ಅಜೀಂ ಪ್ರೇಮ್ ಜಿ ವಿವಿ ಕುಲಪತಿ ಡಾ.ರಿಚಾ ಗೋವಿಲ್ ಮತ್ತು ಎಜುಕೇಶನ್ ಟ್ರಸ್ಟ್ ಸಂಸ್ಥಾಪಕರಾದ ಡಾ.ಟಿ.ಸೋಮಶೇಖರ್ ಅವರು ವಿದ್ಯಾರ್ಥಿಗೆ ಪದವಿ ಪ್ರದಾನ ಮಾಡಿದರು. ಈ ವೇಳೆ ಇಂಡಿಯನ್ ಅಕಾಡೆಮಿ ಪದವಿ ಕಾಲೇಜಿನ ಪ್ರಾಂಶುಪಾಲೆ ಡಾ.ಭಾರತಿ ಉಪಸ್ಥಿತರಿದ್ದರು.

ಕನ್ನಡಪ್ರಭ ವಾರ್ತೆ ಬೆಂಗಳೂರು

ವಿದ್ಯಾರ್ಥಿಗಳು ಜೀವನದಲ್ಲಿ ದೊಡ್ಡ ಕನಸುಗಳನ್ನು ಕಾಣತ್ತಾ ಮುನ್ನುಗ್ಗುತ್ತಲೇ ಇರಬೇಕು. ಆತ್ಮವಿಶ್ವಾಸ ಯಾವಾಗಲೂ ಜಾಗೃತವಾಗಿರಬೇಕು. ಆಗ ಮಾತ್ರ ಯಶಸ್ಸು ಸಾಧ್ಯ ಎಂದು ಅಜೀಂ ಪ್ರೇಮ ಜಿ ವಿಶ್ವವಿದ್ಯಾನಿಲಯದ ಕುಲಪತಿ ಡಾ.ರಿಚಾ ಗೋವಿಲ್‌ ಸಲಹೆ ನೀಡಿದರು.

ಬಾಗಲೂರಿನ ಸ್ಕೂಲ್‌ ಆಫ್‌ ರಾಯದಲ್ಲಿ ಇಂಡಿಯನ್‌ ಅಕಾಡೆಮಿ ಸಮೂಹ ಆಯೋಜಿಸಿದ್ದ ವಿದ್ಯಾಸಂಸ್ಥೆಯ 9ನೇ ಪದವಿ ಪ್ರದಾನ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು.

ಬದುಕಿನಲ್ಲಿ ಸಾಧಿಸುವ ಛಲ, ಗುರಿ ಇದ್ದರೆ ವಿದ್ಯಾರ್ಥಿಗಳು ದೇಶವನ್ನೇ ಬದಲಿಸುವ ಪ್ರಗತಿಪರರಾಗುತ್ತಾರೆ. ವಿದ್ಯಾರ್ಥಿ ಜೀವನದಲ್ಲಿ ಅತ್ಯುತ್ತಮವಾದುದ್ದನ್ನು ಆಯ್ಕೆ ಮಾಡಿಕೊಂಡರೆ ಅವರ ಭವಿಷ್ಯ ಉಜ್ವಲವಾಗಿರುತ್ತದೆ ಎಂದರು.

ಸಮಾರಂಭದಲ್ಲಿ 447 ಪದವಿ ಮತ್ತು 30 ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಲಾಯಿತು. ಇದಕ್ಕೂ ಮುನ್ನ ಪದವಿ ಮತ್ತು ಸ್ನಾತಕೋತ್ತರ ಪದವಿ ವಿಭಾಗದಲ್ಲಿ ಅತ್ಯುನ್ನತ ಅಂಕ ಪಡೆದ ವಿದ್ಯಾರ್ಥಿಗಳಿಗೆ ಬಹುಮಾನ ಮತ್ತು ಸ್ಮರಣೆಗೆ ನೀಡಿ ಗೌರವಿಸಲಾಯಿತು. ವಿದ್ಯಾರ್ಥಿಗಳ ಕೌನ್ಸಿಲ್ ವಿಭಾಗದ ಮುಖ್ಯಸ್ಥ ಡಾ.ರಾಜರಾಜನ್ ಅವರು ಸಮಾರೋಪ ಭಾಷಣ ಮಾಡಿದರು. ಪ್ರಾಂಶುಪಾಲರಾದ ಡಾ.ಭಾರತಿ ಪ್ರತಿಜ್ಞಾವಿಧಿ ಬೋಧಿಸಿದರು.

ಕಾರ್ಯಕ್ರಮದಲ್ಲಿ ಇಂಡಿಯನ್‌ ಅಕಾಡೆಮಿ ಎಜ್ಯುಕೇಶನ್‌ ಟ್ರಸ್ಟ್‌ ಸಂಸ್ಥಾಪಕ ಡಾ.ಟಿ.ಸೋಮಶೇಖರ್‌, ಭಾಷಾ ವಿಭಾಗದ ಮುಖ್ಯಸ್ಥ ಪ್ರೊ.ಪ್ರಿಜಾ ನಾಯರ್‌, ಪರೀಕ್ಷಾಂಗ ವಿಭಾಗದ ಆಡಳಿತ ಅಧಿಕಾರಿ ಡಾ.ಶ್ರೀನಿವಾಸರಾವ್ ಸೇರಿದಂತೆ ಇತರರು ಉಪಸ್ಥಿತರಿದ್ದರು.