ಭಾರತದ ಕೊಡುಗೆಗಳು ಇವೆಲ್ಲ. ಇಷ್ಟೆಲ್ಲ ಇದ್ದರೂ ಬೋಗಸ್ ಆಗಿ ಮೋದಿಯನ್ನು ಬಿಂಬಿಸಲಾಗುತ್ತಿದೆ ಎಂದು ಹೇಳಿದರು.ಪ್ರಧಾನಿ ಮೋದಿಯ ಅಹಂಕಾರವನ್ನು ಆರ್ ಎಸ್ಎಸ್ ನಾಯಕರೇ ಟೀಕಿಸುತ್ತಿದ್ದಾರೆ. ಕಳೆದ 10 ವರ್ಷಗಳಲ್ಲಿ ಭಾರತದ ರಾಜಕೀಯ ನೈತಿಕತೆ ಕುಸಿದಿರುವುದೇ ದೊಡ್ಡ ಸಾಧನೆ. ಸುಳ್ಳು ಹೇಳುವುದು ಒಳ್ಳೆಯದು ಎಂಬಂತ ಪರಿಸ್ಥಿತಿ ನಮ್ಮ ದೇಶದಲ್ಲಿ ಇದೆ. ಮುಸಲ್ಮಾನರ ಬಗ್ಗೆ ಕೀಳು ಅಭಿರುಚಿ ಬರುವಂತೆ ಬಿಂಬಿಸಲಾಗಿದೆ. ದೇಶದ ಮಠಮಾನ್ಯಗಳು ಧನಿ ಎತ್ತಿಲ್ಲ. ಪ್ರಜ್ವಲ್ ರೇವಣ್ಣ ಬಗ್ಗೆ ಆದಿಚುಂಚನಗಿರಿ ಮಠವಾಗಲಿ, ಬಿಜೆಪಿಯ ಪೇ ಸಿಎಂ ಭ್ರಷ್ಟಾಚಾರದ ಬಗ್ಗೆ ಲಿಂಗಾಯತ ಮಠಗಳಾಗಲೀ ಧ್ವನಿ ಎತ್ತಿಲ್ಲ. ಸಮಾಜದಲ್ಲಿನ ಅನ್ಯಾಯಗಳ ಬಗ್ಗೆ ಮಠಮಾನ್ಯಗಳು ಮೂಕವಾಗಿವೆ ಎಂದು ಅವರು ಕಳವಳ ವ್ಯಕ್ತಪಡಿಸಿದರು.
ಯಡಿಯೂರಪ್ಪಗೆ ಒಂದು ನ್ಯಾಯ, ಜನಸಾಮಾನ್ಯರಿಗೆ ಒಂದು ನ್ಯಾಯವೇ? ಅಗ್ನಿವೀರ ಯೋಜನೆ ಪರಿಶೀಲನೆ ಮಾಡುವುದಾಗಿ ಈಗ ಕೇಂದ್ರ ಹೇಳುತ್ತಿದೆ. ಕಾರ್ಮಿಕ ಕಾನೂನು ದೇಶದಲ್ಲಿ ಇದ್ದೂ ಇಲ್ಲದಾಗಿದೆ ಎಂದು ಅವರು ಟೀಕಿಸಿದರು.ನಾವೆಲ್ಲ ಜಾತ್ಯತೀತತೆ ಬಗ್ಗೆ ಹೇಳುತ್ತೇವೆ. ಆದರೆ ಮಕ್ಕಳು ಅಂತರ್ಜಾತಿ ವಿವಾಹದ ಪ್ರಸ್ತಾವ ಮುಂದಿಟ್ಟರೆ ಬಹುತೇಕರು ವಿರೋಧಿಸುತ್ತೇವೆ. ಸಿನಿಮಾ ನೋಡಿದ ಮೇಲೆ ನನಗೆ ಗಾಂಧಿ ಬಗ್ಗೆ ಗೊತ್ತಾಯಿತು ಎಂಬ ನೇತಾರರ ನಡುವೆ ನಾವಿದ್ದೇವೆ. ಕುಟುಂಬ, ಶಾಲೆ, ಸಮಾಜದಲ್ಲಿ ಆದರ್ಶಗಳು ಕಡಿಮೆ ಆಗಿವೆ.
- ಸವಿತಾ ನಾಗಭೂಷಣ್, ಚಿಂತಕಿ.ರಾಜಕೀಯದಲ್ಲಿ ನೈತಿಕತೆ ನೆಲೆ ಹುಡುಕದ ಪರಿಸ್ಥಿತಿಯಲ್ಲಿ ನಾವಿದ್ದೇವೆ. ಅಕಾಡೆಮಿಗಳ ಅಧ್ಯಕ್ಷರ ಸಭೆ ಕೆಪಿಸಿಸಿ ಕಚೇರಿಯಲ್ಲಿ ನಡೆಯುವಷ್ಟರ ಮಟ್ಟಿಗೆ ರಾಜಕೀಯ ಹಾಸುಹೊಕ್ಕಾಗಿದೆ. ನೈತಿಕತೆ ಕುಸಿಯಲು ನಾವೆಲ್ಲ ಹಿರಿಯರು ಕಾರಣರು. ಅದನ್ನು ದುರಸ್ತಿ ಮಾಡುವ ಮಾರ್ಗ ಹುಡುಕಬೇಕಿದೆ.
- ರವೀಂದ್ರ ಭಟ್, ಪ್ರಜಾವಾಣಿ ಕಾರ್ಯನಿರ್ವಾಹಕ ಸಂಪಾದಕರು