ಸಾರಾಂಶ
ಚನ್ನಪಟ್ಟಣ: ಮಕ್ಕಳು ವಿದ್ಯಾಭ್ಯಾಸದ ಜತೆಗೆ ಕ್ರೀಡೆಗಳ ಕುರಿತು ಆಸಕ್ತಿ ಬೆಳೆಸಿಕೊಳ್ಳಬೇಕು. ಕ್ರೀಡೆಗಳಲ್ಲಿ ಭಾಗಿಯಾಗುವುದು ದೈಹಿಕ ಬೆಳವಣಿಗೆಯ ಜತಗೆ ಮಾನಸಿಕ ಸಮತೋಲನಕ್ಕೂ ಸಹಕಾರಿಯಾಗಿದೆ ಎಂದು ಬಾಲು ಪಬ್ಲಿಕ್ ಶಾಲೆಯ ಜಂಟಿ ಕಾರ್ಯದರ್ಶಿ ವಿ.ಬಾಲಸುಬ್ರಮಣ್ಯಂ ತಿಳಿಸಿದರು.
ನಗರದ ಬಾಲು ಪಬ್ಲಿಕ್ ಶಾಲೆಯಲ್ಲಿ ಆಯೋಜಿಸಿದ್ದ ಶಾಲೆಯ ವಾರ್ಷಿಕ ಕ್ರೀಡಾಕೂಟವನ್ನು ಜ್ಯೋತಿ ಬೆಳಗಿಸಿ ಉದ್ಘಾಟಿಸಿ ಮಾತನಾಡಿದ ಅವರು, ವಿದ್ಯಾರ್ಥಿಗಳು ಪಠ್ಯದಷ್ಟೇ ಪ್ರಾಮುಖ್ಯತೆಯನ್ನು ಪಠ್ಯೇತರ ಚಟುವಟಿಕೆಗಳಿಗೂ ನೀಡಬೇಕು. ಗೆಲುವು ಸೋಲು ಏನೇ ಇರಲಿ ಕ್ರೀಡೆಗಳಲ್ಲಿ ಭಾಗಿಯಾಗುವುದು ಮುಖ್ಯ. ಕ್ರೀಡೆಗಳಲ್ಲಿ ಭಾಗಿರುವುದರಿಂದ ವಿದ್ಯಾರ್ಥಿಗಳಲ್ಲಿ ಸ್ಪರ್ಧಾತ್ಮಕ ಮನೋಭಾವನೆ ಬೆಳೆಯುತ್ತದೆ. ಸೋಲು-ಗೆಲುವನ್ನು ಸಮನಾಗಿ ಸ್ವೀಕರಿಸುವ ಗುಣ ಬೆಳೆಯುತ್ತದೆ. ಕ್ರೀಡೆ ದೈಹಿಕ ಚಟುವಟಿಕೆಯ ಜತೆ ಏಕಾಗ್ರತೆಯನ್ನು ಹೆಚ್ಚಿಸುತ್ತದೆ ಎಂದು ತಿಳಿಸಿದರು.ನಮ್ಮ ಶಾಲೆಯಲ್ಲಿ ಶಿಕ್ಷಣದಷ್ಟೇ ಆದ್ಯತೆಯನ್ನು ಕ್ರೀಡೆ, ಸಾಂಸ್ಕೃತಿಕ ಕಾರ್ಯಕ್ರಮಗಳು ಹಾಗೂ ಇನ್ನಿತರೆ ಪಠ್ಯೇತರ ಚಟುವಟಿಕೆಗಳಿಗೂ ನೀಡಲಾಗುತ್ತದೆ. ವಿದ್ಯಾರ್ಥಿಗಳಿಗೆ ಉತ್ತಮ ಶಿಕ್ಷಣದ ಜತೆಗೆ ಜೀವನಕ್ಕೆ ಅಗತ್ಯವಾದ ಪಾಠಗಳನ್ನು ಕಲಿಸುವುದು ಶಾಲೆಯ ಆದ್ಯತೆಯಾಗಿದೆ. ವಿದ್ಯಾರ್ಥಿಗಳನ್ನು ಎಲ್ಲ ವಿಚಾರದಲ್ಲೂ ಪರಿಪೂರ್ಣರಾಗಿಸುವುದು ನಮ್ಮ ಗುರಿಯಾಗಿದೆ ಎಂದು ತಿಳಿಸಿದರು.
ಶಾಲೆಯ ವಿದ್ಯಾರ್ಥಿಗಳು ಒಲಂಪಿಕ್ ಕ್ರೀಡಾಕೂಟ ಮಾದರಿಯಲ್ಲಿ ಕ್ರೀಡಾಜ್ಯೋತಿಯನ್ನು ಹೊತ್ತು ತಂದು ಶಾಲೆಯ ಜಂಟಿ ಕಾರ್ಯದರ್ಶಿ ವಿ. ಬಾಲಸುಬ್ರಮಣ್ಯಂ ಅವರಿಗೆ ಹಸ್ತಾಂತರಿಸಿದರು.ಕ್ರಿಕೆಟ್, ಕಬಡ್ಡಿ, 100 ಮೀಟರ್ ಓಟ, ಡಂಬ್ಬೆಲ್ ಪಾಸ್ ಸೇರಿದಂತೆ ವಿವಿಧ ಕ್ರೀಡಾಕೂಟಗಳಲ್ಲಿ ಶಿಶುವಿಹಾರದಿಂದ ಹಿಡಿದು 10ನೇ ತರಗತಿವರೆಗಿನ ವಿದ್ಯಾರ್ಥಿಗಳು ಭಾಗವಹಿಸಿದರು. ಕ್ರೀಡಾಕೂಟದಲ್ಲಿ ವಿಜೇತರಾದ ಸುಮಾರು 220 ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.
ಘೋಷಕರು ಸಹ ವಿವಿಧ ಆಟೋಟಗಳಲ್ಲಿ ಭಾಗಿಯಾ ಸಂಭ್ರಮಿಸಿದರು. ಸಂಸ್ಥೆಯ ಟ್ರಸ್ಟಿ ಕವಿತಾ ಬಾಲಸುಬ್ರಮಣ್ಯಂ, ಮುಖ್ಯೋಪಾಧ್ಯಾಯಿನಿ ಕವಿತಾ ಎಸ್., ಆಡಳಿತಾಧಿಕಾರಿ ಮೆಹರ್ ಸುಲ್ತಾನಾ, ಮೇಲ್ವಿಚಾರಕ ಕೌಶಿಕ್ ಭಟ್ಟಾಚಾರ್ಯ ಶಾಲೆ ಶಿಕ್ಷಕರು ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.ಪೊಟೋ೧೦ಸಿಪಿಟಿ೪:ಚನ್ನಪಟ್ಟಣದ ಬಾಲು ಪಬ್ಲಿಕ್ ಶಾಲೆಯಲ್ಲಿ ಆಯೋಜಿಸಿದ್ದ ವಾರ್ಷಿಕ ಕ್ರೀಡಾಕೂಟದಲ್ಲಿ ವಿಜೇತರಾದ ಚಿಣ್ಣರು ಹಾಗೂ ಶಾಲೆಯ ಆಡಳಿತ ಮಂಡಳಿ.