ಸಕಲೇಶಪುರ ತಾಲೂಕಿನ ಮೂರ್ಕಣ್ಣುಗುಡ್ಡ ಪ್ರದೇಶವನ್ನು ಶತಮಾನದ ಹಿಂದೆ ಕೈಬಿಡಲಾದ ಅರಣ್ಯ ಅಧಿಸೂಚನೆಯನ್ನು ಇದೀಗ 2025ರಲ್ಲಿ ಪುನಃ ಜಾರಿಗೊಳಿಸಲು ಅರಣ್ಯ ಇಲಾಖೆ ಮುಂದಾಗಿರುವುದನ್ನು ಖಂಡಿಸಿ, ಅಚ್ಚನಹಳ್ಳಿ, ಅಗನಿ, ಕಾಡುಮನೆ ಸೇರಿದಂತೆ ಸುತ್ತಮುತ್ತಲಿನ 8 ಗ್ರಾಮಗಳ ಸುಮಾರು 300ಕ್ಕೂ ಹೆಚ್ಚು ಗ್ರಾಮಸ್ಥರು ಮಾಜಿ ಶಾಸಕರಾದ ಎಚ್.ಎಂ. ವಿಶ್ವನಾಥ್ ಮತ್ತು ಎಚ್. ಕೆ. ಕುಮಾರಸ್ವಾಮಿ ನೇತೃತ್ವದಲ್ಲಿ ಕಾನೂನು ಹೋರಾಟಕ್ಕೆ ಇಳಿದು ಸೋಮವಾರ ಜಿಲ್ಲಾಧಿಕಾರಿ ಕೆ.ಎಸ್. ಲತಾಕುಮಾರಿ ಅವರಿಗೆ ಮನವಿ ಸಲ್ಲಿಸಿದರು.
ಕನ್ನಡಪ್ರಭ ವಾರ್ತೆ ಹಾಸನ
ಸಕಲೇಶಪುರ ತಾಲೂಕಿನ ಮೂರ್ಕಣ್ಣುಗುಡ್ಡ ಪ್ರದೇಶವನ್ನು ಶತಮಾನದ ಹಿಂದೆ ಕೈಬಿಡಲಾದ ಅರಣ್ಯ ಅಧಿಸೂಚನೆಯನ್ನು ಇದೀಗ 2025ರಲ್ಲಿ ಪುನಃ ಜಾರಿಗೊಳಿಸಲು ಅರಣ್ಯ ಇಲಾಖೆ ಮುಂದಾಗಿರುವುದನ್ನು ಖಂಡಿಸಿ, ಅಚ್ಚನಹಳ್ಳಿ, ಅಗನಿ, ಕಾಡುಮನೆ ಸೇರಿದಂತೆ ಸುತ್ತಮುತ್ತಲಿನ 8 ಗ್ರಾಮಗಳ ಸುಮಾರು 300ಕ್ಕೂ ಹೆಚ್ಚು ಗ್ರಾಮಸ್ಥರು ಮಾಜಿ ಶಾಸಕರಾದ ಎಚ್.ಎಂ. ವಿಶ್ವನಾಥ್ ಮತ್ತು ಎಚ್. ಕೆ. ಕುಮಾರಸ್ವಾಮಿ ನೇತೃತ್ವದಲ್ಲಿ ಕಾನೂನು ಹೋರಾಟಕ್ಕೆ ಇಳಿದು ಸೋಮವಾರ ಜಿಲ್ಲಾಧಿಕಾರಿ ಕೆ.ಎಸ್. ಲತಾಕುಮಾರಿ ಅವರಿಗೆ ಮನವಿ ಸಲ್ಲಿಸಿದರು. ನಂತರ ಮಾಜಿ ಶಾಸಕ ಎಚ್.ಎಂ. ವಿಶ್ವನಾಥ್ ಅವರು ಮಾಧ್ಯಮದೊಂದಿಗೆ ಮಾತನಾಡಿ, 1920ರಲ್ಲಿ ಮೈಸೂರು ಅರಣ್ಯ ನಿಯಂತ್ರಣ ಕಾಯ್ದೆಯ ಸೆಕ್ಷನ್ 4ರ ಅಡಿಯಲ್ಲಿ ಮೂರ್ಕನಗುಡ್ಡ ಅರಣ್ಯ ಬ್ಲಾಕ್ ಅನ್ನು ಕಾಯ್ದಿರಿಸುವ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಆದರೆ ಈ ಪ್ರದೇಶವು ಮರಗಳಿಲ್ಲದ ಹುಲ್ಲುಗಾವಲು ಬಯಲು ಪ್ರದೇಶವಾಗಿದ್ದು, ಅರಣ್ಯ ಸಂರಕ್ಷಣೆಗೆ ಅಸಮರ್ಪಕವಾಗಿರುವುದರ ಜೊತೆಗೆ ಗ್ರಾಮಸ್ಥರ ಹಿತಾಸಕ್ತಿಗೆ ಧಕ್ಕೆಯಾಗಲಿದೆ ಎಂಬ ಕಾರಣದಿಂದ, ಅರಣ್ಯ ಸಂರಕ್ಷಣಾಧಿಕಾರಿಗಳ ಶಿಫಾರಸಿನ ಮೇರೆಗೆ ಸರ್ಕಾರವು 1924ರ ಜನವರಿಯಲ್ಲಿ ಈ ಪ್ರಸ್ತಾವನೆಯನ್ನು ಸಂಪೂರ್ಣವಾಗಿ ಕೈಬಿಟ್ಟಿತ್ತು ಎಂಬುದು ಐತಿಹಾಸಿಕ ದಾಖಲೆಗಳಿಂದ ತಿಳಿದುಬರುತ್ತದೆ.ಆದರೆ, ಸರ್ಕಾರದಿಂದಲೇ ರದ್ದುಗೊಳಿಸಲಾದ ಈ ಪ್ರಸ್ತಾವನೆಯನ್ನು ಸುಮಾರು 100 ವರ್ಷಗಳ ನಂತರ, ಕರ್ನಾಟಕ ಅರಣ್ಯ ಕಾಯ್ದೆ 1963ರ ಸೆಕ್ಷನ್ 17ರ ಅಡಿಯಲ್ಲಿ ಮತ್ತೆ ಜಾರಿಗೊಳಿಸಲು ಅರಣ್ಯ ಇಲಾಖೆ ಪ್ರಯತ್ನಿಸುತ್ತಿರುವುದನ್ನು ಗ್ರಾಮಸ್ಥರು ತೀವ್ರವಾಗಿ ವಿರೋಧಿಸಿದ್ದಾರೆ. ಶತಮಾನದ ವಿಳಂಬದ ನಂತರ ಇಂತಹ ಕ್ರಮ ಕೈಗೊಳ್ಳುವುದು ಕಾನೂನಿನ ಮೂಲಭೂತ ತತ್ವಗಳಿಗೆ ವಿರುದ್ಧವಾಗಿದ್ದು, ಸಂಪೂರ್ಣವಾಗಿ ಅಸಮಂಜಸ ಹಾಗೂ ಅನ್ಯಾಯಕರವಾಗಿದೆ ಎಂದು ದೂರಿದರು.
ಈ ಅವಧಿಯಲ್ಲಿ ಈ ಪ್ರದೇಶವನ್ನು ಕಂದಾಯ ಭೂಮಿಯೆಂದು ನಂಬಿ ಗ್ರಾಮಸ್ಥರು ಕೃಷಿ ಚಟುವಟಿಕೆ, ಮನೆ ನಿರ್ಮಾಣ ಹಾಗೂ ಮೂಲಭೂತ ಸೌಕರ್ಯಗಳೊಂದಿಗೆ ತಮ್ಮ ಜೀವನವನ್ನು ರೂಪಿಸಿಕೊಂಡಿದ್ದಾರೆ. ಸರ್ಕಾರದ ಹಿಂದಿನ ನಿರ್ಣಯದ ಮೇಲೆ ನಂಬಿಕೆ ಇಟ್ಟು ಬದುಕಿದ ಜನರ ಮೇಲೆ ಈಗ 100 ವರ್ಷಗಳ ಹಳೆಯ ಪ್ರಸ್ತಾವನೆಯನ್ನು ಜಾರಿಗೊಳಿಸುವುದು ಅವರ ಬದುಕಿನ ಭದ್ರತೆಯನ್ನು ಹಲ್ಲೆ ಮಾಡುವಂತಾಗಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.ಇದರ ವಿರುದ್ಧ ಅರಣ್ಯ ಇಲಾಖೆಯ ನೋಟಿಸ್‌ಗಳನ್ನು ಪ್ರಶ್ನಿಸಿ ಗ್ರಾಮಸ್ಥರು ಮಾನ್ಯ ಕರ್ನಾಟಕ ಉಚ್ಚ ನ್ಯಾಯಾಲಯದ ಮೊರೆ ಹೋಗಿದ್ದಾರೆ. ವಿಚಾರಣೆಯ ಸಂದರ್ಭದಲ್ಲಿ, ಸಂಬಂಧಿತ ಪ್ರದೇಶವು ಐತಿಹಾಸಿಕವಾಗಿ ಕಂದಾಯ ಭೂಮಿಯಾಗಿದ್ದು, ಅರಣ್ಯ ಭೂಮಿಯಲ್ಲ ಎಂಬ ಅಭಿಪ್ರಾಯವನ್ನು ಮಾನ್ಯ ಹೈಕೋರ್ಟ್ ವ್ಯಕ್ತಪಡಿಸಿರುವುದು ಗ್ರಾಮಸ್ಥರ ವಾದಕ್ಕೆ ಬಲ ನೀಡಿದೆ. ಈ ಅಭಿಪ್ರಾಯವು 1924ರಲ್ಲಿ ಸರ್ಕಾರವು ಅರಣ್ಯ ಪ್ರಸ್ತಾವನೆಯನ್ನು ಕೈಬಿಟ್ಟಿದ್ದ ದಾಖಲೆಗಳಿಗೆ ಸಂಪೂರ್ಣವಾಗಿ ಹೊಂದಿಕೆಯಾಗುತ್ತದೆ ಎಂದರು.ಈ ಹಿನ್ನೆಲೆಯಲ್ಲಿ 8 ಗ್ರಾಮಗಳ ನಿವಾಸಿಗಳು ಹಾಗೂ ರೈತರು ಸೇರಿ ಸರ್ಕಾರ ಮತ್ತು ಸಂಬಂಧಿತ ಅಧಿಕಾರಿಗಳಿಗೆ ಮನವಿ ಸಲ್ಲಿಸಿದ್ದು, 1920- 1924ರ ದಾಖಲೆಗಳನ್ನು ಆಧಾರ ಮಾಡಿಕೊಂಡು 2025ರಲ್ಲಿ ಅಧಿಸೂಚಿತ ಅರಣ್ಯ ಜಾರಿಗೆ ಮುಂದಾಗಿರುವ ಎಲ್ಲಾ ಕಾನೂನು ಪ್ರಕ್ರಿಯೆಗಳನ್ನು ತಕ್ಷಣವೇ ಕೈಬಿಡಬೇಕು ಎಂದು ಒತ್ತಾಯಿಸಿದ್ದಾರೆ.
ಜೊತೆಗೆ, ಕರ್ನಾಟಕ ಅರಣ್ಯ ಕಾಯ್ದೆ 1963ರ ಸೆಕ್ಷನ್ 640 ಅಡಿಯಲ್ಲಿ ನೀಡಲಾದ ಎಲ್ಲಾ ನೋಟಿಸ್‌ಗಳನ್ನು ರದ್ದುಪಡಿಸುವಂತೆ ಅರಣ್ಯ ಇಲಾಖೆಗೆ ನಿರ್ದೇಶನ ನೀಡಬೇಕೆಂದು ಮನವಿ ಮಾಡಿದರು.ಈಗಾಗಲೇ ಅರಣ್ಯ ವ್ಯವಸ್ಥಾಪನಾಧಿಕಾರಿಯವರು ಸೆಕ್ಷನ್ 17ರ ಅಡಿಯಲ್ಲಿ ರಚಿಸಿರುವ ಅಂತಿಮ ಅಧಿಸೂಚನೆಯ ಕರಡು ಪ್ರತಿಯನ್ನು ಗ್ರಾಮಸ್ಥರಿಗೆ ಒದಗಿಸಬೇಕೆಂಬ ಕೋರಿಕೆಯನ್ನೂ ಅವರು ಮುಂದಿಟ್ಟರು. ಈ ಪ್ರದೇಶವನ್ನು ಕಂದಾಯ ಭೂಮಿಯೆಂದೇ ಉಳಿಸಿ, ರೈತರು ಹಾಗೂ ಗ್ರಾಮಸ್ಥರ ಹಕ್ಕುಗಳನ್ನು ಸಂರಕ್ಷಿಸಬೇಕು ಎಂಬುದು ಅವರ ಮುಖ್ಯ ಬೇಡಿಕೆಯಾಗಿದೆ ಎಂದು ಹೇಳಿದರು. ನಾವು ಬದುಕುತ್ತಿರುವ ಜಾಗವನ್ನು ನಮಗೆ ಬಿಟ್ಟುಕೊಡುವಂತೆ ನಮ್ಮ ಒತ್ತಾಯವಾಗಿದ್ದು, ಜಿಲ್ಲಾಧಿಕಾರಿಗಳಿಗೆ ಮನವಿ ಕೊಟ್ಟ ಮೇಲೆ ಅರಣ್ಯ ಮಂತ್ರಿ, ರೆವಿನ್ಯೂ ಸಚಿವರು ಹಾಗೂ ಮುಖ್ಯಮಂತ್ರಿಗಳನ್ನು ಸದ್ಯದಲ್ಲೆ ಭೇಟಿ ಮಾಡಿ ಈ ಬಗ್ಗೆ ಮನವರಿಕೆ ಮಾಡಲಾಗುವುದು ಎಂದು ತಿಳಿಸಿದರು. ಈ ವೇಳೆ ಮಾಜಿ ಶಾಸಕ ಎಚ್.ಕೆ. ಕುಮಾರಸ್ವಾಮಿ, ಬೆಳೆಗಾರರ ಸಂಘದ ಉಪಾಧ್ಯಕ್ಷ ಹಾನ್‌ಬಾಳ್ ಭಾಸ್ಕರ್, ಚಂದ್ರೇಗೌಡ, ರಾಜು ಎಟಿಎಂ, ಹರೀಶ್ ಹಾನ್ಬಾಳ್, ಎಚ್.ಪಿ. ಮೋಹನ್, ಅನಿಲ್, ಮಂಜುನಾಥ್, ನಿವೃತ್ತ ತಹಸೀಲ್ದಾರ್ ಅಣ್ಣೇಗೌಡ, ವಿಕ್ರಂ ತೋಟದಗದ್ದೆ ಸೇರಿದಂತೆ ಇತರರು ಉಪಸ್ಥಿತರಿದ್ದರು.