ಸಾರಾಂಶ
ವಿದ್ಯಾರ್ಥಿಗಳ ಜೊತೆ ನಾಲ್ವರು ಶಿಕ್ಷಕರು ಹೈದ್ರಾಬಾದ್‌ಗೆ ವಿಮಾನಯಾನ ಮಾಡಲಿದ್ದಾರೆ.
ಬಳ್ಳಾರಿ: ಗ್ರಾಮೀಣ ಪ್ರದೇಶದ ಮೂರು ಪ್ರೌಢಶಾಲೆಗಳ 27 ವಿದ್ಯಾರ್ಥಿಗಳು ಗಗನಯಾನದ ಅವಕಾಶ ಪಡೆದಿದ್ದಾರೆ.
ಗ್ರಾಮೀಣ ಪ್ರದೇಶದಲ್ಲಿ ಕಡಿಮೆ ವೆಚ್ಚದಲ್ಲಿ ಗುಣಮಟ್ಟದ ಶಿಕ್ಷಣ ನೀಡುವ ಖಾಸಗಿ ಶಾಲೆಗಳ ವಿದ್ಯಾರ್ಥಿಗಳನ್ನು ಬಳ್ಳಾರಿಯಿಂದ ಹೈದ್ರಾಬಾದ್‌ಗೆ ವಿಮಾನದ ಮೂಲಕ ಕರೆದೊಯ್ದು ಅಲ್ಲಿನ ಐತಿಹಾಸಿಕ ಸ್ಥಳಗಳ ಪರಿಚಯ ಮಾಡಿಸಲು ವಿಕಿಂಗ್ಸ್ ರೌಂಡ್‌ಟೇಬಲ್ -152 ಸಂಸ್ಥೆ ಮುಂದಾಗಿದೆ. ಕುರುಗೋಡು ತಾಲೂಕಿನ ಬೈಲೂರು ಗ್ರಾಮದ ಶಾರದಾ ಪ್ರೌಢಶಾಲೆಯ 13 ವಿದ್ಯಾರ್ಥಿಗಳು, ಯರ್ರಂಗಳಿಯ ಮೈಲಾರ ಲಿಂಗೇಶ್ವರ ಪ್ರೌಢಶಾಲೆಯ 7 ಹಾಗೂ ಬಳ್ಳಾರಿ ತಾಲೂಕಿನ ಕಪ್ಪಗಲ್ ಗ್ರಾಮದ ಶಾರದಾ ಪ್ರೌಢಶಾಲೆಯ 7 ವಿದ್ಯಾರ್ಥಿಗಳು ಬಳ್ಳಾರಿಯ ಜಿಂದಾಲ್ ವಿಮಾನ ನಿಲ್ದಾಣದ ಮೂಲಕ ಜ.28ರಂದು ಮಧ್ಯಾಹ್ನ 2.30ಕ್ಕೆ ಹೈದ್ರಾಬಾದ್ ಕಡೆ ಪಯಣ ಬೆಳೆಸಲಿದ್ದಾರೆ.ವಿದ್ಯಾರ್ಥಿಗಳ ಜೊತೆ ನಾಲ್ವರು ಶಿಕ್ಷಕರು ಹೈದ್ರಾಬಾದ್‌ಗೆ ವಿಮಾನಯಾನ ಮಾಡಲಿದ್ದಾರೆ. ಜ.30ರಂದು ಹೈದ್ರಾಬಾದ್ ನಿಂದ ಬಳ್ಳಾರಿಗೆ ಹಿಂದಿರುಗಲಿದ್ದಾರೆ. ಹೈದ್ರಾಬಾದ್‌ನ ಬಿರ್ಲಾ ಮಂದಿರ, ಸಲಾರ್ಜಂಗ್ ಮ್ಯೂಜಿಯಂ, ಚಾರ್‌ಮಿನಾರ್, ಜೂಪಾರ್ಕ್, ಎನ್‌ಟಿಆರ್ ಗಾರ್ಡನ್ಸ್, ಲುಂಬಿನಿ ಪಾರ್ಕ್, ಹುಸೇನ್ ಸಾಗರ್ ದಲ್ಲಿ ಬೋಟಿಂಗ್ ಸೇರಿದಂತೆ ವಿವಿಧ ಸ್ಥಳಗಳಿಗೆ ಮಕ್ಕಳನ್ನು ಕರೆದೊಯ್ಯಲಾಗುತ್ತಿದೆ.
ಗ್ರಾಮೀಣ ಪ್ರದೇಶದಲ್ಲಿ ಅನೇಕ ವಿದ್ಯಾ ಸಂಸ್ಥೆಗಳು ಬಡ ವಿದ್ಯಾರ್ಥಿಗಳನ್ನು ಗುರಿಯಾಗಿಸಿಕೊಂಡು ಕಡಿಮೆ ವೆಚ್ಚದಲ್ಲಿ ಗುಣಮಟ್ಟದ ಶಿಕ್ಷಣ ನೀಡುತ್ತಿವೆ. ಕುರುಗೋಡು, ಬಳ್ಳಾರಿ ತಾಲೂಕಿನ ಮೂರು ಶಾಲೆಗಳನ್ನು ಗುರುತಿಸಿರುವ ರೌಂಡ್ ಟೇಬಲ್ ಸಂಸ್ಥೆಯು ವಿದ್ಯಾರ್ಥಿಗಳಿಗೆ ಮೊದಲ ಬಾರಿಗೆ ವಿಮಾನಯಾನ ಮಾಡುವ ಅವಕಾಶ ಕಲ್ಪಿಸಿಕೊಟ್ಟಿದ್ದು, ಸಂಸ್ಥೆಗೆ ಧನ್ಯವಾದ ತಿಳಿಸುತ್ತಿದ್ದೇವೆ. ವಿದ್ಯಾರ್ಥಿಗಳು ವಿಮಾನ ಪ್ರಯಾಣ ಮಾಡುವ ಕನಸು ರೌಂಡ್ ಟೇಬಲ್ ಸಂಸ್ಥೆಯಿಂದ ನನಸಾಗಿದೆ ಎಂದು ಬೈಲೂರು ಶಾರದಾ ವಿದ್ಯಾಶಾಲೆಯ ಮುಖ್ಯಸ್ಥ ಮಂಜುನಾಥ ಸ್ವಾಮಿ ಕನ್ನಡಪ್ರಭಕ್ಕೆ ತಿಳಿಸಿದರು.ವಿಮಾನದಲ್ಲಿ ಪ್ರಯಾಣ ಮಾಡುತ್ತೇವೆ ಎಂದು ಊಹಿಸಿಕೊಂಡಿರಲಿಲ್ಲ. ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಇದೊಂದು ಸುವರ್ಣ ಅವಕಾಶ ಎಂದೇ ಭಾವಿಸಿದ್ದೇವೆ. ವಿಮಾನಯಾನದ ಕನಸು ನನಸಾಗಿದೆ. ನಮ್ಮ ಪೋಷಕರು ಸಂತಸಗೊಂಡಿದ್ದಾರೆ ಎಂದು ಬೈಲೂರು ಶಾರದಾ ಪ್ರೌಢಶಾಲೆಯ ವಿದ್ಯಾರ್ಥಿಗಳಾದ ಸ್ಪಂದನಾ, ಕಾವ್ಯ, ಪ್ರತಾಪ್, ವಿಜಯೇಂದ್ರ ವರ್ಮ ಕನ್ನಡಪ್ರಭದ ಜೊತೆ ಸಂತಸ ಹಂಚಿಕೊಂಡರು.