ಮುಂಡಗೋಡ ಪಟ್ಟಣದ ಶಾಸಕರ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶುಕ್ರವಾರ ಮಧ್ಯಾಹ್ನ ಬಿಸಿಯೂಟ ಸೇವಿಸಿ ೨೫ಕ್ಕೂ ಹೆಚ್ಚು ವಿದ್ಯಾರ್ಥಿಗಳು ಅಸ್ವಸ್ಥರಾಗಿದ್ದು, ತಾಲೂಕಾಸ್ಪತ್ರೆಗೆ ದಾಖಲಿಸಲಾಗಿದೆ.

ಮುಂಡಗೋಡ: ಪಟ್ಟಣದ ಶಾಸಕರ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶುಕ್ರವಾರ ಮಧ್ಯಾಹ್ನ ಬಿಸಿಯೂಟ ಸೇವಿಸಿ ೨೫ಕ್ಕೂ ಹೆಚ್ಚು ವಿದ್ಯಾರ್ಥಿಗಳು ಅಸ್ವಸ್ಥರಾಗಿದ್ದು, ತಾಲೂಕಾಸ್ಪತ್ರೆಗೆ ದಾಖಲಿಸಲಾಗಿದೆ.

ಎಂದಿನಂತೆ ಮಧ್ಯಾಹ್ನ ಶಾಲೆಯಲ್ಲಿ ಬಿಸಿಯೂಟ ಸೇವಿಸಿದ ಕೆಲವೇ ಕ್ಷಣದಲ್ಲಿ ಕೆಲ ಮಕ್ಕಳಲ್ಲಿ ಹೊಟ್ಟೆನೋವು ಕಾಣಿಸಿಕೊಂಡಿದೆ, ಜತೆಗೆ ವಾಂತಿಯಾಗಿದೆ. ಊಟದಲ್ಲಿ ಇಲಿ ಹಿಕ್ಕಿ ಕಂಡು ಬಂದಿತ್ತು ಎಂದು ಕೆಲವು ವಿದ್ಯಾರ್ಥಿಗಳು ಹೇಳಿಕೊಂಡಿದ್ದಾರೆ. ಅಸ್ವಸ್ಥರಾದ ವಿದ್ಯಾರ್ಥಿಗಳನ್ನು ತಕ್ಷಣ ಆಸ್ಪತ್ರೆಗೆ ಸಾಗಿಸಲಾಯಿತು. ಆಡಳಿತ ವೈದ್ಯಾಧಿಕಾರಿ ಸ್ವರೂಪರಾಣಿ ಮತ್ತು ವೈದ್ಯರ ತಂಡ ಮಕ್ಕಳಿಗೆ ಸೂಕ್ತ ಚಿಕಿತ್ಸೆ ಪ್ರಾರಂಭಿಸಿದ್ದಾರೆ.

ವಿಷಯ ತಿಳಿದು ಮುಂಡಗೋಡ ತಹಸೀಲ್ದಾರ್‌ ಶಂಕರ ಗೌಡಿ, ತಾಪಂ ಕಾರ್ಯನಿರ್ವಹಣಾಧಿಕಾರಿ ಟಿ.ವೈ. ದಾಸನಕೊಪ್ಪ, ಪಪಂ ಮುಖ್ಯಾಧಿಕಾರಿ ಸಂತೋಷಕುಮಾರ ಹಾಲಕಲ್ಲಾಪುರ, ಮುಂಡಗೋಡ ಸಿಪಿಐ ರಂಗನಾಥ ನೀಲಮ್ಮನವರ ಹಾಗೂ ಶಾಲೆಯ ಮುಖ್ಯಾಧ್ಯಾಪಕ ವಿನೋದ ನಾಯಕ ಆಸ್ಪತ್ರೆಗೆ ಭೇಟಿ ನೀಡಿ ಮಕ್ಕಳ ಆರೋಗ್ಯ ಸ್ಥಿತಿ ವಿಚಾರಿಸಿದರು.

ಪಾಲಕರ ಆಕ್ರೋಶ: ಬಿಸಿಯೂಟ ಸೇವಿಸಿ ತಮ್ಮ ಮಕ್ಕಳು ಅಸ್ವಸ್ಥಗೊಂಡ ವಿಷಯ ತಿಳಿಯುತ್ತಿದ್ದಂತೆ ಆಸ್ಪತ್ರೆಗೆ ದೌಡಾಯಿಸಿದ ಪಾಲಕರು ಶಾಲಾ ಶಿಕ್ಷಕರು ಹಾಗೂ ಅಡುಗೆಯವರ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಇಷ್ಟೊಂದು ಬೇಜವಾಬ್ದಾರಿ ತೋರಿದರೆ ಯಾವ ಧೈರ್ಯದ ಮೇಲೆ ಮಕ್ಕಳನ್ನು ಶಾಲೆಗೆ ಕಳುಹಿಸಬೇಕು ಎಂದು ಅಸಮಾಧಾನ ಹೊರ ಹಾಕಿದರು. ಇದು ಮೊದಲನೇ ಬಾರಿಯಲ್ಲ, ಇಂತಹ ಘಟನೆ ಈ ಶಾಲೆಯಲ್ಲಿ ಆಗಾಗ ನಡೆಯುತ್ತಲೇ ಇರುತ್ತದೆ. ಆದರೂ ಮುಂಜಾಗ್ರತೆ ವಹಿಸುವುದಿಲ್ಲ. ಶಾಲೆಯ ಶಿಕ್ಷಕರು ಬೇಜವಾಬ್ದಾರಿಯಿಂದ ನಡೆದುಕೊಳ್ಳುತ್ತಾರೆ ಎಂದು ಆರೋಪಿಸಿದರು. ಮಾದರಿ ಸಂಗ್ರಹ: ತಾಲೂಕು ವೈದ್ಯಾಧಿಕಾರಿ ನರೇಂದ್ರ ಪವಾರ ಮಕ್ಕಳ ಆರೋಗ್ಯ ವಿಚಾರಿಸಿ ಬಳಿಕ ಮಾತನಾಡಿ, ಮಕ್ಕಳು ಸೇವಿಸಿದ ಆಹಾರ ಮತ್ತು ಕುಡಿಯುವ ನೀರಿನ ಮಾದರಿ ಸಂಗ್ರಹಿಸಲಾಗಿದೆ. ಪರೀಕ್ಷೆಗೆ ಕಳುಹಿಸಲಾಗುವುದು. ವರದಿ ಬಂದ ಬಳಿಕ ಇದಕ್ಕೆ ನಿಖರವಾದ ಕಾರಣ ತಿಳಿಯಲಿದೆ ಎಂದು ತಿಳಿಸಿದರು.

ಶಾಸಕ ಶಿವರಾಮ ಹೆಬ್ಬಾರ ಭೇಟಿ: ಬಿಸಿಯೂಟ ಸೇವಿಸಿ ಮಕ್ಕಳು ಅಸ್ವಸ್ಥಗೊಂಡು ಆಸ್ಪತ್ರೆಗೆ ಸೇರಿದ ಹಿನ್ನೆಲೆಯಲ್ಲಿ ಶಾಸಕ ಶಿವರಾಮ ಹೆಬ್ಬಾರ ಶುಕ್ರವಾರ ಸಂಜೆ ಆಸ್ಪತ್ರೆಗೆ ಭೇಟಿ ನೀಡಿ ಮಕ್ಕಳ ಆರೋಗ್ಯ ವಿಚಾರಿಸಿ ಮಾಹಿತಿ ಪಡೆದುಕೊಂಡರಲ್ಲದೇ, ಮಕ್ಕಳಿಗೆ ಸೂಕ್ತ ಚಿಕಿತ್ಸೆ ನೀಡುವಂತೆ ವೈದ್ಯರಿಗೆ ಸೂಚಿಸಿದರು.