ಕಳೆದ ಒಂದು ತಿಂಗಳಿನಲ್ಲಿ ಇದುವರೆಗೆ ಸುಮಾರು 30 ಸರ್ಕಾರಿ ಶಾಲೆಗಳಿಗೆ ನೋಟ್ ಪುಸ್ತಕಗಳು ಹಾಗೂ ಪಠ್ಯ ಪರಿಕರಗಳನ್ನು ನೀಡಲಾಗಿದೆ. ಮುಂದಿನ ದಿನಗಳಲ್ಲಿ ನಿಡಘಟ್ಟ ಶಾಲೆಗೆ ಡೆಸ್ಕ್ ಗಳನ್ನು ನಮ್ಮ ಅಲಯನ್ಸ್ ಸಂಸ್ಥೆಯಿಂದ ನೀಡಲಾಗುವುದು.

ಕನ್ನಡಪ್ರಭ ವಾರ್ತೆ ಮದ್ದೂರು

ವಿದ್ಯಾರ್ಥಿಗಳಿಗೆ ಗುರಿ ಜೊತೆಗೆ ಗುರುವಿನ ಬಲವಿದ್ದರೆ ಉಜ್ವಲ ಭವಿಷ್ಯ ರೂಪಿಸಿಕೊಳ್ಳಬಹುದು ಎಂದು ಅಲಯನ್ಸ್ ಸಂಸ್ಥೆ ಸೌತ್ ಮಲ್ಟಿಪಲ್ ನ ಅಧ್ಯಕ್ಷ ಕೆ.ಟಿ.ಹನುಮಂತು ತಿಳಿಸಿದರು.

ತಾಲೂಕಿನ ನಿಡಘಟ್ಟದ ಸರ್ಕಾರಿ ಪ್ರೌಢಶಾಲೆಯಲ್ಲಿ ಮದ್ದೂರು ಕದಂಬ ಅಲಯನ್ಸ್ ಕ್ಲಬ್ ಸಂಸ್ಥೆಯಿಂದ ನಡೆದ ಶಾಲೆ ವಿದ್ಯಾರ್ಥಿಗಳಿಗೆ ನೋಟ್ ಪುಸ್ತಕಗಳು ಸೇರಿದಂತೆ ಪಠ್ಯ ಪರಿಕರಗಳ ವಿತರಣಾ ಕಾರ್ಯಕ್ರಮದಲ್ಲಿ ಮಾತನಾಡಿದರು.

ಕಳೆದ ಒಂದು ತಿಂಗಳಿನಲ್ಲಿ ಇದುವರೆಗೆ ಸುಮಾರು 30 ಸರ್ಕಾರಿ ಶಾಲೆಗಳಿಗೆ ನೋಟ್ ಪುಸ್ತಕಗಳು ಹಾಗೂ ಪಠ್ಯ ಪರಿಕರಗಳನ್ನು ನೀಡಲಾಗಿದೆ. ಮುಂದಿನ ದಿನಗಳಲ್ಲಿ ನಿಡಘಟ್ಟ ಶಾಲೆಗೆ ಡೆಸ್ಕ್ ಗಳನ್ನು ನಮ್ಮ ಅಲಯನ್ಸ್ ಸಂಸ್ಥೆಯಿಂದ ನೀಡಲಾಗುವುದು ಎಂದರು.

ಸರ್ಕಾರಿ ಶಾಲೆಗಳಲ್ಲಿ ಉತ್ತಮ ಗುಣಮಟ್ಟದ ಶಿಕ್ಷಣ ಸಿಗುತ್ತದೆ. ಆದರೆ, ಇತ್ತೀಚಿನ ದಿನಗಳಲ್ಲಿ ಕೆಲವು ಕಡೆ ಸರ್ಕಾರಿ ಶಾಲೆಗಳು ಮುಚ್ಚುವ ಸ್ಥಿತಿಗೆ ಬಂದಿವೆ. ಇದರಿಂದ ಬಡವರ್ಗದ ಮಕ್ಕಳು ಶಿಕ್ಷಣ ಪಡೆಯುವುದು ಕಷ್ಟವಾಗುತ್ತದೆ. ಈ ನಿಟ್ಟಿನಲ್ಲಿ ನಮ್ಮ ಅಲಯನ್ಸ್ ಸಂಸ್ಥೆಯಿಂದ ಸರ್ಕಾರಿ ಶಾಲೆಗಳನ್ನು ದತ್ತು ತೆಗೆದುಕೊಳ್ಳುವ ಮೂಲಕ ಉಳಿಸುವ ಪ್ರಯತ್ನ ಮಾಡಲಾಗುವುದು ಎಂದರು.

ಮದ್ದೂರು ಕದಂಬ ಅಲಯನ್ಸ್ ಕ್ಲಬ್‌ನ ಸಂಸ್ಥಾಪಕ, ಹಿರಿಯ ವಕೀಲರಾದ ಅಲೈ ಟಿ.ನಾಗರಾಜು ಮಾತನಾಡಿ, ವಿದ್ಯಾರ್ಥಿಗಳನ್ನು ಉತ್ತಮ ವ್ಯಕ್ತಿಗಳನ್ನಾಗಿ ರೂಪಿಸುವಲ್ಲಿ ಶಿಕ್ಷಕರ ಪಾತ್ರ ಅಪಾರ. ಆದ್ದರಿಂದ ಶಿಕ್ಷಕರನ್ನು ವಿದ್ಯಾರ್ಥಿಗಳು ಗೌರವಿಸಬೇಕು, ದೇಶಪ್ರೇಮ ಮೈಗೂಡಿಸಿಕೊಳ್ಳಬೇಕು, ದೇಶಕ್ಕೆ ಹಾಗೂ ಸಮಾಜಕ್ಕೆ ತಮ್ಮ ಕೈಲಾದ ಸೇವೆ ಸಲ್ಲಿಸಬೇಕು ಎಂದರು.

ಕಾರ್ಯಕ್ರಮದಲ್ಲಿ ಪ್ರತಿಭಾಂಜಲಿ ಡೇವಿಡ್, ಶಾಲೆ ಮುಖ್ಯ ಶಿಕ್ಷಕಿ ಸುಧಾ, ಅಲಯನ್ಸ್ ಸಂಸ್ಥೆ ಚಂದ್ರಶೇಖರ್, ಟಿ.ನಾಗರಾಜು, ವಕೀಲರ ಸಂಘದ ಅಧ್ಯಕ್ಷ ಶಿವಣ್ಣ, ವಕೀಲರಾದ ವಿ.ಎಸ್.ನಾಗರಾಜು, ಅಲೈ ಕೃಷ್ಣಪ್ಪ, ರಘು, ಧನಂಜಯ, ಶ್ರೀನಿವಾಸ್ ಸೇರಿದಂತೆ ಶಾಲೆ ಶಿಕ್ಷಕರು ಹಾಜರಿದ್ದರು.