ಸಾರಾಂಶ
ಕನ್ನಡಪ್ರಭ ವಾರ್ತೆ ಕೆ.ಎಂ.ದೊಡ್ಡಿ
ಭಾರತೀ ಉತ್ಸವದ ಅಂಗವಾಗಿ ಭಾರತೀ ವಿದ್ಯಾಸಂಸ್ಥೆ ಆವರಣದಲ್ಲಿ ನಡೆದ ಸಾಂಸ್ಕೃತಿಕ ಸಂಭ್ರಮದಲ್ಲಿ ಹಲವು ಗೀತೆಗಳಿಗೆ ವಿವಿಧ ಕಾಲೇಜುಗಳ ವಿದ್ಯಾರ್ಥಿಗಳು ನೀಡಿದ, ಸಾಂಸ್ಕೃತಿಕ ಕಾರ್ಯಕ್ರಮ, ನೃತ್ಯ ಪ್ರದರ್ಶನ ನೋಡುಗರ ಕಣ್ಮನ ಸೆಳೆಯಿತು.ಸಂಸ್ಕೃತಿಕ ಸಂಭ್ರಮದಲ್ಲಿ ಹಲವು ಯುವ ಪ್ರತಿಭೆಗಳು ತಮ್ಮ ಕಲಾ ಪ್ರದರ್ಶನಕ್ಕೆ ಉತ್ತಮ ವೇದಿಕೆ ಕಲ್ಪಿಸಲಾಗಿತ್ತು. ದೇಶದ ಯೋಧರ ಕೆಚ್ಚೆದೆಯ ಹೋರಾಟ, ರಾಷ್ಟ್ರೀಯ ಭಾವೈಕ್ಯತೆ, ಕನ್ನಡದ ವೈಭವಕ್ಕೆ ಭಾರತೀ ಉತ್ಸವದ ಸಾಂಸ್ಕೃತಿಕ ವೇದಿಕೆ ಸಾಕ್ಷಿಯಾಯಿತು.
ಭಾರತೀ ಉತ್ಸವದ 2ನೇ ದಿನ ನಾಡು, ನುಡಿಯ ಸಂಭ್ರಮವನ್ನು ತೆರೆದಿಡುವ ಪ್ರಯತ್ನವನ್ನು ವಿದ್ಯಾರ್ಥಿಗಳು ತಮ್ಮ ನೃತ್ಯದ ಮೂಲಕ ಮಾಡಿದಾಗ ಯುವಕ- ಯುವತಿಯರು ಹುಚ್ಚೆದ್ದು ಕುಣಿದರು. ಮೈಸೂರಿನ ಕಾವೇರಿ ಆಯುರ್ವೇದಿಕ್ ಮೆಡಿಕಲ್ ಕಾಲೇಜಿನ ವಿದ್ಯಾರ್ಥಿಗಳಿಂದ ದೇಹ ದಾನ ಮತ್ತು ಅಂಗಾಂಗ ದಾನದ ಮಹತ್ವ ಸಾರುವ ಕಿರು ನಾಟಕ, ದೇಹ ದಾನ ಮಾಡುವ ಮೂಲಕ ಸಮಾಜಕ್ಕೆ ಉತ್ತಮ ವೈದ್ಯರು ಸಿಗುತ್ತಾರೆ ಎಂಬ ಸಂದೇಶವು ಮನ ಮುಟ್ಟಿತು.ಪಟಾಕಿ ಹೊಡೆಯುವುದರಿಂದ ಆಗುವ ಕಣ್ಣಿನ ಹಾನಿ, ಕುಡಿತದಿಂದ ಆಗುವ ಲಿವರ್ ಡ್ಯಾಮೇಜ್, ವೇಗದಿಂದ ಕಾರು ಚಾಲನೆ ಬ್ರೈನ್ ಡೇಡ್, ಹೃದಯಾಘಾತ ಈ ಕಿರು ನಾಟಕದ ಮೂಲಕ ರಕ್ತದಾನ ಶ್ರೇಷ್ಠದಾನ, ದೇಹದಾನ ಮಹಾದಾನ ಎಂಬ ಸಂದೇಶವನ್ನು ನೀಡಿತು.
ವಿದ್ಯಾರ್ಥಿಗಳಾದ ಸಂಜನ ಮತ್ತು ಪಾರ್ವತಿ ಜೋಡಿ ದ್ರೌಪದಿ ವಸ್ತ್ರಾಭರಣ ಕುರಿತು ಕಿರು ನಾಟಕ ಪ್ರದರ್ಶಿಸಿದರು. ಎಚ್.ಡಿ ಕೋಟೆ ಸೇಂಟ್ ಮೇರಿಸ್ ಕಾಲೇಜ್ ಆಫ್ ನರ್ಸಿಂಗ್ ಕಾಲೇಜಿನ ಅರುಣಿಮಾ ತಂಡ ಭಾರತೀಯ ಸಾಂಸ್ಕೃತಿಕ ನೃತ್ಯಕ್ಕೆ ಹೆಜ್ಜೆ ಹಾಕಿದರು.ಗಾನವಿ ರೋಹಿತ್ ಜೋಡಿಯ ’ಹೃದಯಕೆ ಹೆದರಿಕೆ, ಹೀಗೆ ನೋಡಿದರೆ... ಹುಡುಕುತ ಬರುವೆ..ಎಂಬ ಹಾಡಿಗೆ ಮೈ ಜುಮ್ ಎನ್ನಿಸುವಂತೆ ನೃತ್ಯ ಸಂಭ್ರಮಕ್ಕೆ ಕಿಚ್ಚು ಹಚ್ಚಿದರು.
ಆದಿಚುಂಚನಗಿರಿ ಕಲಾ ಮತ್ತು ವಾಣಿಜ್ಯ ವಿಭಾಗ ಕಾಲೇಜಿನ ಕುಸುಮ ಮತ್ತು ತಂಡ ಮಹಾಕಾಳಿ ಅವತಾರವನ್ನು ನೃತ್ಯದ ಮೂಲಕ ಸಾರ್ವಜನಿಕರ ಗಮನ ಸೆಳೆದರೆ, ನಂಜನಗೂಡಿನ ಪ್ರಥಮ ದರ್ಜೆ ಕಾಲೇಜಿನ ಕಲಾತಂಡದಿಂದ ಕರಗ, ಪೂಜಾ ಕುಣಿತ, ವೀರಗಾಸೆ ಮುಂತಾದ ಜನಪದ ಕಲೆ ಪ್ರದರ್ಶಿಸಿ, ಮೆಚ್ಚುಗೆ ಗಳಿಸಿದರು.ಪಹಲ್ಗಾಮ್ ನಲ್ಲಿ ಉಗ್ರರ ದಾಳಿಗೆ ಪ್ರತೀಕಾರವಾಗಿ ಆಪರೇಷನ್ ಸಿಂದೂರದ ನೈಜ ಘಟನೆಯನ್ನು ನೃತ್ಯದ ಮೂಲಕ ಪ್ರದರ್ಶಿಸಿ ದೇಶಾಭಿಮಾನ ಮೆರೆದರು. ದಸರಾ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳು ಶ್ರೀಚಾಮುಂಡೇಶ್ವರಿ ದೇವಿ ನವ ಅವತಾರಗಳ ವೇಷಭೂಷಣ ತೊಟ್ಟು ನರ್ತಿಸಿದರು. ಸಲಾಂ ಸೋಲ್ಜರ್ ಹಾಡಿಗೆ ಹೆಜ್ಜೆ ಹಾಕಿ ಸೈನಿಕರ ದೇಶ ಪ್ರೇಮವನ್ನು ನೃತ್ಯದ ಮೂಲಕ ಪ್ರದರ್ಶಿಸಿದರೆ ಮಹಿ಼ಷಾಸುರನ ಮರ್ಧನ, ರಾಮ ನಾಮ ವೈಭವ ಭಾರತೀ ಸಂಭ್ರಮದಲ್ಲಿ ಭಕ್ತಿಯಗಡಲಲ್ಲಿ ತೇಲಿತು.
ಭಾರತೀ ಬಿಎನ್.ವೈಎನ್‌ಎಸ್ ಕಾಲೇಜಿನ ಮಾನ್ಯ ಮತ್ತು ತಂಡವು ಶ್ರೀರಾಮ ಶಿಲ್ಪಿ ಮೈಸೂರಿನ ಹೆಮ್ಮೆಯ ಅರುಣ್ ಯೋಗಿರಾಜ್, ಪರಂಪರೆಯನ್ನು ಬಿಂಬಿಸುವ ನೀನೇ ರಾಮ ನೃತ್ಯಗಳನ್ನು ಮಾಡುವ ಮೂಲಕ ಗಮನ ಸೆಳೆದವು.ದೇಶ ಭಕ್ತಿ ಮೂಡಿಸುವ, ಸರ್ವಧರ್ಮಗಳ ಸಮನ್ವಯ ಸಾರುವ ಸಂದೇಶದೊಂದಿಗೆ ಹಲವಾರು ನೃತ್ಯ ರೂಪಕಗಳು ಗಮನ ಸೆಳೆದರೆ ನಿನ್ನ ಜೊತೆ ನನ್ನ ಕಥೆ ಎಂಬ ಗೀತೆಗೆ ಆದಿಚುಂಚನಗಿರಿ ಕಾಲೇಜಿನ ಫಾರ್ಮಸಿ ವರ್ಣಿಕ ತಂಡ ಕಣ್ಣಿಗೆ ಕಪ್ಪು ಪಟ್ಟಿ ಧರಿಸಿ ನೃತ್ಯ ವೈಭವವನ್ನು ಪ್ರದರ್ಶಿಸಿದರೆ, ಜಿ ಮಾದೇಗೌಡ ತಾಂತ್ರಿಕ ಮಹಾವಿದ್ಯಾಲಯ ವಿದ್ಯಾರ್ಥಿ ನಿತೀಶ್ ತಂಡ ಜೈ ಜೈ ಭಜರಂಗಿ ಗೀತೆಗಳಿಗೆ ಅತ್ಯುತ್ತಮ ಹೆಜ್ಜೆ ಹಾಕಿದರು.
ಕರ್ನಾಟಕ ವೈಭವ, ಮರ್ಯಾದೆ ಪುರುಷೋತ್ತಮ ಶ್ರೀರಾಮನ ಚರಿತ್ರೆ, ಮಹಿಳೆಯರು, ಅನ್ನದಾತ ರೈತನ ಜೀವನದ ಬಗ್ಗೆ, ಕನ್ನಡ ನುಡಿ, ಸಾಹಿತ್ಯ, ಭಾರತೀಯ ವೀರ ಯೋಧರ ತ್ಯಾಗ, ಬಲಿದಾನದ ಬಗ್ಗೆ ಜಾನಪದ ನೃತ್ಯ ಸೇರಿ ಹಲವು ಕಲಾ ತಂಡಗಳು ನೆರೆದಿದ್ದವರನ್ನು ಮನರಂಜಿಸಿದರು.