ಭ್ರಷ್ಟಾಚಾರ, ನೇಮಕಾತಿಯಲ್ಲಿ ಅಕ್ರಮ ಆಡಳಿತದಲ್ಲಿ ಪಾರದರ್ಶಕತೆ, ಮಾನವ ಹಕ್ಕುಗಳ ರಕ್ಷಣೆಗಾಗಿ, ಸಾಂವಿಧಾನಿಕ ಸಂಸ್ಥೆಗಳನ್ನು ಬಲಪಡಿಸುವಲ್ಲಿ ಸರ್ಕಾರ ಕಟ್ಟುನಿಟ್ಟಿನ ಕ್ರಮಕೈಕೊಂಡು ತಪ್ಪಿತಸ್ಥರ ಮೇಲೆ ಕಾನೂನು ಕ್ರಮ ಜರುಗಿಸಬೇಕು.
ಧಾರವಾಡ:
ವ್ಯಕ್ತಿಗಳ ಹಕ್ಕುಗಳಿಗೆ ಚ್ಯುತಿ ಬಂದರೆ ನ್ಯಾಯಕ್ಕಾಗಿ, ಸತ್ಯಕ್ಕಾಗಿ ಭಾರತದಲ್ಲಿ ಅನೇಕ ಚಳವಳಿಗಳಾಗಿವೆ. ಆದರೆ, ಪ್ರಸ್ತುತ ವಿದ್ಯಾರ್ಥಿ ಚಳವಳಿಗಳು ಎಐ, ವ್ಯಂಗಚಿತ್ರ, ಟೀಕ್‌ಟಾಕ್, ಟ್ವೀಟರ್ ಹಾಗೂ ಎಕ್ಸ್ ಖಾತೆಗಳ ಮೂಲಕ ಕಿಚ್ಚು ಹಚ್ಚಿ, ಹೋರಾಟ ಸ್ವರೂಪ ಬದಲಾಗಿ ಜನಜಾಗೃತಿ ಮೂಡಿಸಿ ಸರ್ಕಾರ ಎಚ್ಚರಿಸುವಲ್ಲಿ ಯಶಸ್ವಿಯಾಗಿವೆ ಎಂದು ವಿಶ್ರಾಂತ ಪ್ರಾಧ್ಯಾಪಕ ಡಾ. ಅಶೋಕ ಆನಿಕಿವಿ ಹೇಳಿದರು.ಕರ್ನಾಟಕ ವಿದ್ಯಾವರ್ಧಕ ಸಂಘವು ಸಂಜಯ ಮತ್ತು ಪ್ರಿಯಾ ಹೊರಡಿ ಹಾಗೂ ದಿ. ಪ್ರೊ. ಆರ್.ವಿ. ಹೊರಡಿ ದತ್ತಿಯಲ್ಲಿ ಸಮಕಾಲೀನ ಪ್ರಜಾಪ್ರಭುತ್ವದ ಚಳವಳಿಗಳು’ ವಿಷಯ ಕುರಿತು ಮಾತನಾಡಿದ ಅವರು, ವಿದ್ಯಾರ್ಥಿಗಳು ತಮ್ಮ ಹಕ್ಕುಗಳ ರಕ್ಷಣೆಗಾಗಿ, ಸಾಂವಿಧಾನಿಕ ನೆಲೆಗಟ್ಟಿನಲ್ಲಿ ವಿದ್ಯಾರ್ಥಿಗಳ ಸಾಮೂಹಿಕ ಚಳವಳಿಗಳು ಮಾದರಿಯಾಗಿವೆ. ಇತ್ತೀಚೆಗೆ ರಾಂಚಿ, ಕೇರಳ, ಕರ್ನಾಟಕ, ರಾಜಸ್ಥಾನ, ಪಂಜಾಬ್ ಮುಂತಾದ ರಾಜ್ಯಗಳಲ್ಲಿ ನಡೆದ ಚಳವಳಿಗಳ ಮುಖಾಂತರ ವಿದ್ಯಾರ್ಥಿಗಳ ಶಕ್ತಿ ಏನೆಂಬುದು ನಮಗೆ ಸ್ಪಷ್ಟವಾಗಿ ಗೋಚರವಾಗಿದೆ. ಇಂಥ ಅನೇಕ ಚಳವಳಿಗಳು ದೇಶದಲ್ಲಿ ಪರಿಣಾಮಕಾರಿಯಾಗಿ ಹೊರಹೊಮ್ಮುತ್ತಿವೆ ಎಂದರು.
ಭ್ರಷ್ಟಾಚಾರ, ನೇಮಕಾತಿಯಲ್ಲಿ ಅಕ್ರಮ ಆಡಳಿತದಲ್ಲಿ ಪಾರದರ್ಶಕತೆ, ಮಾನವ ಹಕ್ಕುಗಳ ರಕ್ಷಣೆಗಾಗಿ, ಸಾಂವಿಧಾನಿಕ ಸಂಸ್ಥೆಗಳನ್ನು ಬಲಪಡಿಸುವಲ್ಲಿ ಸರ್ಕಾರ ಕಟ್ಟುನಿಟ್ಟಿನ ಕ್ರಮಕೈಕೊಂಡು ತಪ್ಪಿತಸ್ಥರ ಮೇಲೆ ಕಾನೂನು ಕ್ರಮ ಜರುಗಿಸಬೇಕು. ಭವಿಷ್ಯದಲ್ಲಿ ಇಂಥ ಘಟನೆಗಳು ಮರುಕಳಿಸದಂತೆ ಆಡಳಿತದಲ್ಲಿ ಪಾರದರ್ಶಕತೆ ಹೆಚ್ಚಾಗಬೇಕು. ವಿದ್ಯಾರ್ಥಿ ಚಳವಳಿಗಳು ಯಾವುದೇ ಪ್ರಭಾವಕ್ಕೆ ಒಳಗಾಗದೇ, ಪಕ್ಷಾತೀತ, ಜಾತ್ಯತೀತ ಸಂಘಟನೆಗಳಾಗಿವೆ. ಇವು ತಮ್ಮ ಹಕ್ಕುಗಳ ಸಂರಕ್ಷಣೆಗಾಗಿ ವಿಭಿನ್ನ ರೀತಿಯ ತಂತ್ರಗಾರಿಕೆಯೊಂದಿಗೆ, ಅಂಹಿಸಾತ್ಮಕವಾಗಿ ಹೋರಾಟ ಮಾಡಿ ಯಶಸ್ಸು ಕಂಡಿವೆ ಎಂದು ಹೇಳಿದರು.ಅಧ್ಯಕ್ಷತೆ ವಹಿಸಿದ್ದ ಧಾರವಾಡ ವಕೀಲರ ಸಂಘದ ಅಧ್ಯಕ್ಷ ಸಿ.ಎಸ್. ನೇಗಿನಹಾಳ, ಪ್ರಸ್ತುತ ಶಿಕ್ಷಣ ವ್ಯವಸ್ಥೆ ಸುಧಾರಣೆಯಾಗುತ್ತಿಲ್ಲ. ಇದಕ್ಕೆ ಕಾರಣ ಆಡಳಿತ ವ್ಯವಸ್ಥೆ. ಎಲ್ಲ ಕಡೆ ಭ್ರಷ್ಟಾಚಾರ ಹೆಚ್ಚಾಗಿದೆ. ಇದಕ್ಕೆ ನಾವು ಸಹ ಜವಾಬ್ದಾರರು ಎಂದು ಬೇಸರ ವ್ಯಕ್ತಪಡಿಸಿದರು.
ವಿದ್ಯಾರ್ಥಿಗಳಾದ ದೇಮವ್ವ ದೇಶಣ್ಣವರ ಮತ್ತು ಶಾಂಭವಿ ತಳವಾರಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು. ಗುರು ಹಿರೇಮಠ ಸ್ವಾಗತಿಸಿದರು. ಡಾ. ಜಿನದತ್ತ ಹಡಗಲಿ ಪ್ರಾಸ್ತಾವಿಕ ಮಾತನಾಡಿದರು. ಶಂಕರ ಕುಂಬಿ ನಿರೂಪಿಸಿದರು. ಶಿವಾನಂದ ಭಾವಿಕಟ್ಟಿ ವಂದಿಸಿದರು.