ವಿದ್ಯಾರ್ಥಿಗಳು ಸೇವಾದಳದ ಸದಸ್ಯರಾಗಿ: ಶೇಕ್‌ ಆಲಿ

| Published : Jan 22 2024, 02:18 AM IST

ವಿದ್ಯಾರ್ಥಿಗಳು ಸೇವಾದಳದ ಸದಸ್ಯರಾಗಿ: ಶೇಕ್‌ ಆಲಿ
Share this Article
  • FB
  • TW
  • Linkdin
  • Email

ಸಾರಾಂಶ

ಭಾರತ ಸೇವಾದಳದ ತಾಲೂಕು ಘಟಕದ ಕಾರ್ಯಕ್ರಮ ಉದ್ಘಾಟಿಸಿ ತಾಲೂಕು ಕ್ರೀಡಾಧಿಕಾರಿ ಶೇಕ್ ಆಲಿ ಅಭಿಮತ ವ್ಯಕ್ತಪಡಿಸಿದರು. ಮಕ್ಕಳಲ್ಲಿ ದೇಶಭಕ್ತಿ ರಾಷ್ಟ್ರ ಪ್ರೇಮ, ಶಿಸ್ತು, ತ್ಯಾಗ ಮನೋಭಾವ ಬೆಳವಣೆಗೆಗೆ ಸೇವಾದಳ ಸಹಕಾರಿ ಎಂದರು.

ಕನ್ನಡಪ್ರಭ ವಾರ್ತೆ ಚಿಕ್ಕಮಗಳೂರು

ರಾಷ್ಟ್ರಭಕ್ತಿ ದೇಶಪ್ರೇಮ ಮತ್ತು ಶಿಸ್ತನ್ನು ಮೈಗೂಡಿಸಿಕೊಳ್ಳುವ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಸೇವಾದಳಕ್ಕೆ ಸದಸ್ಯರಾಗಬೇಕು ಎಂದು ತಾಲೂಕು ಕ್ರೀಡಾಧಿಕಾರಿ ಶೇಕ್ ಆಲಿ ಹೇಳಿದರು

ಹಿರೇಮಗಳೂರಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಭಾರತ ಸೇವಾದಳದ ತಾಲೂಕು ಘಟಕ ಏರ್ಪಡಿಸಿದ್ದ ಸೇವಾದಳ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಭಾರತ ಸೇವಾದಳ ತ್ಯಾಗ ಮತ್ತು ಶಿಸ್ತಿಗೆ ಹೆಸರಾದ ಸಂಸ್ಥೆ. ದೇಶದ ಸ್ವಾತಂತ್ರ ಹೋರಾಟಕ್ಕೆ ರಾಷ್ಟ್ರಭಕ್ತರನ್ನು ನೀಡಿದ ಹೆಗ್ಗಳಿಕೆ ಸೇವಾದಳಕ್ಕಿದೆ ಎಂದರು.

ಭಾರತ ಸೇವಾದಳಕ್ಕೆ ಸೇರ್ಪಡೆಯಾಗುವುದರಿಂದ ಮಕ್ಕಳಲ್ಲಿ ದೇಶಭಕ್ತಿ ರಾಷ್ಟ್ರ ಪ್ರೇಮ, ಶಿಸ್ತು, ತ್ಯಾಗ ಮನೋಭಾವ ಬೆಳೆಯುತ್ತದೆ ಎಂದ ಅವರು, ಪೋಷಕರು ಇದನ್ನು ಅರಿತು ತಮ್ಮ ಮಕ್ಕಳನ್ನು ಸೇವಾದಳಕ್ಕೆ ಸೇರಿಸಲು ಮುಂದಾಗಬೇಕು ಎಂದು ಕಿವಿಮಾತು ಹೇಳಿದರು.

ಭಾರತ ಸೇವಾದಳದ ಜಿಲ್ಲಾ ಕಾರ್ಯದರ್ಶಿ ಹಂಪಯ್ಯ ಮಾತನಾಡಿ, ವಿದ್ಯಾರ್ಥಿಗಳಲ್ಲಿ ರಾಷ್ಟ್ರಪ್ರೇಮ ಬೆಳೆಸುವ ನಿಟ್ಟಿನಲ್ಲಿ ಪ್ರತಿ ಶಾಲೆಗಳಲ್ಲೂ ಸೇವಾದಳದ ಘಟಕ ಸ್ಥಾಪಿಸಬೇಕು ಎಂದು ಮನವಿ ಮಾಡಿದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಭಾರತ ಸೇವಾದಳದ ನಿಕಟ ಪೂರ್ವ ತಾಲೂಕು ಸಂಘಟಕ ಎಸ್. ಈ. ಲೋಕೇಶ್ವರಾಚಾರ್ ಮಕ್ಕಳಲ್ಲಿ ರಾಷ್ಟ್ರೀಯತೆ, ದೇಶಭಕ್ತಿ, ದೇಶಪ್ರೇಮ, ರಾಷ್ಟ್ರಧ್ವಜ, ರಾಷ್ಟ್ರಗೀತೆ, ಭಾವೈಕ್ಯತೆ ಬಗ್ಗೆ ಅರಿವು ಮೂಡಿಸುವ ನಿಟ್ಟಿನಲ್ಲಿ ಸೇವಾದಳದಿಂದ ಪ್ರತಿ ವಾರಕ್ಕೊಂದು ಶಾಲೆಗಳಲ್ಲಿ ಸೇವಾದಳ ಕಾರ್ಯಕ್ರಮ ನಡೆಸಲಾಗುತ್ತದೆ ಎಂದು ತಿಳಿಸಿದರು.

ರಾಷ್ಟ್ರಗೀತೆ, ರಾಷ್ಟ್ರಧ್ವಜ, ಭಾರತ ಸೇವಾದಳದ ಇತಿಹಾಸ ಕುರಿತು ವಿದ್ಯಾರ್ಥಿಗಳಿಗೆ ವಿವರಿಸಲಾಯಿತು. ಭಾರತ ಸೇವಾದಳದ ತಾಲೂಕು ಕಾರ್ಯದರ್ಶಿ ಮಹೇಶಪ್ಪ, ಉಪಾಧ್ಯಕ್ಷ ಕಾಳಯ್ಯ, ಜಿಲ್ಲಾ ಸಂಘಟನಾ ಚಂದ್ರಕಾಂತ, ಮುಖ್ಯ ಶಿಕ್ಷಕಿ ಶಿವಮ್ಮ, ಶಿಕ್ಷಕರಾದ ವಿಲ್ಮಾ, ರಾಧಾಮಣಿ ಉಪಸ್ಥಿತರಿದ್ದರು.