ವಿದ್ಯಾರ್ಥಿಗಳ ಶೈಕ್ಷಣಿಕ ಬೇಡಿಕೆಗಳ ಈಡೇರಿಕೆಗಾಗಿ ಆಗ್ರಹಿಸಿ ಭಾರತ ವಿದ್ಯಾರ್ಥಿ ಫೆಡರೇಶನ್ (ಎಸ್‌ಎಫ್‌ಐ) ಕರ್ನಾಟಕ ರಾಜ್ಯ ಸಮಿತಿ ನೇತೃತ್ವದಲ್ಲಿ ಡಿ. ೧೨ರಂದು ವಿದ್ಯಾರ್ಥಿಗಳು "ಬೆಳಗಾವಿ ಚಲೋ " ಹಮ್ಮಿಕೊಂಡಿದ್ದು ಶಿಗ್ಗಾಂವಿ ಸರ್ಕಾರಿ ಪ್ರಥಮ ದರ್ಜೆ ಮಹಾವಿದ್ಯಾಲಯದ ಎದುರು ಹಕ್ಕೊತ್ತಾಯಗಳ ಪೋಸ್ಟರ್ ಪ್ರದರ್ಶನ ಮಾಡಲಾಯಿತು.

ಶಿಗ್ಗಾಂವಿ: ವಿದ್ಯಾರ್ಥಿಗಳ ಶೈಕ್ಷಣಿಕ ಬೇಡಿಕೆಗಳ ಈಡೇರಿಕೆಗಾಗಿ ಆಗ್ರಹಿಸಿ ಭಾರತ ವಿದ್ಯಾರ್ಥಿ ಫೆಡರೇಶನ್ (ಎಸ್‌ಎಫ್‌ಐ) ಕರ್ನಾಟಕ ರಾಜ್ಯ ಸಮಿತಿ ನೇತೃತ್ವದಲ್ಲಿ ಡಿ. ೧೨ರಂದು ವಿದ್ಯಾರ್ಥಿಗಳು "ಬೆಳಗಾವಿ ಚಲೋ " ಹಮ್ಮಿಕೊಂಡಿದ್ದು, ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಮಹಾವಿದ್ಯಾಲಯದ ಎದುರು ಹಕ್ಕೊತ್ತಾಯಗಳ ಪೋಸ್ಟರ್ ಪ್ರದರ್ಶನ ಮಾಡಲಾಯಿತು.

ಎಸ್‌ಎಫ್‌ಐ ಜಿಲ್ಲಾಧ್ಯಕ್ಷ ಬಸವರಾಜ ಎಸ್. ಮಾತನಾಡಿ, ಸರ್ಕಾರ ತನ್ನ ಬಜೆಟ್‌ನಲ್ಲಿ ಶಿಕ್ಷಣಕ್ಕೆ ೨೦೨೪-೨೫ನೇ ಸಾಲಿನಲ್ಲಿ ಕೇವಲ ಶೇ. ೧೦.೮ರಷ್ಟು (೩೭,೦೪೩ ಕೋಟಿ) ಮಾತ್ರ ನೀಡಿದೆ. ಇಂದಿನ ರಾಜ್ಯ ಸರ್ಕಾರ ಶಿಕ್ಷಣದ ಗುಣಮಟ್ಟ ಹೆಚ್ಚಿಸಲು ವಿಫಲವಾಗಿವೆ. ಸರ್ಕಾರಿ ಶಾಲಾ, ಕಾಲೇಜುಗಳಿಗೆ ಸರಿಯಾದ ಮೂಲಭೂತ ಸೌಕರ್ಯ, ಶಿಕ್ಷಕರ ನೇಮಕ, ಸರ್ಕಾರಿ ಶಾಲೆಗಳಿಗೆ ಸುಸಜ್ಜಿತ ಕಟ್ಟಡ, ಶೌಚಾಲಯ ನಿರ್ಮಾಣ, ಸಮಯಕ್ಕೆ ಸರಿಯಾಗಿ ಪಠ್ಯ ಪುಸ್ತಕ ವಿತರಣೆಯಾಗುತ್ತಿಲ್ಲದ ಕಾರಣ ಸರ್ಕಾರಿ ಶಾಲೆಗಳಲ್ಲಿ ದಾಖಲಾತಿ ಪ್ರಮಾಣ ವರ್ಷದಿಂದ ವರ್ಷಕ್ಕೆ ಕುಸಿಯುತ್ತಿದೆ. ಇದನ್ನೆಲ್ಲ ಕಡೆಗಣಿಸಿ ಪಂಚಾಯಿತಿಗೊಂದು ಕೆಪಿಎಸ್‌ ಶಾಲೆ ತೆರೆಯಲಾಗುತ್ತಿದೆ. ೫ ಕಿಮೀ ವ್ಯಾಪ್ತಿಯ ಸರ್ಕಾರಿ ಶಾಲೆಗಳ ಕಡಿಮೆ ದಾಖಲಾತಿ ನೆಪಹೇಳಿ ವಿಲೀನದ ಹೆಸರಿನಲ್ಲಿ ಮುಚ್ಚಲು ಮುಂದಾಗಿದೆ ಎಂದು ಆರೋಪಿಸಿದರು.

ಮೂಲಭೂತ ಸೌಕರ್ಯಗಳು, ಆಹಾರ ಭತ್ಯೆಯನ್ನು ಕನಿಷ್ಠ ₹೪೫೦೦ಕ್ಕೆ ಏರಿಕೆ ಮಾಡುವಂತೆ, ವಿದ್ಯಾರ್ಥಿವೇತನ, ಅಂಕಪಟ್ಟಿ ಸಮಸ್ಯೆಗಳು, ವಿಶ್ವವಿದ್ಯಾಲಯಗಳಿಗೆ ಅನುದಾನ, ಶಿಕ್ಷಣ ಕ್ಷೇತ್ರದಲ್ಲಿ ನಡೆಯುತ್ತಿರುವ ಭಾರಿ ಭ್ರಷ್ಟಾಚಾರದ ತನಿಖೆಗಾಗಿ ಸೇರಿದಂತೆ ವಿದ್ಯಾರ್ಥಿ ಸಮುದಾಯದ ವಿವಿಧ ಶೈಕ್ಷಣಿಕ ಬೇಡಿಕೆಗಳ ಈಡೇರಿಕೆಗಾಗಿ ಚಳಿಗಾಲದ ಅಧಿವೇಶನದಲ್ಲಿ ಚರ್ಚೆಗೆ ಆಗ್ರಹಿಸಿ ಎಸ್‌ಎಫ್‌ಐ ಕರ್ನಾಟಕ ರಾಜ್ಯ ಸಮಿತಿ ಡಿ. ೧೨ರಂದು ಬೆಳಗಾವಿಯಲ್ಲಿ ನಡೆಯುವ ಚಳಿಗಾಲದ ಅಧಿವೇಶನಕ್ಕೆ ಮುತ್ತಿಗೆ ಹಾಕಲು ರಾಜ್ಯದ ಮೂಲೆ ಮೂಲೆಗಳಿಂದ ಸಾವಿರಾರು ವಿದ್ಯಾರ್ಥಿಗಳು ಭಾಗಿಯಾಗಲಿದ್ದಾರೆ. ವಿದ್ಯಾರ್ಥಿಗಳು ಪಾಲ್ಗೊಂಡು ಯಶಸ್ವಿಗೊಳಿಸಿ ಎಂದು ಕರೆ ನೀಡಿದರು.ಎಸ್‌ಎಫ್‌ಐ ತಾಲೂಕು ಕಾರ್ಯದರ್ಶಿ ಅಣ್ಣಪ್ಪ ಕೊರವರ ಮಾತನಾಡಿ, ವಿಶ್ವವಿದ್ಯಾಲಯಗಳಲ್ಲಿ ಸಂಶೋಧನೆಗಳ ಪ್ರಮಾಣ ಕುಸಿಯುತ್ತಿವೆ ಮತ್ತು ಸಂಶೋಧನೆ ಕೈಗೊಳ್ಳುವ ವಿದ್ಯಾರ್ಥಿಗಳಿಗೆ ಸರಿಯಾಗಿ ಫೆಲೋಶಿಪ್ ನೀಡಲಾಗುತ್ತಿಲ್ಲ ಎಂದು ಆರೋಪಿಸಿದರು.ಹಾಸ್ಟೆಲ್ ಅರ್ಜಿ ಸಲ್ಲಿಸಿದ ಎಲ್ಲ ವಿದ್ಯಾರ್ಥಿಗಳಿಗೆ ಹಾಸ್ಟೆಲ್ ಒದಗಿಸಲು ಅಗತ್ಯಕ್ಕೆ ಅನುಗುಣವಾಗಿ ಹೆಚ್ಚುವರಿಯಾಗಿ ಹೊಸ ಹಾಸ್ಟೆಲ್‌ಗಳನ್ನು ನಿರ್ಮಾಣ ಮಾಡಬೇಕಿದೆ ಎಂದರು.

ಈ ಸಂದರ್ಭದಲ್ಲಿ ಅಭಿಷೇಕ ಎನ್.ಡಿ., ಪ್ರತಾಪ ಕೆ.ಆರ್., ಸಚಿನ್ ಎಸ್.ಆರ್., ನಾಗರಾಜ ಕೆ.ಆರ್., ಆಕಾಶ್ ಎಮ್.ಡಿ., ಫಕ್ಕಿರೇಶ್, ಅಲ್ಲಾಬಕ್ಷ ಎಚ್.ಡಿ. ಪಾಲ್ಗೊಂಡಿದ್ದರು.ಹಕ್ಕೊತ್ತಾಯಗಳು: ಶಾಲೆಗಳನ್ನು ಮುಚ್ಚಬಾರದು, ಹಾಸ್ಟೆಲ್ ವಿದ್ಯಾರ್ಥಿಗಳಿಗೆ ಮಾಸಿಕ ₹೪,೫೦೦ ಆಹಾರ ಭತ್ಯೆ ನೀಡಬೇಕು, ಅರ್ಜಿ ಹಾಕಿದ ಎಲ್ಲಾ ವಿದ್ಯಾರ್ಥಿಗಳಿಗೆ ಹಾಸ್ಟೆಲ್ ಸೌಲಭ್ಯ ಕಲ್ಪಿಸಬೇಕು. ಸರ್ಕಾರಿ ಶಾಲೆ-ಕಾಲೇಜುಗಳಿಗೆ ಸುಸಜ್ಜಿತ ಕಟ್ಟಡ, ಶೌಚಾಲಯ ಮತ್ತು ಮೂಲಭೂತ ಸೌಕರ್ಯ ಕಲ್ಪಿಸಬೇಕು. ೮ನೇ ತರಗತಿ ವಿದ್ಯಾರ್ಥಿಗಳಿಗೆ ಸೈಕಲ್ ವಿತರಣೆ ಮಾಡಬೇಕು. ೩೦ ಲಕ್ಷಕ್ಕೂ ಅಧಿಕ ವಿದ್ಯಾರ್ಥಿಗಳ ಅಂಕಪಟ್ಟಿ ವಿತರಣೆ ಮಾಡಬೇಕು. ಬಜೆಟ್‌ನಲ್ಲಿ ಶಿಕ್ಷಣಕ್ಕೆ ಶೇ. ೩೦ರಷ್ಟು ಅನುದಾನ ಮೀಸಲಿಡಬೇಕು. ವಿದ್ಯಾರ್ಥಿ ವೇತನ ತಕ್ಷಣ ಬಿಡುಗಡೆ ಮಾಡಬೇಕು. ಜಿಲ್ಲೆಗೊಂದು ಸರ್ಕಾರಿ ಬಿಇಡಿ, ಕಾನೂನು, ಮೆಡಿಕಲ್ ಮತ್ತು ಎಂಜಿನಿಯರಿಂಗ್ ಕಾಲೇಜು ಸ್ಥಾಪನೆ ಮಾಡಬೇಕು. ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್ ನೀಡಿ, ಸಾರಿಗೆ ಸಂಪರ್ಕ ಕಲ್ಪಿಸಬೇಕು. ಖಾಲಿ ಇರುವ ಶಿಕ್ಷಕರ ಹುದ್ದೆಗಳಿಗೆ ನೇಮಕ ಮಾಡಿಕೊಳ್ಳಬೇಕು. ವಿಶ್ವವಿದ್ಯಾಲಯಗಳಿಗೆ ಪ್ರತ್ಯೇಕ ಅನುದಾನ ನೀಡಬೇಕು.