ಸಾರಾಂಶ
ಕನ್ನಡಪ್ರಭ ವಾರ್ತೆ ಬೆಂಗಳೂರು
ಶಾಲೆಗೆ ತೆರಳಲು ಇರುವ ಸಮಸ್ಯೆಯನ್ನು ನಿವಾರಿಸುವಂತೆ 8ನೇ ತರಗತಿ ವಿದ್ಯಾರ್ಥಿನಿ, ಬಿಎಂಟಿಸಿ ವ್ಯವಸ್ಥಾಪಕ ನಿರ್ದೇಶಕರಿಗೆ ಪತ್ರ ಬರೆದಿದ್ದು, ಅವರ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಮಾಡಿಕೊಳ್ಳಲಾಗಿದೆ.ಶಕ್ತಿ ಯೋಜನೆ ಜಾರಿ ನಂತರ ಬಸ್ ಸೇವೆಗಳು ಸಮರ್ಪಕವಾಗಿ ಸಿಗುತ್ತಿಲ್ಲ. ಅದರಲ್ಲೂ ಬೆಳಗಿನ ಹೊತ್ತು ಶಾಲೆ-ಕಾಲೇಜಿಗೆ ತೆರಳುವ ವಿದ್ಯಾರ್ಥಿಗಳಿಗೆ ಬಸ್ ಕೊರತೆ ಕಾಣಿಸಿಕೊಳ್ಳುತ್ತಿವೆ ಎಂಬ ಆರೋಪಗಳಿವೆ. ಅದರ ಬೆನ್ನಲ್ಲೇ 8ನೇ ತರಗತಿ ವಿದ್ಯಾರ್ಥಿನಿಯೊಬ್ಬಳು, ಸಿಎಂ ಸಿದ್ದರಾಮಯ್ಯ, ಸಾರಿಗೆ ಸಚಿವ ರಾಮಲಿಂಗಾರೆಡ್ಡಿ, ಶಿಕ್ಷಣ ಸಚಿವ ಮಧು ಬಂಗಾರಪ್ಪ, ಬಿಎಂಟಿಸಿ ಎಂಡಿ ಆರ್.ರಾಮಚಂದ್ರನ್ ಅವರಿಗೆ ಪತ್ರ ಬರೆದು ತನಗೆ ಎದುರಾಗಿರುವ ಬಸ್ ಸಮಸ್ಯೆ ಕುರಿತಂತೆ ಬೆಳಕು ಚೆಲ್ಲಿದ್ದಾಳೆ.
ಮನವಿ ಪತ್ರದಲ್ಲಿರುವಂತೆ, ವಿ.ವೈ.ಹರ್ಷಿನ್ ಎಂಬ ವಿದ್ಯಾರ್ಥಿನಿ, ತಾವರೆಕರೆಯಿಂದ ಮಾಗಡಿ ರಸ್ತೆ ಮೂಲಕ ಶ್ರೀನಗರ ಬಸ್ ನಿಲ್ದಾಣಕ್ಕೆ ಬಸ್‌ಗಳ ಸಂಖ್ಯೆ ವಿರಳವಿದೆ. ಅದರಲ್ಲೂ ಬೆಳಗಿನ ಹೊತ್ತು ಬಸ್‌ಗಳೇ ಸಿಗುವುದಿಲ್ಲ. ಈ ಬಗ್ಗೆ ಬಿಎಂಟಿಸಿ ಅಧಿಕಾರಿಗಳ ಗಮನಕ್ಕೆ ತಂದು, ಹೆಚ್ಚಿನ ಬಸ್‌ಗಳ ಸಂಚಾರಕ್ಕೆ ಅನುವು ಮಾಡಿಕೊಡುವಂತೆ ಮನವಿ ಮಾಡಿದ್ದೇನೆ. ಆದರೂ, ಅದರಿಂದ ಪ್ರಯೋಜನವಾಗಿಲ್ಲ.ಆದರೆ, ಪ್ರತಿ ಗುರುವಾರ ಮತ್ತು ಭಾನುವಾರ ಸುಮನಹಳ್ಳಿಯಿಂದ ಕಡಬಗೆರೆ ಮಾರ್ಗವಾಗಿ ಗುರು ರಾಘವೇಂದ್ರ ಕಾಮಧೇನು ದೇವಸ್ಥಾನಕ್ಕೆ ಪ್ರತಿ ಗಂಟೆಗೆ ಒಂದು ಬಸ್ ಸಂಚರಿಸುತ್ತದೆ. ನಮ್ಮ ಸಮಸ್ಯೆಯನ್ನು ಮಾತ್ರ ಅಧಿಕಾರಿಗಳು ಕೇಳುತ್ತಿಲ್ಲ. ನಮಗೆ ಉತ್ತಮ ಶಿಕ್ಷಣ ಪಡೆಯಲು ಸೂಕ್ತ ಸಾರಿಗೆ ವ್ಯವಸ್ಥೆ ಮಾಡಬೇಕು. ಬಸ್ ಸಮಸ್ಯೆ ನೀಗಿಸಲು ಡಾ। ಬಿ.ಆರ್.ಅಂಬೇಡ್ಕರ್ ಅವರ ಹೆಸರಿನಲ್ಲಿ ಪ್ರತಿ ಜಿಲ್ಲೆ ಮತ್ತು ತಾಲೂಕುಗಳಲ್ಲಿ ಶಾಲಾ ಮಕ್ಕಳಿಗಾಗಿಯೇ ಹೆಚ್ಚುವರಿ ಬಸ್ ಸೇವೆ ಆರಂಭಿಸಬೇಕು ಎಂದು ಕೋರಿದ್ದಾಳೆ.