ಸರ್ಕಾರಿ ಶಾಲೆಯಲ್ಲಿ ವ್ಯಾಸಂಗ ಮಾಡಿದ ಹಲವು ವಿದ್ಯಾರ್ಥಿಗಳು ಈಗ ಉನ್ನತ ಹುದ್ದೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಈಗ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳು ಸಮಯವನ್ನು ಟಿವಿ ಅಥವಾ ಮೊಬೈಲ್ ನೋಡಲು ವ್ಯರ್ಥ ಮಾಡದೆ ನಿಷ್ಠೆಯಿಂದ ಶಿಕ್ಷಕರು ನೀಡುವ ಬೋಧನೆ ಯನ್ನುಅರಿತು ಸಮಾಜದಲ್ಲಿ ಉನ್ನತ ಸ್ಥಾನ ಪಡೆಯಿರಿ.
ಕನ್ನಡಪ್ರಭ ವಾರ್ತೆ ಹಲಗೂರು
ವಿದ್ಯಾರ್ಥಿಗಳು ಮೊಬೈಲ್, ದೂರದರ್ಶನ ನೋಡುತ್ತಾ ಸಮಯ ವ್ಯರ್ಥ ಮಾಡದೇ ವ್ಯಾಸಂಗಕ್ಕೆ ಆದ್ಯತೆ ನೀಡಿ ಜ್ಞಾನ ಹೆಚ್ಚಿಸಿಕೊಳ್ಳುವಂತೆ ನಿವೃತ್ತ ಉಪನ್ಯಾಸಕ ಶೇಷ ರಾಜ್ ಕರೆ ನೀಡಿದರು.ಹಾಡ್ಲಿ ಸರ್ಕಲ್ ಸಮೀಪ ಇರುವ ಸರ್ಕಾರಿ ಪದವಿ ಪೂರ್ವ ಕಾಲೇಜು ಆವರಣದಲ್ಲಿ 2026-27ನೇ ಸಾಲಿನ ಶೈಕ್ಷಣಿಕ, ಕ್ರೀಡಾ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳ ಉದ್ಘಾಟನೆ, ಪ್ರತಿಭಾ ಪುರಸ್ಕಾರ, ವಿಶೇಷ ಉಪನ್ಯಾಸ ಹಾಗೂ ಪ್ರಥಮ ಪಿಯುಸಿ ವಿದ್ಯಾರ್ಥಿಗಳಿಗೆ ಸ್ವಾಗತ ಸಮಾರಂಭ ಮತ್ತು ಉಚಿತ ಸಮವಸ್ತ್ರ ವಿತರಣಾ ಕಾರ್ಯಕ್ರಮದಲ್ಲಿ ಮಾತನಾಡಿದರು.
ನಾನು ಈ ಕಾಲೇಜಿನಲ್ಲಿ 18 ವರ್ಷಗಳ ಕಾಲ ಸೇವೆ ಸಲ್ಲಿಸಿದ್ದೇನೆ. ನನ್ನ ನಿವೃತ್ತಿ ನಂತರವೂ ನನ್ನನ್ನು ಇಲ್ಲಿ ಕರೆಸಿ ಸನ್ಮಾನಿಸಿರುವುದು ತುಂಬಾ ಸಂತೋಷ. ಸರ್ಕಾರಿ ಶಾಲೆಯಲ್ಲಿ ವ್ಯಾಸಂಗ ಮಾಡಿದ ಹಲವು ವಿದ್ಯಾರ್ಥಿಗಳು ಈಗ ಉನ್ನತ ಹುದ್ದೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಈಗ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳು ಸಮಯವನ್ನು ಟಿವಿ ಅಥವಾ ಮೊಬೈಲ್ ನೋಡಲು ವ್ಯರ್ಥ ಮಾಡದೆ ನಿಷ್ಠೆಯಿಂದ ಶಿಕ್ಷಕರು ನೀಡುವ ಬೋಧನೆ ಯನ್ನುಅರಿತು ಸಮಾಜದಲ್ಲಿ ಉನ್ನತ ಸ್ಥಾನ ಪಡೆಯಿರಿ ಸಲಹೆ ನೀಡಿದರು.ಬಸವೇಶ್ವರ ಪ್ರೌಢಶಾಲೆ ಮುಖ್ಯ ಶಿಕ್ಷಕಿ ಶೈಲಜಾ ಮಾತನಾಡಿ, ಸರ್ಕಾರಿ ಶಾಲೆಗಳಲ್ಲಿ ನುರಿತ ಶಿಕ್ಷಕರಿಂದ ಉನ್ನತ ಶಿಕ್ಷಣ ದೊರಕುತ್ತಿದೆ. ವಿದ್ಯಾರ್ಥಿಗಳು ಓದಿನ ಕಡೆಗೆ ಗಮನ ಹರಿಸಬೇಕು. ಸರ್ಕಾರಿ ಶಾಲೆಗಳನ್ನು ಉಳಿಸಿ ಬೆಳೆಸಲು ಪೋಷಕರು ಸಹ ಸಹಕರಿಸಬೇಕು ಎಂದರು.
ಉಪನ್ಯಾಸಕ ಶಿವಕುಮಾರ್ ಮಾತನಾಡಿ, 2006ರಲ್ಲಿ ಪ್ರಾರಂಭದ ಕಾಲೇಜಿಗೆ ವರ್ಷ ವರ್ಷ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಾಗುತ್ತಿದೆ. ಕಳೆದ ಸಾಲಿನಲ್ಲಿ ನಮ್ಮ ಕಾಲೇಜಿಗೆ 100ರಷ್ಟು ಫಲಿತಾಂಶ ಬಂದಿದೆ ಎಂದರು.ಅತಿಥಿ ಉಪನ್ಯಾಸಕಿ ಆಶಾ ಅವರ ಚಿಕ್ಕಪ್ಪ ಲಿಂಗರಾಜು ವಿದ್ಯಾರ್ಥಿಗಳಿಗೆ ಸಮವಸ್ತ್ರ ವಿತರಿಸಿ ಮೆಚ್ಚುಗೆಗೆ ಪಾತ್ರರಾದರು. ನಂತರ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ಪ್ರಭಾರ ಪ್ರಾಂಶುಪಾಲ ಶಹೀಬ್ ಖಾನ್ ಅಧ್ಯಕ್ಷತೆ ವಹಿಸಿದ್ದರು.
ಆಂಗ್ಲಾ ಭಾಷಾ ಉಪನ್ಯಾಸಕ ಟಿ.ವಿ.ಶಿವಕುಮಾರ್, ರಾಜ್ಯಶಾಸ್ತ್ರ ಉಪನ್ಯಾಸಕ ಜಿ.ಆನಂದ, ನಿವೃತ್ತ ಪ್ರಾಂಶುಪಾಲ ಕೆಂಪಯ್ಯ, ನಿವೃತ್ತ ಉಪನ್ಯಾಸಕ ಬಿ.ಷಣ್ಮುಖಸ್ವಾಮಿ, ಈಗಲ್ಬರ್ಗ್ ಪ್ರೈವೇಟ್ ಲಿಮಿಟೆಡ್ ಮೈಸೂರು ಸಮವಸ್ತ್ರ ದಾನಿ ಲಿಂಗರಾಜು, ಅಕೌಂಟ್ ಮ್ಯಾನೇಜ್ ಮೆಂಟ್ ಲಿಂಗರಾಜು, ಸಿಡಿಸಿ ಉಪಾಧ್ಯಕ್ಷ ಲಿಂಗರಾಜು, ಗ್ರಾಪಂ ಪಿಡಿಒ, ಅತಿಥಿ ಉಪನ್ಯಾಸಕರಾದ ಆಶಾ ಜಿ.ಎಂ, ಪಲ್ಲವಿ, ಪ್ರಭುಸ್ವಾಮಿ ಸೇರಿದಂತೆ ಇತರರು ಇದ್ದರು .