ಸಾರಾಂಶ
ಕನ್ನಡಪ್ರಭ ವಾರ್ತೆ ಬೈಲಹೊಂಗಲ
ಬದುಕಿನಲ್ಲೇ ವಿದ್ಯಾರ್ಥಿ ಜೀವನ ಅತ್ಯಂತ ಮಹತ್ವದ್ದಾಗಿದ್ದು, ಅದನ್ನು ಸದ್ಭಳಕೆ ಮಾಡಿಕೊಳ್ಳುವ ಮೂಲಕ ಜೀವನ ಉಜ್ವಲಗೊಳಿಸಿಕೊಳ್ಳಬೇಕೆಂದು ಮುರಗೋಡದ ಮಹಾಂತ ದುರದುಂಡೀಶ್ವರ ಮಠದ ನೀಲಕಂಠ ಸ್ವಾಮೀಜಿ ಹೇಳಿದರು.ಬೈಲವಾಡದ ಶ್ರೀ ಸಿದ್ಧಬಸವೇಶ್ವರ ಶಿಕ್ಷಣ ಸಂಸ್ಥೆಯ ಸಿದ್ಧಬಸವೇಶ್ವರ ಕನ್ನಡ ಮಾಧ್ಯಮ ಹಿರಿಯ ಪ್ರಾಥಮಿಕ ಕನ್ನಡ ಶಾಲೆಯ ವಾರ್ಷಿಕ ಸ್ನೇಹ ಸಮ್ಮೇಳನ ಮತ್ತು ಸಾಧಕರ ಸತ್ಕಾರ ಸಮಾರಂಭದಲ್ಲಿ ಅವರು ಅನಿಸಿಕೆ ವ್ಯಕ್ತಪಡಿಸಿದರು. ಮಕ್ಕಳ ಪ್ರತಿಭೆಗೆ ಪ್ರೋತ್ಸಾಹ ನೀಡುವುದು ಪ್ರಸ್ತುತ ಮುಖ್ಯವಾಗಿದೆ. ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಗುರುತಿಸಿ ಸಂಸ್ಥೆಯು ಸತ್ಕರಿಸುತ್ತಿರುವುದು ಶ್ಲಾಘನೀಯ ಎಂದರು.
ಮುಖ್ಯ ಅಥಿತಿ ಶಾಸಕ ಮಹಾಂತೇಶ ಕೌಜಲಗಿ ಮಾತನಾಡಿ, ಒಂದು ಸಂಸ್ಥೆಯನ್ನು ಕಟ್ಟಿ ಬೆಳೆಸುವುದು ಕಷ್ಟವಿದೆ. ಆದರೆ ಈ ಭಾಗದ ಮಕ್ಕಳ ಸರ್ವತೋಮುಖ ಪ್ರಗತಿಗೆ ಶ್ರಮಿಸುತ್ತಿರುವ ಸಿದ್ದಬಸವೇಶ್ವರ ಶಿಕ್ಷಣ ಸಂಸ್ಥೆಯ ಶಾಲಾ ಆಡಳಿತ ಮಂಡಳಿಯ ಕಾರ್ಯ ಮೆಚ್ಚುವಂತದ್ದಾಗಿದ್ದು, ಸಂಸ್ಥೆ ಕೆಲವೇ ಈ ವರ್ಷಗಳಲ್ಲಿ ಸಾಧನೆ ಮಾಡಿದೆ ಎಂದರು.ಕಾರ್ಯಕ್ರಮದಲ್ಲಿ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸತ್ಕರಿಸಲಾಯಿತು. ವಿವಿಧ ಕ್ಷೇತ್ರದ ಸಾಧಕರನ್ನು ಗೌರವಿಸಲಾಯಿತು. ನಿರ್ದೇಶಕ ಶಂಕರ ಸಂಪಗಾವ ವರದಿ ವಾಚನ ಮಾಡಿದರು. ಬೈಲವಾಡ ಗ್ರಾಪಂ ಅಧ್ಯಕ್ಷೆ ಗಿರಿಜಾ ಮೋದಗಿ, ಸರಕಾರಿ ಪ್ರೌಢಶಾಲೆ ಎಸ್‌ಡಿಎಂಸಿ ಅಧ್ಯಕ್ಷ ಮಂಜುನಾಥ ಮೊರಬದ, ಚಿಕ್ಕ ಮಕ್ಕಳ ತಜ್ಞ ಡಾ. ಬಿ.ಆಯ್.ಕುಂದರನಾಡ, ಮಕ್ಕಳ ಸಾಹಿತ್ಯ ಪರಿಷತ್ ತಾಲೂಕ ಅಧ್ಯಕ್ಷ ಸಿ.ವೈ.ಮೆಣಸಿನಕಾಯಿ, ಕುತುಬುದ್ದೀನ ನಧಾಪ, ಆನಂದ ಗುತ್ತಿ, ಕಸಾಪ ವಕ್ತಾರ ಮಹಾಂತೇಶ ರಾಜಗೋಳಿ, ಸಂಸ್ಥೆಯ ಅಧ್ಯಕ್ಷ ಎಂ.ಸಿ.ಪಾಟೀಲ, ವಿ.ಬಿ.ಗಣಾಚಾರಿ, ಬಿ.ಎಸ್.ಯಲ್ಲಪ್ಪಗೌಡರ, ಎಂ.ವಿ.ದೇಶನೂರ, ಎಂ.ಸಿ.ಶಿವನಾಯ್ಕರ, ಜಿ.ಬಿ.ಬೊಳಗೌಡರ ಭಾಗವಹಿಸಿದ್ದರು. ಬಿ.ವಿ.ದೇಮಟ್ಟಿ ಸ್ವಾಗತಿಸಿದರು. ವಿಜಯಲಕ್ಷ್ಮೀ ಪಾಟೀಲ ನಿರೂಪಿಸಿದರು. ಪ್ರಧಾನ ಮುಖ್ಯೋಪಾಧ್ಯಾಯ ಎಸ್.ಬಿ.ಬಂಡಿಗಿ ವಂದಿಸಿದರು.