ಸಾರಾಂಶ
ಹಳಿಯಾಳ: ದೇಶದ ಮಹಿಳೆಯರು ಪುರುಷ ಪ್ರಧಾನ ವ್ಯವಸ್ಥೆಯ ಮೌಲ್ಯಗಳಿಂದ ಹಾಗೂ ಬಂಡವಾಳಶಾಹಿ ವ್ಯವಸ್ಥೆಯಿಂದಾಗುವ ಶ್ರಮ ಶೋಷಣೆ ಎಂಬ ಎರಡು ನೆಲೆಯಲ್ಲಿ ಶೋಷಣೆಗೊಳಗಾಗುತ್ತಿದ್ದಾರೆ. ಈ ಶೋಷಣೆಗಳಿಂದ ವಿಮುಕ್ತಿಯನ್ನು ಯಾರೂ ಉಡುಗೊರೆಯಾಗಿ ನೀಡಲು ಸಾಧ್ಯವಿಲ್ಲ. ಅದನ್ನು ಹೋರಾಟದ ಮೂಲಕ ಪಡೆಯಬೇಕು ಎಂದು ಅಖಿಲ ಭಾರತ ಮಹಿಳಾ ಸಾಂಸ್ಕೃತಿಕ ಸಂಘಟನೆಯ ರಾಜ್ಯ ಕಾರ್ಯದರ್ಶಿ ಶೋಭಾ ಎಸ್. ಹೇಳಿದರು.
ಪಟ್ಟಣದ ಶ್ರೀ ವನಶ್ರೀ ವೃತ್ತ ಬಳಿಯ ಕಲಾಕ್ಷೇತ್ರ ಸಭಾಭವನದಲ್ಲಿ ಅಖಿಲ ಭಾರತ ಮಹಿಳಾ ಸಾಂಸ್ಕೃತಿಕ ಸಂಘಟನೆಯ ವತಿಯಿಂದ ಆಯೋಜಿಸಿದ ಮಹಿಳಾ ಸಮಾವೇಶ ಉದ್ದೇಶಿಸಿ ಅವರು ಮಾತನಾಡಿದರು. ದೇಶದ ಸ್ವಾತಂತ್ರ್ಯ ಚಳವಳಿಯಲ್ಲಿ ಮಹಿಳೆಯರು ಪಾಲ್ಗೊಂಡಿದ್ದರು. ಈ ಪರಂಪರೆಯನ್ನು ಮಹಿಳೆಯರು ಇಂದು ಮುಂದುವರಿಸುವ ಅವಶ್ಯಕತೆಯಿದೆ ಎಂದರು.ಮಹಿಳಾ ವಿಮುಕ್ತಿಯು ಮಹಿಳೆಗೆ ಮಾತ್ರ ಸೀಮಿತವಲ್ಲ, ಅದು ನಾಗರಿಕತೆ ಬೆಳವಣಿಗೆಯ ಸಂಕೇತವಾಗಿದೆ ಎಂದರು. ಬಂಡಾವಾಳಷಾಹಿಗಳು ನಡೆಸಿದ ಶೋಷಣೆಯ ವಿರುದ್ಧ ನ್ಯೂಯಾರ್ಕ್‌ನಲ್ಲಿ 1908 ಮಾ. 8ರಂದು ಬೀದಿಗಿಳಿದ ಮಹಿಳೆಯರು ತಮ್ಮ ಹಕ್ಕಿಗಾಗಿ ಹೋರಾಟ ನಡೆಸಿ, ಹಲವರು ಪ್ರಾಣ ಬಲಿದಾನ ಮಾಡಿದರು. ಈ ಹೋರಾಟ ವಿಶ್ವದ ಮಹಿಳೆಯರಿಗೆ ಸ್ಫೂರ್ತಿ ನೀಡಿತು. ಇದು ಮಾರ್ಚ್ 8ರ ಐತಿಹಾಸಿಕ ಮಹತ್ವ ಎಂದು ತಿಳಿಸಿದರು.
ಅಖಿಲ ಭಾರತ ಮಹಿಳಾ ಸಾಂಸ್ಕೃತಿಕ ಸಂಘಟನೆ ತಾಲೂಕು ಸಮಿತಿ ಸಂಚಾಲಕಿ ಮಧುಲತಾ ಗೌಡರ್ ಮಾತನಾಡಿ, ಜಿಲ್ಲೆಯ ಗ್ರಾಮೀಣ ಭಾಗದ ಮಹಿಳೆಯರು ಉದ್ಯೋಗವನ್ನರಿಸಿಕೊಂಡು ವಲಸೆ ಹೋಗುವ ಪ್ರಮಾಣ ಹೆಚ್ಚಾಗುತ್ತಿದ್ದು, ಸ್ಥಳೀಯ ಕಾರ್ಖಾನೆಗಳು ಮಹಿಳೆಯರಿಗೆ ಉದ್ಯೋಗ ಒದಗಿಸುವಲ್ಲಿ ವಿಫಲವಾಗಿವೆ ಎಂದು ಆರೋಪಿಸಿದರು. ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆಯ ಪ್ರಕಾರ 15ರಿಂದ 9 ವಯೋಮಾನದೊಳಗಿನ ಮಹಿಳೆಯರು ರಕ್ತಹೀನತೆಯಿಂದ ಬಳಲುತ್ತಿದ್ದು, ಮಹಿಳೆಯರ ಆರೋಗ್ಯ ಹಿತರಕ್ಷಣೆಯ ದೃಷ್ಟಿಯಲ್ಲಿ ಸರ್ಕಾರ ವಿಶೇಷ ಯೋಜನೆಗಳನ್ನು ರೂಪಿಸಬೇಕು ಎಂದರು.ಮಹಿಳೆಯರ ಸಬಲೀಕರಣಕ್ಕಾಗಿ ಹತ್ತು ಹಕ್ಕೊತ್ತಾಯ ಮಂಡಿಸಲಾಯಿತು. ಅಖಿಲ ಭಾರತ ಮಹಿಳಾ ಸಾಂಸ್ಕೃತಿಕ ಸಂಘಟನೆ ಹಳಿಯಾಳ ತಾಲೂಕು ಸಿದ್ಧತಾ ಸಮಿತಿ ರಚಿಸಲಾಯಿತು. ತಾಲೂಕು ಸಂಚಾಲಕರಾಗಿ ಫಾತಿಮಾ ಮುಜಾವರ್ ಆಯ್ಕೆಯಾದರು. ಸಹ ಸಂಚಾಲಕರಾಗಿ ಹುಸೇನ್ಬಿ ಮಂಚಿಕೇರಿ, ಜನ್ನತ್ ನಾಯ್ಕ, ಸುವರ್ಣಾ, ತೆರೆಜಾ, ನಿರ್ಮಲಾ, ಮಾಸಾಬಿ, ಸಂತಾಲ, ಶಾಂತಾ, ಪಾಸ್ಕಿನ್, ಫೀರ್ ಮಾಬಿ, ಗೀತಾ ರೂಕಸನ್ ಮೊದಲಾದವರ 30 ಸದಸ್ಯೆಯರನ್ನೊಳಗೊಂಡ ಸಮಿತಿ ರಚಿಸಲಾಯಿತು.