ಕನ್ನಡಪ್ರಭ ವಾರ್ತೆ ಮೈಸೂರು

ವಿದ್ಯಾರ್ಥಿಗಳ ಕಲಿಕಾ ಮಟ್ಟವನ್ನು ಹೆಚ್ಚಿಸಲು ಗುಣಮಟ್ಟದ ಬೋಧನೆ ಅತ್ಯಗತ್ಯ ಎಂದು ಜಿಪಂ ಸಿಇಒ ಯುಕೇಶ್ ಕುಮಾರ್ ತಿಳಿಸಿದರು.

ಜಿಪಂನ ಡಿ. ದೇವರಾಜ ಅರಸು ಸಭಾಂಗಣದಲ್ಲಿ ಆಯೋಜಿಸಿದ್ದ ಮೈಸೂರು ಜಿಲ್ಲೆಯ ಪದವಿ ಪೂರ್ವ ಕಾಲೇಜುಗಳ ಶೈಕ್ಷಣಿಕ ಫಲಿತಾಂಶವನ್ನು ಉತ್ತಮಗೊಳಿಸುವ ಉದ್ದೇಶದಿಂದ ಆಯೋಜಿಸಿದ್ದ ಸಭೆಯ ಆಧ್ಯಕ್ಷತೆ ವಹಿಸಿ ಮಾತನಾಡಿದರು.

ಉಪನ್ಯಾಸಕರು ಮಕ್ಕಳ ಸಾಮರ್ಥ್ಯವನ್ನು ಗುರುತಿಸಿ, ವೈಯಕ್ತಿಕ ಗಮನ ನೀಡುವ ಮೂಲಕ ಫಲಿತಾಂಶ ಸುಧಾರಿಸಬೇಕು. ದುರ್ಬಲ ವಿದ್ಯಾರ್ಥಿಗಳಿಗಾಗಿ ವಿಶೇಷ ತರಗತಿ, ಮರುಪಠಣ, ಪರೀಕ್ಷಾ ಪೂರ್ವ ತಯಾರಿ ಶಿಬಿರಗಳನ್ನು ಪರಿಣಾಮಕಾರಿಯಾಗಿ ನಡೆಸುವಂತೆ ಸೂಚಿಸಿದರು.

ಪಿಯುಸಿ ಪರೀಕ್ಷೇಯಲ್ಲಿ ಕೈಗೊಳ್ಳಬೇಕಾದ ಅಗತ್ಯ ಕ್ರಮಗಳ ಕುರಿತು ಮಹತ್ವದ ಮಾಹಿತಿ ನೀಡಿದರು. ಪೂರ್ವ ಸಿದ್ಧತಾ ಪರೀಕ್ಷೆಯಲ್ಲಿ ಒಂದು ಮತ್ತು ಎರಡು ವಿಷಯದಲ್ಲಿ ಅನುತ್ತೀರ್ಣವಾದ ವಿದ್ಯಾರ್ಥಿಗಳನ್ನು ಗುರುತಿಸಿ ಅವರ ಮೇಲೆ ವಿಶೇಷ ಕಾಳಜಿ ವಹಿಸಿ ಅವರನ್ನು ಕಡ್ಡಾಯವಾಗಿ ಮುಂಬರುವ ವಾರ್ಷಿಕ ಪರೀಕ್ಷೆಯಲ್ಲಿ ಸಫಲತೆ ಕಾಣುವಲ್ಲಿ ಶ್ರಮವಹಿಸಬೇಕು ಎಂದು ಅವರು ಹೇಳಿದರು.


ಹಿಂದಿನ ವರ್ಷದ ಪರೀಕ್ಷಾ ಫಲಿತಾಂಶಗಳ ವಿಶ್ಲೇಷಣೆ ನಡೆಸಿ, ವಿಷಯವಾರು ಕೊರತೆಗಳನ್ನು ಗುರುತಿಸುವುದು ಅಗತ್ಯವಿದೆ. ಪ್ರತಿಯೊಂದು ಕಾಲೇಜು ತನ್ನದೇ ಆದ ಕ್ರಿಯಾ ಯೋಜನೆ ರೂಪಿಸಿಕೊಂಡು ಕಾರ್ಯಗತಗೊಳಿಸಬೇಕು ಎಂದು ತಿಳಿಸಿದರು.

ಶಿಕ್ಷಕರ ಹಾಜರಾತಿ, ಪಾಠ ಬೋಧನಾ ವಿಧಾನ, ವಿದ್ಯಾರ್ಥಿಗಳ ನಿರಂತರ ಮೌಲ್ಯಮಾಪನಕ್ಕೆ ಹೆಚ್ಚಿನ ಒತ್ತು ನೀಡುವಂತೆ ಸಲಹೆ ನೀಡಿದರು.

ಡಿಡಿಪಿಯು ಎಂ.ಪಿ. ನಾಗಮ್ಮ ಅವರು ಪದವಿ ಪೂರ್ವ ಕಾಲೇಜುಗಳಲ್ಲಿ ಫಲಿತಾಂಶ ಸುಧಾರಣೆಗೆ ಕೈಗೊಂಡ ಕಾರ್ಯಕ್ರಮಗಳ ಕುರಿತು ಮಾಹಿತಿ ನೀಡಿದರು. ಜಿಲ್ಲೆಯ ಎಲ್ಲಾ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರು ಪಾಲ್ಗೊಂಡಿದ್ದರು.