ಕಾನೂನಿನ ಚೌಕಟ್ಟಿನ ಒಳಗೆ ಹೋರಾಟ ರೂಪಿಸಬೇಕು: ರಾಜೇಗೌಡ

| Published : Mar 12 2024, 02:00 AM IST

ಸಾರಾಂಶ

ಕಾನೂನಿನ ಚೌಕಟ್ಟಿನ ಒಳಗೆ ಹೋರಾಟ ರೂಪಿಸಬೇಕು. ಮನಮೋಹನ್ ಸಿಂಗ್ ರವರು ಪ್ರಧಾನಿಯಾಗಿದ್ದಾಗ ಅರಣ್ಯ ಹಕ್ಕು ಕಾಯಿದೆ ಜಾರಿಗೆ ಬಂದಿತ್ತು ಎಂದು ಶೃಂಗೇರಿ ಕ್ಷೇತ್ರದ ಶಾಸಕ ಹಾಗೂ ಕೆ.ಆರ್.ಡಿ.ಇ.ಎಲ್. ಅಧ್ಯಕ್ಷ ಟಿ.ಡಿ.ರಾಜೇಗೌಡ ಹೇಳಿದರು.

ಕೊಪ್ಪದಲ್ಲಿ ಯಶಸ್ವಿ ಆದಿವಾಸಿ ಸಮಾಗಮ

ಕನ್ನಡಪ್ರಭವಾರ್ತೆ, ಕೊಪ್ಪ

ಕಾನೂನಿನ ಚೌಕಟ್ಟಿನ ಒಳಗೆ ಹೋರಾಟ ರೂಪಿಸಬೇಕು. ಮನಮೋಹನ್ ಸಿಂಗ್ ರವರು ಪ್ರಧಾನಿಯಾಗಿದ್ದಾಗ ಅರಣ್ಯ ಹಕ್ಕು ಕಾಯಿದೆ ಜಾರಿಗೆ ಬಂದಿತ್ತು ಎಂದು ಶೃಂಗೇರಿ ಕ್ಷೇತ್ರದ ಶಾಸಕ ಹಾಗೂ ಕೆ.ಆರ್.ಡಿ.ಇ.ಎಲ್. ಅಧ್ಯಕ್ಷ ಟಿ.ಡಿ.ರಾಜೇಗೌಡ ಹೇಳಿದರು. ಭಾನುವಾರ ಕೊಪ್ಪ ಪುರಭವನದಲ್ಲಿ ಕರ್ನಾಟಕ ಜನಶಕ್ತಿ ಹಾಗೂ ಇತರೆ ಸಂಘಟನೆಯಿಂದ ನಡೆದ ಆದಿವಾಸಿಗಳ ಸಮಾಗಮ ನಮ್ಮ ಭೂಮಿ ನಮ್ಮ ಹಕ್ಕು ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು ಅರಣ್ಯ ಹಕ್ಕು ಕಾಯಿದೆ ಜಾರಿಗೆ ಬರುವ ಮೊದಲು ಅರಣ್ಯ ಇಲಾಖೆಯಲ್ಲಿ ದೌರ್ಜನ್ಯಗಳು ನಡೆಯುತ್ತಿದ್ದವು. ಕಾನೂನಿನ ಅರಿವು ಇರುವ ಅಧಿಕಾರಿಗಳಿಂದ ದೌರ್ಜನ್ಯ ಕಡಿಮೆಯಾಗಲಿದೆ ಎಂದರು.

ಕರ್ನಾಟಕ ಜನಶಕ್ತಿ ಸಂಘಟನೆ ರಾಜ್ಯ ಕಾರ್ಯದರ್ಶಿ ಕೆ.ಎಲ್. ಅಶೋಕ್ ಮಾತನಾಡಿ ಈ ಭಾಗದಲ್ಲಿ ಗಿರಿಜನರಿಗೆ ಅರಣ್ಯ ಕಾಯಿದೆಗಳು ಮಾರಕವಾಗಿದೆ. ಅರಣ್ಯ ಇಲಾಖೆಯಿಂದ ತೊಂದರೆಯಾಗುತ್ತಿದೆ. ಜಿಲ್ಲಾಧಿಕಾರಿಗಳ ಆದೇಶದಿಂದ ಹೇಗೆ ತೊಡಕು ನಿವಾರಿಸಬೇಕು ಎನ್ನುವ ಬಗ್ಗೆ ಯೋಚನೆ ಮಾಡಬೇಕು. ಭೂಮಿಗಾಗಿ ನಮ್ಮ ಭೂಮಿ ನಮ್ಮ ಹಕ್ಕು ಹೋರಾಟ ಮುಂದುವರೆಸಬೇಕು ಎಂದರು.

ಸರ್ವಾಧಿಕಾರಿಯಾದ ಕೇಂದ್ರಸರ್ಕಾರದ ಮೋದಿಯವರು ರೈತರ ಹೋರಾಟದಿಂದ ರೈತವಿರೋಧಿ ಕಾಯಿದೆಗಳನ್ನು ವಾಪಾಸು ತೆಗೆದುಕೊಂಡಿದ್ದಾರೆ. ಬೇಡಿಕೆಗಳ ಈಡೇರಿಕೆಗೆ ನಮ್ಮ ಹೋರಾಟ ಯಾವಾಗಲೂ ಇರುತ್ತದೆ. ನಮ್ಮ ಹೋರಾಟದ ಫಲವಾಗಿ ಮಂಡ್ಯದಲ್ಲಿ ಮುಖ್ಯಮಂತ್ರಿಗಳೇ ಹಕ್ಕುಪತ್ರ ನೀಡಿರುವುದು ಸ್ವಾಗತಾರ್ಹ ಬೆಳವಣಿಗೆ ಎಂದರು.

ಕರ್ನಾಟಕ ಜನಶಕ್ತಿ ಸಂಘಟನೆ ರಾಧಾ ಹಾಗಲಗಂಜಿ ಮಾತನಾಡಿ ನಮ್ಮ ಸಮಸ್ಯೆಗಳ ಬಗೆಹರಿಸುವ ಸಲುವಾಗಿ ಅನೇಕ ಹೋರಾಟ ಮಾಡಿಕೊಂಡು ಬಂದಿದ್ದೇವೆ. ನಮ್ಮ ಬುಡಕಟ್ಟು ಜನಾಂಗದ ಹಳ್ಳಿಗಳಲ್ಲಿ ಶಾಲೆ, ಅಂಗನವಾಡಿ, ರಸ್ತೆ, ಆಸ್ಪತ್ರೆಗಳಿಲ್ಲ. ಅರಣ್ಯ ಕಾಯಿದೆಗಳ ಮೂಲಕ ಒಕ್ಕಲೆಬ್ಬಿಸಿ ಬೀದಿಗೆ ತಳ್ಳುವ ಕೆಲಸ ಮಾಡುತ್ತಿದೆ. ಸರ್ಕಾರಕ್ಕೆ ಎಚ್ಚರಿಕೆ ನೀಡುವ ಸಲುವಾಗಿ ಆದಿವಾಸಿಯವರನ್ನು ಒಟ್ಟುಗೂಡಿಸುವ ಮೂಲಕ ಈ ಸಮಾವೇಷ ಹಮ್ಮಿಕೊಳ್ಳಲಾಗಿದೆ ಎಂದರು.

ಚಲನಚಿತ್ರ ನಟ ಚೇತನ್ ಅಹಿಂಸಾ ಮಾತನಾಡಿ ದಲಿತ ಶಕ್ತಿ, ಆದಿವಾಸಿ ಶಕ್ತಿ ಹಾಗೂ ಅನ್ಯಾಯದ ವಿರುದ್ಧ ಶಕ್ತಿ ಸಂಘಟನೆಯಾಗುತ್ತಿದೆ. ಮೂಲವಾಸಿಗಳಾದ ನಾವು ತುಳಿತಕ್ಕೆ ಒಳಗಾಗಿದ್ದೇವೆ. ಬಂಡವಾಳ ಶಾಹಿ ವ್ಯವಸ್ಥೆಯಿಂದ ತೊಂದರೆಯಾಗುತ್ತಿದೆ. ಹಿಂದುತ್ವ, ಲಿಂಗ ಅಸಮಾನತೆ, ಇವುಗಳಿಂದ ಆಗುತ್ತಿರುವ ತೊಂದರೆಗಳಿಗೆ ಪ್ರತಿರೋಧ ವ್ಯಕ್ತವಾಗಬೇಕು ಎಂದರು.

ಸಾಹಿತಿ ಕಲ್ಕುಳಿ ವಿಠಲ್ ಹೆಗ್ಡೆ ಮಾತನಾಡಿ ನಾವು ಹಿಂದೂಗಳಲ್ಲ. ನಾವು ಆದಿವಾಸಿಗಳು, ದೇಶರಕ್ಷಣೆ ಮಾಡುವ ಆರ್.ಎಸ್.ಎಸ್.ನವರು ಆದಿವಾಸಿಗಳನ್ನು ವನವಾಸಿಗಳು ಎಂದು ಕರೆಯುತ್ತಾರೆ. ಮಣಿಪುರ, ಮಿಜೋರಾಂ, ಅಸ್ಸಾಂನಲ್ಲಿ ಕಳೆದ ವರ್ಷ ಮೋದಿ ಸರ್ಕಾರ ಆದಿವಾಸಿ ಬುಡಕಟ್ಟು ಜನಾಂಗದ ಹಕ್ಕು ಕಿತ್ತುಕೊಳ್ಳಲು ಒಂದು ಕಾಯಿದೆ ಜಾರಿಗೆ ತಂದಿತ್ತು. ಅದರ ವಿರುದ್ಧ ಹೋರಾಟ ನಡೆದಿತ್ತು ಎಂದರು.

ವಿವಿಧ ಸಂಘಟನೆ ಪದಾಧಿಕಾರಿಗಳು, ವಿವಿಧೆಡೆಗಳಿಂದ ಆಗಮಿಸಿದ ಬುಡಕಟ್ಟು ಜನಾಂಗದವರು ಕಾರ್ಯಕ್ರಮದಲ್ಲಿ ಹಾಜರಿದ್ದರು.