ಸಾರಾಂಶ
ಕನ್ನಡಪ್ರಭ ವಾರ್ತೆ ಚಾಮರಾಜನಗರ
ಉದ್ಯೋಗ ಸಂದರ್ಶನಗಳ ಸಮಯದಲ್ಲಿ ಪುಸ್ತಕ ಜ್ಞಾನಕ್ಕಿಂತ ಅರಿವಿನ ಕೌಶಲ್ಯದ ಬಗೆಗಿನ ಪ್ರಶ್ನೆಗಳನ್ನು ಕೇಳಲಾಗುತ್ತದೆ. ಹಾಗಾಗಿ ವಿದ್ಯಾರ್ಥಿಗಳು ತಮ್ಮ ಅರಿವಿನ ಕೌಶಲ, ತರ್ಕಬದ್ಧ ಯೋಚನಾ ಶಕ್ತಿಯನ್ನು ಬೆಳೆಸಿಕೊಳ್ಳಬೇಕು ಎಂದು ತಂತ್ರಜ್ಞಾನ ಲೇಖಕ ಮತ್ತು ಕರಾವಳಿ ವಿಕಿಮಿಡಿಯನ್ಸ್ ಕಾರ್ಯದರ್ಶಿ ಡಾ.ಯು.ಬಿ. ಪವನಜ ಸಲಹೆ ನೀಡಿದರು.ನಗರದ ಜೆಎಸ್‌ಎಸ್ ಮಹಿಳಾ ಪದವಿ ಕಾಲೇಜಿನ ಕನ್ನಡ ವಿಭಾಗ ವಿದ್ಯಾರ್ಥಿನಿಯರಿಗೆ ಹಮ್ಮಿಕೊಂಡಿದ್ದ ಎರಡು ದಿನಗಳ ವಿಕಿಪೀಡಿಯಾ ಸಮುದಾಯ ಬೆಳವಣಿಗೆ ಕಾರ್ಯಾಗಾರದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿರು. ಜ್ಞಾನಕ್ಕೆ ಕನ್ನಡ ಅಥವಾ ಇಂಗ್ಲಿಷ್ ಎಂಬ ಭೇದವಿಲ್ಲ. ಉದ್ಯೋಗ ನೀಡಲು ಕನ್ನಡ ಅಥವಾ ಇಂಗ್ಲಿಷ್ ಕಲಿತಿರುವುದು ಮುಖ್ಯವಲ್ಲ. ನಿಮ್ಮಲ್ಲಿರುವ ಕೌಶಲ್ಯ ಅರಿವು ಮುಖ್ಯ ಎಂದರು. ಇಂದು ಕಂಪೆನಿಗಳಲ್ಲಿ ಉದ್ಯೋಗ ನೀಡುವಾಗ ಪುಸ್ತಕ ಜ್ಞಾನ ಕೇಳುವುದಿಲ್ಲ. ನಿಜ ಜೀವನಕ್ಕೆ ಅನ್ವಯವಾಗುವ ವಿಷಯಗಳನ್ನು ಕೇಳುತ್ತಾರೆ. ನಿಮ್ಮ ಅರಿವಿನ ಕೌಶಲ್ಯ, ತರ್ಕಜ್ಞಾನಕ್ಕೆ ಸಂಬಂಧಿಸಿದ ಪ್ರಶ್ನೆಗಳನ್ನು ಕೇಳುತ್ತಾರೆ. ವಿಕಿಪೀಡಿಯಾ ಕಾರ್ಯಾಗಾರದಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳು ವಿಕಿಪೀಡಿಯಾಕ್ಕೆ ಮಾಹಿತಿ ಒದಗಿಸುವ ಕೆಲಸವನ್ನು ಮುಂದುವರೆಸಿ, ಇದರಿಂದ ನಿಮಗೆ ಮಾತ್ರವಲ್ಲ ಕನ್ನಡಕ್ಕೂ ಅನುಕೂಲವಾಗುತ್ತದೆ ಎಂದು ಪವನಜ ಹೇಳಿದರು.ನಾನು ರಾಜ್ಯಾದ್ಯಂತ ವಿಕಿಪೀಡಿಯಾ ಮಾರ್ಗದರ್ಶನ ಕಾರ್ಯಾಗಾರವನ್ನು ನಡೆಸುತ್ತಾ ಬಂದಿದ್ದೇನೆ. ಚಾಮರಾಜನಗರದಲ್ಲಿ ಬಹಳ ಆಸಕ್ತಿಯಿಂದ ನೀವೆಲ್ಲ ಭಾಗವಹಿಸಿದ್ದೀರಿ. ಚೆನ್ನಾಗಿ ಗ್ರಹಿಸಿ, ಅರ್ಥ ಮಾಡಿಕೊಂಡಿದ್ದೀರಿ ಎಂದು ವಿದ್ಯಾರ್ಥಿನಿಯರನ್ನು ಶ್ಲಾಘಿಸಿದರು. ಜೆಎಸ್‌ಎಸ್ ಮಹಿಳಾ ಪದವಿ ಕಾಲೇಜಿನ ಪ್ರಾಂಶುಪಾಲ ಪ್ರೊ. ಎನ್. ಮಹದೇವಸ್ವಾಮಿ ಅವರು ಮಾತನಾಡಿ, ವಿಕಿಪೀಡಿಯಾ ಕಾರ್ಯಾಗಾರ ನಿಜಕ್ಕೂ ಉತ್ತಮ ಕಾರ್ಯಕ್ರಮ. ಇದು ಭಾಷೆಯನ್ನು ಕಟ್ಟುವ ಕೆಲಸ ಮಾಡುತ್ತಿದೆ. ಇದರಿಂದ ವಿದ್ಯಾರ್ಥಿಗಳು ಹತ್ತು ಹಲವು ವಿಷಯಗಳನ್ನು ಗ್ರಹಿಸಬಹುದು ಎಂದರು.ಚಾಮರಾಜನಗರ ಜಿಲ್ಲೆ ಜನಪದ ಕಲೆಗಳ ಶ್ರೀಮಂತ ಜಿಲ್ಲೆಯಾಗಿದ್ದು, ಅಗಾಧವಾದ ಸಾಂಸ್ಕೃತಿಕ ಸಂಪತ್ತನ್ನು ಹೊಂದಿದೆ. ಮೌಖಿಕ ಸಾಹಿತ್ಯ ಪರಂಪರೆಯನ್ನು ಹೊಂದಿದೆ. ಇದನ್ನೆಲ್ಲ ವಿಕಿಪೀಡಿಯಾದಲ್ಲಿ ದಾಖಲಿಸಿ ಮುಂದಿನ ಪೀಳಿಗೆಗೆ ಮಾಹಿತಿ ಹಂಚಬಹುದು. ಡಾ.ಪವನಜ ಅವರು ಕನ್ನಡದಲ್ಲಿ ವಿಕಿಪೀಡಿಯಾ ಬೆಳೆಯಲು ಪ್ರಮುಖ ರೂವಾರಿಯಾಗಿದ್ದಾರೆ ಎಂದರು. ಈ ಸಂದರ್ಭದಲ್ಲಿ ಕಾರ್ಯಾಗಾರದಲ್ಲಿ ಭಾಗವಹಿಸಿದ್ದ ವಿದ್ಯಾರ್ಥಿನಿಯರಿಗೆ ಪ್ರಮಾಣ ಪತ್ರಗಳನ್ನು ವಿತರಿಸಲಾಯಿತು. ಸಂಪನ್ಮೂಲ ವ್ಯಕ್ತಿ ಪ್ರಜ್ಞಾ ದೇವಾಡಿಗ, ಕನ್ನಡ ವಿಭಾಗದ ಮುಖ್ಯಸ್ಥ ಬಿ.ಬಿ. ವರಪ್ರಸಾದ್, ಸಹಾಯಕ ಪ್ರಾಧ್ಯಾಪಕರಾದ ಉಮೇಶ್, ಜಮುನಾ, ರೂಪಶ್ರೀ ಮತ್ತು ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು.