ಸಾರಾಂಶ
ಹರಿಹರ: ಪ್ರಸ್ತುತ ಜಾಗತಿಕ ವಿದ್ಯಮಾನದಲ್ಲಿ ಶ್ರಮ ವಹಿಸುವ ವಿದ್ಯಾರ್ಥಿಗಳಿಗೆ ಉತ್ತಮ ಭವಿಷ್ಯವಿದೆ ಎಂದು ಎಂಕೆಇಟಿ ವಿದ್ಯಾಸಂಸ್ಥೆ ಧರ್ಮದರ್ಶಿ ಆರ್.ಎಸ್. ಶ್ರೀವತ್ಸ ಹೇಳಿದರು.
ನಗರದ ಎಂಕೆಇಟಿ ಸಿಬಿಎಸ್‌ಸಿ ಶಾಲೆಯಲ್ಲಿ ಎಂಕೆಇಟಿ ಸಮೂಹ ಸಂಸ್ಥೆಗಳ ಪ್ರತಿಭಾ ಪುರಸ್ಕಾರ ಹಾಗೂ ಕೌಶಲ್ಯ ಕೇಂದ್ರ ಉದ್ಘಾಟನಾ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು.ಮುಂದಿನ ತರಗತಿಗೆ ಪಾಸಾಗಿ ಹೋಗುವಷ್ಟು ಓದಿದರೆ ಸಾಕೆಂಬ ಅಲ್ಪತೃಪ್ತಿತನ ಮಾಡಬೇಡಿ. ಅದರಿಂದ ವಿದ್ಯಾರ್ಥಿಗಳಿಗೆ ಶಿಕ್ಷಣ ಪೂರ್ಣಗೊಂಡ ನಂತರ ಉತ್ತಮ ಕ್ಷೇತ್ರದಲ್ಲಿ ಉದ್ಯೋಗವಕಾಶ ಸಿಗುವುದಿಲ್ಲ. ಆದರೆ, ಶ್ರಮವಹಿಸುವ ಗುಣ ಇರುವ ವಿದ್ಯಾರ್ಥಿಗಳಿಗೆ ಉತ್ತಮ ಭವಿಷ್ಯ ಇದೆ ಎಂದರು.
ಮುಖ್ಯ ಅತಿಥಿ ಕಿರ್ಲೋಸ್ಕರ್ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್ ಸ್ಟಡೀಸ್ ನಿರ್ದೇಶಕ ಡಾ.ನಂದೀಶ್ ಹಿರೇಮಠ್ ಮಾತನಾಡಿ, ಜೀವನದಲ್ಲಿ ಅಂಕಗಳು ಮುಖ್ಯವಲ್ಲ, ಸಾಧನೆ ಮಾಡುತ್ತಾ ಗುರಿಯತ್ತ ಸಾಗುವುದು ಮುಖ್ಯ. ಹಿಂದೆ ಗುರು, ಮುಂದೆ ಗುರಿ ಇರಬೇಕು ಎಂದರು.ಅಧ್ಯಕ್ಷತೆ ವಹಿಸಿದ್ದ ಸಮೂಹ ಸಂಸ್ಥೆ ಉಪಾಧ್ಯಕ್ಷ ರವೀಂದ್ರನಾಥ್ ಗುಮಾಸ್ತೆ ಮಾತನಾಡಿದರು. ಎಂಕೆಇಟಿ ಸಿಬಿಎಸ್‌ಇ ಶಾಲೆಯ ೧೦ನೇ ತರಗತಿ ಪರೀಕ್ಷೆಯಲ್ಲಿ ಗರಿಷ್ಟ ಅಂಕ ಪಡೆದ ಸ್ವರೂಪ್ ಆರ್. ದುರ್ಗೋಜಿ, ಇವರಿಗೆ ಪೆರಿಶಾಸ್ತ್ರಿ ಪುರಸ್ಕಾರ, ಎಂಕೆಇಟಿ ಆಂಗ್ಲ ಮಾದ್ಯಮ ಶಾಲೆಯ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಹೆಚ್ಚಿನ ಅಂಕ ಪಡೆದ ಭರತ್ ಎಂ.ಪೇಟ್ಕರ್ ಹಾಗೂ ಎಂಕೆಇಟಿ ಪದವಿ ಪೂರ್ವ ಕಾಲೇಜಿನ ವಿಜ್ಞಾನ ವಿಭಾಗದಲ್ಲಿ ಹೆಚ್ಚಿನ ಅಂಕ ಪಡೆದ ರಿಯಾ ಪಿ.ಲದ್ವಾ ಹಾಗೂ ಕ್ರೀಡೆ, ಎನ್‌ಸಿಸಿ, ಚಿತ್ರಕಲೆ, ನಡತೆ ಹಾಗೂ ವಿವಿಧ ಕ್ಷೇತ್ರಗಳಲ್ಲಿನ ಸಾಧಕ ವಿದ್ಯಾರ್ಥಿಗಳನ್ನು ಸತ್ಕರಿಸಲಾಯಿತು.
ಶಾಲೆ ಆಡಳಿತಾಧಿಕಾರಿ ಡಾ. ಬಿ.ಟಿ. ಅಚ್ಯುತ ಸ್ವಾಗತಿಸಿ, ಪರಿಚಯಿಸಿದರು. ಎಂಕೆಇಟಿ ಪ್ರೌಢಶಾಲೆ ಮುಖ್ಯಶಿಕ್ಷಕ ಡಿ.ಟಿ. ತಿಪ್ಪಣ್ಣ ರಾಜು, ಸಿಬಿಎಸ್‌ಇ ಶಾಲೆ ಪ್ರಾಚಾರ್ಯ ಮಂಜುನಾಥ ಕುಲಕರ್ಣಿ, ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯ ಗುರುಮೂರ್ತಿ ವಾರ್ಷಿಕ ವರದಿ ವಾಚಿಸಿ, ವಿದ್ಯಾರ್ಥಿಗಳ ಸಾಧನೆ ತಿಳಿಸಿದರು. ಪ್ರಾಥಮಿಕ ಶಾಲೆ ಮುಖ್ಯ ಶಿಕ್ಷಕಿ ಕೆ.ಎನ್.ಸುಜಾತ ಪ್ರಾರ್ಥಿಸಿದರು, ಮುಖ್ಯ ಶಿಕ್ಷಕಿ ಅರ್ಚನಾ ಮುಳುಗುಂದ ವಂದಿಸಿದರು, ಸಹ ಶಿಕ್ಷಕ ಭೀಮೇಶ್ ನಿರೂಪಿಸಿದರು.- - - -೧೬ ಕೆಎಚ್ ಆರ್ ಹೆಚ್ ೧:ಸಮಾರಂಭದಲ್ಲಿ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪುರಸ್ಕಾರ ನೀಡಲಾಯಿತು.