ಕೊಡಗು ವಿದ್ಯಾಲಯ: ವಿದ್ಯಾರ್ಥಿ ನಾಯಕರ ಪದಗ್ರಹಣ

| Published : Jul 21 2025, 12:00 AM IST

ಸಾರಾಂಶ

ಶಿಕ್ಷಣದ ಗುರಿ ಕೇವಲ ಯಶಸ್ಸನ್ನು ಸಾಧಿಸುವುದಲ್ಲ. ಜೀವನದಲ್ಲಿ ಎದುರಾಗುವ ಸೋಲುಗಳನ್ನು ಧೈರ್ಯದಿಂದ ಎದುರಿಸುವುದನ್ನು ಕಲಿಸುವುದು ಶಿಕ್ಷಣದ ಧ್ಯೇಯವಾಗಿದೆ ಎಂದು ಹಿರಿಯ ವಕೀಲ ಎಂ. ಎಂ. ನಿರಂಜನ್‌ ಹೇಳಿದರು.

ಕನ್ನಡಪ್ರಭ ವಾರ್ತೆ ಮಡಿಕೇರಿ

ಶಿಕ್ಷಣದ ಗುರಿ ಕೇವಲ ಯಶಸ್ಸನ್ನು ಸಾಧಿಸುವುದಲ್ಲ, ಜೀವನದಲ್ಲಿ ಎದುರಾಗುವ ಸೋಲುಗಳನ್ನು ಧೈರ್ಯದಿಂದ ಎದುರಿಸುವುದನ್ನು ಕಲಿಸುವುದೂ ಶಿಕ್ಷಣದ ಧ್ಯೇಯವಾಗಿದೆ ಎಂದು ಹಿರಿಯ ವಕೀಲ ಎಂ.ಎಂ. ನಿರಂಜನ್ ಹೇಳಿದ್ದಾರೆ.ನಗರದ ಕೊಡಗು ವಿದ್ಯಾಲಯದಲ್ಲಿ ಆಯೋಜಿಸಲಾಗಿದ್ದ ವಿದ್ಯಾರ್ಥಿ ನಾಯಕರ ಪದಗ್ರಹಣ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು.

ಮೊಬೈಲ್ ಫೋನ್‌ಗಳ ಅತಿಯಾದ ಬಳಕೆಯ ಬಗ್ಗೆ ಎಚ್ಚರಿಸಿದ ಅವರು, ಮೊಬೈಲ್ ಫೋನ್ ಯುವಜನರ ಮತ್ತು ಮಕ್ಕಳ ಕೈಯಲ್ಲಿರುವ ಬಾಂಬ್‌ನಂತೆ ಆಗಿದೆ. ಅದು ನಮ್ಮ ಕುಟುಂಬ ಸಂಬಂಧಗಳನ್ನು ಹಾಳುಮಾಡುತ್ತಿದೆ. ಹಿಂದಿನ ದಿನಗಳಲ್ಲಿ ರಜಾ ಸಿಕ್ಕಿದಾಗ ಮಕ್ಕಳು ಅಜ್ಜಿ-ತಾತನ ಮನೆಗೆ ಹೋಗಿ ಸಂಭ್ರಮಿಸುತ್ತಿದ್ದರು. ಆದರೆ ಇಂದು, ಕುಟುಂಬದ ಪ್ರತಿಯೊಬ್ಬರೂ ತಮ್ಮ ತಮ್ಮ ಫೋನ್‌ಗಳ ಬಳಕೆಯಿಂದ ವಾಟ್ಸಾಪ್ ಸಂದೇಶಗಳ ಮೂಲಕವೇ ಸಂವಹನ ನಡೆಸುವಂತಾಗಿದೆ. ಇದು ವಾಸ್ತವ ಮತ್ತು ತಿಳುವಳಿಕೆಯ ಕೊರತೆಗೆ ಕಾರಣವಾಗಿದೆ ಎಂದರು.

ಶಾಲಾ ಪ್ರಾಂಶುಪಾಲ ಸುಮಿತ್ರ ಕೆ.ಎಸ್., ಆಡಳಿತ ನಿರ್ವಹಣಾ ಅಧಿಕಾರಿ ರವಿ ಪಿ., ಬೋಧಕ ಬೋಧಕೇತರ ಸಿಬ್ಬಂದಿ ವರ್ಗ, ಪೋಷಕರು ಪಾಲ್ಗೊಂಡಿದ್ದರು. ನೂತನವಾಗಿ ಆಯ್ಕೆಯಾದ ಶಾಲಾ ನಾಯಕರಿಗೆ ಇದೇ ಸಂದರ್ಭ ಪ್ರಮಾಣ ವಚನ ಬೋಧಿಸಿ, ಅವರಿಗೆ ಜವಾಬ್ದಾರಿಗಳನ್ನು ಹಸ್ತಾಂತರಿಸಲಾಯಿತು.