ಇದೊಂದು ಗೋಲ್ಡನ್ ಟೈಮ್. ಇಟಗಿಯ ಈ ಶಾಲೆಯಲ್ಲಿ ಇಬ್ಬರು ಶಾಸಕರಾಗಿದ್ದಾರೆ. ಜೀವನ ಕಟ್ಟೊ ಕೆಲಸ ಶಾಲೆ ಮಾಡಿದೆ, ಶಾಲೆ ಕಟ್ಟುವ ಕೆಲಸ ಹಳೆ ವಿದ್ಯಾರ್ಥಿಗಳು ಮಾಡಬೇಕು.

ಕುಕನೂರು: ಎಷ್ಟೇ ಎತ್ತರಕ್ಕೆ ಬೆಳೆದರೂ ಎಂದಿಗೂ ಮರೆಯಲಾಗದ ಕ್ಷಣವೆಂದರೆ ಅದು ವಿದ್ಯಾರ್ಥಿ ಜೀವನ ಎಂದು ಸಂಸದ ರಾಜಶೇಖರ ಹಿಟ್ನಾಳ ಹೇಳಿದರು.

ತಾಲೂಕಿನ ಇಟಗಿ ಗ್ರಾಮದ ಸರ್ಕಾರಿ ಮಾದರಿಯ ಪ್ರಾಥಮಿಕ ಶಾಲೆಯ ವಜ್ರಮಹೋತ್ಸವದ ಎರಡನೇ ದಿನದ ಕಾರ್ಯಕ್ರಮ ಉದ್ಘಾಟಿಸಿ ಭಾನುವಾರ ಮಾತನಾಡಿದ ಅವರು, ಸ್ವಾತಂತ್ರ್ಯ ನಂತರ ಕೆಲವೇ ಶಾಲೆಗಳು ಆರಂಭವಾದವು. ಅದರಲ್ಲಿ ಇಟಗಿ ಶಾಲೆ ಗ್ರಾಮದ ಈ ಶಾಲೆ ಒಂದು. ವಿದ್ಯಾರ್ಥಿ ಜೀವನ ಜೀವಮಾನವರೆಗೆ ಕೊನೆವರೆಗೂ ಮರೆಲಾಗುವುದಿಲ್ಲ. ಇದೊಂದು ಗೋಲ್ಡನ್ ಟೈಮ್. ಇಟಗಿಯ ಈ ಶಾಲೆಯಲ್ಲಿ ಇಬ್ಬರು ಶಾಸಕರಾಗಿದ್ದಾರೆ. ಜೀವನ ಕಟ್ಟೊ ಕೆಲಸ ಶಾಲೆ ಮಾಡಿದೆ, ಶಾಲೆ ಕಟ್ಟುವ ಕೆಲಸ ಹಳೆ ವಿದ್ಯಾರ್ಥಿಗಳು ಮಾಡಬೇಕು. ನಾನು ಕಲಿತ ನಮ್ಮೂರ ಹಿಟ್ನಾಳ್ ಗ್ರಾಮದ ಶಾಲೆಗೆ ನಾಲ್ಕು ಕೋಟಿ ಅನುದಾನದಲ್ಲಿ ಹೈಟೆಕ್ ಶಾಲೆ ಮಾಡುವ ಯೋಜನ ಹೊಂದಿದ್ದೇನೆ. ಏಕೆಂದರೆ ಅಲ್ಲಿ ನಾವು ಕಲಿತ ಅಭಿಮಾನ. ಶಾಲೆಗೆ ನಿರ್ಮಾಣಕ್ಕೆ ಭೂಮಿ ದಾನ ಮಾಡಿರುವುದು ಅನನ್ಯ ಕಾರ್ಯ. ಭೂ ದಾನಿಗಳ ಕಂಚಿನ ಮೂರ್ತಿ ನಿರ್ಮಾಣ ಕಾರ್ಯ ಯುವಪೀಳಿಗೆಗೆ ಮಾದರಿ. ನಾನು ಸಹ ಇಟಗಿ ಸರ್ಕಾರಿ ಶಾಲಾ ಅಭಿವೃದ್ಧಿಗೆ ಅನುದಾನ ನೀಡಲು ಸಿದ್ಧನಿದ್ದೇನೆ ಎಂದರು.

ಎಂಎಲ್ಸಿ ಹೇಮಲತಾ ನಾಯಕ ಮಾತನಾಡಿ, ಶಿಕ್ಷಣ ದಾಹ ಎಂಬುದು ಮುಗಿಯದ ಹಸಿವು. ಸದಾ ಕಲಿಯುತ್ತಾ ಇರಬೇಕು. ಅದಕ್ಕೆ ವಿದಾಯ ಇಲ್ಲ. ಕನ್ನಡ ಶಾಲೆಗೆ ಒತ್ತು ಬಂದಿದೆ. ಸರ್ಕಾರಿ ಕನ್ನಡ ಶಾಲೆಯಲ್ಲಿ ಮಕ್ಕಳಿದ್ದಾರೆ ಶಿಕ್ಷಕರಿಲ್ಲ.ಶಿಕ್ಷಣ ವ್ಯಾಪಾರ ಮನೋಭಾವ ಆಗಿದೆ. ಕುಣಿಕೇರಿಯ ಹುಚ್ಚಮ್ಮ ಚೌಧರಿ ಅಂತಯೇ ಇಲ್ಲಿ ಸಹ ಶಾಲೆಗೆ ಭೂಮಿ ದಾನ ಮಾಡಿದ್ದಾರೆ. ಗುಡಿ ಗಂಟೆಗಿಂತ ಶಾಲೆ ಗಂಟೆ ಕೇಳಬೇಕು. ಶಿಕ್ಷಣ, ಆರೋಗ್ಯ,ಅಭಿವೃದ್ಧಿ ಕಾರ್ಯಗಳಾಗಬೇಕು. ಸರ್ಕಾರಕ್ಕೆ ಸವಾಲು ಹಾಕಿ ಮಠಗಳು ಸಹ ತ್ರಿವಿಧ ದಾಸೋಹ ಮಾಡುತ್ತಿದ್ದಾರೆ ಎಂದರು.

ಬಿಜೆಪಿ ನಿಕಟಪೂರ್ವ ಜಿಲ್ಲಾಧ್ಯಕ್ಷರ ನವೀನ ಗುಳಗಣ್ಣವರ ಮಾತನಾಡಿ, ಇಟಗಿ ಶಾಲೆಯ ವಜ್ರಮಹೋತ್ಸವ ಕಾರ್ಯಕ್ರಮದಿಂದ ಗ್ರಾಮದ ಹಿರಿಮೆ ಹೆಚ್ಚಿದೆ. ಸರ್ಕಾರಿ ಶಾಲೆಗಳಲ್ಲಿ ಕಲಿತ ವಿದ್ಯಾರ್ಥಿಗಳೆಂಬ ಅನೇಕ ದೀಪಗಳು ನಾನಾ ರಂಗದಲ್ಲಿ ತಮ್ಮ ಕರ್ತವ್ಯ ಮೂಲಕ ಬೆಳಕು ಚೆಲ್ಲಿವೆ. ಹೆತ್ತವರ, ಗುರುಗಳ ಹಾಗೂ ಶಾಲೆಯ ಋಣ ಎಂದಿಗೂ ತೀರಿಸಲು ಆಗದು. ಆ ನಿಟ್ಟಿನಲ್ಲಿ ವಜ್ರಮಹೋತ್ಸವ ಕಾರ್ಯಕ್ರಮದಿಂದ ಒಂದು ಅಳಿಲು ಸೇವಾ ಕಾರ್ಯ ಆಗಿದೆ ಎಂದರು.

ಸಾಹಿತಿ ಬಿ.ಎಂ.ಹಳ್ಳಿ ಮಾತನಾಡಿ, ಮಗುವಿನ ಸರ್ವತೋಮುಖ ಅಭಿವೃದ್ಧಿಯೇ ಶಿಕ್ಷಣ. ಬಾಲಕ,ಪಾಲಕ, ಶಿಕ್ಷಕ ಕೂರಿಗೆ ಮೂರು ತಾಳು ಇದ್ದ ಹಾಗೇ. ಮೊಬೈಲ್ ಬಿಟ್ಟು ಮಕ್ಕಳು ಪುಸ್ತಕ ಹಿಡಿಯಿರಿ.ಶಾಲೆಗಾಗಿ ಈ ಹಿಂದೆ ಗ್ರಾಮದ ದಿ.ಕುಂಬಳಕಾಯಿ ಹನುಮಮ್ಮ ಬಾವಿ ತೆಗೆಸಿ ಬಾಯಾರಿಕೆ ನೀಗಿಸಿದ್ದಾಳೆ ಎಂದರು. ಶಿಕ್ಷಕ ಸಂಗಪ್ಪ ಗುಳಗಣ್ಣವರ, ನಿವೃತ್ತ ಶಿಕ್ಷಕ ಹಂಚ್ಯಾಳಪ್ಪ ತಳವಾರ ಮಾತನಾಡಿದರು.

ಕಂಪ್ಲಿಯ ಶ್ರೀ ಅಭಿನವ ಬಸವಲಿಂಗ ಸ್ವಾಮೀಜಿ, ಕಂಪಸಾಗರದ ಶ್ರೀ ನಾಗಭೂಷಣ ಸ್ವಾಮೀಜಿ, ಮುತ್ತಯ್ಯ ಕಳ್ಳಿಮಠ, ಲಿಂಗರಾಜು ಹೊಸಭಾವಿ, ಬಸವಪ್ರಭು ಪಾಟೀಲ್, ಅಂದಾನಪ್ಪ ಅಂಗಡಿ, ಭೂದಾನಿ ಕುಲಕರ್ಣಿ, ಸಕ್ರಪ್ಪ ಹೊಸಭಾವಿ, ವಕೀಲ ಮಲ್ಲಪ್ಪ, ಸಿದ್ದಪ್ಪ ಸಜ್ಜನ್, ಮಹೇಶ ಸಬರದ, ಶಿಕ್ಷಕ ಬ್ಯಾಹಿ, ಮಾಲತೇಶ್ ತೋಟಪ್ಪನವರ್, ವಜೀರಸಾಬ್ ತಳಕಲ್, ಶರಣಪ್ಪ ಅರಕೇರಿ, ಮಹೇಶ ಹಿರೇಮನಿ, ವೀರಣ್ಣ ಕೋನಾರಿ, ಬಿ.ಎಂ ಹಳ್ಳಿ, ಪಿಡಿಒ ಶರಣಪ್ಪ ಕೆಳಗಿನಮನಿ, ಸಂಜೀವಪ್ಪ ಸಂಗಟಿ ಇತರರಿದ್ದರು.