ಸಾರಾಂಶ
ದಾಬಸ್‍ಪೇಟೆ: ತ್ಯಾಮಗೊಂಡ್ಲು ಪಟ್ಟಣದ ಹೊಸ ಕಾಲೋನಿಯ ಸರ್ಕಾರಿ ಪ್ರಾಥಮಿಕ ಶಾಲಾ ಕೊಠಡಿ ಮೇಲ್ಛಾವಣಿಯ ಕಾಂಕ್ರೀಟ್ ಪದರ ಉದುರಿ ಬಿದ್ದು ಒಬ್ಬ ವಿದ್ಯಾರ್ಥಿಗೆ ಗಾಯವಾಗಿದ್ದು, ಇನ್ನುಳಿದ ವಿದ್ಯಾರ್ಥಿಗಳು ಆಶ್ಚರ್ಯಕರ ರೀತಿಯಲ್ಲಿ ಪಾರಾಗಿದ್ದಾರೆ.ಕೊಠಡಿಯಲ್ಲಿ ಮಕ್ಕಳು ಮಧ್ಯಾಹ್ನ ಊಟ ಮಾಡುವ ವೇಳೆ ಏಕಾಏಕಿ ಮೇಲ್ಛಾವಣಿಯ ಕಾಂಕ್ರಿಟ್ ಪದರ ಉದುರಿ ಮಕ್ಕಳ ಮೇಲೆ ಬಿದ್ದಿದೆ. 1ನೇ ತರಗತಿ ವಿದ್ಯಾರ್ಥಿ ರಘು ತಲೆ ಭಾಗಕ್ಕೆ ಪೆಟ್ಟಾಗಿದ್ದು, ಕೂಡಲೇ ಸರ್ಕಾರಿ ಆಸ್ಟತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ಕೋಡಿಸಿದ್ದಾರೆ.ಕಳಪೆ ಕಾಮಗಾರಿ: ಕಳೆದ ಎರಡು ವರ್ಷಗಳ ಹಿಂದೆ ಶಿಥಿಲಗೊಂಡಿದ್ದ ಕಟ್ಟಡವನ್ನು 3.99 ಲಕ್ಷ ರು. ವೆಚ್ಚದಲ್ಲಿ ದುರಸ್ತಿ ಮಾಡಲಾಗಿತ್ತು. ಕಳಪೆ ಕಾಮಗಾರಿಯಿಂದ ಕಾಂಕ್ರೀಟ್ ಉದುರಿ ಬಿದ್ದಿದ್ದು, ಗುತ್ತಿಗೆದಾದರ ಮೇಲೆ ಕ್ರಮ ಕೈಗೊಳುವಂತೆ ಪೋಷಕರು ಒತ್ತಾಯಿಸಿದ್ದಾರೆ.ವಿಷಯ ತಿಳಿದ ಬಿಇಒ ರಮೇಶ್ ಸ್ಥಳೀಯ ಸಿಆರ್‌ಪಿ ಸುಕನ್ಯಾ ಅವರೊಂದಿಗೆ ಮಾತನಾಡಿ, ಶಾಲೆಗೆ ಭೇಟಿ ನೀಡಿ ವಿದ್ಯಾರ್ಥಿಗಳ ಆರೋಗ್ಯ ವಿಚಾರಿಸಿದರು. ತಲೆ ಭಾಗಕ್ಕೆ ಪೆಟ್ಟಾಗಿದ್ದ ವಿದ್ಯಾರ್ಥಿಯ ಹೆಚ್ಚಿನ ಚಿಕಿತ್ಸೆಗೆ ಇಲಾಖೆಯಿಂದ ಸಾಧ್ಯವಿರುವ ಎಲ್ಲಾ ಕ್ರಮಗಳನ್ನು ಕೈಗೊಳುತ್ತೇವೆ ಹಾಗೂ ಆ ಕೊಠಡಿಯಲ್ಲಿ ಮತ್ತೆ ತರಗತಿಗಳು ನಡೆಸದಂತೆ ಶಿಕ್ಷಕರಿಗೆ ಸೂಚಿಸಿದ್ದಾರೆ.ಪೋಟೋ 6 : ತ್ಯಾಮಗೊಂಡ್ಲು ಪಟ್ಟಣದ ಹೊಸ ಕಾಲೋನಿಯಲ್ಲಿರುವ ಸರ್ಕಾರಿ ಪ್ರಾಥಮಿಕ ಶಾಲೆಯ ಕೊಠಡಿಯ ಮೇಲ್ಛಾವಣಿಯ ಸಿಮೆಂಟ್ ಕಾಂಕ್ರೀಟ್ ಪದರ ಉದುರಿ ಬಿದ್ದಿರುವುದು.