ಚನ್ನಪಟ್ಟಣ: ವಿದ್ಯಾರ್ಥಿಗಳು ಪಠ್ಯಪುಸ್ತಕ ಜ್ಞಾನದ ಜತೆಗೆ ದೇಶದ ಇತಿಹಾಸ, ಸಂಸ್ಕೃತಿ, ಪರಂಪರೆ ಹಾಗೂ ಸ್ವಾತಂತ್ರ್ಯ ಹೋರಾಟಗಾರರ ಜೀವನ ಚರಿತ್ರೆ ಬಗ್ಗೆಯೂ ತಿಳಿದುಕೊಳ್ಳಬೇಕು ಎಂದು ಭಾರತ ವಿಕಾಸ ಪರಿಷತ್ತಿನ ಪ್ರಾಂತೀಯ ಅಧ್ಯಕ್ಷ ಗುರುಮಾದಯ್ಯ ಹೇಳಿದರು

ಚನ್ನಪಟ್ಟಣ: ವಿದ್ಯಾರ್ಥಿಗಳು ಪಠ್ಯಪುಸ್ತಕ ಜ್ಞಾನದ ಜತೆಗೆ ದೇಶದ ಇತಿಹಾಸ, ಸಂಸ್ಕೃತಿ, ಪರಂಪರೆ ಹಾಗೂ ಸ್ವಾತಂತ್ರ್ಯ ಹೋರಾಟಗಾರರ ಜೀವನ ಚರಿತ್ರೆ ಬಗ್ಗೆಯೂ ತಿಳಿದುಕೊಳ್ಳಬೇಕು ಎಂದು ಭಾರತ ವಿಕಾಸ ಪರಿಷತ್ತಿನ ಪ್ರಾಂತೀಯ ಅಧ್ಯಕ್ಷ ಗುರುಮಾದಯ್ಯ ಹೇಳಿದರು.

ತಾಲೂಕಿನ ಹೊನ್ನಾಯಕನಹಳ್ಳಿ ಕಿತ್ತೂರು ರಾಣಿ ಚನ್ನಮ್ಮ ವಸತಿ ಶಾಲೆಯಲ್ಲಿ ಚನ್ನಪಟ್ಟಣದ ಭಾರತ ವಿಕಾಸ ಪರಿಷತ್ತು ಕಣ್ವ ಶಾಖೆ ಸಹಯೋಗದಲ್ಲಿ ಪ್ರಾಂತೀಯ ಮಟ್ಟದ ಭಾರತ್ ಕೋ ಜಾನೋ ರಸಪ್ರಶ್ನೆ ಸ್ಪರ್ಧೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಭಾರತ್ ಕೋ ಜಾನೋ ಸ್ಪರ್ಧೆಗಳು ವಿದ್ಯಾರ್ಥಿಗಳಲ್ಲಿ ರಾಷ್ಟ್ರೀಯ ಪ್ರಜ್ಞೆ, ದೇಶಾಭಿಮಾನ ಮತ್ತು ಸಾಮಾನ್ಯ ಜ್ಞಾನ ಬೆಳೆಸಲು ಉತ್ತಮ ವೇದಿಕೆ ಎಂದರು.

ಭಾರತ ವಿಕಾಸ ಪರಿಷತ್ತಿನ ಮಾಜಿ ಅಧ್ಯಕ್ಷ ಅರುಣ್ ಗಾಟ್ಗೆ ಮಾತನಾಡಿ, ಇಂತಹ ಸ್ಪರ್ಧೆಗಳು ವಿದ್ಯಾರ್ಥಿಗಳಲ್ಲಿ ಆತ್ಮವಿಶ್ವಾಸ, ಸಮಯಪ್ರಜ್ಞೆ, ತಾರ್ಕಿಕ ಚಿಂತನೆ ಹಾಗೂ ಆರೋಗ್ಯಕರ ಸ್ಪರ್ಧಾ ಮನೋಭಾವ ಬೆಳೆಸುತ್ತವೆ. ಸೋಲು-ಗೆಲುವಿಗಿಂತ ಜ್ಞಾನ ಸಂಪಾದನೆ ಮತ್ತು ಭಾಗವಹಿಸುವಿಕೆ ಮುಖ್ಯ ಎಂದರು.

ಪ್ರಾಂತೀಯ ಸಂಘಟನಾ ಕಾರ್ಯದರ್ಶಿ ವಸಂತ್ ಕುಮಾರ್ ಮಾತನಾಡಿ, ಭಾರತ ವಿಕಾಸ ಪರಿಷತ್ತು ಸಾಮಾಜಿಕ ಸೇವೆಯ ಜತೆಗೆ ವಿದ್ಯಾರ್ಥಿಗಳಲ್ಲಿ ಸಂಸ್ಕಾರ, ಸಂಸ್ಕೃತಿ, ರಾಷ್ಟ್ರೀಯತೆ ಹಾಗೂ ವ್ಯಕ್ತಿತ್ವ ವಿಕಸನಕ್ಕೆ ಆದ್ಯತೆ ನೀಡುತ್ತಿದೆ. ಭಾರತ್ ಕೋ ಜಾನೋ ಸ್ಪರ್ಧೆಯ ಮೂಲಕ ಭಾರತದ ಇತಿಹಾಸ, ಪರಂಪರೆ ಮತ್ತು ಸಾಧನೆಗಳನ್ನು ಯುವಪೀಳಿಗೆಗೆ ಪರಿಚಯಿಸುವ ಉದ್ದೇಶ ಹೊಂದಲಾಗಿದೆ ಎಂದು ಹೇಳಿದರು.

ವಿಜೇತ ತಂಡಗಳು: ಕಿರಿಯರ ವಿಭಾಗದಲ್ಲಿ ದಾವಣಗೆರೆಯ ಅಮೃತವರ್ಷಿಣಿ ವಿದ್ಯಾಲಯ ಪ್ರಥಮ, ಮಾಗನೂರು ಬಸಪ್ಪ ಶಾಲೆ ದ್ವಿತೀಯ ಹಾಗೂ ಉಡುಪಿಯ ಶ್ರೀ ಅನಂತೇಶ್ವರ ಇಂಗ್ಲಿಷ್ ಮೀಡಿಯಂ ಹೈಸ್ಕೂಲ್ ತೃತೀಯ ಸ್ಥಾನ ಪಡೆದವು.

ಹಿರಿಯರ ವಿಭಾಗದಲ್ಲಿ ಉಡುಪಿಯ ಟಿ.ಎಂ. ಪೈ ಇಂಗ್ಲಿಷ್ ಮೀಡಿಯಂ ಸ್ಕೂಲ್ ಪ್ರಥಮ, ದಾವಣಗೆರೆಯ ಬಾಪೂಜಿ ಅಯ್ಯರ್ ಪ್ರೈಮರಿ ಸ್ಕೂಲ್ ದ್ವಿತೀಯ ಹಾಗೂ ಸಿದ್ದಗಂಗಾ ಸ್ಕೂಲ್ ತೃತೀಯ ಸ್ಥಾನ ಗಳಿಸಿದವು.

ಉಡುಪಿ, ದಾವಣಗೆರೆ, ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ ಹಾಗೂ ಬೆಂಗಳೂರು ದಕ್ಷಿಣ ಸೇರಿದಂತೆ ಹಲವು ಜಿಲ್ಲೆಗಳ ವಿದ್ಯಾರ್ಥಿ ತಂಡಗಳು ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದವು. ಬೈರಾಪಟ್ಟಣ ಸರ್ಕಾರಿ ಪ್ರೌಢಶಾಲೆಯ ಶಿಕ್ಷಕ ರಾಜಶೇಖರ ಇಟಗಿ ಅವರು ಕ್ವಿಜ್ ಮಾಸ್ಟರ್ ಆಗಿ ರಸಪ್ರಶ್ನೆ ಕಾರ್ಯಕ್ರಮವನ್ನು ನಡೆಸಿಕೊಟ್ಟರು.

ಕಾರ್ಯಕ್ರಮದಲ್ಲಿ ಪ್ರಾಂತೀಯ ಕಾರ್ಯದರ್ಶಿ ಭವಾನಿ, ಖಜಾಂಚಿ ರಜನಿಕಾಂತ್, ಪ್ರಾಂತೀಯ ಪದಾಧಿಕಾರಿಗಳಾದ ಹರಿರಾಮ್ ಶಣೈ, ದೇವತಾ ಶ್ರೀನಿವಾಸ್, ನರಸಿಂಹ ಪ್ರಸಾದ್, ಕಣ್ವ ಶಾಖೆಯ ಅಧ್ಯಕ್ಷ ಪುಟ್ಟಸ್ವಾಮಿಗೌಡ (ಡಿಪಿಎಸ್), ಕಿತ್ತೂರು ರಾಣಿ ಚನ್ನಮ್ಮ ವಸತಿ ಶಾಲೆಯ ಪ್ರಾಂಶುಪಾಲ ನಾಸಿರ್ ಖಾನ್, ವಿ.ಟಿ. ರಮೇಶ್, ಬಸವರಾಜು, ಕೃಷ್ಣಕುಮಾರ್, ರಾ.ಶಿ. ಬಸವರಾಜು, ಕಾ.ನಾ. ಮಹೇಶ್ ಉಪಸ್ಥಿತರಿದ್ದರು.

ಪೊಟೋ೨೫ಸಿಪಿಟಿ೧: ಚನ್ನಪಟ್ಟಣ ತಾಲೂಕಿನ ಹೊನ್ನಾಯಕನಹಳ್ಳಿ ಕಿತ್ತೂರು ರಾಣಿ ಚನ್ನಮ್ಮ ವಸತಿ ಶಾಲೆಯಲ್ಲಿ ಪ್ರಾಂತೀಯ ಮಟ್ಟದ ಭಾರತ್ ಕೋ ಜಾನೋ ರಸಪ್ರಶ್ನೆ ಸ್ಪರ್ಧೆ ನಡೆಯಿತು.