ರಾಜ್ಯ ಸರ್ಕಾರ ಕಳೆದ ಮೇ ತಿಂಗಳಲ್ಲಿ ಹೊರಡಿಸಿರುವ ಅಧಿಸೂಚನೆಯಂತೆ ಕನಿಷ್ಠ ಕೂಲಿ ಅಧಿಸೂಚನೆಯನ್ನು ಸಂಪೂರ್ಣವಾಗಿ ಅನುಷ್ಠಾನಗೊಳಿಸುವವರೆಗೆ ಸಿಐಟಿಯು ತನ್ನ ಹೋರಾಟ ಮುಂದುವರಿಸಲಿದೆ ಎಂದು ಸಿಐಟಿಯು ಜಿಲ್ಲಾ ಕಾರ್ಯದರ್ಶಿ ವಿ. ಚಂದ್ರಶೇಖರ್ ಹೇಳಿದರು.

ಕುಂದಾಪುರ: ರಾಜ್ಯ ಸರ್ಕಾರ ಕಳೆದ ಮೇ ತಿಂಗಳಲ್ಲಿ ಹೊರಡಿಸಿರುವ ಅಧಿಸೂಚನೆಯಂತೆ ಕನಿಷ್ಠ ಕೂಲಿ ಅಧಿಸೂಚನೆಯನ್ನು ಸಂಪೂರ್ಣವಾಗಿ ಅನುಷ್ಠಾನಗೊಳಿಸುವವರೆಗೆ ಸಿಐಟಿಯು ತನ್ನ ಹೋರಾಟ ಮುಂದುವರಿಸಲಿದೆ ಎಂದು ಸಿಐಟಿಯು ಜಿಲ್ಲಾ ಕಾರ್ಯದರ್ಶಿ ವಿ. ಚಂದ್ರಶೇಖರ್ ಹೇಳಿದರು.

ರಾಜ್ಯ ಸರ್ಕಾರ ಕಳೆದ ಮೇ ತಿಂಗಳಲ್ಲಿ ಹೊರಡಿಸಿದ ಅಧಿಸೂಚನೆಯಂತೆ ಕನಿಷ್ಠ ಕೂಲಿಯನ್ನು ತಕ್ಷಣ ಜಾರಿಗೊಳಿಸಬೇಕೆಂದು ಒತ್ತಾಯಿಸಿ, ಉಡುಪಿ ಜಿಲ್ಲಾ ಹೆಂಚು ಕಾರ್ಮಿಕರ ಸಂಘ (ಸಿಐಟಿಯು) ಕುಂದಾಪುರ ಘಟಕದ ವತಿಯಿಂದ ಗುರುವಾರ ಇಲ್ಲಿನ ಕಾರ್ಮಿಕ ನಿರೀಕ್ಷಕರ ಕಚೇರಿ ಎದುರು ನಡೆದ ಬೃಹತ್ ಪ್ರತಿಭಟನೆಯಲ್ಲಿ ಮಾತನಾಡಿದರು.ಇಂದು ಸರ್ಕಾರವನ್ನು ಉದ್ಯಮಿಗಳೇ ನಿಯಂತ್ರಿಸುತ್ತಿರುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಸಕ್ಕರೆ ಕಾರ್ಖಾನೆಗಳು, ಗಣಿಗಾರಿಕೆ, ಶಿಕ್ಷಣ ಸಂಸ್ಥೆಗಳು, ಆಸ್ಪತ್ರೆಗಳು ಸೇರಿದಂತೆ ವಿವಿಧ ಕ್ಷೇತ್ರಗಳ ಉದ್ಯಮಗಳ ಮಾಲೀಕರು ಶಾಸಕರಾಗಿರುವುದರಿಂದ, ಕನಿಷ್ಠ ಕೂಲಿ ಹೆಚ್ಚಳದಿಂದ ಅವರ ಲಾಭಕ್ಕೆ ಧಕ್ಕೆಯಾಗುತ್ತದೆ ಎಂಬ ಮನೋಭಾವದಿಂದ ಸರ್ಕಾರ ಅಧಿಸೂಚನೆಗೊಂಡಿರುವ ಕನಿಷ್ಠ ಕೂಲಿಯನ್ನೂ ಜಾರಿಗೊಳಿಸಲು ಹಿಂದೇಟು ಹಾಕುತ್ತಿದೆ ಎಂದು ಅವರು ಕಳವಳ ವ್ಯಕ್ತಪಡಿಸಿದರು.ಸಿಐಟಿಯು ಕುಂದಾಪುರ ಘಟಕದ ಅಧ್ಯಕ್ಷ ವಿ. ನರಸಿಂಹ ಮಾತನಾಡಿ, ಕಾರ್ಮಿಕರ ದುಡಿಮೆಗೆ ತಕ್ಕ ಪ್ರತಿಫಲ ದೊರೆಯುತ್ತಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಸರ್ಕಾರ ಅಧಿಸೂಚನೆಗೊಂಡಿರುವ ಕನಿಷ್ಠ ಕೂಲಿಯನ್ನಾದರೂ ಗೌರವಯುತವಾಗಿ ಹಾಗೂ ಯಾವುದೇ ವಿಳಂಬವಿಲ್ಲದೆ ಜಾರಿಗೊಳಿಸಿ ದುಡಿಯುವ ವರ್ಗದ ಬದುಕಿಗೆ ಆಸರೆಯಾಗಬೇಕು ಎಂದು ಒತ್ತಾಯಿಸಿದರು.ಮುಖಂಡರಾದ ಕೆ. ಶಂಕರ್, ಜಿ.ಡಿ. ಪಂಜು, ವಾಸು ಪೂಜಾರಿ, ಲಕ್ಷ್ಮಣ ಡಿ., ಪ್ರಕಾಶ ಕೋಣಿ, ಚಂದ್ರ ಪೂಜಾರಿ, ಗೋಪಾಲ ಮಾವಿನಕೆರೆ, ಜಿ.ಎಂ. ಶಂಕರ ಶೆಟ್ಟಿ, ವಸಂತ ಹಾಗೂ ರಾಘವೇಂದ್ರ ಉಪಸ್ಥಿತರಿದ್ದರು.

ಸಿಐಟಿಯು ಕುಂದಾಪುರ ಘಟಕದ ಪ್ರಧಾನ ಕಾರ್ಯದರ್ಶಿ ಎಚ್. ನರಸಿಂಹ ಪ್ರಾಸ್ತಾವಿಕವಾಗಿ ಮಾತನಾಡಿದರು. ಕೋಶಾಧಿಕಾರಿ ಸುರೇಂದ್ರ ಹೆಚ್. ವಂದಿಸಿದರು.