ಪದವಿ ಕಾಲೇಜು ಪಡೆಯಲು ಹೋರಾಟ ಅಗತ್ಯ: ಪಾನಘಂಟಿ

| Published : Oct 28 2024, 01:16 AM IST

ಸಾರಾಂಶ

ಭಾಗ್ಯನಗರಕ್ಕೆ ಸರ್ಕಾರಿ ಪದವಿ ಕಾಲೇಜು ಅಗತ್ಯವಾಗಿದೆ. ಇದಕ್ಕಾಗಿ ಅಗತ್ಯ ಹೋರಾಟ ಮಾಡಬೇಕಾಗುತ್ತದೆ.

ಭಾಗ್ಯನಗರಕ್ಕೆ ಬೇಕು ಕಾಲೇಜು ಅಭಿಯಾನದ ಪೂರ್ವಭಾವಿ ಸಭೆ

ಕನ್ನಡಪ್ರಭ ವಾರ್ತೆ ಕೊಪ್ಪಳ

ಭಾಗ್ಯನಗರಕ್ಕೆ ಸರ್ಕಾರಿ ಪದವಿ ಕಾಲೇಜು ಅಗತ್ಯವಾಗಿದೆ. ಇದಕ್ಕಾಗಿ ಅಗತ್ಯ ಹೋರಾಟ ಮಾಡಬೇಕಾಗುತ್ತದೆ ಎಂದು ಹಿರಿಯ ವಕೀಲ ರಾಘವೇಂದ್ರ ಪಾನಘಂಟಿ ಹೇಳಿದರು.

ಸಮೀಪದ ಭಾಗ್ಯನಗರದ ಶ್ರೀನಿವಾಸ ಕಲ್ಯಾಣ ಮಂಟಪದಲ್ಲಿ ಭಾಗ್ಯನಗರಕ್ಕೆ ಬೇಕು ಸರ್ಕಾರಿ ಪದವಿ ಕಾಲೇಜು ಅಭಿಯಾನದ ಪೂರ್ವಭಾವಿ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು.

ಶೈಕ್ಷಣಿಕವಾದ ಹಿನ್ನೆಲೆ ಭಾಗ್ಯನಗರಕ್ಕಿದೆ. ಕೊಪ್ಪಳದಿಂದ ಭಾಗ್ಯನಗರಕ್ಕೆ ಓದಲು ವಿದ್ಯಾರ್ಥಿಗಳು ಬರುತ್ತಾರೆ. ಪಿಯು ನಂತರ ಓದುವವರ ಪ್ರಮಾಣ ಕ್ಷೀಣಿಸಿದೆ. ಶೈಕ್ಷಣಿಕ ಅವಶ್ಯಕತೆಗಳನ್ನು ಸರ್ಕಾರವೇ ಪೂರೈಸಬೇಕು. ಸರ್ಕಾರದ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳೇ ಮಾಡಬೇಕು. ಮುಂದಿನ ವರ್ಷವೇ ಆಗಬೇಕು. ಭಾಗ್ಯನಗರದವರು ಬೇಡುವುದಿಲ್ಲ, ಬೇಡಿದರೆ ಬಿಡುವುದೂ ಇಲ್ಲ ಎಂದರು.

ಕೊಪ್ಪಳ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಶ್ರೀನಿವಾಸ ಗುಪ್ತಾ ಮಾತನಾಡಿ, ಎಷ್ಟು ಜನ ಶ್ರೀಮಂತರಿದ್ದಾರೋ ಅದಕ್ಕಿಂತಲೂ ಹೆಚ್ಚು ಜನ ಬಡವರು ಇದ್ದಾರೆ. ಪದವಿ ಕಾಲೇಜು ಮಾತ್ರವಲ್ಲ, ಉದ್ಯೋಗ ಸೃಷ್ಟಿಸುವ ಕೋರ್ಸುಗಳನ್ನು ಮಾಡಬೇಕು ಎಂದರು.

ಸರ್ಕಾರಿ ಪದವಿ ಪೂರ್ವ ಕಾಲೇಜು ಪ್ರಾಚಾರ್ಯ ರಾಜಶೇಖರ್ ಪಾಟೀಲ್ ಅಂಗಡಿ, ೨ ಪದವಿ ಪೂರ್ವ ಕಾಲೇಜುಗಳಲ್ಲಿ ಪರೀಕ್ಷಾ ಕೇಂದ್ರ ಮಾಡಿದ್ದೇವೆ‌. ಪಟ್ಟಣದ ಪಿಯು ಕಾಲೇಜಿನಲ್ಲಿ ಶೇ. ೭೫ರಷ್ಟು ಮಹಿಳೆಯರೇ ಓದುತ್ತಿದ್ದಾರೆ. ಕೊಪ್ಪಳಕ್ಕೆ ತೆರಳಿ, ಓದಲು ತೊಂದರೆ ಆಗುತ್ತಿದೆ ಎಂದರು.

ಅಭಿಯಾನದ ಕೃಷ್ಣ ಇಟ್ಟಂಗಿ ಪ್ರಾಸ್ತಾವಿಕವಾಗಿ ಮಾತನಾಡಿ, ಪಟ್ಟಣದಲ್ಲಿ 4 ಪಪೂ ಕಾಲೇಜುಗಳಿವೆ. ೧,೫೦೦ ವಿದ್ಯಾರ್ಥಿಗಳು ಓದುತ್ತಿದ್ದಾರೆ. ತನ್ನಿಂದ ತಾನಾಗಿಯೇ ಯಾವುದೇ ಸೌಲಭ್ಯ ದೊರೆತಿಲ್ಲ. ಪಟ್ಟಣಕ್ಕೆ ಪಡೆದ ಸೌಲಭ್ಯಗಳೆಲ್ಲವನ್ನೂ ಹೋರಾಟ ಮಾಡಿಯೇ ಪಡೆದಿದ್ದೇವೆ ಎಂದರು.

ಭಾಗ್ಯನಗರ ಪಪಂ ಅಧ್ಯಕ್ಷ ತುಕಾರಾಮಪ್ಪ ಗಡಾದ ಅಧ್ಯಕ್ಷತೆ ವಹಿಸಿದ್ದರು. ಪಪಂ ಉಪಾಧ್ಯಕ್ಷ ಹೊನ್ನುರಸಾಬ ಬೈರಾಪುರ, ಶಿಕ್ಷಣ ಪ್ರೇಮಿ ದಾನಪ್ಪ ಜಿ. ಕವಲೂರು, ಸಾಹಿತಿ ಡಿ.ಎಂ. ಬಡಿಗೇರ, ಪಪಂ ಸದಸ್ಯರಾದ ರಮೇಶ ಹ್ಯಾಟಿ, ಮೋಹನ ಅರಕಲ್, ವಾಸುದೇವ ಮೇಘರಾಜ್, ಮುಖಂಡರಾದ ಕೊಟ್ರೇಶ ಶೇಡ್ಮಿ, ಸುರೇಶ ದರಗದಕಟ್ಟಿ ಇದ್ದರು.