ಸಾರಾಂಶ
ಕನ್ನಡಪ್ರಭ ವಾರ್ತೆ, ತುಮಕೂರುರಾಜ್ಯದಲ್ಲಿ ರೈತರ, ಮಠಮಾನ್ಯಗಳ, ದೇವಾಲಯಗಳ, ಸರ್ಕಾರಿ ಶಾಲೆಗಳ, ಸಾರ್ವಜನಿಕರ ಆಸ್ತಿಗೆ ವಕ್ಫ್ ನೋಟಿಸ್ ನೀಡಿರುವುದನ್ನು ವಿರೋಧಿಸಿ ಜಿಲ್ಲಾ ಬಿಜೆಪಿ ನೇತೃತ್ವದಲ್ಲಿ ಮುಖಂಡರು, ಕಾರ್ಯಕರ್ತರು ಶನಿವಾರ ನಗರದಲ್ಲಿ ನಮ್ಮ ಭೂಮಿ ನಮ್ಮ ಹಕ್ಕು ಹೆಸರಿನ ಹೋರಾಟ ನಡೆಸಿದರು.ಬಿಜಿಎಸ್ ವೃತ್ತದಲ್ಲಿ ಸಮಾಗಮಗೊಂಡ ಮುಖಂಡರು, ಹಿಂದೂಗಳ ಜಮೀನನ್ನು ವಕ್ಫ್ ಗೆ ಪರಭಾರೆ ಮಾಡುವ ಪ್ರಯತ್ನ ನಡೆದಿದೆ ಎಂದು ಆಪಾದಿಸಿ, ವಕ್ಫ್ ಸಮಸ್ಯೆ ಪರಿಹರಿಸಲು ಸರ್ಕಾರವನ್ನು ಒತ್ತಾಯಿಸಿ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.ಶಾಸಕ ಜಿ.ಬಿ.ಜ್ಯೋತಿಗಣೇಶ್ ಮಾತನಾಡಿ, ಕಾಂಗ್ರೆಸ್ ಸರ್ಕಾರ ಅಲ್ಪಸಂಖ್ಯಾತರ ತುಷ್ಟೀಕರಣವನ್ನು ಮುಖ್ಯ ವಿಷಯವನ್ನಾಗಿಸಿಕೊಂಡು ಗೊಂದಲ ಮೂಡಿಸುತ್ತಿದೆ. ರೈತರ ಜಮೀನು, ದೇವಸ್ಥಾನ, ಮಠಮಾನ್ಯಗಳ ಜಾಗ, ಸಾರ್ವಜನಿಕ ಆಸ್ತಿಯನ್ನು ವಕ್ಫ್ ಗೆ ನೀಡುವ ಸಂಚು ನಡೆದಿದೆ ಎಂದು ಆರೋಪಿಸಿದರು.ರಾಜ್ಯ ಸರ್ಕಾರದ ಅಭಿವೃದ್ಧಿ ಶೂನ್ಯ ಎಂಬುದು ಜನಸಾಮಾನ್ಯರಿಗೂ ಗೊತ್ತಾಗಿದೆ. ಸರ್ಕಾರದಲ್ಲಿ ಯಾವುದೇ ಅಭಿವೃದ್ಧಿ ಕೆಲಸಗಳಾಗುತ್ತಿಲ್ಲ ಎಂದು ಕಾಂಗ್ರೆಸ್ ಶಾಸಕರೇ ಹೇಳಿದ್ದಾರೆ. ಕೇವಲ ವೋಟಿಗಾಗಿ ಯಾರನ್ನೋ ತುಷ್ಟೀಕರಣ ಮಾಡಿಕೊಂಡು ರಾಜ್ಯವನ್ನು ಹಾಳು ಮಾಡುತ್ತಿದ್ದಾರೆ. ಯಾವುದೋ ಸಮುದಾಯದ ಓಲೈಕೆಗಾಗಿ ದೇಶದ ಭದ್ರತೆಯನ್ನು ಹಾಳು ಮಾಡಿ ದೇಶವನ್ನು ಒತ್ತೆ ಇಡಲು ಹೊರಟಿದ್ದಾರೆ ಎಂದು ಕಾಂಗ್ರೆಸ್ ನಾಯಕರ ವಿರುದ್ಧ ಹರಿಹಾಯ್ದರು.ಜಿಲ್ಲಾ ಬಿಜೆಪಿ ಅಧ್ಯಕ್ಷ ಎಚ್.ಎಸ್.ರವಿಶಂಕರ್ ಹೆಬ್ಬಾಕ ಮಾತನಾಡಿ, ಕಾಂಗ್ರೆಸ್ ಸರ್ಕಾರದ ಕುಮ್ಮಕ್ಕಿನಿಂದ ರಾಜ್ಯದ ಹಿಂದೂಗಳ ಆಸ್ತಿ ಮೇಲೆ ವಕ್ಫ್ ಕಣ್ಣು ಹಾಕಿದೆ. ಇದರ ವಿರುದ್ಧ ರಾಜ್ಯ ಬಿಜೆಪಿ ಅಧ್ಯಕ್ಷ ವಿಜಯೇಂದ್ರ ಅವರ ನೇತೃತ್ವದಲ್ಲಿ ರಾಜ್ಯಾದ್ಯಂತ ಹೋರಾಟ ಮಾಡಲಾಗುತ್ತಿದೆ. ಸಾರ್ವಜನಿಕರ, ರೈತರ ಹಿತಾಸಕ್ತಿ ಮರೆತು ಸರ್ಕಾರ ಒಂದು ಸಮುದಾಯದ ಪರ ಹೊರಟಿದೆ ಎಂದು ಟೀಕಿಸಿದರು. ಎಲ್ಲಾ ಕ್ಷೇತ್ರಗಳಲ್ಲೂ ವಿಫಲವಾಗಿರುವ ರಾಜ್ಯ ಸರ್ಕಾರ ಅನರ್ಹರಿಗೆ ಪಡಿತರ ಚೀಟಿ ನೀಡಿ ನಿಜವಾದ ಬಡವರ ಪಡಿತರ ಕಾರ್ಡ್‌ಗಳನ್ನು ರದ್ದು ಮಾಡಿದೆ. ತುಮಕೂರು ಜಿಲ್ಲೆಯಲ್ಲೇ ೩೦೦ಕ್ಕೂ ಹೆಚ್ಚು ಪ್ರಕರಣಗಳು ಬೆಳಕಿಗೆ ಬಂದಿವೆ ಎಂದು ಹೇಳಿದರು. ಮಾಜಿ ಶಾಸಕ ಎಂ.ಡಿ.ಲಕ್ಷ್ಮೀನಾರಾಯಣ ಮಾತನಾಡಿ ಸಂವಿಧಾನಕ್ಕೆ ಅಪಚಾರ ಮಾಡಿ ಕಾಂಗ್ರೆಸ್ ನಾಯಕರು ವಕ್ಫ್ ಬೆಂಬಲಿಸುತ್ತಿದ್ದಾರೆ. ಸರ್ಕಾರ ವಕ್ಫ್ ಮಂಡಳಿ ರದ್ದು ಮಾಡಬೇಕು ಎಂದು ಒತ್ತಾಯಿಸಿದರು.ರಾಜ್ಯ ಬಿಜೆಪಿ ಕಾರ್ಯದರ್ಶಿ ವಿನಯ್ ಬಿದರೆ, ಸಂಸತ್ತಿನಲ್ಲಿ ವಕ್ಫ್ ಬಿಲ್ ಮಂಡನೆಗೆ ಬಿಜೆಪಿಯ ಬೆಂಬಲವಿದೆ. ವಕ್ಫ್ ವಿರುದ್ಧ ಬಿಜೆಪಿಯ ಹೋರಾಟ ನಿಲ್ಲುವುದಿಲ್ಲ ಎಂದರು. ರಾಜ್ಯ ಬಿಜೆಪಿ ಕಾರ್ಯದರ್ಶಿ ಅಂಬಿಕಾ ಹುಲಿನಾಯ್ಕರ್ ಮಾತನಾಡಿ, ಜನರ ಕಣ್ಣು ಒರೆಸಬೇಕಾದ ಸರ್ಕಾರ ಜನರ ನೆಮ್ಮದಿ ಹಾಳು ಮಾಡುತ್ತಿದೆ. ರೈತರನ್ನು ಬೀದಿಗೆ ತರಲು ಹುನ್ನಾರ ಮಾಡುತ್ತಿದೆ. ಅಧಿಕಾರಕ್ಕಾಗಿ ಅರೆಬೆಂದ ಯೋಜನೆಗಳನ್ನು ತಂದಿದೆ ಎಂದು ಟೀಕಿಸಿದರು.
ಮುಖಂಡರಾದ ಎಸ್.ಶಿವಪ್ರಸಾದ್, ದಿಲೀಪ್‌ಕುಮಾರ್, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಗಂಗರಾಜು, ಸಂದೀಪ್‌ಗೌಡ, ಕಾರ್ಯದರ್ಶಿ ಎಚ್.ಎಂ.ರವೀಶಯ್ಯ, ನಗರ ಅಧ್ಯಕ್ಷ ಟಿ.ಎಚ್.ಹನುಮಂತರಾಜು, ಎಸ್ಸಿ ಮೋರ್ಚಾ ಜಿಲ್ಲಾಧ್ಯಕ್ಷ ಆಂಜನಪ್ಪ, ನಗರ ಅಧ್ಯಕ್ಷ ಹನುಮಂತರಾಯಪ್ಪ, ಜಿಲ್ಲಾ ಯುವ ಮೋರ್ಚಾ ಅಧ್ಯಕ್ಷ ನವಚೇತನ್, ಮುಖಂಡರಾದ ಬಿ.ಎಸ್.ನಾಗೇಶ್, ಬೈರಣ್ಣ, ಬೆಳ್ಳಿ ಲೋಕೇಶ್, ಸತ್ಯಮಂಗಲ ಜಗದೀಶ್, ಜ್ಯೋತಿ ತಿಪ್ಪೇಸ್ವಾಮಿ, ಬಿ.ಜಿ.ಕೃಷ್ಣಪ್ಪ, ಸಿ.ಎನ್.ರಮೇಶ್, ಮಲ್ಲಿಕಾರ್ಜುನ್, ಪುಟ್ಟರಾಜು, ಮಹೇಶ್‌ಬಾಬು, ಮಂಜುನಾಥ್, ಪ್ರೇಮಾ ಹೆಗಡೆ ಸೇರಿದಂತೆ ವಿವಿಧ ಮುಖಂಡರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.