ಸಾರಾಂಶ
ಕನ್ನಡಪ್ರಭ ವಾರ್ತೆ ಶಹಾಪುರನಗರದ ಹೊರವಲಯದ ಕನ್ಯಾಕೋಳೂರು ರಸ್ತೆಯಲ್ಲಿರುವ ಅಲ್ಪಸಂಖ್ಯಾತ ಮೆಟ್ರಿಕ್ ನಂತರ ಬಾಲಕಿಯರ ವಸತಿ ನಿಲಯದಲ್ಲಿ ಮೂಲ ಸೌಕರ್ಯಗಳಿಲ್ಲದೇ, ವಿದ್ಯಾರ್ಥಿಗಳು ನಿತ್ಯ ಪರದಾಡುವಂತ ಸ್ಥಿತಿ ನಿರ್ಮಾಣವಾಗಿದ್ದು, ಮೇಲಾಧಿಕಾರಿಗಳು ಕ್ರಮ ವಹಿಸಬೇಕೆಂದು ಆಗ್ರಹಿಸಿ ವಸತಿ ನಿಲಯದ ವಿದ್ಯಾರ್ಥಿನಿಯರು ಬುಧವಾರ ರಾತ್ರಿ ದಿಢೀರ್ ಪ್ರತಿಭಟನೆ ನಡೆಸಿದರು.
ಹಾಸ್ಟೆಲ್ ನಲ್ಲಿ ಕಳೆದ 8 ದಿನಗಳಿಂದ ಊಟ ಇಲ್ಲದೆ ಪರದಾಡುವಂತಾಗಿದೆ. ಅಲ್ಲದೇ ಕಳೆದ ಕೆಲ ತಿಂಗಳಿಂದ ಶುಚಿ ಸಂಭ್ರಮದ ಕಿಟ್ ವಿತರಣೆಯಾಗಿಲ್ಲ. ಹಾಸ್ಟೆಲ್ ವಾರ್ಡನ್ ಮತ್ತು ತಾಲೂಕು ಅಧಿಕಾರಿಗಳಿಗೆ ವಿಷಯ ಗೊತ್ತಿದ್ದರೂ ನಮ್ಮ ಸಂಕಷ್ಟಕ್ಕೆ ಸ್ಪಂದಿಸುತ್ತಿಲ್ಲ. ಅವರ ಬೇಜವಾಬ್ದಾರಿತನದಿಂದಲೇ ಸರಿಯಾದ ಸೌಲಭ್ಯಗಳು ಸಿಗದಂತಾಗಿದೆ ಎಂದು ವಿದ್ಯಾರ್ಥಿನಿಯರು ತಮ್ಮ ಅಳಲು ತೋಡಿಕೊಂಡರು.ವಸತಿ ನಿಲಯದಲ್ಲಿ ಸುಮಾರು 40 ರಿಂದ 50 ವಿದ್ಯಾರ್ಥಿನಿಯರಿದ್ದೇವೆ. ಪೌಷ್ಟಿಕ ಆಹಾರ, ಮೂಲ ಸೌಕರ್ಯ, ರಕ್ಷಣೆ ಇಲ್ಲದೇ ಬೇಸತ್ತು ಹೋಗಿದ್ದೇವೆ. ರಾತ್ರಿ 9 ಗಂಟೆಯಾದರೂ ಸರಿಯಾಗಿ ಊಟ ನೀಡುತ್ತಿಲ್ಲ. ಸಮಸ್ಯೆ ಹೇಳಿಕೊಳ್ಳೋಣ ಎಂದರೆ ಹಾಸ್ಟೆಲ್ ವಾರ್ಡನ್ ಸುಮಾರು ದಿನಗಳಿಂದ ಈ ಕಡೆ ಮುಖ ಹಾಕಿಲ್ಲ. ಇದನ್ನು ತಾಲೂಕು ಅಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ದೂರಿದರು.
ನಮ್ಮ ನಗರದಲ್ಲಿ ಜಿಲ್ಲಾಧಿಕಾರಿಗಳು, ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಾಗಿ ಮಹಿಳೆಯರೇ ಇದ್ದಾರೆ. ಅವರಾದರೂ ನಮ್ಮ ಸಮಸ್ಯೆ ಆಲಿಸಿ ನ್ಯಾಯ ಕೊಡಿಸಬೇಕು ಎಂದು ಮನವಿ ಮಾಡಿದರು.ಸುಮಾರು ದಿನಗಳಿಂದ ನಮ್ಮ ಶೌಚಾಲಯವನ್ನು ನಾವೇ ಸ್ವಚ್ಛ ಮಾಡಿಕೊಳ್ಳುತ್ತಿದ್ದೇವೆ. ಕಸಗುಡಿಸಲು ಯಾರು ಬರುವುದಿಲ್ಲ. ಈ ಬಗ್ಗೆ ಪ್ರಶ್ನಿಸಿದರೆ, ಮನೆಯಲ್ಲಿದ್ದರೆ ನಿಮ್ಮ ಶೌಚಾಲಯವನ್ನು ನೀವೇ ಸ್ವಚ್ಛ ಮಾಡಿಕೊಳ್ಳುವುದಿಲ್ಲವೇ? ಇದೊಂದು ಮನೆಯೆಂದು ತಿಳಿದು ಸ್ವಚ್ಛ ಮಾಡಿಕೊಳ್ಳಬೇಕು. ಪರಿಸ್ಥಿತಿಗೆ ಅನುಗುಣವಾಗಿ ಹೊಂದಿಕೊಂಡು ಹೋಗುವುದನ್ನು ಕಲಿಯಬೇಕು ಎಂದು ಅಧಿಕಾರಿಗಳು ಬೇಜವಬ್ದಾರಿ ಉತ್ತರ ನೀಡುತ್ತಾರೆ ಎಂದು ವಿದ್ಯಾರ್ಥಿನಿಯರು ಆರೋಪಿಸಿದ್ದಾರೆಸಿಗದ ಶುಚಿ ಸಂಭ್ರಮದ ಕಿಟ್
ಬಹಳಷ್ಟು ವಿದ್ಯಾರ್ಥಿನಿಯರು ಕಡುಬಡತನದಿಂದ ಬಂದವರಾಗಿದ್ದೇವೆ. ಕೆಲ ತಿಂಗಳಿಂದ ಶುಚಿ ಸಂಭ್ರಮ ಕಿಟ್ ಕೊಟ್ಟಿಲ್ಲ. ಈ ಬಗ್ಗೆ ವಿಚಾರಿಸಿದರೆ ವಾರ್ಡನ್ ತಾಲೂಕು ಅಧಿಕಾರಿ ನಮ್ಮ ಸಮಸ್ಯೆಗೆ ಸ್ಪಂದಿಸುತ್ತಿಲ್ಲ. ಬದಲಿಗೆ ನಮ್ಮನ್ನು ಖೈದಿಗಳ ರೀತಿಯಲ್ಲಿ ನೋಡುತ್ತಾರೆ. ಜಿಲ್ಲೆಯ ಅಲ್ಪಸಂಖ್ಯಾತ ಅಧಿಕಾರಿಗಳಿಗೆ ಕರೆ ಮಾಡಿದರೆ ಕಟ್ ಮಾಡುತ್ತಾರೆ ಎಂದು ದೂರಿದರು.ವಾರ್ಡನ್ ಮತ್ತು ತಾಲೂಕು ಅಧಿಕಾರಿಗಳು ರೆಕಾರ್ಡಿಂಗ್ ಮಾಡಿಕೊಂಡು, ನೀನು ಜಾತಿ ನಿಂದನೆ ಮಾಡಿ ಮಾತಾಡಿದ್ದೀಯಾ, ಎಂದು ಏಕವಚನದಲ್ಲಿ ನಿಂದಿಸುತ್ತಾರೆ. ನಿಮ್ಮ ನಡತೆ ಸರಿಯಾಗಿಲ್ಲ ಎಂದು ಸುಳ್ಳು ಸುದ್ದಿ ಹಬ್ಬಿಸಿ ಮಾನಸಿಕ ನೆಮ್ಮದಿ ಹಾಳು ಮಾಡುತ್ತಾರೆ ಎಂದು ವಿದ್ಯಾರ್ಥಿನಿಯೊಬ್ಬಳು ತೀವ್ರ ನೋವಿನಿಂದ ಅಧಿಕಾರಿಗಳ ಕಾರ್ಯವೈಖರಿ ಬಗ್ಗೆ ಬೇಸರ ವ್ಯಕ್ತಪಡಿಸಿದರು.