ವಿದ್ಯಾರ್ಥಿನಿಯರು ನಿರಂತರವಾಗಿ ಓದಿನಲ್ಲಿ ತೊಡಗಿಸಿಕೊಂಡು ತಮ್ಮ ಭವಿಷ್ಯ ರೂಪಿಸಿಕೊಂಡು ಸಮಾಜಮುಖಿಯಾಗಿ ಬಾಳಬೇಕು.
ಅಳ್ನಾವರ:ಪ್ರಸ್ತುತ ಸಮಾಜದಲ್ಲಿ ಮಹಿಳೆ ಮೇಲೆ ನಡೆಯುತ್ತಿರುವ ದೌರ್ಜನ್ಯ ಹತ್ತಿಕ್ಕಲು ಎಲ್ಲ ಮಹಿಳೆಯರು ಒಗ್ಗಟ್ಟಾಗಬೇಕು. ಈ ಕುರಿತು ಮಹಿಳೆಗೆ ಜಾಗೃತಿಮೂಡಿಸುವುದು ಅವಶ್ಯವಾಗಿದ್ದು ವಿದ್ಯಾರ್ಥಿನಿಯರು ಲೈಂಗಿಕ ಕಿರುಕುಳ ತಡೆಗಟ್ಟಲು ಧೈರ್ಯದಿಂದ ಮುಂದೆ ಬರಬೇಕು ಎಂದು ಪಿಎಸ್‌ಐ ಶೀಲಾ ಜಂಜೋಳಿ ಹೇಳಿದರು.
ಇಲ್ಲಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಮಹಿಳಾ ಸಬಲೀಕರಣ ಘಟಕದ ವತಿಯಿಂದ ಮಂಗಳವಾರ ಕಾಲೇಜಿನಲ್ಲಿ ಹಮ್ಮಿಕೊಂಡ ಮಹಿಳಾ ದೌರ್ಜನ್ಯ ನಿರ್ಮೂಲನೆ ಅಂತಾರಾಷ್ಟ್ರೀಯ ದಿನಾಚರಣೆ ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸಕಾರಾಗಿ ಆಗಮಿಸಿ ಮಾತನಾಡಿದ ಅವರು, ವಿದ್ಯಾರ್ಥಿನಿಯರು ನಿರಂತರವಾಗಿ ಓದಿನಲ್ಲಿ ತೊಡಗಿಸಿಕೊಂಡು ತಮ್ಮ ಭವಿಷ್ಯ ರೂಪಿಸಿಕೊಂಡು ಸಮಾಜಮುಖಿಯಾಗಿ ಬಾಳಬೇಕೆಂದು ಕರೆ ನೀಡಿದರು.ಮಹಿಳೆ ಕೇವಲ ನಾಲ್ಕು ಗೋಡೆಗಳ ಮಧ್ಯೆ ಇರದೇ ತಮ್ಮ ಭವಿಷ್ಯವನ್ನು ರೂಪಿಸಿಕೊಳ್ಳುವಲ್ಲಿ ಓದು-ಬರಹದ ಕಡೆ ಹೆಚ್ಚು ಆಸಕ್ತಿ ತೋರಿಸಬೇಕು. ಕ್ರೀಡೆ ಮತ್ತು ಸಮಾಜಮುಖಿ ಚಟುವಟಿಕೆಗಳಲ್ಲಿ ಪಾಲ್ಗೊಂಡು ತಮ್ಮ ಭದ್ರವಾದ ಭವಿಷ್ಯ ರೂಪಿಸಿಕೊಳ್ಳಬೇಕು ಎಂದರು.
ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲೆ ಡಾ. ಈ ನಾಗರತ್ನಾ ಮಾತನಾಡಿದರು. ವಾಣಿಜ್ಯಶಾಸ್ತ್ರ ಮುಖ್ಯಸ್ಥೆ ಡಾ. ಉಮಾ ಪೂಜಾರ ಅತಿಥಿಗಳನ್ನು ಸ್ವಾಗತಿಸಿ ಪರಿಚಯಿಸಿದರು. ಲೈಂಗಿಕ ದೌರ್ಜನ್ಯ ತಡೆಗಟ್ಟುವ ಸಮಿತಿ ಸಂಚಾಲಕಿ ಮಂಜುಳಾ ಹಾರೋಬಿಡಿ ಪ್ರಾಸ್ತಾವಿಕವಾಗಿ ಮಾತನಾಡಿದರು.ಡಾ. ಅಪ್ಪಾಸಾಬ್ ಮಾದರ ಪ್ರಾರ್ಥಿಸಿದರು. ತೇಜಸ್ವಿನಿ ಝಂಜರವಾಡ ಹಾಗೂ ಬಿ.ಸಿ. ಸಪ್ನಾ ನಿರೂಪಿಸಿದರು. ಪಿ.ಕೆ. ಶ್ವೇತಾ ವಂದಿಸಿದರು. ಬೋಧಕ, ಬೋಧಕೇತರ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಇದ್ದರು