ಸಾರಾಂಶ
ತಡವಾಗಿ ಬೆಳಕಿಗೆ ಬಂದ ಘಟನೆ । ಶಿಕ್ಷಣ ಸಂಯೋಜಕರ ನೇತೃತ್ವದ ತಂಡ ಶಾಲೆಗೆ ಭೇಟಿ
ಕನ್ನಡಪ್ರಭ ವಾರ್ತೆ ಕನಕಗಿರಿ
ಶಾಲಾ ಮುಕ್ತಾಯದ ವೇಳೆ ನಡೆಯುವ ಪ್ರಾರ್ಥನಾ ಸಮಯದಲ್ಲಿ ವಿದ್ಯಾರ್ಥಿಯೊರ್ವನಿಗೆ ಅತಿಥಿ ಶಿಕ್ಷಕಿಯೊಬ್ಬರು ಬಾಟಲ್‌ನಿಂದ ಥಳಿಸಿದ ಘಟನೆ ಪಟ್ಟಣದ ಸ.ಮಾ.ಹಿ.ಪ್ರಾ.ಶಾಲೆಯಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.ಸೆ.೩ರಂದು ಸಾಯಂಕಾಲ ೪.೨೦ರ ಸುಮಾರಿಗೆ ನಡೆದ ಪ್ರಾರ್ಥನಾ ಸಮಯದಲ್ಲಿ ಅತಿಥಿ ಶಿಕ್ಷಕಿಯೊಬ್ಬರು ವಿದ್ಯಾರ್ಥಿಯೊರ್ವನಿಗೆ ಬಾಟಲ್‌ನಿಂದ ಥಳಿಸಿದ್ದರಿಂದ ತಲೆ ಭಾಗದಲ್ಲಿ ರಕ್ತ ಸುರಿದಿದೆ. ಇದರಿಂದ ತಕ್ಷಣ ಎಚ್ಚೆತ್ತಿರುವ ಅತಿಥಿ ಶಿಕ್ಷಕಿ ವಿದ್ಯಾರ್ಥಿಯನ್ನು ಆಸ್ಪತ್ರೆಗೆ ಕರೆದುಕೊಂಡು ಚಿಕಿತ್ಸೆ ಕೊಡಿಸಿದ್ದು, ವಿದ್ಯಾರ್ಥಿಗೆ ಯಾವುದೇ ಅಪಾಯವಿಲ್ಲ ಎಂದು ವೈದ್ಯರು ತಿಳಿಸಿದ್ದರಿಂದ ಮಗುವನ್ನು ಮನೆಗೆ ಬಿಟ್ಟು ಬರಲಾಗಿದೆ.
ಅತಿಥಿ ಶಿಕ್ಷಕಿಗೆ ಪಾಲಕರು ಬೈದಿರುವ ವಿಡಿಯೋ ವೈರಲ್ ಆಗಿದ್ದರಿಂದ ಪ್ರಕರಣ ಹೊರಬಿದ್ದಿದ್ದರಿಂದ ಸೆ.೧೧ರಂದು ಶಿಕ್ಷಣ ಸಂಯೋಜಕ ಆಂಜನೇಯ ನೇತೃತ್ವದ ತಂಡ ಶಾಲೆಗೆ ಭೇಟಿ ನೀಡಿ ಲಿಖಿತ ಮಾಹಿತಿ ಪಡೆದುಕೊಂಡಿದ್ದು, ಪರಿಶೀಲಿಸಿ ಕ್ರಮಕ್ಕಾಗಿ ಮೇಲಾಧಿಕಾರಿಗಳಿಗೆ ವರದಿ ಸಲ್ಲಿಸುವುದಾಗಿ ತಿಳಿಸಿದೆ.ಉದ್ದೇಶ ಪೂರ್ವಕವಾಗಿ ವಿದ್ಯಾರ್ಥಿಗೆ ಹೊಡೆದಿಲ್ಲ. ಮಗುವಿಗೆ ಸ್ವಲ್ಪ ರಕ್ತ ಬಂದಾಗ ಅವನನ್ನು ತಕ್ಷಣ ಕರೆದುಕೊಂಡು ಆಸ್ಪತ್ರೆಗೆ ಹೋಗಿ ಚಿಕಿತ್ಸೆ ಕೊಡಿಸಿದ್ದೇನೆ. ಕೆಲ ಮಾಧ್ಯಮಗಳು ಚಿಕಿತ್ಸೆ ಕೊಡಿಸಿಲ್ಲ, ಅತಿಥಿ ಶಿಕ್ಷಕಿಗೆ ಮಾನವೀಯತೆ ಇಲ್ಲ ಎನ್ನುವ ಸುಳ್ಳು ವರದಿ ಭಿತ್ತರಿಸಿದ್ದರಿಂದ ನೋವಾಗಿದೆ. ಕಳೆದ ನಾಲ್ಕು ವರ್ಷಗಳಿಂದ ಇಲ್ಲಿ ಸೇವೆ ಸಲ್ಲಿಸುತ್ತಿದ್ದು, ಎಂದೂ ಘಟನೆ ಆಗಿರಲಿಲ್ಲ. ಇದು ಆಕಸ್ಮಿಕವಾಗಿ ನಡೆದಿದೆ ಎಂದು ಅತಿಥಿ ಶಿಕ್ಷಕಿ ಮಾಧ್ಯಮದವರ ಮುಂದೆ ಕಣ್ಣೀರಿಡುವ ಮೂಲಕ ಹೇಳಿಕೊಂಡಿದ್ದಾರೆ.
ಈ ಸಂದರ್ಭದಲ್ಲಿ ಸಂಪನ್ಮೂಲ ವ್ಯಕ್ತಿಗಳಾದ ಮಹೇಶ, ಶಿವಪ್ಪ ಹೆಳವರ, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಮಂಜುನಾಥ ಚೂಡಾಮಣಿ, ಸದಸ್ಯ ಹಟೇಲಸಾಬ ಇತರರು ಇದ್ದರು.