ಸಾರಾಂಶ
ಕನ್ನಡಪ್ರಭ ವಾರ್ತೆ ನಾಲತವಾಡ: ಕಾಲೇಜು ವಿದ್ಯಾರ್ಥಿಗಳಿಗೆ ಸಮಯಕ್ಕೆ ಸರಿಯಾಗಿ ಬಸ್ ಸೌಕರ್ಯ ಒದಗಿಸಬೇಕು ಎಂದು ಆಗ್ರಹಿಸಿ ಮಂಗಳವಾರ ಮಧ್ಯಾಹ್ನ ಬಸ್ ನಿಲ್ದಾಣದಲ್ಲಿ ಸುಮಾರು ಒಂದು ಗಂಟೆಗು ಹೆಚ್ಚು ಕಾಲ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದರು.
ಕನ್ನಡಪ್ರಭ ವಾರ್ತೆ ನಾಲತವಾಡ:
ಕಾಲೇಜು ವಿದ್ಯಾರ್ಥಿಗಳಿಗೆ ಸಮಯಕ್ಕೆ ಸರಿಯಾಗಿ ಬಸ್ ಸೌಕರ್ಯ ಒದಗಿಸಬೇಕು ಎಂದು ಆಗ್ರಹಿಸಿ ಮಂಗಳವಾರ ಮಧ್ಯಾಹ್ನ ಬಸ್ ನಿಲ್ದಾಣದಲ್ಲಿ ಸುಮಾರು ಒಂದು ಗಂಟೆಗು ಹೆಚ್ಚು ಕಾಲ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದರು.ಸಮೀಪದ ಅಯ್ಯನಗುಡಿ, ಬಿಜ್ಜೂರ, ಲೋಟಗೇರಿ, ಟಕ್ಕಳಕಿ, ಘಾಳಪೂಜಿ, ಬಲದಿನ್ನಿ, ಬಂಗಾರಗುಂಡ, ರಕ್ಕಸಗಿ ಗ್ರಾಮದಿಂದ ನಾಲತವಾಡ ಪಟ್ಟಣಕ್ಕೆ ನಿತ್ಯ ಸುಮಾರು 50ಕ್ಕು ಹೆಚ್ಚು ವಿದ್ಯಾರ್ಥಿಗಳು ವಿದ್ಯಾಭ್ಯಾಸಕ್ಕೆ ಬರುತ್ತಾರೆ. ಕಾಲೇಜು ಮುಕ್ತಾಯ ಸಮಯಕ್ಕೆ ಬಸ್ ಸೌಕರ್ಯವಿಲ್ಲದ ಕಾರಣ ಸಾಕಷ್ಟು ತೊಂದರೆ ಅನುಭವಿಸುತ್ತಿದ್ದಾರೆ. ಬೆಳಗ್ಗೆ ಬಂದು ಸಂಜೆ ಮನೆಗೆ ತೆರಳುವ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಬಗ್ಗೆ ಹಲವಾರು ಬಾರಿ ಘಟಕ ನಿಯಂತ್ರಣಾಧಿಕಾರಿಗಳಿಗೆ ತಿಳಿಸಿದರು ಯಾವದೇ ಪ್ರಯೋಜನವಾಗುತ್ತಿಲ್ಲ ಎಂದು ಮಂಗಳವಾರ ದಿಢೀರ್ ಪ್ರತಿಭಟನೆ ನಡೆಸಿದರು. ಯಾವದೇ ಬಸ್ ಬಿಡದೇ ಮುದ್ದೇಬಿಹಾಳ ಘಟಕ ವ್ಯವಸ್ಥಾಪಕನ ವಿರುದ್ದ ಘೋಷಣೆ ಕೂಗಿದರು.ಪ್ರತಿಭಟನೆ ವಾಪಸ್: ವಿಷಯ ತಿಳಿದು ಸ್ಥಳಕ್ಕಾಗಮಿಸಿದ ಮುದ್ದೇಬಿಹಾಳ ಕ್ರೈಂ ಪಿ.ಎಸೈ ಆರ್.ಎಲ್.ಮನ್ನಾಭಾಯಿ ವಿದ್ಯಾರ್ಥಿನಿಯರ ಮನವೊಲಿಸಲು ಹರಸಾಹಸ ಪಟ್ಟರು. ದೂರವಾಣಿಯಲ್ಲಿ ಘಟಕವ್ಯವಸ್ಥಾಪರಿಗೆ ಮಾತನಾಡಿ ಕೂಡಲೇ ವಿದ್ಯಾರ್ಥಿಗಳಿಗೆ ಬಸ್ ಸೌಕರ್ಯ ಒದಗಿಸುವ ಮೂಲಕ ಪ್ರತಿಭಟನೆ ಹಿಂಪಡೆಯುವಂತೆ ಮನವಿ ಮಾಡಿದರು. ಹೀಗಾಗಿ, ವಿದ್ಯಾರ್ಥಿನಿಯರು ಪ್ರತಿಭಟನೆ ಹಿಂಪಡೆದರು. ಸೂಕ್ತ ಸಮಯಕ್ಕೆ ಬಸ್ ಸೌಕರ್ಯ ಒದಗಿಸದಿದ್ದರೆ ಮತ್ತೆ ಹೋರಾಟ ನಡೆಸುವುದಾಗಿ ಘಟಕ ವ್ಯವಸ್ಥಾಪಕರಿಗೆ ಎಚ್ಚರಿಸಿದ ಘಟನೆ ನಡೆಯಿತು.