ಸಾರಾಂಶ
2020ರಲ್ಲಿಯೇ ರಾಯಚೂರಿಗೆ ಏಮ್ಸ್ ನೀಡುವುದಾಗಿ ಕೇಂದ್ರ ಸರ್ಕಾರ ಭರವಸೆ ನೀಡಿತ್ತು.
ಬಳ್ಳಾರಿ: ರಾಯಚೂರಿನಲ್ಲಿ ಆಲ್‌ಇಂಡಿಯಾ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ (ಏಮ್ಸ್) ಸ್ಥಾಪಿಸಬೇಕು ಎಂದು ಆಗ್ರಹಿಸಿ ಜು.16ರಂದು ಕಲ್ಯಾಣ ಕರ್ನಾಟಕದ ಜಿಲ್ಲೆಗಳಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಏಮ್ಸ್ ಹೋರಾಟ ಸಮಿತಿ ಮುಖಂಡ ರಾಯಚೂರಿನ ಅಶೋಕ್ ಕುಮಾರ್ ಜೈನ್ ತಿಳಿಸಿದರು.
ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 2020ರಲ್ಲಿಯೇ ರಾಯಚೂರಿಗೆ ಏಮ್ಸ್ ನೀಡುವುದಾಗಿ ಕೇಂದ್ರ ಸರ್ಕಾರ ಭರವಸೆ ನೀಡಿತ್ತು. ಆದರೆ, ಈವರೆಗೆ ಯಾವುದೇ ಕ್ರಮಗಳಾಗಿಲ್ಲ. ಸುಮಾರು ₹50 ಸಾವಿರ ಕೋಟಿ ಅನುದಾನದ ಏಮ್ಸ್ ಸ್ಥಾಪನೆಯಿಂದ ಈ ಭಾಗದ ಆರೋಗ್ಯಸೇವೆ ಅನುಕೂಲವಾಗಲಿದೆ. ಏಮ್ಸ್ ಆರಂಭಿಸಲು ಜಮೀನು, ನೀರು, ಸಾರಿಗೆ ಸಂಪರ್ಕ ಸೇರಿದಂತೆ ಅಗತ್ಯ ಎಲ್ಲ ಮೂಲಸೌಕರ್ಯಗಳಿವೆ. ಭಾರತ್ ಜೋಡೋ ಯಾತ್ರೆಯ ವೇಳೆ ರಾಯಚೂರಿಗೆ ಆಗಮಿಸಿದ್ದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಏಮ್ಸ್ ಸ್ಥಾಪನೆಯ ಭರವಸೆ ನೀಡಿದ್ದರು. ಈ ಹಿಂದೆ ಐಐಟಿಯನ್ನು ಅನಂತಕುಮಾರ್ ಧಾರವಾಡಕ್ಕೆ ತೆಗೆದುಕೊಂಡರು. ಕೇಂದ್ರ ಸಚಿವ ಪ್ರಹ್ಲಾದ ಜೋಷಿ ಏಮ್ಸ್ ನ್ನು ಹುಬ್ಬಳ್ಳಿಯಲ್ಲಿ ಸ್ಥಾಪಿಸುವ ಹುನ್ನಾರ ನಡೆಸಿದ್ದಾರೆ ಎಂದು ಆರೋಪಿಸಿದರು.ಕೇಂದ್ರ ಸರ್ಕಾರ ಕರ್ನಾಟಕಕ್ಕೆ ಏಮ್ಸ್ ನೀಡುವುದಾಗಿ ಭರವಸೆ ನೀಡಿತ್ತು. ಈ ಹಿನ್ನೆಲೆಯಲ್ಲಿ ಕಲ್ಯಾಣ ಕರ್ನಾಟಕ ಭಾಗವಾದ ರಾಯಚೂರಿಗೆ ನೀಡಬೇಕು ಎಂಬುದು ನಮ್ಮ ಒತ್ತಾಯ. ಈ ಬಾರಿಯ ಕೇಂದ್ರ ಬಜೆಟ್‌ನಲ್ಲಿ ಘೋಷಣೆ ಮಾಡಬೇಕು. ಒಂದು ವೇಳೆ ಕೇಂದ್ರ ಸರ್ಕಾರ ನಿರ್ಲಕ್ಷ್ಯ ವಹಿಸಿದರೆ ದೆಹಲಿಗೆ ತೆರಳಿ ಜಂತರ್ ಮಂತರ್‌ನಲ್ಲಿ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು.
ಅರಿವು ಸಂಸ್ಥೆಯ ಮುಖ್ಯಸ್ಥ ಸಿರಿಗೇರಿ ಪನ್ನರಾಜ್, ಟಿ.ಜಿ. ವಿಠಲ್, ರೈತ ಸಂಘದ ರಾಜ್ಯಾಧ್ಯಕ್ಷ ಕರೂರು ಮಾಧವ ರೆಡ್ಡಿ ಸುದ್ದಿಗೋಷ್ಠಿಯಲ್ಲಿದ್ದರು.