ಬೈಲೂರಲ್ಲಿ ವಿದ್ಯಾರ್ಥಿಗಳಿಂದ ಬಸ್‌ ತಡೆದು ಪ್ರತಿಭಟನೆ

| Published : Jun 28 2024, 12:55 AM IST

ಬೈಲೂರಲ್ಲಿ ವಿದ್ಯಾರ್ಥಿಗಳಿಂದ ಬಸ್‌ ತಡೆದು ಪ್ರತಿಭಟನೆ
Share this Article
  • FB
  • TW
  • Linkdin
  • Email

ಸಾರಾಂಶ

ಹನೂರು ತಾಲೂಕಿನ ಬೈಲೂರು ಗ್ರಾಮದಲ್ಲಿ ವಿದ್ಯಾರ್ಥಿಗಳಿಂದ ನಿಗದಿತ ಸಮಯಕ್ಕೆ ಸಾರಿಗೆ ವಾಹನ ಕಲ್ಪಿಸುವಂತೆ ಒತ್ತಾಯಿಸಿ ಪ್ರತಿಭಟನೆ ನಡೆಸಿದರು.

ಕನ್ನಡಪ್ರಭ ವಾರ್ತೆ ಹನೂರು

ನಿಗದಿತ ಸಮಯಕ್ಕೆ ಸಾರಿಗೆ ಸೌಲಭ್ಯ ಕಲ್ಪಿಸುವಂತೆ ಒತ್ತಾಯಿಸಿ ತಾಲೂಕಿನ ಬೈಲೂರು ಗ್ರಾಮದಲ್ಲಿ ಬಸ್ ತಡೆದು ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದರು.

ಗ್ರಾಮದಲ್ಲಿ ಬಸ್‌ ತಡೆದ ವಿದ್ಯಾರ್ಥಿಗಳು ಜಿಲ್ಲಾಡಳಿತ ಹಾಗೂ ಸಾರಿಗೆ ಇಲಾಖೆಯ ಅಧಿಕಾರಿಗಳ ವಿರುದ್ಧ ಧಿಕ್ಕಾರ ಕೂಗಿ ನಿಗದಿತ ಸಮಯಕ್ಕೆ ವಾಹನ ಸೌಲಭ್ಯ ಕಲ್ಪಿಸುವಂತೆ ಒತ್ತಾಯಿಸಿದರು.

ಬೈಲೂರು ಶಾಲೆಗೆ ಒಡೆಯರಪಾಳ್ಯ, ಗುಂಡಿಮಾಳ, ಹುತ್ತೂರು, ಹುಣಸೆಪಾಳ್ಯ, ಕರಿಯಪ್ಪನ ದೊಡ್ಡಿ, ಕಾನ್ಮೋಲ್ ದೊಡ್ಡಿ, ಅರೆ ಕಡವಿನ ದೊಡ್ಡಿ ಸೇರಿದಂತೆ ವಿವಿಧ ಗ್ರಾಮಗಳಿಂದ ಪ್ರತಿನಿತ್ಯ ವಿದ್ಯಾರ್ಥಿಗಳು ಕರ್ನಾಟಕ ರಾಜ್ಯ ಸಾರಿಗೆ ವಾಹನವನ್ನು ಅವಲಂಭಿಸಿದ್ದು ನಿಗದಿತ ಸಮಯಕ್ಕೆ ಸಾರಿಗೆ ವಾಹನ ಬಾರದೆ ಬೆಳಗಿನ ಸಮಯದಲ್ಲಿ ಮಕ್ಕಳು ದಿನನಿತ್ಯ ಪರದಾಡುವಂತಾಗಿದೆ ಎಂದು ದೂರಿದರು.

ಗಂಟೆಗಟ್ಟಲೆ ತಡವಾಗಿ ಬರುವ ವಾಹನದಿಂದ ಈ ಭಾಗದ ಮಕ್ಕಳ ಶೈಕ್ಷಣಿಕ ಪ್ರಗತಿಗೆ ಕುಂಠಿತವಾಗುತ್ತಿದ್ದು, ಹತ್ತಾರು ಬಾರಿ ಸಂಬಂಧಪಟ್ಟ ಸಾರಿಗೆ ಇಲಾಖೆ ಅಧಿಕಾರಿಗಳಿಗೆ ನಿಗದಿತ ಸಮಯಕ್ಕೆ ವಾಹನ ಸೌಲಭ್ಯ ಕಲ್ಪಿಸುವಂತೆ ಮನವಿ ಮಾಡಿದರು. ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ನಿರ್ಲಕ್ಷತನದಿಂದ ವಿದ್ಯಾರ್ಥಿಗಳು ಶಾಲಾ-ಕಾಲೇಜಿಗೆ ನಿಗದಿತ ಸಮಯಕ್ಕೆ ತೆರಳದೆ ಪಾಠ ಪ್ರವಚನದಲ್ಲಿ ತೊಡಗಿಸಿಕೊಳ್ಳಲು ದಿನನಿತ್ಯ ಪರಿಪಾಠಲು ಪಡುವಂತಾಗಿದೆ. ಬಹುತೇಕ ಗ್ರಾಮಗಳಿಂದ ಬರುವ ಸರ್ಕಾರಿ ಶಾಲೆ ವಿದ್ಯಾರ್ಥಿಗಳಿಗೆ ನಿಗದಿತ ಸಮಯಕ್ಕೆ ಸಾರಿಗೆ ವ್ಯವಸ್ಥೆಯನ್ನು ಜಿಲ್ಲಾಡಳಿತ ಹಾಗೂ ಸಾರಿಗೆ ಇಲಾಖೆ ಕಲ್ಪಿಸುವ ಮೂಲಕ ಮಕ್ಕಳ ಶೈಕ್ಷಣಿಕ ಪ್ರಗತಿಗೆ ಸ್ಪಂದಿಸಬೇಕು. ಇಲ್ಲದಿದ್ದರೆ ಸಂಘ-ಸಂಸ್ಥೆಗಳ ಜೊತೆಗೂಡಿ ಉಗ್ರವಾದ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗುತ್ತದೆ ಎಂದು ಎಚ್ಚರಿಕೆ ನೀಡಿದರು.