ಸಾರಾಂಶ
ಸವಣೂರು: ಶಾಲಾ ವಾಹನ ಚಾಲನೆ ಸಂದರ್ಭದಲ್ಲಿ ಚಾಲಕನಿಗೆ ಹೃದಯಾಘಾತ ಸಂಭವಿಸಿ ಸ್ಥಳದಲ್ಲಿಯೇ ಮೃತಪಟ್ಟ ಘಟನೆ ತಾಲೂಕಿನ ಹೊಸಳ್ಳಿ ಹಾಗೂ ಕಳಲಕೊಂಡ ಗ್ರಾಮಗಳ ಮಧ್ಯೆ ಬುಧವಾರ ಸಂಜೆ ನಡೆದಿದೆ. ವಾಹನದಲ್ಲಿದ್ದ ವಿದ್ಯಾರ್ಥಿಗಳು ಪಾರಾಗಿದ್ದಾರೆ.ಪಟ್ಟಣದ ಐ.ಎಸ್. ಮರೋಳ ಆಂಗ್ಲ ಮಾಧ್ಯಮ ಶಾಲೆಯ ಬಸ್ ಚಾಲಕ, ಹೊಸಳ್ಳಿ ಗ್ರಾಮದ ನಿವಾಸಿ ಫಕ್ಕಿರೇಶ ಉಮೇಶ ಮಲ್ಲೇಶಣ್ಣನವರ(25) ಹೃದಯಾಘಾತದಿಂದ ಸಾವಿಗೀಡಾದ ವ್ಯಕ್ತಿ.ಬುಧವಾರ ಸಂಜೆ ಶಾಲಾ ಅವಧಿ ಮುಗಿಯುತ್ತಿದ್ದಂತೆ ಮಕ್ಕಳನ್ನು ಗ್ರಾಮಗಳಿಗೆ ತಲುಪಿಸಲು ಸವಣೂರಿನ ಐ.ಎಸ್. ಮರೋಳ ಆಂಗ್ಲ ಮಾಧ್ಯಮ ಶಾಲೆಯಿಂದ ಹುರಳಿಕುಪ್ಪಿ, ತೊಂಡೂರು, ಹೊಸಳ್ಳಿ, ತಳ್ಳಳ್ಳಿ ಮಾರ್ಗವಾಗಿ ಕಳಲಕೊಂಡ ಗ್ರಾಮಕ್ಕೆ ಹೊರಟಿದ್ದ. ವಾಹನ ಚಾಲನೆ ಸಂದರ್ಭದಲ್ಲಿ ಚಾಲಕ ಫಕ್ಕಿರೇಶನಿಗೆ ಎದೆನೋವು ಕಾಣಿಸಿಕೊಂಡಿದೆ. ಕೂಡಲೇ ಆತ ಬಸ್ಅನ್ನು ರಸ್ತೆಬದಿ ನಿಲ್ಲಿಸಿದ್ದಾರೆ. ಆಗ ವಿದ್ಯಾರ್ಥಿಗಳಿಂದ ನೀರು ಪಡೆದು ಕುಡಿದು ಬಸ್‍ನಲ್ಲಿ ಮಲಗಿದ್ದಾನೆ. ಮಲಗಿದ್ದಾಗಲೇ ಪ್ರಾಣ ಬಿಟ್ಟಿದ್ದಾನೆ ಎನ್ನಲಾಗಿದೆ. ಆಗ ವಾಹನದಲ್ಲಿ 18 ವಿದ್ಯಾರ್ಥಿಗಳು ಇದ್ದರು.
ಘಟನೆ ನಡೆದ ಸ್ಥಳದಲ್ಲಿ ವಿದ್ಯಾರ್ಥಿಗಳ ಕೂಗಾಟ ಕೇಳಿ ದಾರಿಹೋಕರು ಶಾಲೆಯವರಿಗೆ ಮಾಹಿತಿ ನೀಡಿದ್ದಾರೆ. ಅಲ್ಲದೇ ದಾರಿಹೋಕರಲ್ಲಿ ಚಾಲನೆ ಗೊತ್ತಿರುವ ಓರ್ವ ವ್ಯಕ್ತಿ ವಾಹನವನ್ನು ಚಲಾಯಿಸಿ ವಿದ್ಯಾರ್ಥಿಗಳನ್ನು ಕಳಲಕೊಂಡದಲ್ಲಿ ಇಳಿಸಿ, ಬಳಿಕ ವಾಹನವನ್ನು ನೇರವಾಗಿ ಸವಣೂರು ಸಾರ್ವಜನಿಕ ಆಸ್ಪತ್ರೆಗೆ ತಂದಿದ್ದಾನೆ. ಆಸ್ಪತ್ರೆಯ ವೈದ್ಯರು ಫಕ್ಕೀರೇಶನನ್ನು ಪರೀಕ್ಷಿಸಿದ್ದು, ಅಷ್ಟರಲ್ಲಾಗಲೇ ಅವರು ಸಾವಿಗೀಡಾಗಿದ್ದರು.ಕೆಲ ದಿನಗಳ ಹಿಂದಷ್ಟೇ ಜನ್ಮದಿನ ಆಚರಿಸಿಕೊಂಡಿದ್ದ ಮೃತ ಚಾಲಕ ಫಕೀರೇಶನಿಗೆ ಪಾರ್ಶ್ವವಾಯುದಿಂದ ಬಳಲುತ್ತಿರುವ ತಂದೆ ಹಾಗೂ ತಾಯಿ, ಸಹೋದರಿ ಇದ್ದಾರೆ. ಮೃತ ಚಾಲಕನ ಮನೆಯಲ್ಲಿ ಹೆತ್ತವರ ಆಕ್ರಂದನ ಮುಗಿಲು ಮುಟ್ಟಿತ್ತು. ಈ ಕುರಿತು ಸವಣೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಅಡಕೆ ಬೆಳೆಯ ರೋಗ ನಿರ್ವಹಣೆಯ ತರಬೇತಿ
ರಾಣಿಬೆನ್ನೂರು: ತಾಲೂಕಿನ ನೂಕಾಪುರ ಗ್ರಾಮದ ಭಕ್ತ ಪ್ರಹ್ಲಾದ ಶೆಟ್ಟಿ ಅವರ ಕ್ಷೇತ್ರದಲ್ಲಿ ಹನುಮನಮಟ್ಟಿ ಕೃಷಿ ವಿಜ್ಞಾನ ಕೇಂದ್ರದ ವತಿಯಿಂದ ಅಡಕೆ ಬೆಳೆಯಲ್ಲಿ ಸಮಗ್ರ ಕೀಟ ಹಾಗೂ ರೋಗ ನಿರ್ವಹಣೆ ಕುರಿತು ರೈತರಿಗೆ ತರಬೇತಿ ಕಾರ್ಯಕ್ರಮ ಜರುಗಿತು.ಹನುಮನಮಟ್ಟಿ ಕೃಷಿ ವಿಜ್ಞಾನ ಕೇಂದ್ರದ ಹಿರಿಯ ವಿಜ್ಞಾನಿ ಹಾಗೂ ಮುಖ್ಯಸ್ಥ ಡಾ. ಎ.ಎಚ್. ಬಿರಾದಾರ ಮಾತನಾಡಿ, ಅಡಕೆಗೆ ಬರುವ ಕೆಂಪು ನುಶಿ, ಸಸ್ಯ ಹೇನು ಹಾಗೂ ಗೊಣ್ಣೆ ಹುಳುವಿನ ಸಮಗ್ರ ಕೀಟ ನಿರ್ವಹಣೆ ಹಾಗೂ ಎರೆಹುಳು ಗೊಬ್ಬರ ತಯಾರಿಕೆ, ಉಪಯೋಗದ ಕುರಿತು ಮಾಹಿತಿ ನೀಡಿದರು.ಅಡಕೆ ಬೆಳೆಯಲ್ಲಿ ನಾಟಿ ಪದ್ಧತಿ, ತಳಿಗಳ ಆಯ್ಕೆ, ಸಮಗ್ರ ಪೋಷಕಾಂಶಗಳ ನಿರ್ವಹಣೆ, ಹಸಿರೆಲೆ ಗೊಬ್ಬರದ ಬಳಕೆ, ಅಂತರ ಬೇಸಾಯ ಪದ್ಧತಿಗಳು, ಕೊಯ್ಲೋತ್ತರ ನಿರ್ವಹಣೆ ಮತ್ತು ಹಿಡಿ ಮುಂಡಿಗೆ ರೋಗದ ನಿರ್ವಹಣೆ ಬಗ್ಗೆ ಕೇಂದ್ರದ ತೋಟಗಾರಿಕೆ ವಿಜ್ಞಾನಿ ಡಾ. ಸಂತೋಷ ಎಚ್.ಎಂ. ಅವರು ವಿವರವಾಗಿ ಮಾಹಿತಿ ನೀಡಿದರು.
ಅಡಕೆಗೆ ಬರುವ ಕೊಳೆ ರೋಗ, ಸುಳಿಕೊಳೆ ರೋಗ, ಹೂಗೊಂಚಲು ಒಣಗುವ ರೋಗ ಹಾಗೂ ಅಣಬೆ ರೋಗದ ಲಕ್ಷಣಗಳು ಮತ್ತು ನಿರ್ವಹಣೆ ಕುರಿತು ಸಸ್ಯ ಸಂರಕ್ಷಣೆಯ ವಿಷಯತಜ್ಞೆ ಡಾ. ಬಸಮ್ಮ ಹಾದಿಮನಿ ಮಾಹಿತಿ ನೀಡಿದರು.ತರಬೇತಿಯಲ್ಲಿ ನೂಕಾಪುರ ಹಾಗೂ ಸುತ್ತಮುತ್ತಲಿನ ಗ್ರಾಮಗಳ ಸುಮಾರು 35 ಅಡಕೆ ಬೆಳೆಗಾರರು ಮಾಹಿತಿ ಪಡೆದುಕೊಂಡರು.