ವಿದ್ಯಾರ್ಥಿಗಳಿಗೆ ಈಗ ಗುಣಾತ್ಮಕ ಶಿಕ್ಷಣ ಸಿಗುತ್ತಿಲ್ಲ: ಪ್ರೊ.ಡಿ.ಕೆ.ಚಿತ್ತಯ್ಯ

| Published : Jan 12 2024, 01:46 AM IST

ವಿದ್ಯಾರ್ಥಿಗಳಿಗೆ ಈಗ ಗುಣಾತ್ಮಕ ಶಿಕ್ಷಣ ಸಿಗುತ್ತಿಲ್ಲ: ಪ್ರೊ.ಡಿ.ಕೆ.ಚಿತ್ತಯ್ಯ
Share this Article
  • FB
  • TW
  • Linkdin
  • Email

ಸಾರಾಂಶ

ವಿಶ್ವವಿದ್ಯಾಲಯದ ಮುಖ್ಯ ಗುರಿ ಜ್ಞಾನವನ್ನು ಬಿತ್ತು, ಜ್ಞಾನಿಗಳನ್ನು ಬೆಳೆಸುವುದಾಗಿದೆ. ನಿರಂತರ ಕ್ಷೇತ್ರ ಕಾರ್ಯ ಮಾಡಿ, ಹಲವು ಬದಲಾವಣೆಯೊಂದಿಗೆ ಹೊಟ್ಟಣ ನಾಯಕನ ಕಥನ ಕಾವ್ಯ ಹೊರತರಲಾಗಿದೆ. ಹಲವು ವಿದ್ವಾಂಸರು ಕೃತಿಯ ಬಗ್ಗೆ ಪ್ರಶಂಸೆ ವ್ಯಕ್ತಪಡಿಸುತ್ತಿದ್ದಾರೆ. ಜನಪದ ಕಾವ್ಯ ಸಂಗ್ರಹವು ಮುಂದಿನ ಪೀಳಿಗೆಗೆ ನಮ್ಮ ಜನಪದ ಸಂಸ್ಕೃತಿಯನ್ನು ಪರಿಚಯಿಸುವ ಪ್ರಯತ್ನವೂ ಆಗಿದೆ.

ದಾವಿವಿಯಲ್ಲಿ ಹೊಟ್ಟಣ ನಾಯಕನ ಕಾವ್ಯ ಕುರಿತ ವಿಚಾರ ಸಂಕಿರಣದಲ್ಲಿ ಅಭಿಪ್ರಾಯ । ನಿಡುಗಲ್ಲೆಂಬೋದು ಏಳು ಸುತ್ತಿನ ಕೋಟೆ ಕೃತಿ ಬಿಡುಗಡೆ

ಕನ್ನಡಪ್ರಭ ವಾರ್ತೆ ದಾವಣಗೆರೆ

ಜನಪದ ಕಾವ್ಯ ಸಂಗ್ರಹ ತುಂಬಾ ಕಷ್ಟಕರವಾಗಿದ್ದು, ಅತ್ಯಂತ ಸೂಕ್ಷ್ಮವಾಗಿ ಇಂತಹ ಮಾಹಿತಿ ಕಲೆ ಹಾಕುವ ಕೆಲಸ ಆದಾಗ ಮಾತ್ರ ಶ್ರಮ ಸಾರ್ಥಕತೆ ಪಡೆಯುತ್ತದೆ ಎಂದು ಪ್ರೊ.ಡಿ.ಕೆ.ಚಿತ್ತಯ್ಯ ಪೂಜಾರ್ ತಿಳಿಸಿದರು.

ತಾಲೂಕಿನ ಶಿವಗಂಗೋತ್ರಿಯ ದಾವಿವಿ ಸಭಾಂಗಣದಲ್ಲಿ ಶುಕ್ರವಾರ ದಾವಿವಿ ಕನ್ನಡ ಅಧ್ಯಯನ ಮತ್ತು ಸಂಶೋಧನಾ ಕೇಂದ್ರ, ಸಂಚಲನ ಸಂಸ್ಕೃತಿ ವೇದಿಕೆ ಹಮ್ಮಿಕೊಂಡಿದ್ದ ಹೊಟ್ಟಣ ನಾಯಕನ ಕಾವ್ಯ ಕುರಿತ ಒಂದು ದಿನದ ವಿಚಾರ ಸಂಕಿರಣ ಹಾಗೂ ನಿಡುಗಲ್ಲೆಂಬೋದು ಏಳು ಸುತ್ತಿನ ಕೋಟೆ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿ ವಿಶ್ವವಿದ್ಯಾಲಯದ ಮುಖ್ಯ ಗುರಿ ಜ್ಞಾನವನ್ನು ಬಿತ್ತು, ಜ್ಞಾನಿಗಳನ್ನು ಬೆಳೆಸುವುದಾಗಿದೆ. ನಿರಂತರ ಕ್ಷೇತ್ರ ಕಾರ್ಯ ಮಾಡಿ, ಹಲವು ಬದಲಾವಣೆಯೊಂದಿಗೆ ಹೊಟ್ಟಣ ನಾಯಕನ ಕಥನ ಕಾವ್ಯ ಹೊರತರಲಾಗಿದೆ. ಹಲವು ವಿದ್ವಾಂಸರು ಕೃತಿಯ ಬಗ್ಗೆ ಪ್ರಶಂಸೆ ವ್ಯಕ್ತಪಡಿಸುತ್ತಿದ್ದಾರೆ. ಜನಪದ ಕಾವ್ಯ ಸಂಗ್ರಹವು ಮುಂದಿನ ಪೀಳಿಗೆಗೆ ನಮ್ಮ ಜನಪದ ಸಂಸ್ಕೃತಿಯನ್ನು ಪರಿಚಯಿಸುವ ಪ್ರಯತ್ನವೂ ಆಗಿದೆ ಎಂದು ಹೇಳಿದರು.

ವಿದ್ಯಾರ್ಥಿಗಳ ಅಧ್ಯಯನ ಕೇವಲ ಪಠ್ಯ ಬೋಧನೆಗೆ ಮಾತ್ರ ಸೀಮಿತ ಆಗಬಾರದು. ಜಾಗತೀಕರಣ ನಮ್ಮನ್ನು ಗಿರಗಿಟ್ಟಲೇ ರೀತಿ ಆಡಿಸುತ್ತಿದೆ. ವಿದ್ಯಾರ್ಥಿಗಳಲ್ಲಿ ಉಂಟಾದ ಉದ್ಯೋಗದ ತಲ್ಲಣ, ಅಭದ್ರತೆಗೆ ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ ಹಲವು ಪದವಿ ಕಾಲೇಜುಗಳ ಆಯ್ಕೆ ಮಾಡಿ, ಇಂತಹ ವಿಚಾರ ಸಂಕಿರಣ ಆಯೋಜಿಸಲಾಗುತ್ತಿದೆ. ಗುಣಾತ್ಮಕ ಶಿಕ್ಷಣ ಪಡೆಯದೇ ವೈದ್ಯಕೀಯ, ಕಲಾ ಸೇರಿ ಎಲ್ಲಾ ವಿಭಾಗದಿಂದಲೂ ವಿದ್ಯಾರ್ಥಿಗಳು ಹೊರ ಬರುತ್ತಿದ್ದಾರೆ. ಅದರಲ್ಲಿ ಎಲ್ಲರೂ ಪರಿಪೂರ್ಣವಾಗಿ ಉದ್ಯೋಗ ಪಡೆಯಲು ಸಾಧ್ಯವಾಗುತ್ತಿಲ್ಲ. ಇದಕ್ಕೆ ಕೌಶಾಲ್ಯಾಧಾರಿತ ಶಿಕ್ಷಣ ಪಡೆಯದಿರುವುದು ಕಾರಣ ಎಂದು ತಿಳಿಸಿದರು.

ನಿಡುಗಲ್ಲೆಂಬೋದು ಏಳು ಸುತ್ತಿನ ಕೋಟೆ ಪುಸ್ತಕದ ಬಗ್ಗೆ ಮಾತನಾಡಿದ ಬೆಂಗಳೂರಿನ ದೇಶೀ ವಿದ್ವಾಂಸ ಡಾ.ಪ್ರಸನ್ನ ನಂಜಾಪುರ, ಈ ಕೃತಿ ದೇಶಿ ಪರಂಪರೆ ಕಟ್ಟಿಕೊಟ್ಟಿದೆ. ಜಾಗತೀಕರಣ, ಮಿತಿ ಮೀರಿತ ಆಧುನಿಕತೆಯಿಂದ ದೇಶೀ ಬದುಕಿನ ತಲ್ಲಣಗಳಿಗೆ ಇಂತಹ ಕಾವ್ಯಗಳು ಮದ್ದಾಗಿರುತ್ತದೆ. ಈ ಕಾವ್ಯದ ಒಂದೊಂದು ಲೇಖನಗಳು ಒಂದೊಂದು ದೃಷ್ಟಿಕೋನದಲ್ಲಿ ಅನಾವರಣಗೊಂಡಿವೆ. ಜಾನಪದ ಸಂಸ್ಕೃತಿ ಸೇರಿ ವಿವಿಧ ಆಯಾಮದಲ್ಲಿ ಈ ದೇಶೀ ಕಾವ್ಯ ಮುದ್ರಣಗೊಂಡಿದೆ. ಆಧುನಿಕತೆ ಬೆಳೆದಂತೆಲ್ಲಾ ಕೆಲವು ಪಿಡುಗುಗಳು ಉತ್ಪಾದನೆ, ಒತ್ತುವರಿ ಮಾಡುತ್ತಿವೆ. ಇಂತಹ ಪ್ರಕ್ರಿಯೆ ತಡೆಯಲು ನಾವು ನಮ್ಮ ಜ್ಞಾನ ಪರಂಪರೆ ಕಡೆ ಹೋಗಬೇಕು. ಅದು ಜಾನಪದ ಕಥನ ಕಾವ್ಯದಲ್ಲಿದೆ ಎಂದರು.

ದಾವಿವಿ ಕುಲಪತಿ ಡಾ.ಬಿ.ಡಿ.ಕುಂಬಾರ ಅಧ್ಯಕ್ಷತೆ ವಹಿಸಿದ್ದರು. ಕನ್ನಡ ಅಧ್ಯಯನ ಮತ್ತು ಸಂಶೋಧನಾ ಕೇಂದ್ರದ ಅಧ್ಯಕ್ಷ ಡಾ. ಜೋಗಿನಕಟ್ಟೆ ಮಂಜುನಾಥ, ಕೃತಿಯ ಸಂಪಾದಕ ಡಾ.ವಿ.ಜಯರಾಮಯ್ಯ ಇತರರಿದ್ದರು. ವಿವಿಧ ಗೋಷ್ಠಿಗಳ ಅಧ್ಯಕ್ಷತೆಯ ಸಹ ಪ್ರಾಧ್ಯಾಪಕ ಡಾ.ಕೆ.ಮಲ್ಲಿಕಾರ್ಜುನ, ಸಹಾಯಕ ಪ್ರಾಧ್ಯಾಪಕ ಡಾ.ಭೀಮಾಶಂಕರ ಜೋಷಿ, ಸಹಾಯಕ ಪ್ರಾಧ್ಯಾಪಕರಾದ ಡಾ.ಮಂಹಾತೇಶ ಪಾಟೀಲ, ಡಾ.ಎಚ್‌.ವಿ.ಶಾಂತರಾಜ, ಡಾ.ಎಚ್‌.ಜಿ. ವಿಜಯಕುಮಾರ. ವಹಿಸಿದ್ದರು. ಕನ್ನಡ ಅಧ್ಯಯನ ಮತ್ತು ಸಂಶೋಧನಾ ಕೇಂದ್ರದ ವಿದ್ಯಾರ್ಥಿಗಳಿದ್ದರು.

ಕೌಶ್ಯಲ್ಯತೆ ಬೆಳೆಸಿಕೊಳ್ಳಿ

ನಿರಂತರ ಅಧ್ಯಯನದ ಮೂಲಕ ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಾಗಿ, ನಿಮ್ಮ ಜ್ಞಾನ, ಶಕ್ತಿ ಜಾಗೃತಗೊಳಿಸಿಕೊಂಡು ಶಿಕ್ಷಣದ ಜೊತೆ ಉದ್ಯೋಗ ಕಂಡುಕೊಳ್ಳುವ ಕೌಶ್ಯಲ್ಯತೆ ಬೆಳೆಸಿಕೊಳ್ಳಿ. ನಿಮ್ಮ ಬದುಕಿಗೆ ನೀವೇ ದಾರಿದೀಪವಾಗಬೇಕು, ಎಲ್ಲರಿಗೂ ಉದ್ಯೋಗಾವಕಾಶವಿದೆ, ಯಾರೂ ಭಯಪಡಬೇಕಿಲ್ಲ.

ಪ್ರೊ.ಡಿ.ಕೆ.ಚಿತ್ತಯ್ಯ ಪೂಜಾರ್, ಲೇಖಕ
ವಿದ್ಯಾರ್ಥಿಗಳು ಭಾಷೆ ಮೇಲೆ ಹಿಡಿತ ಸಾಧಿಸಿ

ಪ್ರೊ.ಡಿ.ಕೆ.ಚಿತ್ತಯ್ಯ ಪೂಜಾರ ಸಾಹಿತ್ಯಿಕವಾಗಿ ಮಾತ್ರವಲ್ಲ ಸಾಂಸ್ಕೃತಿಕವಾಗಿ ಕೆಲಸ ಮಾಡುತ್ತಿದ್ದಾರೆ. ಹೊಟ್ಟಣನಾಯಕನ ಕಥನ ಕಾವ್ಯ ಬರೆಯದೆ ಹೋಗಿದ್ದರೆ, ಈ ವಿಚಾರ ಸಂಕಿರಣ ಸಾಧ್ಯವಾಗುತ್ತಿರಲಿಲ್ಲ. ಕನ್ನಡ ಸಾಹಿತ್ಯ ವಿಭಾಗದಿಂದ ಪ್ರತಿ 6 ತಿಂಗಳಿಗೊಮ್ಮೆ ರಾಜ್ಯಮಟ್ಟದ ವಿಚಾರ ಸಂಕಿರಣ ಆಯೋಜಿಸಬೇಕು. ಇಂದಿನ ವಿದ್ಯಾರ್ಥಿಗಳಲ್ಲಿ ಸಾಹಿತ್ಯ, ಓದಿನ ಆಸಕ್ತಿ ಇಲ್ಲದಾಗಿದೆ. ಇಂತಹ ಕಾರ್ಯಕ್ರಮ ವಿದ್ಯಾರ್ಥಿಗಳಿಗೆ ಪ್ರೇರಣೆ ನೀಡಲಿದೆ. ಪ್ರತಿ ವಿದ್ಯಾರ್ಥಿಯು ಕಠಿಣ ಪರಿಶ್ರಮ, ಭಾಷೆ ಮೇಲೆ ಹಿಡಿತ ಸಾಧಿಸಿ, ನಿಮ್ಮ ಜವಾಬ್ದಾರಿ ಅರಿತಾಗ ಯಶಸ್ಸು ನಿಶ್ಚಿತ.

ಡಾ.ಬಿ.ಡಿ. ಕುಂಬಾರ, ಕುಲಪತಿ, ದಾವಿವಿ.