ಪರಿಸರ ಉಳಿಸುವ ಜವಾಬ್ದಾರಿ ವಿದ್ಯಾರ್ಥಿಗಳ ಮೇಲಿದೆ: ಮೂಲಿಮನೆ ಈರಣ್ಣ

| Published : Jan 08 2025, 12:16 AM IST

ಪರಿಸರ ಉಳಿಸುವ ಜವಾಬ್ದಾರಿ ವಿದ್ಯಾರ್ಥಿಗಳ ಮೇಲಿದೆ: ಮೂಲಿಮನೆ ಈರಣ್ಣ
Share this Article
  • FB
  • TW
  • Linkdin
  • Email

ಸಾರಾಂಶ

ಚೋರುನೂರು ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ರೀಚ್ ಸಂಸ್ಥೆಯ ಸಹಯೋಗದಲ್ಲಿ ಸಾವಿತ್ರಿಬಾಯಿ ಫುಲೆ ಅವರ 194ನೇ ಜನ್ಮ ದಿನ ಆಚರಿಸಲಾಯಿತು

ಸಂಡೂರು: ಅಭಿವೃದ್ಧಿ ಹೆಸರಿನಲ್ಲಿ ಮಾನವ ನಡೆಸುತ್ತಿರುವ ದೌರ್ಜನ್ಯದಿಂದ ಪರಿಸರ ಮಾಲಿನ್ಯವಾಗುತ್ತಿದೆ. ನಮ್ಮ ಸುತ್ತಲಿನ ವಾತಾವರಣ ಕಲುಷಿತಗೊಳ್ಳುತ್ತಿದೆ. ಭವಿಷ್ಯದ ಪೀಳಿಗೆಗೆ ಪರಿಸರವನ್ನು ಉಳಿಸುವ ಜವಾಬ್ದಾರಿ ಈಗಿನ ವಿದ್ಯಾರ್ಥಿಗಳ ಮೇಲಿದೆ ಎಂದು ಪರಿಸರವಾದಿ ಮೂಲಿಮನೆ ಈರಣ್ಣ ಅಭಿಪ್ರಾಯಪಟ್ಟರು.

ತಾಲೂಕಿನ ಚೋರುನೂರು ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ರೀಚ್ ಸಂಸ್ಥೆಯ ಸಹಯೋಗದಲ್ಲಿ ಸಾವಿತ್ರಿಬಾಯಿ ಫುಲೆ ಅವರ 194ನೇ ಜನ್ಮ ದಿನಾಚರಣೆ ಅಂಗವಾಗಿ ಹಮ್ಮಿಕೊಂಡಿದ್ದ ಸಸಿ ನೆಡುವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ವಾಯು, ನೆಲ-ಜಲ ಪಂಚಭೂತಗಳೂ ಮಾಲಿನ್ಯಕ್ಕೆ ಒಳಗಾಗುತ್ತಿರುವುದು ಅತ್ಯಂತ ವಿಷಾದದ ಸಂಗತಿಯಾಗಿದೆ. ಉಸಿರಾಡಲು ಶುದ್ಧಗಾಳಿಯ ಖರೀದಿಗಾಗಿ ಜನ ಕ್ಯೂ ನಿಲ್ಲುವಂತಹ ಪರಿಸ್ಥಿತಿ ನಿರ್ಮಾಣವಾಗುವ ಹಂತಕ್ಕೆ ಇಂದಿನ ಪರಿಸರವನ್ನು ನಾಶಪಡಿಸಲಾಗಿದೆ. ಅರಣ್ಯ ನಾಶದಿಂದ ಮಳೆಯ ಪ್ರಮಾಣ ಕಡಿಮೆಯಾಗುತ್ತಿದೆ. ಮನೆಗೊಂದು ಮರ ನೆಟ್ಟು, ಬೆಳೆಸಬೇಕಿದೆ. ಅಲ್ಲದೆ, ಉತ್ತಮ ಪರಿಸರ ನಿರ್ಮಾಣಕ್ಕೆ ವಿದ್ಯಾರ್ಥಿಗಳು ಮುಂದಾಗಬೇಕು ಎಂದು ತಿಳಿಸಿದರು.

ಸಮಾಜಶಾಸ್ತ್ರ ಉಪನ್ಯಾಸಕ ಡಾ. ಎಂ. ರಾಜಣ್ಣ ಮಾತನಾಡಿ, ಸಾವಿತ್ರಿಬಾಯಿ ಫುಲೆ ಅವರ ತ್ಯಾಗ, ಶ್ರಮದಿಂದ ದೇಶದಲ್ಲಿ ಮಹಿಳೆಯರು ಶಿಕ್ಷಣ ಪಡೆಯಲು ಸಾಧ್ಯವಾಯಿತು. ಅವರು ಅಂದಿನ ಸಮಾಜದಲ್ಲಿದ್ದ ಅನಿಷ್ಟ ಪದ್ಧತಿಗಳನ್ನು ಖಂಡಿಸಿದರು.

ಮಹಿಳೆಯರಿಗಾಗಿ ಶಾಲೆಗಳನ್ನು ತೆರೆದು ಶಿಕ್ಷಣ ಕ್ಷೇತ್ರದಲ್ಲಿ ಕ್ರಾಂತಿ ಉಂಟು ಮಾಡಿದರು. ಅದರ ಫಲವಾಗಿ ಇಂದು ಮಹಿಳೆಯರು ಘನತೆ, ಗೌರವದಿಂದ ಸರಿಸಮಾನವಾಗಿ ಬದುಕುವ ಅವಕಾಶವನ್ನು ಸಂವಿಧಾನಾತ್ಮಕವಾಗಿ ಪಡೆದುಕೊಂಡಿದ್ದಾರೆ. ಅವರ ಸಾಧನೆಗಳು ಎಲ್ಲರಿಗೂ ಸ್ಫೂರ್ತಿದಾಯಕವಾಗಿದೆ ಎಂದರು.

ರೀಚ್ ಸಂಸ್ಥೆಯ ತಾಲೂಕು ಸಂಯೋಜಕ ಡಾ. ಎಚ್. ಯರಿಸ್ವಾಮಿ ಮಾತನಾಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಚಾರ್ಯ ಶರಣ ಬಸವಯ್ಯ ವಹಿಸಿದ್ದರು. ಗ್ರಾಮ ಪಂಚಾಯ್ತಿ ಗ್ರಂಥಾಲಯದ ಮೇಲ್ವಿಚಾರಕ ನಾಗರಾಜ್, ಉಪನ್ಯಾಸಕ ನಾಗರಾಜ್, ಓಬಳೇಶ್, ಪ್ರಕಾಶ್, ಸುಗಂಧಿನಿ, ಸೇತುಮಾಧವ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.