ವೈವಿಧ್ಯತೆಯಲ್ಲಿ ಏಕತೆ ಹೊಂದಿರುವ ಭಾರತದ ವಿವಿಧ ಭಾಗಗಳ ಸಾಂಸ್ಕೃತಿಕ, ಸಾಮಾಜಿಕ, ಶೈಕ್ಷಣಿಕ ಹಾಗೂ ಅಭಿವೃದ್ಧಿಪರ ವೈವಿಧ್ಯತೆಯನ್ನು ಪರಸ್ಪರ‌ ವಿನಿಮಯ ಮಾಡಿಕೊಳ್ಳಲು ಮತ್ತು ವಿಶೇಷವಾಗಿ ಕರ್ನಾಟಕ-ಮಧ್ಯಪ್ರದೇಶ ಯುವಜನರ‌ ನಡುವೆ ಬಾಂಧವ್ಯ ಬಲಪಡಿಸುವ ಉದ್ದೇಶದಿಂದ ಕೇಂದ್ರದ ಉನ್ನತ ಶಿಕ್ಷಣ‌ ಸಚಿವಾಲಯವು "ಏಕ್ ಭಾರತ್ ಶ್ರೇಷ್ಠ ಭಾರತ್ " ಕಾರ್ಯಕ್ರಮದಡಿ 7ನೇ ಹಂತದ ಯುವ ಸಂಗಮ ಕಾರ್ಯಕ್ರಮ ಹಮ್ಮಿಕೊಂಡಿದೆ ಎಂದು ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಬಟ್ಟು ಸತ್ಯನಾರಾಯಣ ಹೇಳಿದರು.

ಕನ್ನಡಪ್ರಭ ವಾರ್ತೆ ಕಲಬುರಗಿವೈವಿಧ್ಯತೆಯಲ್ಲಿ ಏಕತೆ ಹೊಂದಿರುವ ಭಾರತದ ವಿವಿಧ ಭಾಗಗಳ ಸಾಂಸ್ಕೃತಿಕ, ಸಾಮಾಜಿಕ, ಶೈಕ್ಷಣಿಕ ಹಾಗೂ ಅಭಿವೃದ್ಧಿಪರ ವೈವಿಧ್ಯತೆಯನ್ನು ಪರಸ್ಪರ‌ ವಿನಿಮಯ ಮಾಡಿಕೊಳ್ಳಲು ಮತ್ತು ವಿಶೇಷವಾಗಿ ಕರ್ನಾಟಕ-ಮಧ್ಯಪ್ರದೇಶ ಯುವಜನರ‌ ನಡುವೆ ಬಾಂಧವ್ಯ ಬಲಪಡಿಸುವ ಉದ್ದೇಶದಿಂದ ಕೇಂದ್ರದ ಉನ್ನತ ಶಿಕ್ಷಣ‌ ಸಚಿವಾಲಯವು "ಏಕ್ ಭಾರತ್ ಶ್ರೇಷ್ಠ ಭಾರತ್ " ಕಾರ್ಯಕ್ರಮದಡಿ 7ನೇ ಹಂತದ ಯುವ ಸಂಗಮ ಕಾರ್ಯಕ್ರಮ ಹಮ್ಮಿಕೊಂಡಿದೆ ಎಂದು ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಬಟ್ಟು ಸತ್ಯನಾರಾಯಣ ಹೇಳಿದರು. ಆಳಂದ ತಾಲೂಕಿನ ಕಡಗಂಚಿಯಲ್ಲಿರುವ ಕರ್ನಾಟಕ‌ ಕೇಂದ್ರೀಯ ವಿಶ್ವವಿದ್ಯಾಲಯದಲ್ಲಿ‌ ಶನಿವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಯುವ ಸಂಗಮದ‌ ಭಾಗವಾಗಿ ಸೆ.28 ರಿಂದ ಅ.3ರ ವರೆಗೆ ಮಧ್ಯಪ್ರದೇಶದ 51 ಜನ ವಿದ್ಯಾರ್ಥಿ ನಿಯೋಗವು ಕರ್ನಾಟಕದ‌ ವಿವಿಧ ಸ್ಥಳಕ್ಕೆ ಭೇಟಿ ನೀಡಿ ಇಲ್ಲಿನ ಕಲೆ, ಸಂಸ್ಕೃತಿ, ಶ್ರೀಮಂತ ಪರಂಪರೆ, ಶೈಕ್ಷಣಿಕ, ಕೈಗಾರಿಕೆ, ಅಭಿವೃದ್ದಿ ಕಾರ್ಯಗಳು ಕುರಿತು ಮಾಹಿತಿ ಪಡೆಯಲಿದೆ. ಇದರ ಜತೆಗೆ ಯುವ-ಜನ ಸಮುದಾಯದೊಂದಿಗೆ ಸಂವಾದ ಸಹ ನಡೆಸಲಿದ್ದಾರೆ. 2023ರಲ್ಲಿ‌ 4ನೇ ಹಂತದ ಯುವ‌ ಸಂಗಮದಲ್ಲಿ‌ ಕರ್ನಾಟಕ-ಉತ್ತರಪ್ರದೇಶ ವಿದ್ಯಾರ್ಥಿಗಳ‌ ತಂಡ ಪರಸ್ಪರ‌ ರಾಜ್ಯಗಳಿಗೆ ಪ್ರವಾಸಕ್ಕೆ ತೆರಳಿದ್ದವು ಎಂದರು. ಮಧ್ಯಪ್ರದೇಶದ ತಂಡವು ಮೊದಲು ಸೆ.28ಕ್ಕೆ ಕಲಬುರಗಿಯ ಸಿ.ಯು.ಕೆ ವಿ.ವಿಗೆ ಭೇಟಿ‌ ನೀಡುವ‌ ಮೂಲಕ ತಂಡವು ಪ್ರವಾಸ ಆರಂಭಿಸಲಿದೆ. ನಂತರ ಕಲಬುರಗಿ ಜಿಲ್ಲೆಯ ಆಳಂದ ತಾಲೂಕಿನ ತೆಲ್ಲೂರ ಗ್ರಾಮಕ್ಕೆ ಭೇಟಿ ನೀಡಿ ಗ್ರಾಮಸ್ಥರೊಂದಿಗೆ ಸಂವಾದ ನಡೆಸಲಿದೆ. ನಂತರ ಬೀದರ್‌ ಜಿಲ್ಲೆಯ ಹುಮನಾಬಾದ ತಾಲೂಕಿನ ಸಾವಯವ ಬೆಲ್ಲ‌ ತಯಾರಿಸುವ ಕಾರ್ಖಾನೆಗೆ ಭೇಟಿ ನೀಡಲಿದೆ. ಬೀದರ್‌ ಕೋಟೆ, ಬಿದರಿ ಕರಕುಶಲ ಕಲಾವಿದರೊಂದಿಗೆ ಸಂವಾದ ನಡೆಸಲಿದೆ. ಅಲ್ಲಿಂದ ಬೆಂಗಳೂರಿಗೆ ತೆರಳಿ ರಾಜಧಾನಿಯಲ್ಲಿ ಲೋಕ ಭವನ, ಇಸ್ರೋ ಕಚೇರಿ, ಐ.ಐ‌.ಎಸ್.ಸಿ, ವಿಶ್ವೇಶ್ವರಯ್ಯ ಮ್ಯೂಸಿಯಂ ಸಹಿತ ನಾಡಿನ ಅನೇಕ ಐತಿಹಾಸಿಕ, ಪಾರಂಪರಿಕ ಸ್ಥಳ ವೀಕ್ಷಣೆ ಮಡಲಿದೆ ಎಂದರು.

ರಾಜ್ಯದ ನಿಯೋಗ ಮಧ್ಯಪ್ರದೇಶಕ್ಕೆ ಭೇಟಿ: ರಾಜ್ಯದ ಎಲ್ಲ 31 ಜಿಲ್ಲೆಯಿಂದ ಆಯ್ಕೆಗೊಂಡ ಕಲ್ಯಾಣ ಕರ್ನಾಟಕದ 18 ವಿದ್ಯಾರ್ಥಿಗಳು ಒಳಗೊಂಡಂತೆ ಕರುನಾಡಿನಿಂದ 50 ವಿದ್ಯಾರ್ಥಿಗಳ ನಿಯೋಗವು ಅ.10 ರಿಂದ 17ರ ವರೆಗೆ ಮಧ್ಯಪ್ರದೇಶಕ್ಕೆ ಭೇಟಿ ನೀಡಲಿದೆ. 26 ಮಹಿಳಾ ಮತ್ತು 24 ಪುರುಷ ವಿದ್ಯಾರ್ಥಿಗಳು ಮತ್ತು ಮೂರು ಅಧ್ಯಾಪಕ ಸಂಯೋಜಕರ ತಂಡವು ಮಧ್ಯಪ್ರದೇಶದ ಭೋಪಾಲ, ಭೋಜಪೂರ, ಇಂಡೋರ್, ರಾಜವಾಡಾ, ಸಾಂಚಿ ಸ್ತೂಪ, ಲೋಕ ಭವನ, ವಿಧಾನಸಭೆ, ಸಿ.ಎಂ. ನಿವಾಸ ಭೇಟಿ ನೀಡಿ ಅಲ್ಲಿನ ಸಾಂಸ್ಕೃತಿಕ ಪರಂಪರೆ, ಸಂಪ್ರದಾಯಗಳನ್ನು ಅರಿಯುವ ಪ್ರಯತ್ನ ಮಾಡಲಿದೆ ಎಂದರು.ಯುವ‌ ಸಂಗಮ ಕಾರ್ಯಕ್ರಮವು ಪ್ರಮುಖವಾಗಿ ಪ್ರವಾಸೋದ್ಯಮ, ಪರಂಪರೆ, ಪ್ರಗತಿ, ಪರಸ್ಪರ ಸಂಪರ್ಕ ಮತ್ತು ತಂತ್ರಜ್ಞಾನಗಳ ವಿಷಯದ‌ ಮೇಲೆ‌ ಕೇಂದ್ರಿತವಾಗಿದೆ. ''''''''ಯುವ ಸಂಗಮ'''''''' ಉಪಕ್ರಮವು ದೇಶದ ವಿವಿಧ ಭಾಗಗಳ ಯುವಜನರಿಗೆ ಪ್ರಯಾಣಿಸಲು, ಪರಸ್ಪರ ಸಂವಾದ ನಡೆಸಲು ಮತ್ತು ಭಾರತದ ಸಾಂಸ್ಕೃತಿಕ, ಸಾಮಾಜಿಕ ಹಾಗೂ ಅಭಿವೃದ್ಧಿಪರ ವೈವಿಧ್ಯತೆಯನ್ನು ನೇರವಾಗಿ ಅನುಭವಿಸಲು ವೇದಿಕೆಯನ್ನು ಒದಗಿಸುತ್ತಿದೆ ಎಂದು ಪ್ರೊ.ಬಟ್ಟು ಸತ್ಯನಾರಾಯಣ ತಿಳಿಸಿದರು.ಕರ್ನಾಟಕ ಮತ್ತು ಮಧ್ಯಪ್ರದೇಶದ ಯುವಜನರು ಪರಸ್ಪರರಿಂದ ಕಲಿಯಲು, ಒಬ್ಬರ ಸಾಂಸ್ಕೃತಿಕ ಸಂಪ್ರದಾಯಗಳನ್ನು ಮತ್ತೊಬ್ಬರು ಪರಿಚಯಿಸಿಕೊಳ್ಳಲು ಹಾಗೂ ಭಾರತದ ಶ್ರೀಮಂತ ಮತ್ತು ವೈವಿಧ್ಯಮಯ ಸಾಂಸ್ಕೃತಿಕ ಪರಂಪರೆಯ ಬಗ್ಗೆ ಆಳವಾದ ಅರಿವು ಬೆಳೆಸಿಕೊಳ್ಳಲು ಅವಕಾಶ ಕಲ್ಪಿಸುವ ಮೂಲಕ ''''''''ಏಕ್ ಭಾರತ್ ಶ್ರೇಷ್ಠ ಭಾರತ್'''''''' ಪರಿಕಲ್ಪನೆಯನ್ನು ಮತ್ತಷ್ಟು ಬಲಪಡಿಸುವುದು ಈ ವಿನಿಮಯ ಕಾರ್ಯಕ್ರಮದ ಉದ್ದೇಶವಾಗಿದೆ ಎಂದು ಹೇಳಿದರು.ಕರ್ನಾಟಕ ಮತ್ತು ಮಧ್ಯಪ್ರದೇಶದ ನಡುವಿನ ಯುವ ಸಂಗಮ 7ನೇ ಹಂತದ ವಿನಿಮಯ ಕಾರ್ಯಕ್ರಮವು ಸಾಂಸ್ಕೃತಿಕ ಕಲಿಕೆ, ಯುವಜನರ ನಡುವಿನ ಸಂವಾದ ಮತ್ತು ಪರಸ್ಪರ ತಿಳುವಳಿಕೆಗೆ ಅವಕಾಶ ಕಲ್ಪಿಸುವುದರ ಜೊತೆಗೆ, ರಾಷ್ಟ್ರೀಯ ಏಕತೆ ಹಾಗೂ ''''''''ವೈವಿಧ್ಯತೆಯಲ್ಲಿ ಏಕತೆ''''''''ಯ ಭಾವನೆಯನ್ನು ಮತ್ತಷ್ಟು ಬಲಪಡಿಸಲಿದೆ ಎಂದ ಅವರು ಕರ್ನಾಟಕದಲ್ಲಿ ಸಿ.ಯು.ಕೆ ಮತ್ತು ಮಧ್ಯಪ್ರದೇಶದಲ್ಲಿ ಭೋಪಾಲ ಸ್ಕೂಲ್ ಆಫ್ ಪ್ಲಾನಿಂಗ್ & ಆರ್ಕಿಟೆಕ್ಚರ್ ಸಂಸ್ಥೆ ಸಮನ್ವಯ ಮತ್ತು‌ ನಿಯೋಗದ ಆತಿಥ್ಯ ಜವಾಬ್ದಾರಿ ವಹಿಸಲಿವೆ ಎಂದರು.ಇದೇ‌ ಸಂದರ್ಭ ಕುಲಪತಿ ಪ್ರೊ. ಬಟ್ಟು ಸತ್ಯನಾರಾಯಣ ಅವರು ಯುವ ಸಂಗಮ ಕಾರ್ಯಕ್ರಮದ ಪೋಸ್ಟರ್ ಬಿಡುಗಡೆ ಮಾಡಿದರು. ಕುಲಸಚಿವ ಪ್ರೊ.ಆರ್.ಆರ್.ಬಿರಾದಾರ, ಸಾರ್ವಜನಿಕ‌ ಸಂಪರ್ಕಾಧಿಕಾರಿ ಡಾ.ಗಣಪತಿ ಬಿ. ಸಿನ್ನೂರ್, ಸಹಾಯಕ ಕುಲಸಚಿವ ಮತ್ತು ಸಾರ್ವಜನಿಕ ಸಂಪರ್ಕಾಧಿಕಾರಿ ಶ್ರೀಕಾಂತ ಎಂ. ಕುಸೂರ, ಕಾನೂನು ನಿಕಾಯದ ಡೀನ್ ಪ್ರೊ. ಬಸವರಾಜ ಎಂ.ಕುಬ್ಬಕಡ್ಡಿ, ರಸಾಯನಶಾಸ್ತ್ರ ವಿಭಾಗದ ಪ್ರಾಧ್ಯಾಪಕ ಪ್ರೊ.ವೆಂಕಟರಮಣದೊಡ್ಡಿ, ಯುವ ಸಂಗಮ ನೋಡಲ್ ಅಧಿಕಾರಿ ಡಾ.ಶಿವಾ, ಕಾರ್ಯಕ್ರಮ‌ ಸಂಚಾಲಕ ಡಾ.ಜಗದೀಶ‌ ಬಿರಾದರ ಇದ್ದರು.