ಸಾರಾಂಶ
ಹಿರೇಕೆರೂರು: ತಾಲೂಕಿನ ದೂದಿಹಳ್ಳಿ ಮೊರಾರ್ಜಿ ದೇಸಾಯಿ ವಸತಿ ಶಾಲೆಯ 9 ನೇ ತರಗತಿ ವಿದ್ಯಾರ್ಥಿನಿ ಅರ್ಚನಾ ಗೌಡಣ್ಣನವರ್ ನಿಗೂಢ ಆತ್ಮಹತ್ಯೆ ಪ್ರಕರಣ ಹೊಸ ತಿರುವು ಪಡೆದಿದ್ದು, ಅಂತ್ಯಕ್ರಿಯೆ ಮಾಡಿದ್ದ ಅವಳ ಮೃತದೇಹವನ್ನು ಶುಕ್ರವಾರ ಹೊರತೆಗೆದು ಮರಣೋತ್ತರ ಪರೀಕ್ಷೆ ನಡೆಸಲಾಯಿತು.
ಹಿರೇಕೆರೂರು ತಾಲೂಕಿನ ಆಲದಕಟ್ಟಿ ಗ್ರಾಮದ ಯುವತಿ ದೂದಿಹಳ್ಳಿ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಓದುತ್ತಿದ್ದು ಆಲದಕಟ್ಟಿಯ ತನ್ನ ಮನೆಗೆ ಬಂದು ಆತ್ಮಹತ್ಯೆ ಮಾಡಿಕೊಂಡಿದ್ದು, ಇದೊಂದು ಆತ್ಮಹತ್ಯೆ ಪ್ರಕರಣ ಎಂದು ಭಾವಿಸಲಾಗಿತ್ತು. ಆದರೆ ಗುರುವಾರ ಅವಳು ಬರೆದಿಟ್ಟ ಪತ್ರವೊಂದು ಸಿಕ್ಕಿದ್ದು, ಪ್ರಕರಣಕ್ಕೆ ತಿರುವು ನೀಡಿದ್ದಲ್ಲದೇ ಅವಳ ಸಹಪಾಠಿಯ ತಾಯಿ, ಅದೇ ಶಾಲೆಯ ಶಿಕ್ಷಕರ ಪತ್ನಿಯ ಕಿರುಕುಳದಿಂದ ಬೇಸತ್ತು ಅವಳು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಬಾಲಕಿಯ ಪಾಲಕರು ಪ್ರಕರಣ ದಾಖಲಿಸಿದ್ದರು.ಉಪವಿಭಾಗಾಧಿಕಾರಿ ಚನ್ನಪ್ಪ ನೇತೃತ್ವದಲ್ಲಿ ಪೊಲೀಸರು ವಿದ್ಯಾರ್ಥಿನಿಯ ಶವ ಹೊರತೆಗೆದರು. ಬಳಿಕ ವೈದ್ಯರು ಮರಣೋತ್ತರ ಪರೀಕ್ಷೆ ನಡೆಸಿದರು. ಸ್ಥಳದಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳು, ಫೊರೆನ್ಸಿಕ್ ತಜ್ಞರು, ವಿದ್ಯಾರ್ಥಿನಿ ಕುಟುಂಬದವರು ಇದ್ದರು.
ಎಬಿವಿಪಿ ಪ್ರತಿಭಟನೆವಿದ್ಯಾರ್ಥಿನಿ ಅರ್ಚನಾ ಗೌಡಣ್ಣನವರ್ ಆತ್ಮಹತ್ಯೆ ಪ್ರಕರಣವನ್ನು ಸೂಕ್ತ ತನಿಖೆ ನಡೆಸಿ ಆತ್ಮಹತ್ಯೆಗೆ ಕಾರಣರಾದ ತಪ್ಪಿತಸ್ಥರಿಗೆ ಸೂಕ್ತ ಕಾನೂನು ಕ್ರಮ ಜರುಗಿಸುವಂತೆ ಆಗ್ರಹಿಸಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಘಟಕದ ವತಿಯಿಂದ ಶುಕ್ರವಾರ ಪ್ರತಿಭಟನೆ ನಡೆಸಿ ತಹಸೀಲ್ದಾರ್ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು. ಎಬಿವಿಪಿ ಜಿಲ್ಲಾ ಸಂಚಾಲಕ ಅಭಿಷೇಕ ದೊಡ್ಡಮನಿ ಮಾತನಾಡಿ, ಪ್ರತಿಭಾವಂತೆ ವಿದ್ಯಾರ್ಥಿನಿಯಾಗಿದ್ದ ಅರ್ಚನಾ ಕಡು ಬಡತನದಿಂದ ಮೇಲೆ ಬಂದಿದ್ದಾಳೆ. ಅವಳ ಕ್ಲಾಸಿನಲ್ಲಿ ಓದುತ್ತಿರುವ ಅದೇ ಶಾಲೆಯ ಶಿಕ್ಷಕರೊಬ್ಬರ ಪುತ್ರಿಗಿಂತ ಅರ್ಚನಾಳಿಗೆ ಹೆಚ್ಚು ಅಂಕ ಬಂದಿದೆ ಎಂಬ ಸಿಟ್ಟಿನಲ್ಲಿ ಆ ವಿದ್ಯಾರ್ಥಿನಿಯ ತಾಯಿ (ಶಿಕ್ಷಕನ ಪತ್ನಿ) ಕಿರುಕುಳ ನೀಡಿದ್ದಾಳೆ ಎಂದು ಡೆತ್‌ನೋಟ್‌ನಲ್ಲಿ ಆರೋಪಿಸಿ ಅರ್ಚನಾ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
ಈ ಪ್ರಕರಣವನ್ನು ಸರ್ಕಾರ ಸೂಕ್ತ ತನಿಖೆ ಕೈಗೊಳ್ಳಬೇಕು. ಅಲ್ಲದೆ ಇಲಾಖೆಗೆ ಅಕಾಲಿಕ ಮರಣವೆಂಬ ಸುಳ್ಳು ವರದಿ ನೀಡಿ ವಿದ್ಯಾರ್ಥಿನಿಯ ಡೆತ್ ನೋಟಿನಲ್ಲಿರುವ ಅಂಶಗಳನ್ನು ಮುಚ್ಚಿಹಾಕುತ್ತಿರುವರ ವಿರುದ್ಧ ಕೂಡಲೇ ಕ್ರಮ ಜರುಗಿಸಬೇಕು. ವಿದ್ಯಾರ್ಥಿನಿ ಆತ್ಮಹತ್ಯೆಗೆ ಕಾರಣವಾದವರಿಗೆ ಕಠಿಣ ಶಿಕ್ಷೆ ಅಗಬೇಕು ಇಲ್ಲದೆ ಹೋದರೆ ಮುಂದಿನ ದಿನಗಳಲ್ಲಿ ಜಿಲ್ಲಾದ್ಯಂತ ಪ್ರತಿಭಟನೆ ಮಾಡಲಾಗುವುದು ಎಂದು ಎಚ್ಚರಿಸಿದರು.ಈ ಸಂದರ್ಭದಲ್ಲಿ ವಿಶ್ವ ಹಿಂದೂ ಪರಿಷತ್ ಜಿಲ್ಲಾ ಕಾರ್ಯದರ್ಶಿ ಅನಿಲ್ ಹಲವಾಲ್, ವಿಕಾಸ ಎನ್.ಜಿ., ಸಹನಾ ಪ್ಯಾಟಿ, ಪುಷ್ಪಾ ಯತ್ತಿನಹಳ್ಳಿ, ವಿನಾಯಕ್ ನೇಶ್ವಿ, ಸಂದೀಪ್ ಬಾಳಿಕಾಯಿ, ವಿನಾಯಕ ಕರ್ನೂಲ್, ಪ್ರವೀಣ ರಟ್ಟೀಹಳ್ಳಿ, ಭರತ್ ಹೊಸಹಳ್ಳಿ, ಅಭಿ ಮಡ್ಲೂರು, ಸೋನಿಯಾ ಕಮ್ಮಾರ್, ಬಸವರಾಜ ಓಲೇಕಾರ್, ಬಸವರಾಜ ಬಣಕಾರ, ಕಲೇಶಪ್ಪ ಡಿ., ಪ್ರವೀಣ ನೇಶ್ವಿ, ಅರುಣ ನಾಯ್ಕರ್, ಶಿವು ಎಚ್., ಕುಮಾರ ಎಮ್. ಎಸ್., ಸಂದೀಪ ಮಾಸೂರ, ಚೇತನ ಗುಂಡಗಟ್ಟಿ ಇದ್ದರು.