ತಂದೆ, ತಾಯಿ, ಗುರುಗಳ ಮಾರ್ಗದರ್ಶನದಲ್ಲಿ ಇಂದಿನ ವಿದ್ಯಾರ್ಥಿಗಳು ಶ್ರದ್ಧೆ, ಭಕ್ತಿಗಳಿಂದ ಅಭ್ಯಾಸ ಮಾಡುವ ಪ್ರವೃತ್ತಿಯನ್ನು ಬೆಳೆಸಿಕೊಂಡರೆ ಬದುಕಿನಲ್ಲಿ ಶ್ರೇಷ್ಠವ್ಯಕ್ತಿಗಳಾಗಿ ರೂಪುಗೊಳ್ಳಲು ಸಾಧ್ಯವಾಗುತ್ತದೆ ಎಂದು ಹಾಸನದ ಸರ್ಕಾರಿ ಕಲಾ ಕಾಲೇಜಿನ ಅತಿಥಿ ಉಪನ್ಯಾಸಕ ಜೆ ದಯಾನಂದ ತಿಳಿಸಿದರು.
ಕನ್ನಡಪ್ರಭ ವಾರ್ತೆ ತಿಪಟೂರು
ತಂದೆ, ತಾಯಿ, ಗುರುಗಳ ಮಾರ್ಗದರ್ಶನದಲ್ಲಿ ಇಂದಿನ ವಿದ್ಯಾರ್ಥಿಗಳು ಶ್ರದ್ಧೆ, ಭಕ್ತಿಗಳಿಂದ ಅಭ್ಯಾಸ ಮಾಡುವ ಪ್ರವೃತ್ತಿಯನ್ನು ಬೆಳೆಸಿಕೊಂಡರೆ ಬದುಕಿನಲ್ಲಿ ಶ್ರೇಷ್ಠವ್ಯಕ್ತಿಗಳಾಗಿ ರೂಪುಗೊಳ್ಳಲು ಸಾಧ್ಯವಾಗುತ್ತದೆ ಎಂದು ಹಾಸನದ ಸರ್ಕಾರಿ ಕಲಾ ಕಾಲೇಜಿನ ಅತಿಥಿ ಉಪನ್ಯಾಸಕ ಜೆ ದಯಾನಂದ ತಿಳಿಸಿದರು.ನಗರದ ಎಸ್.ವಿ.ಪಿ. ಸಂಯುಕ್ತ ಪದವಿ ಪೂರ್ವ ಕಾಲೇಜು, ಎನ್.ಎಸ್.ಎಂ. ಬಾಲಕಿಯರ ಪ್ರೌಢಶಾಲೆಗಳ ಸಹಯೋಗದಲ್ಲಿ ಏರ್ಪಡಿಸಿಕೊಂಡಿದ್ದ ವಿದ್ಯಾರ್ಥಿ ಸಂಘಗಳ ಸಮಾರೋಪ ಸಮಾರಂಭವನ್ನು ಉದ್ದೇಶಿಸಿ ಮಾತನಾಡುತ್ತಾ ವಿದ್ಯಾರ್ಥಿಗಳಲ್ಲಿ ಕಲಿಕಾ ಆಸಕ್ತಿ, ಶ್ರದ್ಧೆ, ಗುರಿಸಾಧಿಸುವ ಛಲವಿರಬೇಕು. ಅದಮ್ಯವಾದ ಆತ್ಮವಿಶ್ವಾಸದೊಂದಿಗೆ ಸಮಾಜದಲ್ಲಿ ನಡೆಯುವ ವಿದ್ಯಾಮಾನಗಳನ್ನು ಅರಿತುಕೊಳ್ಳುವಂತಹ ಶಿಕ್ಷಣವನ್ನೂ ಪಡೆದುಕೊಳ್ಳಬೇಕಾಗಿದೆ. ಸಾಧನೆ ಮತ್ತು ಸೇವೆಗಳ ಮಹತ್ವವನ್ನು ಅರಿತುಕೊಂಡು ಆದರ್ಶ ವ್ಯಕ್ತಿಗಳ ವಿಚಾರಧಾರೆಗಳನ್ನು ಆಳವಾಗಿ ಅಭ್ಯಾಸ ಮಾಡುತ್ತಾ ಉನ್ನತ ಶಿಕ್ಷಣವನ್ನು ಪಡೆಯುವ ಸಂಕಲ್ಪವನ್ನು ಮಾಡಬೇಕು. ಈ ದಿಸೆಯಲ್ಲಿ ಶಾಲಾ ಕಾಲೇಜುಗಳಲ್ಲಿರುವ ಹಾಗೂ ಸರ್ಕಾರಿ ಸೌಲಭ್ಯಗಳನ್ನು ಸದುಪಯೋಗಪಡಿಸಿಕೊಂಡು ಉಜ್ವಲ ಭವಿಷ್ಯವನ್ನು ರೂಪಿಸಕೊಳ್ಳುವತ್ತ ಚಿತ್ತವನ್ನು ಹರಿಸಬೇಕಾಗಿದೆ ಎಂದರು. ಕಾಲೇಜಿನ ಪ್ರಾಂಶುಪಾಲ ಕೆ.ಎನ್.ರೇಣುಕಯ್ಯ ಮಾತನಾಡಿ, ವಿದ್ಯಾರ್ಥಿಗಳು ದೂರದೃಷ್ಠಿ ಚಿಂತನೆ, ಸಂಶೋಧನಾ ಗುಣ, ವಿಮರ್ಶೆ ಪ್ರಜ್ಞೆಗಳನ್ನು ಚಿಕ್ಕವಯಸ್ಸಿನಲ್ಲಿಯೇ ಮೈಗೂಡಿಸಿಕೊಳ್ಳಬೇಕು. ನಮ್ಮ ನೆಲ ಮೂಲ ಸಂಸ್ಕೃತಿ, ಆಚಾರ ವಿಚಾರಗಳೊಂದಿಗೆ ವೈಚಾರಿಕ ಹಾಗೂ ವೈಜ್ಞಾನಿಕ ಮನೋಭಾವನೆಗಳನ್ನು ಬೆಳೆಸಿಕೊಳ್ಳಬೇಕು. ಶಿಸ್ತು ಮತ್ತು ಸಮಯಪಾಲನೆ ಇವುಗಳಿಗೆ ಹೆಚ್ಚು ಒತ್ತುಕೊಟ್ಟು, ಉತ್ತಮವಾಗಿ ಅಭ್ಯಾಸಮಾಡಿ ಸಮಾಜದಲ್ಲಿ ಕೀರ್ತಿವಂತರಾಗಬೇಕು. ಅದಕ್ಕಾಗಿ ತಮ್ಮ ತಂದೆ ತಾಯಿಗಳ ಕೌಟುಂಬಿಕ ಪರಿಸರ, ಲೋಕಜ್ಞಾನಗಳೊಂದಿಗೆ ಸಮಾಗಮವಾಗುವ ಪ್ರಜ್ಞಾವಂತಿಕೆಯನ್ನು ರೂಢಿಸಿಕೊಂಡು ಗುರಿಯನ್ನು ತಲುಪಿ ನೆಮ್ಮದಿಯ ಜೀವನವನ್ನು ಕಂಡುಕೊಳ್ಳಬೇಕಾಗಿದೆ ಎಂದರು. ಕ್ಷೇತ್ರ ಶಿಕ್ಷಣಾಧಿಕಾರಿ ಟಿ.ಎನ್. ತಾರಾಮಣಿಯವರು ಕ್ರೀಡೆ ಮತ್ತು ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ವಿಜೇತರಾದ ಮಕ್ಕಳಿಗೆ ಬಹುಮಾನ ವಿತರಿಸಿ ಹಾಗೂ ಹೊಂಬಾಳೆ ಮತ್ತು ಅರುಣೋದಯ ಕೈ ಬರಹದ ಸಂಚಿಕೆಗಳನ್ನು ಬಿಡುಗಡೆಮಾಡಿ ಮಾತನಾಡುತ್ತಾ ಮಕ್ಕಳಲ್ಲಿ ಪ್ರತಿನಿತ್ಯವು ಹೊಸತನವನ್ನು ಕಂಡುಕೊಳ್ಳುವ ಗುಣವಿರಬೇಕು. ಸ್ವಯಂ ಶಿಸ್ತನ್ನು ಬೆಳೆಸಿಕೊಂಡು ಆದರ್ಶವ್ಯಕ್ತಿಗಳಾಗಿ ಬೆಳೆಯಬೇಕು. ಉತ್ತಮ ಅಂಕಗಳ ಕಡೆಗೆ ಹೆಚ್ಚು ಗಮನಕೊಡದೆ ಜೀವನದ ಮೌಲ್ಯ ಮತ್ತು ಸಂಸ್ಕಾರಗಳನ್ನು ಬೆಳೆಸಿಕೊಳ್ಳುವ ಸದ್ಗುಣಗಳನ್ನು ಸಂಪಾದಿಸಿಕೊಳ್ಳಬೇಕಾದ ಅನಿವಾರ್ಯ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ತಿಳಿಸಿದರು. ಕಾರ್ಯಕ್ರಮದಲ್ಲಿ ಎಸ್.ವಿ.ಪಿ. ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಡಾ.ಶೈಲಾ ಸತೀಶ್ ಕುಮಾರ್, ಸುಮತಿ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಎಸ್.ಹರೀಶ್, ಕಾರ್ಯಕಾರಿ ಸಮಿತಿ ಸದಸ್ಯರಾದ ಎಸ್.ಬಿ. ರೇಣು, ವಿ.ಟೆಕ್ನೋ ನಿತಿನ್, ಹಿರಿಯ ಶಿಕ್ಷಕರುಗಳಾದ ವಿಜಯಕುಮಾರ್ ಎಂ. ಅರ್ಕಚಾರಿ, ವಿಜಯಕುಮಾರಿ, ಎನ್. ಬಿಂದು, ಕೆ.ಪಿ. ಹೇಮಲತಾ ಮುಂತಾದವರು ಉಪಸ್ಥಿತರಿದ್ದರು. ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಚಟುವಟಿಕೆಗಳು ಜರುಗಿದವು.