ಮಂತ್ರಾಲಯದ ಶ್ರೀ ರಾಘವೇಂದ್ರಸ್ವಾಮಿ ಮಠದಿಂದ ವೈದ್ಯಕೀಯ ಶಿಕ್ಷಣಕ್ಕೆ ಆರ್ಥಿಕ ನೆರವು ನೀಡುವುದಾಗಿ ನಂಬಿಸಿ, ಜಿಎಸ್ಟಿ ಪಾವತಿ ನೆಪದಲ್ಲಿ ವಿದ್ಯಾರ್ಥಿಯಿಂದ ₹60 ಸಾವಿರ ವಸೂಲಿ ಮಾಡಿರುವ ಪ್ರಕರಣ ಬೆಳಕಿಗೆ ಬಂದಿದೆ.
ಸೋಮರಡ್ಡಿ ಅಳವಂಡಿ
ಕೊಪ್ಪಳ: ಕೊಪ್ಪಳದ ಆಟೋ ಚಾಲಕನ ಇಬ್ಬರು ಮಕ್ಕಳು ಎಂಬಿಬಿಎಸ್ ಸೀಟ್ ಪಡೆದ ಸಾಧನೆಯ ಬೆನ್ನಲ್ಲೇ, ಬಡ ಕುಟುಂಬಕ್ಕೆ ನೆರವಾಗಬೇಕಿದ್ದ ದಾನಿಗಳ ಹಣಕ್ಕೆ ವಂಚಕರು ಕನ್ನ ಹಾಕಿದ್ದಾರೆ.ಮಂತ್ರಾಲಯದ ಶ್ರೀ ರಾಘವೇಂದ್ರಸ್ವಾಮಿ ಮಠದಿಂದ ವೈದ್ಯಕೀಯ ಶಿಕ್ಷಣಕ್ಕೆ ಆರ್ಥಿಕ ನೆರವು ನೀಡುವುದಾಗಿ ನಂಬಿಸಿ, ಜಿಎಸ್ಟಿ ಪಾವತಿ ನೆಪದಲ್ಲಿ ವಿದ್ಯಾರ್ಥಿಯಿಂದ ಬರೋಬ್ಬರಿ ₹60 ಸಾವಿರ ವಸೂಲಿ ಮಾಡಿರುವ ಪ್ರಕರಣ ಬೆಳಕಿಗೆ ಬಂದಿದೆ.
ಕನ್ನಡಪ್ರಭದಲ್ಲಿ ''ಆಟೋ ಚಾಲಕನ ಇಬ್ಬರು ಮಕ್ಕಳಿಗೂ ಎಂಬಿಬಿಎಸ್ ಸೀಟ್'' ಎಂಬ ವಿಶೇಷ ವರದಿ ಪ್ರಕಟವಾಗಿತ್ತು. ಇದರಿಂದ ಪ್ರೇರಿತರಾಗಿ ಅನೇಕ ದಾನಿಗಳು ವಿದ್ಯಾರ್ಥಿಯ ನೆರವಿಗೆ ಧಾವಿಸಿದ್ದರು. ಆದರಂತೆ ವಿದ್ಯಾರ್ಥಿಯ ಬ್ಯಾಂಕ್ ಖಾತೆಗೆ ನೆರವಿನ ಹಣ ಜಮೆಯಾಗಿರುವ ಮಾಹಿತಿ ಅರಿತ ವಂಚಕರ ತಂಡ, ಮಠದ ಹೆಸರಿನಲ್ಲಿ ಕರೆ ಮಾಡಿ ಹಣ ದೋಚಿರುವ ಶಂಕೆ ವ್ಯಕ್ತವಾಗಿದೆ.₹3 ಲಕ್ಷ ನೆರವಿನ ಆಮಿಷ: ವಿದ್ಯಾರ್ಥಿಗೆ ಕರೆ ಮಾಡಿದ ವ್ಯಕ್ತಿಗಳು, ತಾವು ಮಂತ್ರಾಲಯ ಶ್ರೀ ರಾಘವೇಂದ್ರಸ್ವಾಮಿ ಮಠದಿಂದ ಮಾತನಾಡುತ್ತಿರುವುದಾಗಿ ಪರಿಚಯಿಸಿಕೊಂಡಿದ್ದಾರೆ. ನಿನ್ನ ವೈದ್ಯಕೀಯ ಶಿಕ್ಷಣಕ್ಕೆ ಮಠದಿಂದ ಆರ್ಥಿಕ ನೆರವು ನೀಡಲಾಗುವುದು. ಮೂರು ಲಕ್ಷ ರು. ಸಹಾಯಧನ ನೀಡುವುದಾಗಿ ಭರವಸೆ ನೀಡಿದ್ದಾರೆ. ಮರುದಿನ ಕರೆ ಮಾಡಿ, ಪೋನ್ಪೇ ಮೂಲಕ ಅಷ್ಟು ದೊಡ್ಡ ಮೊತ್ತ ವರ್ಗಾವಣೆ ಮಾಡಲು ಸಾಧ್ಯವಿಲ್ಲ. ಬ್ಯಾಂಕ್ ಖಾತೆ ವಿವರ ನೀಡಿದರೆ ನೇರವಾಗಿ ಹಣ ಜಮೆ ಮಾಡುವುದಾಗಿ ನಂಬಿಸಿದ್ದಾರೆ.
ಬಳಿಕ ನೆರವು ಪಡೆಯಲು ₹45 ಸಾವಿರ ಜಿಎಸ್ಟಿ ಪಾವತಿಸಬೇಕು ಎಂದು ಸೂಚಿಸಿದ್ದಾರೆ. ಇದನ್ನು ನಂಬಿದ ವಿದ್ಯಾರ್ಥಿ, ತನಗೆ ದೊರೆತಿದ್ದ ನೆರವಿನ ಹಣದಲ್ಲಿಯೇ ₹45 ಸಾವಿರ ವರ್ಗಾಯಿಸಿದ್ದಾನೆ. ಎರಡು-ಮೂರು ದಿನ ಕಳೆದರೂ ಭರವಸೆ ನೀಡಿದ ಹಣ ಖಾತೆಗೆ ಜಮೆಯಾಗಿಲ್ಲ. ಮತ್ತೆ ವಿಚಾರಿಸಿದಾಗ ಇನ್ನೂ ₹15 ಸಾವಿರ ಪಾವತಿಸುವಂತೆ ಒತ್ತಾಯಿಸಿದ್ದಾರೆ. ಅದನ್ನೂ ವಿದ್ಯಾರ್ಥಿ ಪಾವತಿಸಿದ್ದಾನೆ.ಹಣವೂ ಇಲ್ಲ, ನೆರವೂ ಇಲ್ಲ!: ಒಟ್ಟು ₹60 ಸಾವಿರ ಪಾವತಿಸಿದ ಬಳಿಕವೂ ವಂಚಕರಿಂದ ಯಾವುದೇ ನೆರವು ಬಂದಿಲ್ಲ. ಬದಲಾಗಿ ಇನ್ನೂ ₹45 ಸಾವಿರ ಪಾವತಿಸುವಂತೆ ಬೇಡಿಕೆ ಇಟ್ಟಿದ್ದಾರೆ. ಇದರಿಂದ ಅನುಮಾನಗೊಂಡ ವಿದ್ಯಾರ್ಥಿ, ತಾನು ಪಾವತಿಸಿದ ಹಣ ವಾಪಸ್ ನೀಡುವಂತೆ ಒತ್ತಾಯಿಸಿದ್ದಾನೆ. ಹಣ ಹಿಂದಿರುಗಿಸದಿದ್ದರೆ ಪೊಲೀಸರಿಗೆ ದೂರು ನೀಡುವುದಾಗಿ ಎಚ್ಚರಿಸಿದ್ದಾನೆ. ಇದಕ್ಕೆ ಯಾವುದೇ ಪ್ರತಿಕ್ರಿಯೆ ನೀಡದ ವಂಚಕರು, ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡಿದ್ದಾರೆ.
ಬಡತನದ ನಡುವೆಯೂ ಪ್ರತಿಭೆಯಿಂದ ವೈದ್ಯಕೀಯ ಸೀಟ್ ಪಡೆದ ವಿದ್ಯಾರ್ಥಿಯ ಭವಿಷ್ಯಕ್ಕೆ ನೆರವಾಗಬೇಕಿದ್ದ ಹಣವನ್ನೇ ವಂಚಕರು ದೋಚಿರುವುದು ಕುಟುಂಬವನ್ನು ತೀವ್ರ ಆಘಾತಕ್ಕೆ ದೂಡಿದೆ.ಸೈಬರ್ ಠಾಣೆಗೆ ದೂರು: ಘಟನೆ ಹಿನ್ನೆಲೆಯಲ್ಲಿ ವಿದ್ಯಾರ್ಥಿಯ ತಂದೆ ಕೊಪ್ಪಳ ನಗರದಲ್ಲಿರುವ ಸೈಬರ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಕೈಗೊಂಡಿದ್ದಾರೆ. ವಂಚನೆಗೆ ಬಳಸಿದ ಮಹಿಳೆಯೊಬ್ಬರ ಬ್ಯಾಂಕ್ ಖಾತೆಯನ್ನು ಪತ್ತೆಹಚ್ಚಿ, ಸಂಬಂಧಿಸಿದ ಖಾತೆದಾರರಿಗೆ ನೋಟಿಸ್ ಜಾರಿ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ವಂಚನೆಗೆ ಸಂಬಂಧಿಸಿದಂತೆ ದೂರು ದಾಖಲಾಗಿದೆ. ಹಣ ಹಾಕಿಸಿಕೊಂಡ ಮಹಿಳೆಯೊಬ್ಬರ ಬ್ಯಾಂಕ್ ಖಾತೆಯನ್ನು ಪತ್ತೆಹಚ್ಚಿ, ಸಂಬಂಧಿಸಿದ ಖಾತೆದಾರರಿಗೆ ನೋಟಿಸ್ ಜಾರಿ ಮಾಡಲಾಗಿದೆ. ತನಿಖೆ ಮುಂದುವರಿದಿದೆ ಎಂದು ಸೈಬರ್ ಠಾಣೆ ಪೊಲೀಸ್ ಇನ್ಸ್ಪೆಕ್ಟರ್ ಆಂಜನೇಯ ಹೇಳಿದರು.