ಕನ್ನಡಪ್ರಭ ವಾರ್ತೆ ಹಳೇಬೀಡು

ಪಾರಂಪರಿಕ ಸ್ಥಳಗಳನ್ನು ಸಂರಕ್ಷಿಸುವುದು ನಮ್ಮೆಲ್ಲರ ಹೊಣೆಗಾಗಿಕೆ ಎಂದು ಬೇಲೂರಿನ ವೈಡಿಡಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಧ್ಯಾಪಕ ಡಾ. ವಸಂತಕುಮಾರ್‌ ತಿಳಿಸಿದ್ದಾರೆ.ಇಲ್ಲಿನ ಶ್ರೀಮುತ್ತಿನ ವೀರಭದ್ರ ದೇವಾಲಯದ ಆವರಣದಲ್ಲಿ ವಿಶ್ವ ಪರಂಪರೆ ದಿನದ ಅಂಗವಾಗಿ ಹಳೇಬೀಡಿನ ಸರ್ಕಾರಿ ಪ್ರಥಮ ದರ್ಜೆಕಾಲೇಜು ಮತ್ತು ಬೇಲೂರಿನ ವೈ.ಡಿ.ಡಿ.ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ರಾಜ್ಯ ಪುರಾತತ್ವ ಸಂಗ್ರಹಾಲಯ ಮತ್ತು ಪರಂಪರೆ ಇಲಾಖೆ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಿದ್ದ ಸ್ಮಾರಕಗಳ ಸ್ವಚ್ಚತೆ, ಅರಿವು ಕಾರ್ಯಕ್ರಮದಲ್ಲಿ ಮಾತನಾಡಿದರು. ಹಳೇಬೀಡು ಮತ್ತು ಬೇಲೂರು ದೇವಾಲಯಗಳು ಸುಂದರ ಕೆತ್ತನೆಯುಳ್ಳ ಶಿಲ್ಪಕಲೆ ಹೊಂದಿರುವ ದೇವಾಲಯಗಳು ಇವುಗಳಲ್ಲಿನ ಒಂದು ವಿಗ್ರಹ ಕೂಡ ಹಾನಿಯಾಗದಂತೆ ನೋಡಿಕೊಳ್ಳುವುದು ಪ್ರತಿಯೊಬ್ಬರ ನಾಗರೀಕರ ಕರ್ತವ್ಯವಾಗಿರುತ್ತದೆ. ಇಂದಿನ ವಿದ್ಯಾರ್ಥಿಗಳು ಯಾವುದೇ ಪ್ರಾಚೀನ ವಸ್ತುಗಳು ಸಿಕ್ಕಿದರೆ ಅದನ್ನು ರಾಜ್ಯ ಪುರಾತತ್ವ ಸಂಗ್ರಹಾಲಯ ಮತ್ತು ಪರಂಪರೆ ಇಲಾಖೆಗೆ ನೀಡಬೇಕು ಎಂದು ತಿಳಿಸಿದರು.ರಾಜ್ಯ ಪುರಾತತ್ವ ಸಂಗ್ರಹಾಲಯ ಮತ್ತು ಪರಂಪರೆ ಹಾಸನ ಇಲಾಖೆಯ ಅಧಿಕಾರಿ ಕುಮಾರ್‌ ಮಾತನಾಡುತ್ತ ಹಾಸನ ಮತ್ತು ಚಿಕ್ಕಮಗಳೂರು ಜಿಲ್ಲೆಯಗಳಲ್ಲಿ ಹಲವಾರು ದೇವಾಲಯವನ್ನು ನಮ್ಮ ಇಲಾಖೆ ಪುನರ್‌ ನಿರ್ಮಾಣಕ್ಕೆ ಸಹಕಾರ ನೀಡಿದೆ. ಅದರಲ್ಲಿ ಹಳೇಬೀಡಿನ ಶ್ರೀರಂಗನಾಥ ದೇವಾಲಯ, ಶ್ರೀಮುತ್ತಿನ ವೀರಭದ್ರ ದೇವಾಲಯ, ಶ್ರೀಗುದ್ದಲೇಶ್ವರ ದೇವಾಲಯಗಳನ್ನು ಸುಮಾರು ೩ರಿಂದ ೪ ಕೋಟಿ ರುಪಾಯಿ ವೆಚ್ಚದಲ್ಲಿ ಪುನರ್‌ ನಿರ್ಮಾಣ ನಮ್ಮ ಇಲಾಖೆ ಮಾಡಿದೆ ಮುಂದಿನ ದಿನಗಳಲ್ಲಿ ಇನ್ನು ಹಲವಾರು ದೇವಾಲಯವನ್ನು ಉಳಿಸುವ ಕಾರ್ಯಕ್ರಮ ನಮ್ಮ ಇಲಾಖೆಯ ಕರ್ತವ್ಯ ಎಂದು ತಿಳಿಸಿದರು.ಈ ಸಂದರ್ಭದಲ್ಲಿ ಹಳೇಬೀಡಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ. ಬಿ. ಕೆ ಶ್ರೀನಿವಾಸ, ಇತಿಹಾಸದ ಪ್ರಾಧ್ಯಾಪಕ ಶಂಕರಪ್ಪ ಮತ್ತು ಹಳೇ ವಿದ್ಯಾರ್ಥಿಗಳಾದ ದೀಕ್ಷತ್, ಹರೀಶ್, ನಾಗರಾಜ್ ಹಾಗೂ ಎರಡೂ ಕಾಲೇಜಿನ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.