ಕನ್ನಡಪ್ರಭ ವಾರ್ತೆ ಶಿವಮೊಗ್ಗ
ಕ್ಷುಲ್ಲಕ ಕಾರಣಕ್ಕೆ ಸ್ನೇಹಿತರ ನಡುವೆ ನಡೆದ ಗಲಾಟೆಯಲ್ಲಿ ಕೊಲೆಗೀಡಾದ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿ ಸಂಕೇತ್‌ನ ಅಂತ್ಯ ಸಂಸ್ಕಾರವನ್ನು ಪೊಲೀಸರ ಬಿಗಿ ಬಂದೋಬಸ್ತ್ ನಡುವೆ ಮಂಗಳವಾರ ಊರುಗಡೂರಿನ ಸಮೀಪದ ಗುಡ್ಡೆಮರಡಿಯ ಹಿಂದೂ ರುದ್ರಭೂಮಿಯಲ್ಲಿ ನೆರವೇರಿಸಲಾಯಿತು. ಸ್ಥಳೀಯರು ಮತ್ತು ಹಿಂದೂಪರ ಸಂಘಟನೆಗಳ ತೀವ್ರ ಆಕ್ರೋಶದಿಂದಾಗಿ ಈ ಭಾಗದಲ್ಲಿ ಪರಿಸ್ಥಿತಿ ಗಂಭೀರವಾಗಿಯೇ ಇದೆ.ಪೊಲೀಸರು ತೀವ್ರ ಬಂದೋಬಸ್ತ್ ಮಾಡಿದ್ದು, ಯಾವುದೇ ಅಹಿತಕರ ಘಟನೆ ನಡೆಯದಂತೆ ಮುನ್ನೆಚ್ಚರಿಕೆ ವಹಿಸಿದ್ದರು. ಹಿರಿಯ ಪೊಲೀಸರು ಅಧಿಕಾರಿಗಳು ಸ್ಥಳದಲ್ಲಿಯೇ ಬೀಡು ಬಿಟ್ಟಿದ್ದಾರೆ.
ಇಂದಿನಿಂದ ನಗರದಲ್ಲಿ ಶ್ರೀ ಮಾರಿಕಾಂಬಾ ಜಾತ್ರೆ ಆರಂಭಗೊಂಡಿದ್ದು, ಸಾವಿರಾರು ಜನ ಭಕ್ತರು ಸುತ್ತಮುತ್ತಲಿನ ಪ್ರದೇಶಗಳಿಂದ ನಗರಕ್ಕೆ ಆಗಮಿಸಿದ್ದು, ಈ ಹಿನ್ನೆಲೆಯಲ್ಲಿ ಪೊಲೀಸರು ಇನ್ನಷ್ಟು ಬಿಗಿಯಯಾದ ಕ್ರಮಕ್ಕೆ ಮುಂದಾಗಿದ್ದಾರೆ.ಘಟನೆಯಿಂದ ಆಕ್ರೋಶಗೊಂಡ ಸ್ಥಳೀಯರು ಮತ್ತು ಹಿಂದೂಪರ ಕಾರ್ಯಕರ್ತರು ಕೆಲ ಹೊತ್ತು ರಸ್ತೆ ತಡೆ ನಡೆಸಿ ಪ್ರತಿಭಟನೆ ನಡೆಸಿದರು. ಮಾಜಿ ಉಪ ಮುಖ್ಯಮಂತ್ರಿ ಕೆ. ಎಸ್. ಈಶ್ವರಪ್ಪ, ಶಾಸಕ ಚನ್ನಬಸಪ್ಪ ಮತ್ತಿತರ ಬಿಜೆಪಿ ನಾಯಕರು ಕೂಡ ಸ್ಥಳಕ್ಕೆ ಭೇಟಿ ನೀಡಿ ಪ್ರತಿಭಟನೆಯಲ್ಲಿ ಭಾಗಿಯಾದರು.
ಈ ನಾಯಕರು ಪೊಲೀಸರ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಗಾಂಜಾ ವಿರುದ್ಧ ಕಠಿಣ ಕ್ರಮ ಜರುಗಿಸಬೇಕೆಂದು ಆಗ್ರಹಪಡಿಸಿದ್ದಾರೆ.
ಘಟನೆ ವಿವರ: ಎಸ್ಸೆಸ್ಸೆಲ್ಸಿ ಪರೀಕ್ಷೆ ಹಿನ್ನೆಲೆಯಲ್ಲಿ ಊರಗಡೂರಿನ ಶಾಲೆಯಲ್ಲಿ ವಿಶೇಷ ತರಗತಿಗಳು ನಡೆಯುತ್ತಿದ್ದು, ಅದರಂತೆ ಸಂಕೇತ್ ಫೆ.23 ರಂದು ಸಂಜೆ ತರಗತಿ ಮುಗಿಸಿಕೊಂಡು ಮನೆಗೆ ಹಿಂದಿರುಗುತ್ತಿದ್ದ. ಈ ವೇಳೆ ಕ್ಷುಲ್ಲಕ ಕಾರಣಕ್ಕೆ ಸಹಪಾಠಿಗಳ ನಡುವೆ ಗಲಾಟೆಯಾಗಿದೆ. ಗಲಾಟೆ ಬಿಡಿಸಲು ಹೋದ ಸಂಕೇತ್ ಮೇಲೆ ಹಲ್ಲೆ ನಡೆಸಲಾಗಿದೆ. ಹಲ್ಲೆಯಿಂದ ತೀವ್ರ ಅಸ್ವಸ್ಥಗೊಂಡು ಕುಸಿದು ಬಿದ್ದಿದ್ದ ಆತನನ್ನು, ಆಸ್ಪತ್ರೆಗೆ ಕೊಂಡೊಯ್ಯುವ ಮಾರ್ಗಮಧ್ಯೆ ಸಾವನ್ನಪ್ಪಿದ್ದ.
ಸೋಮವಾರ ರಾತ್ರಿ ಆಸ್ಪತ್ರೆಯಿಂದ ಶವಾಗಾರಕ್ಕೆ ಮೃತ ಶರೀರವನ್ನು ಕಳುಹಿಸಿದ್ದು, ಮಂಗಳವಾರ ಬೆಳಗ್ಗೆ ಪೋಸ್ಟ್ ಮಾರ್ಟಂ ಬಳಿಕ ಮಧ್ಯಾಹ್ನ ಹೊತ್ತಿಗೆ ಪಾರ್ಥಿವ ಶರೀರವನ್ನು ಸ್ವಗೃಹಕ್ಕೆ ತರಲಾಯಿತು. ಮೃತ ಸಂಕೇತ್ ನಿವಾಸ ಬಳಿ ಭಾರೀ ಸಂಖ್ಯೆಯಲ್ಲಿ ಜನ ಜಮಾಯಿಸಿದ್ದು, ಹೆಚ್ಚುವರಿ ಪೊಲೀಸ್ ಅಧೀಕ್ಷಕ ಕಾರ್ಯಪ್ಪ ನೇತೃತ್ವದಲ್ಲಿ ಬಿಗಿ ಭದ್ರತೆ ನಿರ್ಮಿಸಲಾಗಿತ್ತು. ಮೃತ ಬಾಲಕನ ನಿವಾಸದಲ್ಲಿ ಕುಟುಂಬಸ್ಥರ ಆಕ್ರಂದನ ಮುಗಿಲುಮುಟ್ಟಿತ್ತು.ಮೃತ ಸಂಕೇತ್ ಮನೆಯಲ್ಲಿ ಪೂಜೆ ಬಳಿಕ ಅಂತ್ಯ ಸಂಸ್ಕಾರಕ್ಕೆ ಮೆರವಣಿಗೆ ಮೂಲಕ ಗುಡ್ಡೆಮರಡಿ ಹಿಂದೂ ರುದ್ರಭೂಮಿಗೆ ಮೃತದೇಹವನ್ನು ಕುಟುಂಬಸ್ಥರು ಕೊಂಡೊಯ್ದರು. ಹಾಲುಮತ ಸಂಪ್ರದಾಯದಂತೆ ಅಂತ್ಯ ಸಂಸ್ಕಾರ ನೆರವೇರಿಸಲಾಯಿತು. ಮೆರವಣಿಗೆಯಲ್ಲಿ ಸ್ಥಳೀಯ ನಿವಾಸಿಗಳು, ಕುಟುಂಬಸ್ಥರು, ಸ್ಥಳೀಯ ಮುಸಲ್ಮಾನರು ಕೂಡ ಭಾಗಿಯಾಗಿದ್ದರು. ಮೃತ ಕುಟುಂಬಸ್ಥರ ದುಖಃದಲ್ಲಿ ಸ್ಥಳಿಯರು ಭಾಗಿಯಾದರು.
ಪ್ರತಿಭಟನೆ-ಪರಿಹಾರಕ್ಕೆ ಆಗ್ರಹ: ಮಾಜಿ ಡಿಸಿಎಂ ಕೆ.ಎಸ್. ಈಶ್ವರಪ್ಪ, ಶಾಸಕ ಎಸ್.ಎನ್. ಚನ್ನಬಸಪ್ಪ, ಮಾಜಿ ಸಂಸದ ಆಯನೂರು ಮಂಜುನಾಥ್ ಸ್ಥಳಕ್ಕೆ ಭೇಟಿ ನೀಡಿ ಈ ಘಟನೆ ಖಂಡಿಸಿ, ಮೃತನ ಕುಟುಂಬಕ್ಕೆ ಸಾಂತ್ವನ ಹೇಳಿದರು.ಸ್ಥಳೀಯರು ಮತ್ತು ಹಿಂದೂ ಪರ ಸಂಘಟನೆಗಳ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿ, ಪರಿಹಾರಕ್ಕಾಗಿ ಒತ್ತಾಯಿಸಿದರು ಹಾಗೂ ಗಾಂಜಾ ದಂಧೆಯನ್ನು ನಿಲ್ಲಿಸಲು ಪೊಲೀಸರು ತಕ್ಷಣ ಕ್ರಮ ಕೈಗೊಳ್ಳಬೇಕು. ಇಲ್ಲವಾದರೆ ಎಳೆ ವಯಸ್ಸಿನ ಹುಡುಗರು ಗಾಂಜಾ ದಂಧೆಗೆ ಬಲಿಯಾಗಿ ಕಾನೂನುಬಾಹಿರ ಚಟುವಟಿಕೆಯಲ್ಲಿ ತೊಡಗುತ್ತಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸ್ಥಳಕ್ಕೆ ಜಿಲ್ಲಾಧಿಕಾರಿ ಮತ್ತು ಜಿಲ್ಲಾ ರಕ್ಷಣಾಧಿಕಾರಿ ಆಗಮಿಸಿ ಮೃತರ ಕುಟುಂಬಕ್ಕೆ ಸಾಂತ್ವನ ಹೇಳಿದರು. ಆದರೂ ಹೋರಾಟಗಾರರೂ ಜಗ್ಗಲಿಲ್ಲ. ಪ್ರತಿಭಟನೆ ಮುಂದುವರೆಸುವ ಸೂಚನೆ ನೀಡಿದರು. ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿಗಳು ಹಿರಿಯ ಅಧಿಕಾರಿಗಳೊಂದಿಗೆ ಮಾತನಾಡಿ ಸರ್ಕಾರದ ವತಿಯಿಂದ ಪರಿಹಾರ ಘೋಷಣೆ ಮಾಡಿದರು. ಘಟನೆ ನಡೆದ ಬಡಾವಣೆ ಸುತ್ತಮುತ್ತಲೂ ವ್ಯಾಪಕ ಪೊಲೀಸ್ ಬಂದೋಬಸ್ತ್ ಮಾಡಲಾಗಿದ್ದು, ಅನೇಕ ರಾಜಕೀಯ ನಾಯಕರು ಸ್ಥಳಕ್ಕೆ ಭೇಟಿ ನೀಡಿ ಮೃತರ ಕುಟುಂಬಕ್ಕೆ ಸಾಂತ್ವನ ಹೇಳಿದರು.ಜಿಲ್ಲಾಧಿಕಾರಿ ವಿರುದ್ಧ ಈಶ್ವರಪ್ಪ ಗರಂ: ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ಮಾಜಿ ಡಿಸಿಎಂ ಕೆ.ಎಸ್. ಈಶ್ವರಪ್ಪ ಸ್ಥಳದಲ್ಲಿಯೇ ಜಿಲ್ಲಾಧಿಕಾರಿಗೆ ಕರೆ ಮಾಡಿದರು. ಈ ವೇಳೆ ಕರೆ ಸ್ವೀಕರಿಸದ ಜಿಲ್ಲಾಧಿಕಾರಿಗಳ ವಿರುದ್ಧ ಈಶ್ವರಪ್ಪ ಗರಂ ಆದ ಘಟನೆ ನಡೆಯಿತು.
ಹಲವು ಬಾರಿ ಫೋನ್ ಮಾಡಿದ್ರು ಫೋನ್ ರಿಸೀವ್ ಮಾಡದ ಹಿನ್ನೆಲೆಯಲ್ಲಿ ಸಿಟ್ಟಾದ ಈಶ್ವರಪ್ಪ, ಜನ ರಸ್ತೆಯಲ್ಲಿ ಕುಳಿತು ಪ್ರತಿಭಟನೆ ನಡೆಸುತ್ತಿದ್ದಾರೆ. ಅವರಿಗೆ ಸಾಂತ್ವನ ಹೇಳುವ ಬದಲು ವಿಡಿಯೋ ಕಾನ್ಫರೆನ್ಸ್ ಇಂಪಾರ್ಟೆಂಟ್ ಆಗಿದ್ಯಾ? ಎಂದು ಜಿಲ್ಲಾಧಿಕಾರಿ ಆಪ್ತ ಸಹಾಯಕನ ಜೊತೆ ಏರು ಧ್ವನಿಯಲ್ಲಿ ಮಾತನಾಡಿದರು.ಅಂತಿಮ ದರ್ಶನಕ್ಕೆ ಬಂದ ಕ್ಲಾಸ್ ಮೇಟ್ಸ್: ಸಹಪಾಠಿಯನ್ನು ನೆನೆದು ಅಂತಿಮ ದರ್ಶನಕ್ಕೆ ಬಂದ ಸಹಪಾಠಿಗಳು ಸ್ನೇಹಿತನ ಮೃತ ಶರೀರ ನೋಡಿ ಕಣ್ಣೀರು ಹಾಕಿದರು. ಮುಸ್ಲಿಂ ಸಮುದಾಯದ ವಿದ್ಯಾರ್ಥಿನಿಯರು-ಮಹಿಳೆಯರು ಭಾಗಿಯಾಗಿ ಅಂತಿಮ ದರ್ಶನ ಪಡೆದುಕೊಂಡರು.ಮುಸ್ಲಿಂ ಮುಖಂಡರಿಂದ ಸಾಂತ್ವನ: ಮೃತ ಬಾಲಕನ ನಿವಾಸಕ್ಕೆ ಮುಸ್ಲಿಂ ಮುಖಂಡರು ಆಗಮಿಸಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು. ಈ ಮೃತ ಬಾಲಕ ನಮ್ಮ ಮಗ ಇದ್ದಂತೆ, ಅರೋಪಿಗಳಿಗೆ ಕಠಿಣ ಶಿಕ್ಷೆಯಾಗಬೇಕು. ಯಾರೇ ತಪ್ಪು ಮಾಡಿದರೂ ತಪ್ಪು ತಪ್ಪೇ ಎಂದು ಮುಸ್ಲಿಂ ಮುಖಂಡರು ಹೇಳಿದರು.
7 ಮಂದಿ ವಶಕ್ಕೆ: ಎಸ್ಪಿ ಬಿ. ನಿಖಿಲ್ಎಸ್ಸೆಸ್ಸೆಲ್ಸಿ ವಿದ್ಯಾರ್ಥಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ 7 ಮಂದಿ ಅಪ್ರಾಪ್ತ ಬಾಲಕರನ್ನು ವಶಕ್ಕೆ ಪಡೆಯಲಾಗಿದೆ ಎಂದು ಎಸ್ಪಿ ಬಿ. ನಿಖಿಲ್ ತಿಳಿಸಿದರು.
ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ ನಂತರ ಮಾಧ್ಯಮಗಳೊಂದಿಗೆ ಮಾತನಾಡಿ, ಕೇವಲ ಕ್ರಿಕೆಟ್ ಆಟದ ವಿಚಾರವಾಗಿ ನಡೆದ ಕ್ಷುಲ್ಲಕ ಗಲಾಟೆಯು ಹತ್ಯೆಯಲ್ಲಿ ಅಂತ್ಯವಾಗಿರುವುದು ತನಿಖೆಯಿಂದ ತಿಳಿದುಬಂದಿದೆ ಎಂದು ಸ್ಪಷ್ಟಪಡಿಸಿದರು.ಮೃತ ಬಾಲಕನ ಜೊತೆ ಆರೋಪಿಗಳು ಕಳೆದ ಎರಡು ದಿನಗಳ ಹಿಂದೆಯೇ ಕ್ರಿಕೆಟ್ ಆಟದ ವಿಚಾರವಾಗಿ ಜಗಳವಾಡಿದ್ದರು. ಘಟನೆಯ ದಿನ ಬೇರೊಬ್ಬನ ಮೇಲೆ ಹಲ್ಲೆ ನಡೆಯುತ್ತಿದ್ದಾಗ ಜಗಳ ಬಿಡಿಸಲು ಹೋದ ಮೃತ ಬಾಲಕನ ಮೇಲೆ ಆರೋಪಿಗಳು ಕೈಯಿಂದ ತೀವ್ರವಾಗಿ ಗುದ್ದಿದ್ದಾರೆ. ಇದರಿಂದ ಗಂಭೀರ ಪೆಟ್ಟು ಬಿದ್ದು ಬಾಲಕ ಮೃತಪಟ್ಟಿದ್ದಾನೆ ಎಂದು ವಿವರಿಸಿದರು.
ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಪೊಲೀಸ್ ಇಲಾಖೆ, ಕೃತ್ಯ ಎಸಗಿದ ಅಪ್ರಾಪ್ತ ಬಾಲಕರು ಗಾಂಜಾ ಸೇವನೆ ಮಾಡಿದ್ದಾರೆಯೇ ಎಂಬ ಬಗ್ಗೆ ವೈದ್ಯಕೀಯ ಪರೀಕ್ಷೆ ನಡೆಸಲು ಮುಂದಾಗಿದ್ದೇವೆ. ಒಂದು ವೇಳೆ ಮಾದಕ ವಸ್ತುಗಳ ನಂಟು ಕಂಡುಬಂದಲ್ಲಿ ಕಟ್ಟುನಿಟ್ಟಿನ ಕ್ರಮ ಜರುಗಿಸಲಾಗುವುದು ಎಂದು ತಿಳಿಸಿದ್ದಾರೆ.ಸರ್ಕಾರದಿಂದ 15 ಲಕ್ಷ ರು. ಪರಿಹಾರ ಘೋಷಣೆ
ಅಪ್ರಾಪ್ತ ಬಾಲಕನ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರವು ಮೃತನ ಕುಟುಂಬಕ್ಕೆ ಪರಿಹಾರ ಘೋಷಿಸಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ದೂರವಾಣಿ ಕರೆ ಮೂಲಕ ಸಂತ್ರಸ್ತ ಕುಟುಂಬಕ್ಕೆ ಸಾಂತ್ವನ ಹೇಳಿದ್ದು, ಒಟ್ಟು 15 ಲಕ್ಷ ರು. ಆರ್ಥಿಕ ನೆರವು ನೀಡುವುದಾಗಿ ಭರವಸೆ ನೀಡಿದ್ದಾರೆ. ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ ಅವರು, ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರ ಸೂಚನೆಯ ಮೇರೆಗೆ ಈ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ. ಘೋಷಿತ ಪರಿಹಾರದಲ್ಲಿ 10 ಲಕ್ಷ ರು. ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ ಹಾಗೂ ಉಳಿದ 5 ಲಕ್ಷ ರು. ಶಿಕ್ಷಣ ಇಲಾಖೆಯ ವತಿಯಿಂದ ನೀಡಲಾಗುವುದು ಎಂದು ಸ್ಪಷ್ಟಪಡಿಸಿದರು.ಹತ್ಯೆ ನಡೆದ ಬಡಾವಣೆ ಸೇರಿದಂತೆ ನಗರದಾದ್ಯಂತ ಬಿಗಿ ಪೊಲೀಸ್ ಬಂದೋಬಸ್ತ್ ನಿಯೋಜಿಸಲಾಗಿದೆ. ಮುಂಬರುವ ಜಾತ್ರೆ ಹಾಗೂ ಹಬ್ಬಗಳ ಹಿನ್ನೆಲೆ ಯಾವುದೇ ಅಹಿತಕರ ಘಟನೆ ನಡೆಯದಂತೆ ಮುನ್ನೆಚ್ಚರಿಕೆ ವಹಿಸಲಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.
ಆರೋಪಿಗಳ ಗಲ್ಲಿಗೇರಿಸದೆ ಇದ್ದಲ್ಲಿ ಕುಟುಂಬವೇ ಆತ್ಮಹತ್ಯೆ: ಸಹೋದರಿಸಹೋದರಿ ಸುಪ್ರೀತಾ ಮಾತನಾಡಿ, ರಾತ್ರಿ 8.30ಕ್ಕೆ ವಿಶೇಷ ತರಗತಿ ಮುಗಿಯುತ್ತಿತ್ತು. ಸೋಮವಾರ 9 ಗಂಟೆಯವರೆಗೂ ಪಾಠ ಮಾಡಿದ್ದಾರೆ. ಆದರೆ ನಮಗೆ ವಿಷಯ ತಿಳಿಸಲಿಲ್ಲ. ಮೆಸೇಜ್ ಮಾಡಿದರೆ ತಮ್ಮನನ್ನು ಕರೆದುಕೊಂಡು ಬರಲು ನಾನೇ ಹೋಗುತ್ತಿದ್ದೆ. ನನ್ನ ತಮ್ಮನನ್ನು ಹತ್ಯೆ ಮಾಡಿದವರನ್ನು ಗಲ್ಲಿಗೇರಿಸಬೇಕು. ಇಲ್ಲದಿದ್ದರೆ ನಮ್ಮ ಕುಟುಂಬದವರು ಆತ್ಮಹತ್ಯೆ ಮಾಡಿಕೊಳ್ಳುತ್ತೇವೆ ಎಂದು ಅಕ್ಕ ಸುಪ್ರೀತಾ ಆಕ್ರೋಶ ಹೊರಹಾಕಿದರು. ಶಾಲೆಗೆ ಹೋಗಿದ್ದ ಮಗ ಬರಲಿಲ್ಲ. ಇನ್ನೇನು ಮನೆಗೆ ಬರ್ತಾನೆ ಅಂತ ಕಾದಿದ್ದೆ ಅಷ್ಟರಲ್ಲಿ ಕೊಲೆಯಾಗಿ ಹೋಗಿದ್ದಾನೆ. ಎಸ್ಸೆಸ್ಸೆಲ್ಸಿಯಲ್ಲಿ ರ್‍ಯಾಂಕ್ ಪಡೆದು ಫ್ಲೆಕ್ಸ್ ಹಾಕಿಸಿಕೊಳ್ಳುತ್ತೇನೆ ಎನ್ನುತ್ತಿದ್ದವನು ಈ ರೀತಿ ಕೊಲೆಯಾಗಿದ್ದಾನೆ ಎಂದು ತಾಯಿ ಮಂಜುಳ ಗೋಳಾಡಿದರು. ನನ್ನ ಮೊಮ್ಮಗ ಎಸ್ಸೆಸ್ಸೆಲ್ಸಿ ಪಾಸಾದರೆ ಬೈಕ್ ಕೊಡಿಸುತ್ತೇನೆ ಎಂದು ಹೇಳಿದ್ದೆ. ಈಗ ಬೈಕ್ ಯಾರಿಗೆ ಕೊಡಿಸಲಿ ಎಂದು ಅಜ್ಜಿ ಲಕ್ಷ್ಮಮ್ಮ ಕಣ್ಣೀರಿಟ್ಟರು.